ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ 2025 ನೇ ಸಾಲಿನ ಸಂತ ಸೇವಾಲಾಲ್ ಪ್ರಶಸ್ತಿ ಪುರಸ್ಕೃತ ಕೆ.ರೂಪ್ಲಾ ನಾಯಕ್ ಅವರ ನಿಧನಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಕೆ ರೂಪ್ಲಾ ನಾಯಕ್ ಅವರು ಬಂಜಾರ ಸಮುದಾಯದಲ್ಲಿ ಹುಟ್ಟಿ ಆ ಸಮುದಾಯದ ಮೊಟ್ಟ ಮೊದಲ ಸಿವಿಲ್ ಇಂಜಿನಿಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಸಂತ ಸೇವಾಲಾಲರ ತತ್ವ ಮತ್ತು ಆದರ್ಶಗಳನ್ನು ಪ್ರಚುರ ಪಡಿಸುವಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸಿದ್ದ ರೂಪ್ಲಾ ನಾಯಕ್ ಅವರು ದಾವಣಗೆರೆ ಜಿಲ್ಲೆಯ ಸೂರಗೊಂಡನ ಕೊಪ್ಪದಲ್ಲಿ ಶ್ರೀ ಸಂತ ಸೇವಾ ಲಾಲರ ದೇವಾಲಯ ನಿರ್ಮಿಸಿ ಸಮಾಜ ಸೇವಾ ಕೆಲಸಗಳಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು.
108 ವರ್ಷಗಳ ಸಾರ್ಥಕ ಬದುಕನ್ನು ಬದುಕಿದ್ದ ರೂಪ್ಲಾ ನಾಯಕ್ ಅವರಿಗೆ ಕೆಲವೇ ದಿನಗಳ ಹಿಂದೆ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ವತಿಯಿಂದ 2025 ನೇ ಸಾಲಿನ ಸಂತ ಸೇವಾಲಾಲ್ ಪ್ರಶಸ್ತಿಯನ್ನು ಅವರ ಮನೆಗೆ ಹೋಗಿ ಪ್ರದಾನ ಮಾಡಲಾಗಿತ್ತು.
ಅವರ ನಿಧನದಿಂದ ಬಂಜಾರ ಸಮುದಾಯ ಒಬ್ಬ ಸಾಧಕರನ್ನು ಕಳೆದುಕೊಂಡಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಸಚಿವ ಶಿವರಾಜ ತಂಗಡಗಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
