ಬೆಂಗಳೂರು : ನಗರದಲ್ಲಿ ಕುಡಿಯುವ ನೀರಿನ ಪರಿಣಾಮಕಾರಿ ನಿರ್ವಹಣೆ, ನೀರಿನ ಸೋರಿಕೆ ಮತ್ತು ಕಲುಷಿತತೆಯನ್ನು ತಡೆಗಟ್ಟುವ ಜೊತೆಗೆ ಆದಾಯ ಸೋರಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಬೆಂಗಳೂರು ಜಲಮಂಡಳಿ (BWSSB) ಕೃತಕ ಬುದ್ಧಿಮತ್ತೆ (AI) ಹಾಗೂ ರೋಬೋಟಿಕ್ಸ್ ಆಧಾರಿತ ನೂತನ ಪೈಲೆಟ್ ಯೋಜನೆಗೆ ಚಾಲನೆ ನೀಡಿದೆ.
ಈ ಯೋಜನೆಯಡಿ SmartTerra, Solinas, Villgro Innovations Foundation ಹಾಗೂ Titan Company Limited ಸಂಸ್ಥೆಗಳ ಸಹಯೋಗದಲ್ಲಿ ಜಲಮಂಡಳಿ ಒಂದೂವರೆ ವರ್ಷದ ಪೈಲೆಟ್ ಯೋಜನೆ ಜಾರಿಗೊಳಿಸಲಿದೆ. ಯೋಜನೆಯನ್ನು ಪ್ರಥಮ ಹಂತದಲ್ಲಿ ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಅನುಷ್ಠಾನಗೊಳಿಸಲಾಗುತ್ತದೆ.
ಯೋಜನೆಗೆ ಸಂಬಂಧಿಸಿದಂತೆ ಇಂದು ಜಲಮಂಡಳಿ ಮತ್ತು ಪಾಲುದಾರ ಸಂಸ್ಥೆಗಳ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಒಪ್ಪಂದಕ್ಕೆ ಸಹಿ ಹಾಕಿದ ನಂತರ ಜಲಮಂಡಳಿ ಅಧ್ಯಕ್ಷರಾದ ಡಾ. ಎನ್. ಮಂಜುಳ ಮಾತನಾಡಿ , ಈ ಯೋಜನೆಯ ಪ್ರಮುಖ ಉದ್ದೇಶ ನಗರದ ನೀರು ಸರಬರಾಜು ಜಾಲವನ್ನು ತಂತ್ರಜ್ಞಾನ ಆಧಾರಿತವಾಗಿ ಮೇಲ್ವಿಚಾರಣೆ ಮಾಡಿ, ನೀರು ಸೋರಿಕೆ, ಪೈಪ್‌ಲೈನ್ ದೋಷಗಳು, ನೀರಿನ ಕಲುಷಿತತೆ ಹಾಗೂ ಆದಾಯ ನಷ್ಟ ಉಂಟುಮಾಡುವ ಅಂಶಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ ತ್ವರಿತ ಕ್ರಮ ಕೈಗೊಳ್ಳುವುದಾಗಿದೆ.
ಈ ಯೋಜನೆಯಡಿ ಅತ್ಯಾಧುನಿಕ ರೋಬೋಟಿಕ್ ಉಪಕರಣಗಳನ್ನು ಬಳಸಿ ಭೂಗತ ನೀರು ಸರಬರಾಜು ಕೊಳವೆಗಳ ಒಳಭಾಗವನ್ನು ಪರಿಶೀಲಿಸಲಾಗುತ್ತದೆ. ನೀರು ಸೋರಿಕೆ, ಪೈಪ್ ಹಾನಿ ಅಥವಾ ಕಲುಷಿತತೆ ಕಂಡುಬಂದ ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ರವಾನಿಸುವ ವ್ಯವಸ್ಥೆ ಅಳವಡಿಸಲಾಗುತ್ತದೆ. ಇದರಿಂದ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಿ ನೀರಿನ ನಷ್ಟವನ್ನು ಗಣನೀಯವಾಗಿ ಕಡಿಮೆ ಮಾಡಬಹುದಾಗಿದೆ.
ಇದರ ಜೊತೆಗೆ, ಅನಧಿಕೃತ ಬಳಕೆ, ಅಳತೆಯಾಗದ ನೀರು (Non-Revenue Water) ಹಾಗೂ ಆದಾಯ ಸೋರಿಕೆಗೆ ಕಾರಣವಾಗುವ ಅಂಶಗಳನ್ನು ಗುರುತಿಸಿ ಜಲಮಂಡಳಿಯ ಆದಾಯವನ್ನು ಹೆಚ್ಚಿಸುವ ಸಾಧ್ಯತೆಗಳನ್ನೂ ಈ ಅಧ್ಯಯನ ಪರಿಶೀಲಿಸಲಿದೆ ಎಂದು ತಿಳಿಸಿದರು.
ಈ ಪೈಲೆಟ್ ಯೋಜನೆ Titan Company Ltd ನ Design Impact Award ಕಾರ್ಯಕ್ರಮದ ಅನುದಾನದಡಿ ಅನುಷ್ಠಾನಗೊಳ್ಳಲಿದ್ದು, ಜಲಮಂಡಳಿಗೆ ಯಾವುದೇ ಆರ್ಥಿಕ ಹೊರೆ ಇಲ್ಲದೆ ಸಂಪೂರ್ಣ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ.
ಈ ಸಂದರ್ಭದಲ್ಲಿ ಗೋಕುಲ್ ಕೃಷ, ದಿವಾಂಶು ಕುಮಾರ್, ರಿನಿ ದತ್ತ, ರಿತಿಕಾ ಗಾಂಧಿ, ಸಯನ್ ಮಂಡಲ್ ಹಾಗೂ ಅನಿಮೇಶ್ ನಾಯರ್ ಸೇರಿದಂತೆ ಜಲಮಂಡಳಿ ಮತ್ತು ಪಾಲುದಾರ ಸಂಸ್ಥೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಪೈಲೆಟ್ ಯೋಜನೆಯ ಪ್ರಮುಖ ಅಂಶಗಳು:
ಎಐ ಹಾಗೂ ರೋಬೋಟಿಕ್ಸ್ ಆಧಾರಿತ ಸ್ಮಾರ್ಟ್ ನೀರು ನಿರ್ವಹಣೆ. ರೋಬೋಟಿಕ್ ತಂತ್ರಜ್ಞಾನದ ಮೂಲಕ ಭೂಗತ ಪೈಪ್‌ಲೈನ್‌ಗಳ ಪರಿಶೀಲನೆ. ನೀರು ಸೋರಿಕೆ, ಕಲುಷಿತತೆ ಹಾಗೂ ಪೈಪ್ ದೋಷಗಳ ತ್ವರಿತ ಪತ್ತೆ. ಅಧಿಕಾರಿಗಳಿಗೆ ರಿಯಲ್-ಟೈಮ್ ಅಲರ್ಟ್ (Real-time Alerts). ನೀರಿನ ನಷ್ಟ (Non-Revenue Water) ಹಾಗೂ ಆದಾಯ ಸೋರಿಕೆ ನಿಯಂತ್ರಣ. ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಒಂದೂವರೆ ವರ್ಷದ ಪೈಲೆಟ್ ಯೋಜನೆ. Titan Company Ltd ನ Design Impact ಅನುದಾನದಡಿ ಜಲಮಂಡಳಿಗೆ ಯಾವುದೇ ವೆಚ್ಚವಿಲ್ಲದೆ ಅನುಷ್ಠಾನ ಪ್ರಮುಖವಾಗಿವೆ.
