ಬೆಂಗಳೂರು: ಮುಂದಿನ ಐದು ವರ್ಷಗಳಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುತ್ ಉತ್ಪಾದನೆಯನ್ನು 25 ಸಾವಿರ ಮೆಗಾವ್ಯಾಟ್‌ಗೆ ಹೆಚ್ಚಿಸುವ ಗುರಿಯನ್ನು ಕರ್ನಾಟಕ ಹೊಂದಿದ್ದು, ಇದನ್ನು ಸಾಧಿಸಲು ಸರ್ಕಾರ ಸಾಕಷ್ಟು ಪೂರಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಹೇಳಿದ್ದಾರೆ.
ಕರ್ನಾಟಕ ನವೀಕರಿಸಬಹುದಾದ ಇಂಧನ ನಿಯಮಿತ (ಕ್ರೆಡಲ್), ಸಿಇಇಡಬ್ಲ್ಯು ಸಹಯೋಗದೊಂದಿಗೆ ಖಾಸಗಿ ಹೋಟೆಲ್ ನಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ನವೀಕರಿಸಬಹುದಾದ ಇಂಧನದ ಭವಿಷ್ಯವನ್ನು ಭಾರತವು ಹೇಗೆ ಜವಾಬ್ದಾರಿಯುತ ವಾಗಿಸಬಹುದು?” ಎಂಬ ವಿಷಯ ಕುರಿತಾದ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, “ಹೂಡಿಕೆದಾರರು ಮತ್ತು ಜನರ ಸಹಯೋಗದೊಂದಿಗೆ ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುತ್ ಉತ್ಪಾದನೆಯನ್ನು 25 ಸಾವಿರ ಮೆಗಾವ್ಯಾಟ್ ಗೆ ಹೆಚ್ಚಿಸುವ ಗುರಿ ಸಾಧಿಸಬೇಕಾಗಿದೆ ಎಂದರು.
ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಸಾಕಷ್ಟು ಭೂಮಿ ಬೇಕಾಗುತ್ತದೆ. ಈ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಸಂದರ್ಭದಲ್ಲಿ ಜನರಿಂದ ಸಾಕಷ್ಟು ವಿರೋಧಗಳು ಬರುತ್ತಿವೆ. ಯೋಜನೆಗಳಿಗೆ ನಮಗೆ ತೊಂದರೆಯಾಗುತ್ತದೆ ಎಂಬ ಆತಂಕ ಅವರಲ್ಲಿರುತ್ತದೆ. ಭೂಸ್ವಾಧೀನಕ್ಕೆ ಬರುವ ವಿರೋಧಗಳನ್ನು ಹೂಡಿಕೆದಾರರು ಅಡೆತಡೆ ಎಂದು ಯೋಚಿಸುತ್ತಾರೆ. ಆದ್ದರಿಂದ ನವೀಕರಿಸಬಹುದಾದ ಇಂಧನ ನೇತೃತ್ವದ ಬೆಳವಣಿಗೆಯು ದೇಶದ ಅಭಿವೃದ್ಧಿಗೆ ಮಾರ್ಗ ಎಂಬುದನ್ನು ಜನರಿಗೆ ಮನದಟ್ಟು ಮಾಡಿಕೊಟ್ಟರೆ ಅವರು ಯೋಜನೆಗಳನ್ನು ಬೆಂಬಲಿಸುತ್ತಾರೆ ಎಂದು ತಿಳಿಸಿದರು.
ಉದ್ಯಮ ವಲಯದಿಂದ ಬಂದಿರುವ ಪ್ರತಿಕ್ರಿಯೆಗಳನ್ನು ಆಧರಿಸಿ ಭೂಸ್ವಾಧೀನ ವಿಚಾರದಲ್ಲಿ ಸರಳೀಕರಣ ಮಾಡಲಾಗಿದೆ. ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಭೂಮಿ ಪಡೆಯಲು ಮುಖ್ಯಮಂತ್ರಿಗಳು, ಇಂಧನ ಸಚಿವರು ಮತ್ತು ಕಂದಾಯ ಸಚಿವರ ಮುತುವರ್ಜಿಯಿಂದ ರಾಜ್ಯ ಸರ್ಕಾರ ವಿಶೇಷ ಆನ್ ಲೈನ್ ಪೋರ್ಟಲ್ ಸಿದ್ಧಪಡಿಸಿದೆ. ಹೂಡಿಕೆದಾದರರು ರೈತರೊಂದಿಗೆ ಮಾತುಕತೆ ನಡೆಸಿದ ಬಳಿಕ ಭೂ ಪರಿವರ್ತನೆಗಾಗಿ ಆನ್‌ಲೈನ್ ನೋಂದಣಿ ಮಾಡಿ, ಪರಿವರ್ತನೆ ಮಾಡಿಸಿಕೊಳ್ಳಬಹುದು. ಇದಾದ ಬಳಿ ಯೋಜನೆ ಅನುಷ್ಠಾನ ಸಾಧ್ಯವಾಗುತ್ತದೆ ಎಂದು ಹೇಳಿದರು.
‘ಮುಖ್ಯಮಂತ್ರಿ ಸೌರ ಕೃಷಿ ಯೋಜನೆ’ ಬಗ್ಗೆ ಕ್ರೆಡಲ್ ಅಧ್ಯಕ್ಷ ರಾಜೇಗೌಡ ಮೆಚ್ಚುಗೆ
ಕ್ರೆಡಲ್ ಅಧ್ಯಕ್ಷರೂ ಆಗಿರುವ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಕರ್ನಾಟಕವು ಸಾಕಷ್ಟು ಸಾಧನೆಗಳನ್ನು ಮಾಡಿದ್ದು, ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಪಡೆದಿದೆ. ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಸಾಧನೆಗಾಗಿ ಭೂಸ್ವಾಧೀನದಲ್ಲಿ ಸುಧಾರಣೆಗಳನ್ನು ತಂದಿದೆ. ಈ ಬಾರಿಯ ಆಯವ್ಯಯದಲ್ಲಿ ಮುಖ್ಯಮಂತ್ರಿಗಳು ಮುಖ್ಯಮಂತ್ರಿ ಸೌರ ಕೃಷಿ ಯೋಜನೆಯನ್ನು ಘೋಷಿಸಿದ್ದು, ಇದು ಕೃಷಿ ಮತ್ತು ನವೀಕರಿಸಬಹುದಾದ ಇಂಧನವನ್ನು ಒಂದೇ ವೇದಿಕೆಯಲ್ಲಿ ತರುವ ಒಂದು ಮಹತ್ವದ ಯೋಜನೆಯಾಗಿದೆ ಎಂದು ತಿಳಿಸಿದರು.
ಅಭಿವೃದ್ಧಿಪರ ಯೋಜನೆಗಳ ರೂಪರೇಷೆ ಮತ್ತು ಅನುಷ್ಠಾನದಲ್ಲಿ ಗುಣಮಟ್ಟವನ್ನ ಹೆಚ್ಚಿಸಬೇಕಾದ ಅವಶ್ಯಕತೆ ಇದ್ದು, ಅದಕ್ಕಾಗಿ ಇರುವ ನ್ಯೂನತೆಗಳನ್ನು ಸರಿಪಡಿಸಿಕೊಂಡು ಹೂಡಿಕೆದಾರರು ಮತ್ತು ಜನರ ಮಧ್ಯೆ ಸಮನ್ವಯತೆ ಸಾಧಿಸಿ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದರು.
ನಂತರ ವಿವಿಧ ವಿಚಾರಗಳ ಬಗ್ಗೆ ಚಿಂತನ-ಮಂಥನ ನಡೆಯಿತು.
ಕಾರ್ಯಕ್ರಮದಲ್ಲಿ ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ, ಸಿಇಇಡಬ್ಲ್ಯು ನಿರ್ದೇಶಕ ಕಾರ್ತಿಕ್ ಗಣೇಶ್ ಸೇರಿದಂತೆ ಇಂಧನ ಇಲಾಖೆ ಅಧಿಕಾರಿಗಳು, ನವೀಕರಿಸಬಹುದಾದ ಇಂಧನ ಕ್ಷೇತ್ರದ ಉದ್ಯಮಿಗಳು ಇದ್ದರು.
