ಸಮಗ್ರ ಸುದ್ದಿ

ಪಾರಂಪರಿಕ ತಾಣಗಳ ಸನಿಹ ಜಾಹೀರಾತು ನಿಷೇಧಮೇಲ್ಮನೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜಾಹೀರಾತು ನೀತಿ ಮಸೂದೆ ಮಂಡಿಸಿದ ಸಚಿವ ಬೈರತಿ ಸುರೇಶ್ |ವಿಸ್ತೃತ ಚರ್ಚೆ ನಂತರ ಮಸೂದೆಗೆ ಅಂಗೀಕಾರ | ಅನಧಿಕೃತ ಜಾಹೀರಾತು ಹಾಕಿದರೆ ಕ್ರಿಮಿನಲ್ ಕೇಸ್

Share

ಬೆಂಗಳೂರು: ಮಹಾನಗರ ಪಾಲಿಕೆಗಳು ಮತ್ತು ನಗರಸಭೆಗಳು ಮತ್ತು ಇತರೆ ಪಟ್ಟಣ ಪ್ರದೇಶಗಳಲ್ಲಿನ ಪಾರಂಪರಿಕ ಕಟ್ಟಡಗಳ ಗೋಡೆಗಳು ಮತ್ತು ಸುತ್ತಮುತ್ತ ವಾಣಿಜ್ಯ ಜಾಹೀರಾತುಗಳ ಪ್ರದರ್ಶನವನ್ನು ನಿಷೇಧಿಸಲಾಗುತ್ತದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಘೋಷಿಸಿದ್ದಾರೆ.

ವಿಧಾನಸಭೆಯಿಂದ ಅಂಗೀಕೃತಗೊಂಡ ಕರ್ನಾಟಕ ಪೌರನಿಗಮಗಳ ಅಧಿನಿಯಮ 1976 ಮತ್ತು ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಕ್ಕೆ ತಿದ್ದುಪಡಿ ಮಸೂದೆಯನ್ನು ವಿಧಾನಪರಿಷತ್ತಿನಲ್ಲಿ ಬುಧವಾರ ಮಂಡಿಸಿ ಮಾತನಾಡಿದ ಅವರು, ಕಳೆದ ಏಳೆಂಟು ವರ್ಷಗಳಿಂದ ರಾಜ್ಯಾದ್ಯಂತ ಸಾವಿರಾರು ಅನಧಿಕೃತ ಜಾಹೀರಾತುಗಳನ್ನು ಪ್ರದರ್ಶಿಸಲಾಗುತ್ತಿದೆ. ಇದಕ್ಕೆ ಸ್ಥಳೀಯ ಸಂಸ್ಥೆಗಳಿಗೆ ಯಾವುದೇ ರೀತಿಯ ಶುಲ್ಕ ಅಥವಾ ತೆರಿಗೆಯನ್ನು ಪಾವತಿಸುತ್ತಿಲ್ಲ. ಹೀಗಾಗಿ ನೂರಾರು ಕೋಟಿ ರೂಪಾಯಿಗಳ ಆದಾಯ ಬರದಂತಾಗಿದೆ ಎಂದರು.

ಈ ಹಿನ್ನೆಲೆಯಲ್ಲಿ ಅನಧಿಕೃತ ಜಾಹೀರಾತುಗಳನ್ನು ನಿಯಂತ್ರಣ ಮಾಡಬೇಕೆಂಬ ಉದ್ದೇಶದಿಂದ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಆದಾಯ ತಂದುಕೊಡುವ ಉದ್ದೇಶದಿಂದ ಈಗಿರುವ ಕಾನೂನಿಗೆ ತಿದ್ದುಪಡಿ ತರಲೆಂದು ಮಸೂದೆ ಮಂಡಿಸಲಾಗಿದೆ ಎಂದು ತಿಳಿಸಿದರು.

ಅನಧಿಕೃತ ಜಾಹೀರಾತುಗಳ ವಿರುದ್ಧ ಕ್ರಿಮಿನಲ್ ಕೇಸ್
ಸರ್ಕಾರಕ್ಕೆ ಯಾವುದೇ ಶುಲ್ಕ ಅಥವಾ ತೆರಿಗೆ ಪಾವತಿಸದೇ ಜಾಹೀರಾತು ಪ್ರದರ್ಶನ ಮಾಡುತ್ತಿರುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ ಸಚಿವರು, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ಇಂತಹ ಜಾಹೀರಾತುಗಳನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಖಾಸಗಿ ಜಾಗದಲ್ಲಿ ಜಾಹೀರಾತು ಪ್ರದರ್ಶನ ಮಾಡಿದರೆ ಆ ಜಾಗದ ಮಾಲೀಕರಿಗೆ ತೆರಿಗೆ ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ಜಾಹೀರಾತು ನೀಡುವ ಕಂಪನಿಗೆ ತೆರಿಗೆ ವಿಧಿಸಲಾಗುತ್ತದೆ ಎಂದರು.

ನಿಗದಿತ ಸ್ಥಳಗಳಲ್ಲಿ ಮಾತ್ರ ಜಾಹೀರಾತು
ಸ್ಥಳೀಯ ಸಂಸ್ಥೆಗಳು ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ನಿಗದಿಪಡಿಸುವ ಜಾಗದಲ್ಲಿ ಮಾತ್ರ ಜಾಹೀರಾತು ಫಲಕಗಳನ್ನು, ಫ್ಲೆಕ್ಸ್, ಬಂಟಿಂಗ್ಸ್ ಹಾಕಲು ಅವಕಾಶ ನೀಡಲಾಗುತ್ತದೆ. ಆದರೆ, ಯಾವುದೇ ಪಾರಂಪರಿಕ ಕಟ್ಟಡಗಳ ಗೋಡೆಗಳ ಮೇಲಾಗಲೀ ಅಥವಾ ಕಟ್ಟಡಗಳ ಸೌಂದರ್ಯಕ್ಕೆ ಅಡ್ಡಿಯಾಗುವ ರೀತಿಯಲ್ಲಿ ಸುತ್ತಮುತ್ತ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಚಿವ ಬೈರತಿ ಸುರೇಶ್ ತಿಳಿಸಿದರು.

ವೈದ್ಯರು, ವಕೀಲರು ಮತ್ತು ಇತರ ವೃತ್ತಿಪರರು ಹಾಕುವ ಜಾಹೀರಾತುಗಳಿಗೆ ಈ ತೆರಿಗೆಯಿಂದ ವಿನಾಯ್ತಿ ನೀಡಲಾಗುತ್ತದೆ. ಆದರೆ, ರಾಜಕಾರಣಿಗಳು, ಯಾವುದೇ ಪಕ್ಷಗಳು ಫ್ಲೆಕ್ಸ್, ಬಂಟಿಂಗ್ಸ್, ಬ್ಯಾನರ್ ಗಳನ್ನು ಹಾಕಿದರೆ ಅವುಗಳ ಗಾತ್ರಕ್ಕೆ ತಕ್ಕಂತೆ ಸ್ಥಳೀಯ ಸಂಸ್ಥೆಗಳು ನಿಗದಿಪಡಿಸುವ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ಅವರು ಹೇಳಿದರು.

ಸ್ಥಳೀಯ ಸಂಸ್ಥೆಗಳಿಗೇ ಹಣ

ಈ ಹೊಸ ಮಸೂದೆಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ಜಾಗದಲ್ಲಿ ಜಾಹೀರಾತುಗಳಿಗೆ ಸ್ಥಳೀಯ ಪ್ರದೇಶಗಳಿಗೆ ಅನುಗುಣವಾಗಿ ಶುಲ್ಕವನ್ನು ವಿಧಿಸಲಾಗುತ್ತದೆ. ಹೀಗೆ ಜಾಹೀರಾತುಗಳಿಂದ ಬಂದ ಆದಾಯವನ್ನು ಆಯಾ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಮಾತ್ರ ಬಳಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಎಲ್ಇಡಿ ಜಾಹೀರಾತು ಫಲಕಗಳಿಗೆ ಪ್ರತ್ಯೇಕ ದರ

ಸದಸ್ಯರು ಎಲ್ಇಡಿ ಜಾಹೀರಾತು ಫಲಕಗಳ ಬಗ್ಗೆ ಗಮನಸೆಳೆದ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದ ಸಚಿವ ಬೈರತಿ ಸುರೇಶ್ ಅವರು, ಎಲ್ಇಡಿ ಫಲಕಗಳಿಗೆ ಪ್ರತ್ಯೇಕ ಶುಲ್ಕವನ್ನು ವಿಧಿಸಲಾಗುತ್ತದೆ ಎಂದರು.

ಸದನದಲ್ಲಿ ವಿಸ್ತೃತ ಚರ್ಚೆ ನಂತರ ಕರ್ನಾಟಕ ಪೌರನಿಗಮಗಳ ಅಧಿನಿಯಮ 1976 ಮತ್ತು ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಕ್ಕೆ ತಿದ್ದುಪಡಿ ಮಸೂದೆಗೆ ಧ್ವನಿಮತದ ಅಂಗೀಕಾರ ದೊರೆಯಿತು.


Share

You cannot copy content of this page