ಬೆಂಗಳೂರು: ಆಸ್ತಿ ನೋಂದಣಿ ನಂತರ ಖಾತೆಗಳು ಸ್ವಯಂ ಚಾಲಿತವಾಗಿ ಬದಲಾವಣೆಯಾಗಬೇಕು ಎಂಬ ನಿಟ್ಟಿನಲ್ಲಿ ಆಟೋ ಮ್ಯುಟೇಶನ್ ವ್ಯವಸ್ಥೆ ಜಾರಿಗೆ ತಂದಿದ್ದು, ಪ್ರಸ್ತುತ ಶೇ.98 ರಷ್ಟು ಖಾತೆಗಳು ಸ್ವಯಂ ಚಾಲಿತವಾಗಿ ಬದಲಾವಣೆಯಾಗುತ್ತಿವೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಬುಧವಾರ ವಿಧಾನ ಪರಿಷತ್ ನಲ್ಲಿ ರಾಮೋಜಿಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ನೀಡಿದ ಅವರು, ಆಸ್ತಿ ನೋಂದಣಿಯ ನಂತರ ಖಾತೆ ಬದಲಾವಣೆ ವಿಳಂಬವಾಗುತ್ತಿದೆ ಎಂಬ ಬಗ್ಗೆ ದೂರು ಇದೆ. ಈ ನಿಟ್ಟಿನಲ್ಲಿ ಕಳೆದ ಒಂದು ವರ್ಷದಿಂದ ಎರಡು ಹಂತದಲ್ಲಿ ಸುಧಾರಣೆಗಳನ್ನು ತರಲಾಗಿದೆ. ಮೊದಲ ಹಂತದಲ್ಲಿ ಕಳೆದ ವರ್ಷ ಒಟ್ಟು ಖಾತೆ ಬದಲಾವಣೆ ಪೈಕಿ ಶೇ.66 ರಷ್ಟು ಖಾತೆಗಳನ್ನು ಆಟೋ ಮ್ಯುಟೇಶನ್ ಮಾಡುವ ಮೂಲಕ ಸ್ವಯಂ ಚಾಲಿತವಾಗಿ ಖಾತೆ ಬದಲಾವಣೆ ಜಾರಿ ಮಾಡಿದ್ದೇವೆ. ಕಳೆದ ತಿಂಗಳು ಮತ್ತೆ ಒಂದು ಹೆಜ್ಜೆ ಮುಂದಿಡಲಾಗಿದ್ದು, ಶೇ.98ರಷ್ಟು ಖಾತೆಗಳು ಸ್ವಯಂ ಚಾಲಿತವಾಗಿ ಖಾತೆ ಬದಲಾವಣೆಯಾಗಲು ಆಟೋ ಮ್ಯುಟೇಶನ್ ಜಾರಿಗೆ ತಂದಿದ್ದೇವೆ ಎಂದು ತಿಳಿಸಿದರು.
ಪಸ್ತುತ ಖಾತೆ ಬದಲಾವಣೆ ಪೈಕಿ ಶೇ.98 ರಷ್ಟು ಸ್ವಯಂ ಚಾಲಿತವಾಗಿಯೇ ಖಾತೆ ಬದಲಾವಣೆ ಆಗುತ್ತಿದೆ. ಕೆಲವು ಅರ್ಜಿ ನೀಡಿದ ಮೂರು ಗಂಟೆ, ಕೆಲವು 8ನೇ ದಿನ, ಇನ್ನೂ ಕೆಲವು 16ನೇ ದಿನ ಕಾನೂನು ಪ್ರಕಾರವಾಗಿ ಖಾತೆ ಬದಲಾವಣೆ ಆಗುತ್ತವೆ. ಈ ಬಗ್ಗೆ ತಕರಾರು ದಾಖಲಾದರೆ ಮಾತ್ರ ಖಾತೆ ಬದಲಾವಣೆ ವಿಳಂಬವಾಗುತ್ತದೆ. ಇನ್ನುಳಿದಂತೆ ಯಾರನ್ನೂ ಭೇಟಿ ಮಾಡದೆ, ಮಧ್ಯವರ್ತಿಗಳ ಹಾವಳಿ ಇಲ್ಲದೆ
ಈ ಸೇವೆಯನ್ನು ಪಡೆಯಬಹುದಾಗಿದ್ದು, ದೇಶದ ಇತಿಹಾಸದಲ್ಲೇ ಇದೊಂದು ಪ್ರಗತಿಪರ ಹೆಜ್ಜೆ ಎಂದು ಸಂತಸ ವ್ಯಕ್ತಪಡಿಸಿದರು.
ಖಾತೆ ಬದಲಾವಣೆ ಸಂಬಂಧ ಆರ್. ಐ (ಕಂದಾಯ ನಿರೀಕ್ಷಕರು) ಅಧಿಕಾರಿಯನ್ನು ಭೇಟಿಯಾಗದಿದ್ದರೆ ಅವರೇ ತಕರಾರು ಸಲ್ಲಿಸುತ್ತಾರೆ ಎಂಬ ಬಗೆಗಿನ ದೂರಿಗೂ ವಿವರಣೆ ನೀಡಿದ ಸಚಿವ ಕೃಷ್ಣ ಬೈರೇಗೌಡ ಅವರು, ಸರ್ಕಾರದ ಹಿತಾಸಕ್ತಿ ಇದ್ದರೆ ಮಾತ್ರ ಆರ್ಐ ತಕರಾರು ಸಲ್ಲಿಸಬಹುದು. ಖಾಸಗಿ ಸ್ವತ್ತಿನ ತಕರಾರು ಅವರ ಬಂಧುಗಳೇ ಹಾಕಬೇಕೆ ವಿನಃ ಆರ್ಐ ಹಾಕುವಂತಿಲ್ಲ. ಈ ಹಿಂದೆ ಇದ್ದ ಈ ವ್ಯವಸ್ಥೆಯನ್ನು ಇದೀಗ ಬಂದ್ ಮಾಡಿದ್ದೇವೆ. ಆರ್. ಐ. ತಮ್ಮ ಕಡೆಯವರಿಂದ ತಕರಾರು ಹಾಕುತ್ತಿದ್ದಾರೆ ಎಂಬ ಬಗ್ಗೆಯೂ ಆರೋಪ ಇತ್ತು. ಹೀಗಾಗಿ ತಕರಾರು ಹಾಕುವವರಿಗೆ ಆಧಾರ್ ಇಕೆವೈಸಿಯನ್ನು ಕಡ್ಡಾಯ ಮಾಡಲಾಗಿದೆ. ಹೀಗಾಗಿ ಒಂದೇ ವ್ಯಕ್ತಿ ಮೂರು ನಾಲ್ಕು ತಕರಾರು ಅರ್ಜಿ ಹಾಕಿದ್ರೆ ಆತನನ್ನು ಪ್ರಶ್ನೆ ಮಾಡಬಹುದಾಗಿದೆ. ಇಂತಹ ಪ್ರಗತಿಪರ ಬದಲಾವಣೆಗಳ ಮೂಲಕ ಇಲಾಖೆಯಲ್ಲಿ ಸುಧಾರಣೆ ತಂದು ಮೂಗರ್ಜಿ ತಕರಾರುಗಳಿಗೆ ಸಂಪೂರ್ಣ ಕಡಿವಾಣ ಹಾಕಿದ್ದೇವೆ. ಪರಿಣಾಮ ತಳಮಟ್ಟದಲ್ಲಿ ಸುಧಾರಣೆಯನ್ನೂ ಕಾಣಲಾಗುತ್ತಿದೆ ಎಂದು ವಿವರಿಸಿದರು.
ಆರ್ ಟಿಸಿ ಕರೆಕ್ಷನ್ ಬಗ್ಗೆಯೂ ಗಮನ ಸೆಳೆದ ಅವರು, “ಆರ್ ಟಿಸಿ ಕರೆಕ್ಷನ್ ತಿದ್ದುಪಡಿ ಮಾಡುವುದರಲ್ಲಿ ತೊಂದರೆ ಆಗುತ್ತಿರುವುದು ನಿಜ. ಆರ್ ಟಿಸಿ ಕರೆಕ್ಷನ್ ಅನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟು ಇತ್ತು. ಹೀಗಾಗಿ ಆರ್ ಟಿಸಿ ಕರೆಕ್ಷನ್ ಅನ್ನೂ ಸಹ ಆನ್ಲೈನ್ ಮೂಲಕ ತಿದ್ದುಪಡಿ ಮಾಡುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಈ ಮೂಲಕ ತಿದ್ದುಪಡಿಗೆ ಯಾವ ದಿನ ಅರ್ಜಿ ಬಂದಿದೆ, ಎಷ್ಟು ದಿನಗಳಿಂದ ಆ ಅರ್ಜಿ ಬಾಕಿ ಇದೆ ಎಂದು ಫಾಲೋ ಮಾಡಿ, ಹೆಚ್ಚು ದಿನ ಬಾಕಿ ಇದ್ದ ಪ್ರಕರಣಗಳನ್ನು ಪರಿಶೀಲಿಸಿ ಇತ್ಯರ್ಥಪಡಿಸಲು ಸಹಕಾರಿಯಾಗುತ್ತದೆ. ಇದರಲ್ಲೂ ಸಾಕಷ್ಟು ಸುಧಾರಣೆ ತರಲಾಗಿದೆ ಎಂದರು.
ಇದಲ್ಲದೆ, ನಾವು ಜವಾಬ್ದಾರಿ ಸ್ವೀಕರಿಸುವ ಮುನ್ನ ತಹಶೀಲ್ದಾರ್ ನ್ಯಾಯಾಲಯದಲ್ಲಿ ಅವಧಿ ಮೀರಿದ 10,774 ತಕರಾರು ಪ್ರಕರಣಗಳು ಬಾಕಿ ಇದ್ದವು. ಈ ಪೈಕಿ ಪ್ರಸ್ತುತ 137 ಪ್ರಕರಣಗಳು ಮಾತ್ರ ಬಾಕಿ ಇವೆ. ಎಸಿ ನ್ಯಾಯಾಲಯಗಳಲ್ಲಿ 73,634 ಪ್ರಕರಣಗಳು ಬಾಕಿ ಇದ್ದವು. ಈ ಪೈಕಿ ಪ್ರಸ್ತುತ 10,255 ಪ್ರಕರಣಗಳು ಬಾಕಿ ಇವೆ. ಇನ್ನೂ ಐದು ವರ್ಷಕ್ಕೂ ಮೀರಿದ 32,787 ಪ್ರಕರಣಗಳ ಪೈಕಿ 2894 ಪ್ರಕರಣಗಳು ಮಾತ್ರ ಬಾಕಿ ಇವೆ.
ಕಂದಾಯ ಇಲಾಖೆಯಲ್ಲಿ ಎಲ್ಲೆಲ್ಲಿ ಈ ಸಮಸ್ಯೆ ಇದೆ ಹುಡುಕಿ ಪರಿಹಾರ ಮಾಡುತ್ತಿದ್ದೇವೆ. ಕೇಸ್ ವಿಲೇವಾರಿಗೆ ಬೆಂಗಳೂರಿಗೆ ಮಾತ್ರ 8 ಜನ ವಿಶೇಷ ಜಿಲ್ಲಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ರಾಜ್ಯಾದ್ಯಂತ 27 ವಿಶೇಷ ಎಸಿ ಗಳನ್ನು ನೇಮಕ ಮಾಡಲಾಗಿದೆ. ಈ ಮೂಲಕ ಹತ್ತಾರು ವರ್ಷಗಳಿಂದ ಬಾಕಿ ಇದ್ದ ಶೇ.90 ರಷ್ಟು ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಜನರನ್ನು ಮಧ್ಯವರ್ತಿಗಳಿಂದ ರಕ್ಷಿಸಲಾಗುತ್ತಿದೆ ಎಂದರು.
