ಸಮಗ್ರ ಸುದ್ದಿ

ಬೆಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆ: ಐಟಿ ಬಿಟಿ ಸಚಿವರ ಜೊತೆ ಜಪಾನ್ ನಿಯೋಗ ಚರ್ಚೆ

Share

ಬೆಂಗಳೂರು: ಬೆಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಕಾರ್ಯಗತಗೊಳಿಸುವ ಬಗ್ಗೆ ಜಪಾನ್ ತಂಡವು ಇಂದು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿತು.

ಜಪಾನಿನ ಭೂ, ಮೂಲ ಸೌಕರ್ಯ, ಸಾರಿಗೆ ಮತ್ತು ಪ್ರವಾಸೋದ್ಯಮ ಸಚಿವಾಲಯದ (ಎಂಎಲ್ಐಟಿ) ಪ್ರತಿನಿಧಿಗಳು ಚರ್ಚೆಯಲ್ಲಿ ಪಾಲ್ಗೊಂಡರು.

ಜಪಾನ್ ಸಚಿವಾಲಯದ ಜಾಗತಿಕ ಕಾರ್ಯತಂತ್ರಗಳ ಸಲಹೆಗಾರ ಯಾವ್ ಮಿತ್ಸುಹಿರೊ, ಸಚಿವಾಲಯದ ಕಾರ್ಯದರ್ಶಿ ಒಸಾವಾ ಮಿಜುಕಿ, ಜಪಾನಿನ ಪಾಲಿಟ್ ಬ್ಯೂರೋದ ಅಂತರರಾಷ್ಟ್ರೀಯ ನೀತಿ ನಿರೂಪಣಾ ವಿಭಾಗದ ಮುಖ್ಯ ಅಧಿಕಾರಿಗಳಾದ ಮುರಾಯಾಮಾ ಜುನಿಚಿ ಮತ್ತು ತಹಾರಾ ತೈಶಿ ಅವರು ಚರ್ಚೆಯಲ್ಲಿ ಭಾಗವಹಿಸಿದ್ದರು.

ರಾಜ್ಯದ ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿದ ನಿಯೋಗವು ಜಪಾನಿನಲ್ಲಿ ಹೊಸದಾಗಿ ರೂಪಿಸಿರುವ ಸ್ಮಾರ್ಟ್ ಸಿಟಿ ಸಹಕಾರ ಯೋಜನೆಯ ಮಾದರಿಯನ್ನು ಪ್ರದರ್ಶಿಸಿತು.

ಜಾಗತಿಕವಾಗಿ ಬೇರೆ ಬೇರೆ ನಗರಗಳಲ್ಲಿ ಜಪಾನ್ ಸಹಕಾರದೊಂದಿಗೆ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಸಲಹೆ ಸೂಚನೆಗಳನ್ನು ನೀಡುವ ಈ ಯೋಜನೆ ಕರ್ನಾಟಕ ಸರ್ಕಾರದ ಜತೆಗೂ ಕೈಜೋಡಿಸಲು ಬಯಸಿದೆ ಎಂದು ತಂಡದ ಅಧಿಕಾರಿಗಳು ತಿಳಿಸಿದರು.

ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿ, ಕರ್ನಾಟಕ ಸರ್ಕಾರವು ಮುಂದಿನ ವರ್ಷಗಳಲ್ಲಿ ಬೆಂಗಳೂರು ಹಾಗೂ ರಾಜ್ಯದ ಇತರ ನಗರಗಳನ್ನು ಭವಿಷ್ಯದ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಸನ್ನದ್ಧ ನಗರಗಳನ್ನಾಗಿ ಮಾಡಲು, ನಾಗರಿಕ ಕೇಂದ್ರಿತ ನಗರಗಳನ್ನಾಗಿ ಅಭಿವೃದ್ಧಿಪಡಿಸಲು ಸಜ್ಜಾಗಿದೆ. ನಗರಗಳು ಎದುರಿಸುತ್ತಿರುವ ಕ್ಲಿಷ್ಟಕರ ಸಮಸ್ಯೆಗಳಿಗೆ ಸ್ಥಳೀಯ ವಿನೂತನ ತಂತ್ರಜ್ಞಾನಗಳ ಜತೆಗೆ ಜಾಗತಿಕ ಮಟ್ಟದ ತಂತ್ರಜ್ಞಾನ ಬಳಸಿಕೊಂಡು ದೊಡ್ಡ ಪ್ರಮಾಣದಲ್ಲಿ ಬಗೆಹರಿಸಲು ಜಪಾನ್ ಎಂಎಲ್ಐಟಿ ತಂಡದ ಜೊತೆಗೆ ಕೈಜೋಡಿಸಿ ಕೆಲಸ ಮಾಡಲು ಸರ್ಕಾರವು ಉತ್ಸುಕವಾಗಿದೆ ಎಂದು ಹೇಳಿದರು.

ಇದೇ ರೀತಿಯ ಒಪ್ಪಂದವು ಈಗಾಗಲೇ ಮಹಾರಾಷ್ಟ್ರದ ಠಾಣೆಯ ಮುನಿಸಿಪಲ್ ಕಾರ್ಪೋರೇಷನ್ ಸಹಕಾರದಲ್ಲಿ ಕಾರ್ಯಗತಗೊಳ್ಳುತ್ತಿದೆ. ಈ ಮಾದರಿಯನ್ನು ಕರ್ನಾಟಕಕ್ಕೂ ವಿಸ್ತರಿಸಲು ಎಂಎಲ್ಐಟಿ ಆಸಕ್ತಿ ವಹಿಸಿರುವುದು ನಮಗೆ ಸಂತಸ ತರುವ ವಿಚಾರವಾಗಿದೆ ಎಂದರು.

ಈ ಸಹಕಾರ ಯೋಜನೆಯು ಮೂರು ಹಂತದಲ್ಲಿ ಅನುಷ್ಠಾನಗೊಳ್ಳಲಿದೆ. ಮೊದಲ ಹಂತದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಜತೆ ಒಪ್ಪಂದಕ್ಕೆ ಸಹಿ ಹಾಕುವುದು, ನಗರದ ಸವಾಲುಗಳನ್ನು ಗುರುತಿಸುವುದು, ನಂತರ ಜಪಾನ್ ನ ಖಾಸಗಿ ಕ್ಷೇತ್ರದ ಸಹಕಾರದೊಂದಿಗೆ ಅವುಗಳಿಗೆ ಪರಿಹಾರ ಅನುಷ್ಠಾನಗೊಳಿಸುವುದನ್ನು ಒಳಗೊಂಡಿದೆ.

ಪ್ರಮುಖ ಕ್ಷೇತ್ರಗಳಾದ ಇಂಧನ, ತ್ಯಾಜ್ಯ ನೀರು ಬಳಕೆ, ಸಂಚಾರ ವ್ಯವಸ್ಥೆ ಮತ್ತು ಪ್ರಕೃತಿ ವಿಕೋಪ ನಿರ್ವಹಣೆಗಳತ್ತ ಗಮನ ಹರಿಸಲಾಗುವುದು.

ರಾಜ್ಯ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಎನ್. ಮಂಜುಳಾ ಮಾತನಾಡಿ, ಇಂತಹ ಸಹಭಾಗಿತ್ವದ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವುದರಿಂದ ಜಾಗತಿಕ ಮಟ್ಟದ ತಂತ್ರಜ್ಞಾನವನ್ನು ನಮ್ಮಲ್ಲಿಗೆ ತರಲು ಸಹಕಾರಿಯಾಗುತ್ತದೆ. ಅಂತರರಾಷ್ಟ್ರೀಯ ಮಟ್ಟದ ತಂತ್ರಜ್ಞಾನಗಳ ಜೊತೆಗೆ ನಮ್ಮ ಪರಿಸರಸ್ನೇಹಿ ನವೋದ್ಯಮಗಳನ್ನು ಮೇಲ್ದರ್ಜೆಗೆ ಏರಿಸುವ ಮೂಲಕ ನಾವು ಸುಸ್ಥಿರ ನಗರಗಳ ಅಭಿವೃದ್ಧಿಗಾಗಿ ಬೃಹತ್ ಪ್ರಮಾಣದಲ್ಲಿ, ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಕಂಡುಕೊಳ್ಳಬಹುದಾಗಿದೆ ಎಂದರು.

ಈ ಯೋಜನೆಗಳ ಅನುಷ್ಠಾನಕ್ಕಾಗಿ ಜಿಬಿಎ ಅನ್ನು ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ರಾಜ್ಯ ಸರ್ಕಾರವು ನಗರ ಪ್ರದೇಶಗಳ ಸವಾಲುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವ ದಿಸೆಯಲ್ಲಿ ಸ್ಟಾರ್ಟ್ ಅಪ್ ಆಧಾರಿತ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಕುರಿತೂ ಕೂಡ ಚಿಂತಿಸುತ್ತಿದೆ ಎಂದು ಸಚಿವ ಖರ್ಗೆ ಅವರು ವಿವರಿಸಿದರು.

ರಾಜ್ಯ ಸರ್ಕಾರವು ನಗರ ಪ್ರದೇಶಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಇತರ ದೇಶಗಳ ಜತೆಗೂ ಸಮಾಲೋಚಿಸಿ ಪರಿಸರ ಸ್ನೇಹಿ ಯೋಜನೆಗಳನ್ನು ರೂಪಿಸಲು ಉತ್ಸುಕವಾಗಿದೆ ಎಂದು ಅವರು ತಿಳಿಸಿದರು.


Share

You cannot copy content of this page