ಸಮಗ್ರ ಸುದ್ದಿ

“ಶ್ರೀ ಮಾತಾ ವೈಷ್ಣೋದೇವಿ” ದೇವಾಲಯಕ್ಕೆ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ತಲಾ 5 ಸಾವಿರ ರೂ.ಗಳ ಸಹಾಯಧನ : ಸಚಿವ ರಾಮಲಿಂಗಾರೆಡ್ಡಿ

Share

ಬೆಂಗಳೂರು:ಕರ್ನಾಟಕ ರಾಜ್ಯದಿಂದ “ಶ್ರೀ ಮಾತಾ ವೈಷ್ಣೋದೇವಿ” ದೇವಾಲಯಕ್ಕೆ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಸರ್ಕಾರದಿಂದ ತಲಾ 5 ಸಾವಿರ ರೂ.ಗಳ ಸಹಾಯಧನವನ್ನು ಡಿ.ಬಿ.ಟಿ ಮೂಲಕ ವಿತರಿಸಲು ಉದ್ದೇಶಿಸಲಾಗಿದ್ದು, 5 ಕೋಟಿ ರೂ. ಅನುದಾನ  ಮೀಸಲಿರಿಸಿದೆ ಎಂದು ಸಾರಿಗೆ ಮತ್ತು ಧಾರ್ಮಿಕ ದತ್ತಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ವಿಧಾನ ಪರಿಷತ್‍ನ ಅಧಿವೇಶನದಲ್ಲಿಂದು ಸದಸ್ಯರಾದ  ಸಿ.ಎನ್.ಮಂಜೇಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಯೋಜನೆಯನ್ನು 2026-27ನೇ ಸಾಲಿನಿಂದ ಅನುಷ್ಠಾನಗೊಳಿಸಲಾಗುವುದು ಎಂದರು.

ಕರ್ನಾಟಕ ರಾಜ್ಯದಿಂದ ಕೈಲಾಸ ಮಾನಸ ಸರೋವರ  ಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗೆ ತಲಾ ರೂ.30,000/- ಹಾಗೂ ಚಾರ್‍ಧಾಮ್ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗೆ ತಲಾ ರೂ.20,000/-ಹಾಗೂ ಕಾಶಿ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗೆ ರೂ. 5 ಸಾವಿರ  ಸಹಾಯಧನವನ್ನು ಸರ್ಕಾರದಿಂದ ನೀಡಲಾಗುತ್ತಿದೆ ಎಂದರು.

ಕರ್ನಾಟಕ ರಾಜ್ಯದಿಂದ ಪುಣ್ಯಕ್ಷೇತ್ರಗಳಿಗೆ ಪ್ರವಾಸ ಕೈಗೊಳ್ಳಲು ಅನುಕೂಲವಾಗುವಂತೆ ರಿಯಾಯಿತಿ  2023-24ನೇ ಸಾಲಿನಿಂದ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯದಿಂದ ಪುಣ್ಯ ಕ್ಷೇತ್ರಗಳಿಗೆ ಕಡಿಮೆ ವೆಚ್ಚದಲ್ಲಿ ತೆರಳಲು ಅನುಕೂಲವಾಗುವಂತೆ ರಿಯಾಯ್ತಿ ದರದಲ್ಲಿ ಪ್ಯಾಕೇಜ್ ರುಪಿಸಿದ್ದು, ಕರ್ನಾಟಕ ಭಾರತ್ ಗೌರವ್ ರೂಪಿಸಿದ್ದು ಯೋಜನೆಯನ್ನು ಕೆಎಸ್.ಟಿಡಿಸಿ ಮತ್ತು ಭಾರತೀಯ ರೈಲ್ವೇ ಇಲಾಖೆಯ ಸಹಯೋಗದೊಂದಿಗೆ ಧಾರ್ಮಿಕ ದತ್ತಿ ಇಲಾಖೆಯಿಂದ ವಿಶೇಷ ರೈಲಿನ ಮೂಲಕ ಪ್ರವಾಸವನ್ನು ಕೈಗೊಳ್ಳಲಾಗುತ್ತಿದೆ. ಈ ವಿಶೇಷ ರೈಲಿನಲ್ಲಿ ತೆರಳುವ ಯಾತ್ರಾರ್ಥಿಗಳಿಗೆ, ಉಪಹಾರ, ಊಟ, ತಂಗುವಿಕೆ, ಸ್ಥಳೀಯ ಸಾರಿಗೆ, ಸಾಮಾನ್ಯ ಔಷಧಿ ವೆಚ್ಚ ಮತ್ತು ಸ್ಥಳೀಯ ವೀಕ್ಷಣೆ ಒಳಗೊಂಡಿರುತ್ತದೆ.

“ಕರ್ನಾಟಕ ಭಾರತ್ ಗೌರವ್ ಕಾಶಿ-ಗಯಾ ದರ್ಶನ” ಯೋಜನೆಯಡಿ ವಾರಣಾಸಿ, ಅಯೋಧ್ಯೆ ಪ್ರಯಾಗ್ ರಾಜ್ ಮತ್ತು ಗಯಾ ಕ್ಷೇತ್ರಗಳಿಗೆ ಪ್ರಯಾಣಿಸುವ ಯಾತ್ರಾರ್ಥಿಗಳಿಗೆ ತಲಾ ರೂ.32,500/- ಗಳಂತೆ ಪ್ಯಾಕೇಜ್ ರೂಪಿಸಿದ್ದು, ಈ ಮೊತ್ತದಲ್ಲಿ ಯಾತ್ರಾರ್ಥಿಗಳಿಗೆ ಒದಗಿಸುವ ಸೌಲಭ್ಯಗಳ ವೆಚ್ಚಗಳನ್ನೊಳಗೊಂಡಂತೆ ತಲಾ ರೂ.17,500/- ಗಳನ್ನು ರಾಜ್ಯ ಸರ್ಕಾರದ ವತಿಯಿಂದ ಭರಿಸಿ, ಉಳಿದ ಮೊತ್ತ ರೂ.15000/-ಗಳನ್ನು ಯಾತ್ರಾರ್ಥಿಗಳು ಪಾವತಿಸಬೇಕಾಗಿರುತ್ತದೆ.

“ಕರ್ನಾಟಕ ಭಾರತ್ ಗೌರವ್ ದಕ್ಷಿಣ ಯಾತ್ರೆ” ಯೋಜನೆಯಡಿ ಯಾತ್ರಾ ಸ್ಥಳಗಳಾದ ರಾಮೇಶ್ವರ, ಕನ್ಯಾಕುಮಾರಿ, ಮಧುರೈ ಮತ್ತು ತಿರುವನಂತಪುರಂ ಕ್ಷೇತ್ರಗಳಿಗೆ ರೈಲ್ವೆ ಇಲಾಖೆಯ ಸಹಯೋಗದೊಂದಿಗೆ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಯಾತ್ರೆಯನ್ನು ಆಯೋಜಿಸಲಾಗಿದೆ. ಈ ಯೋಜನೆಯಡಿ ಪ್ರಯಾಣಿಸುವ ಯಾತ್ರಾರ್ಥಿಗಳಿಗೆ ತಲಾ ರೂ.25,000/- ಗಳಂತೆ ಪ್ಯಾಕೇಜ್ ರೂಪಿಸಿದ್ದು, ಈ ಮೊತ್ತದಲ್ಲಿ ಯಾತ್ರಾರ್ಥಿಗಳಿಗೆ ಒದಗಿಸುವ ಸೌಲಭ್ಯಗಳ ವೆಚ್ಚಗಳನ್ನೊಳಗೊಂಡಂತೆ ರೂ.15,000/-ಗಳನ್ನು ರಾಜ್ಯ ಸರ್ಕಾರದ ವತಿಯಿಂದ ಭರಿಸಿ ಉಳಿದ ಮೊತ್ತ ರೂ.10,000/-ಗಳನ್ನು ಯಾತ್ರಾರ್ಥಿಗಳು ಪಾವತಿಸಬೇಕಾಗಿರುತ್ತದೆ.

“ಭಾರತ್ ಗೌರವ್ ದ್ವಾರಕ ಯಾತ್ರಾ” ಯೋಜನೆಯಡಿ ದ್ವಾರಕಾ, ನಾಗೇಶ್ವರ, ಸೋಮನಾಥ್, ತ್ರಯಂಬಕೇಶ್ವರ ಕ್ಷೇತ್ರಗಳಿಗೆ ರೈಲ್ವೆ ಇಲಾಖೆಯ ಸಹಯೋಗದೊಂದಿಗೆ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ 8 ದಿನಗಳ ಯಾತ್ರೆಯನ್ನು ಆಯೋಜಿಸಲಾಗಿದೆ. ಈ ಯೋಜನೆಯಡಿ ಪ್ರಯಾಣಿಸುವ ಯಾತ್ರಾರ್ಥಿಗಳಿಗೆ ತಲಾ ರೂ.32,500/-ಗಳಂತೆ ಪ್ಯಾಕೇಜ್ ರೂಪಿಸಿದ್ದು, ಈ ಮೊತ್ತದಲ್ಲಿ ಯಾತ್ರಾರ್ಥಿಗಳಿಗೆ ಒದಗಿಸುವ ಸೌಲಭ್ಯಗಳ ವೆಚ್ಚಗಳನ್ನೊಳಗೊಂಡಂತೆ ತಲಾ ರೂ.17,500/- ಗಳನ್ನು ರಾಜ್ಯ ಸರ್ಕಾರದ ವತಿಯಿಂದ ಭರಿಸಿ ಉಳಿದ ಮೊತ್ತ ರೂ.15,000/- ಗಳನ್ನು  ಯಾತ್ರಾರ್ಥಿಗಳು ಪಾವತಿಸಬೇಕಾಗಿರುತ್ತದೆ ಎಂದು ತಿಳಿಸಿದರು.

ಭಾರತ್ ಗೌರವ್ ಪುರಿ ಜಗನ್ನಾಥ ದರ್ಶನ ಯಾತ್ರೆ ಯೋಜನೆಯಡಿ ಪೂರಿ, ಕೊನಾರ್ಕ್ ಗಂಗಾ ಸಾಗರ್, ಕೊಲ್ಕತ್ತಾ ಕ್ಷೇತ್ರಗಳಿಗೆ ರೈಲ್ವೆ ಸಹಯೋಗದೊಂದಿಗೆ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ 8 ದಿನಗಳ ಯಾತ್ರೆಯನ್ನು ಆಯೋಜಿಸಲಾಗಿದೆ. ಈ ಯೋಜನೆಯಡಿ ಪ್ರಯಾಣಿಸುವ ಯಾತ್ರಾರ್ಥಿಗಳಿಗೆ ತಲಾ ರೂ.32,500/- ಗಳಂತೆ ಪ್ಯಾಕೇಜ್ ರೂಪಿಸಿದ್ದು, ಈ ಯೋಜನೆಯಡಿ ಪ್ರಯಾಣಿಸುವ ಯಾತ್ರಾರ್ಥಿಗಳಿಗೆ ಒದಗಿಸುವ ಸೌಲಭ್ಯಗಳ ವೆಚ್ಚಗಳನ್ನೊಳಗೊಂಡಂತೆ ತಲಾ ರೂ.17,500/- ಗಳನ್ನು ರಾಜ್ಯ ಸರ್ಕಾರದ ವತಿಯಿಂದ ಭರಿಸಿ ಉಳಿದ ಮೊತ್ತ ರೂ. 15,000/-ಗಳನ್ನು ಯಾತ್ರಾರ್ಥಿಗಳು ಪಾವತಿಸಬೇಕಾಗಿರುತ್ತದೆ ಎಂದರು.


Share

You cannot copy content of this page