ಬೆಂಗಳೂರು:ವಿಧಾನ ಸಭೆಯಿಂದ ಅಂಗೀಕೃತ ರೂಪದಲ್ಲಿರುವ 2026ನೇ ಸಾಲಿನ ಕರ್ನಾಟಕ ಕರ್ನಾಟಕ (ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಿ ಅಂಗೀಕರಿಸುವಂತೆ ಕೋರಿ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ವಿಧಾನಪರಿಷತ್ತಿನ ಅಧಿವೇಶನದಲ್ಲಿಂದು ವಿಧೇಯಕವನ್ನು ಮಂಡಿಸಿದರು.
ವಿಧೇಯಕ ಕುರಿತು ಕೆಲವು ಸದಸ್ಯರುಗಳ ವಿಸ್ತ್ರತ ಚರ್ಚೆಯ ನಂತರ ಮಾತನಾಡಿದ ಸಚಿವರು, ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಅತ್ಯಂತ ಪ್ರಮುಖವಾದ ವಿಧೇಯಕವಾಗಿದ್ದು, ಕರ್ನಾಟಕ ಪೊಲೀಸ್ ತಿದ್ದುಪಡಿಯಲ್ಲಿ ಸಣ್ಣ ಬದಲಾವಣೆ ತಿದ್ದುಪಡಿ ತರಲಾಗುವುದು. ಈ ವಿಧೇಯಕದ ಮುಖ್ಯ ಉದ್ದೇಶವೆಂದರೆ, ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳಿಗೆ ತಮ್ಮ ಕೆಳಗಿನ ಅಧಿಕಾರಿಗಳ ಮೇಲೆ ಹೆಚ್ಚಿನ ಶಿಸ್ತಿನ ನಿಯಂತ್ರಣವನ್ನು ನೀಡುವುದು. ಕರ್ತವ್ಯ ಲೋಪ, ದುರ್ನಡತೆ ಅಥವಾ ಅಶಿಸ್ತು ತೋರುವ ಡಿವೈಎಸ್‍ಪಿ ಶ್ರೇಣಿಯವರೆಗಿನ ಅಧಿಕಾರಿಗಳನ್ನು ಸರ್ಕಾರದ ಪೂರ್ವಾನುಮತಿಗಾಗಿ ಕಾಯದೆ ನೇರವಾಗಿ ವರ್ಗಾವಣೆ ಮಾಡುವ ಅಧಿಕಾರವನ್ನು ಪೊಲೀಸ್ ಎಷ್ಟಾಬ್ಲಿಷ್ ಮೆಂಟ್ ಬೋರ್ಡ್ (ಪಿಇಬಿ) ಗೆ ನೀಡಲು ಉದ್ದೇಶಿಸಲಾಗಿದೆ.
ಈ ಮೊದಲು ಯಾವುದೇ ಅಧಿಕಾರಿಯನ್ನು ವರ್ಗಾಯಿಸಲು ಕನಿಷ್ಠ ಎರಡು ವರ್ಷಗಳ ಕಾಲಾವಕಾಶ ಇರಬೇಕಿತ್ತು. ಆದರೆ ಹೊಸ ತಿದ್ದುಪಡಿಯ ಪ್ರಕಾರ, ಗಂಭೀರ ಲೋಪಗಳು ಕಂಡುಬಂದಲ್ಲಿ ಈ ಕನಿಷ್ಠ ಅವಧಿಯ ನಿಯಮ ಅನ್ವಯಿಸುವುದಿಲ್ಲ. ಇಲಾಖೆಯಲ್ಲಿ ಪಾರದರ್ಶಕತೆ ತರುವುದು ಮತ್ತು ಭ್ರಷ್ಟಾಚಾರ ಅಥವಾ ಕರ್ತವ್ಯದ ನಿರ್ಲಕ್ಷ್ಯವನ್ನು ತಡೆಯುವ ಉದ್ದೇಶವಾಗಿದೆ.
ವರ್ಗಾವಣೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಇಲಾಖೆಯ ಉನ್ನತ ಮಟ್ಟದ ಸಮಿತಿಯ ಸುಪರ್ದಿಗೆ ನೀಡುವುದರಿಂದ ರಾಜಕೀಯ ಪ್ರಭಾವವನ್ನು ಕಡಿಮೆ ಮಾಡುವುದಾಗಿದೆ. ಪೊಲೀಸ್ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಉತ್ತಮ ಸಂಬಂಧ ಹೊಂದಲು ಮತ್ತು ಅಪರಾಧ ತಡೆಗಟ್ಟುವಿಕೆಯಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಲು ಈ ಕ್ರಮ ಪೂರಕವಾಗಲಿದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದ ನಂತರ, ವಿಧೇಯಕವನ್ನು ಅನುಮೋದಿಸಲಾಯಿತು.
