ಸಮಗ್ರ ಸುದ್ದಿ

ಕೆಸಿ ವ್ಯಾಲಿ, ಹೆಚ್‌ಎನ್‌ ವ್ಯಾಲಿ ಮತ್ತು ವೃಷಭಾವತಿ ವ್ಯಾಲಿಗಳ ಸಂಸ್ಕರಿಸಿದ ನೀರು ಸಂಪೂರ್ಣ ಸುರಕ್ಷಿತ – ಐ.ಐ.ಎಸ್.ಸಿ ವರದಿಯಿಂದ ದೃಢ: ಸಚಿವ ಎನ್‌ ಎಸ್‌ ಭೋಸರಾಜು

Share

ಬೆಂಗಳೂರು:ಕೆಸಿ ವ್ಯಾಲಿ, ಹೆಚ್‌ಎನ್‌ ವ್ಯಾಲಿ ಹಾಗೂ ವೃಷಭಾವತಿ ವ್ಯಾಲಿಗಳ ಸಂಸ್ಕರಿಸಿದ ನೀರು ಅತ್ಯುತ್ತಮ ಗುಣಮಟ್ಟದ್ದಾಗಿದ್ದು, ಭಾರತೀಯ ವಿಜ್ಞಾನ ಸಂಸ್ಥೆಯ (𝗜𝗜𝗦𝗰) ವಿಜ್ಞಾನಿಗಳ ಸುದೀರ್ಘ ಸಂಶೋಧನೆಗಳಿಂದ ಇದು ದೃಢಪಟ್ಟಿದೆ. ಈ ಬಗ್ಗೆ ಸಾರ್ವಜನಿಕರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ಅವರು ಸ್ಪಷ್ಟಪಡಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸಣ್ಣ ನೀರಾವರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ, ಸಚಿವರಾದ ಕೃಷ್ಣ ಭೈರೇಗೌಡ, ಕೆ.ಎಚ್‌ ಮುನಿಯಪ್ಪ, ಸುಧಾಕರ್‌, 𝗜𝗜𝗦𝗰 ವಿಜ್ಞಾನಿಗಳು ಹಾಗೂ ಜಲಮಂಡಳಿ ಅಧಿಕಾರಿಗಳು ಭಾಗವಹಿಸಿ ಸಂಸ್ಕರಿಸಿದ ನೀರಿನ ಗುಣಮಟ್ಟದ ಕುರಿತು ವಿಸ್ತೃತ ಚರ್ಚೆ ನಡೆಸಿದರು.

ಈ ಯೋಜನೆಯಿಂದ ಕೋಲಾರ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ವೃದ್ಧಿಸಿದೆ. ಹಿಂದೆ 1800 ಅಡಿಗಳವರೆಗೂ ನೀರು ಸಿಗುತ್ತಿರಲಿಲ್ಲ, ಆದರೆ ಪ್ರಸ್ತುತ 200 ರಿಂದ 300 ಅಡಿಗೆ ನೀರು ಲಭ್ಯವಾಗುತ್ತಿದೆ. ಅಂತರ್ಜಲವು ಐದು ಹಂತಗಳಲ್ಲಿ ಶುದ್ಧೀಕರಣಗೊಳ್ಳುತ್ತಿದ್ದು, ನೀರಿನ ಗುಣಮಟ್ಟ ಹೆಚ್ಚಿದೆ. ಈ ನೀರನ್ನು ಬಳಸುತ್ತಿರುವ ಜನ ಹಾಗೂ ಜಾನುವಾರುಗಳ ಆರೋಗ್ಯದಲ್ಲಿ ನೀರಿನಿಂದ ಆಗುವ ಯಾವುದೇ ಸಮಸ್ಯೆ ಕಂಡುಬಂದಿಲ್ಲ ಮತ್ತು ಕೃಷಿ ಬೆಳೆಗಳಿಗೂ ಯಾವುದೇ ಹಾನಿಯಾಗಿಲ್ಲ ಎಂದು 𝗜𝗜𝗦𝗰 ವರದಿ ದೃಢಪಡಿಸಿದೆ.

ಮಣ್ಣಿನ ಗುಣಮಟ್ಟವೂ ಸುಧಾರಿಸಿದ್ದು, ಮೆಂತ್ಯೆ, ಸೌತೆಕಾಯಿ, ಬೀಟ್ರೂಟ್, ಟೊಮೆಟೊ ಮುಂತಾದ ಬೆಳೆಗಳನ್ನು ಯಶಸ್ವಿಯಾಗಿ ಬೆಳೆಯಲಾಗುತ್ತಿದೆ. ಮಣ್ಣಿನಲ್ಲಿ ನೈಟ್ರೋಜನ್ ಅಂಶ ಹೆಚ್ಚಿದೆ ಎಂಬ ಆರೋಪಗಳು ಸಂಪೂರ್ಣ ಸುಳ್ಳು ಎಂದು ವಿಜ್ಞಾನಿಗಳು ಸಭೆಯಲ್ಲಿ ವಿವರಿಸಿದ್ದಾರೆ. 𝗜𝗜𝗦𝗰 ವತಿಯಿಂದ 2019 ರಿಂದ ಸತತ ಆರು ವರ್ಷಗಳ ಕಾಲ ನಡೆಸಲಾದ ಸಂಶೋಧನೆಯಲ್ಲಿ, ನೀರಿನಲ್ಲಿ ಹಾಗೂ ಅಂತರ್ಜಲದಲ್ಲಿ ಯಾವುದೇ ಹಾನಿಕಾರಕ ಮೆಟಲ್ ಅಂಶಗಳು ಪತ್ತೆಯಾಗಿಲ್ಲ. ವಾಸನೆ ಮತ್ತು ಬಣ್ಣವಿಲ್ಲದ ಶುದ್ಧ ನೀರು ಲಭ್ಯವಾಗುತ್ತಿದೆ. ಜಾನುವಾರುಗಳ ಹಾಲು ಉತ್ಪಾದನೆಯೂ ಹೆಚ್ಚಿದೆ. ಈ ಯೋಜನೆಯನ್ನು ಇಡೀ ದೇಶವೇ ಅನುಸರಿಸಬೇಕು ಎಂದು ಹಲವು ಸಂಸ್ಥೆಗಳು ಅಭಿಪ್ರಾಯಪಟ್ಟಿವೆ.

ಕೆಲವು ಕಡೆ ಒಳ್ಳೆಯ ಕೆರೆ ನೀರಿಗೆ ಊರಿನ ಕೊಳಚೆ ನೀರನ್ನು ಹರಿಸಿ ಮಲಿನಗೊಳಿಸಲಾಗುತ್ತಿದೆ. ಚಿಕ್ಕಬಳ್ಳಾಪುರ ಸೇರಿದಂತೆ ನಗರ ಪ್ರದೇಶಗಳ ಕೊಳಚೆ ನೀರನ್ನು ನೇರವಾಗಿ ಕೆರೆಗೆ ಹರಿಸುವ ಮೂಲಕ ಯೋಜನೆಗೆ ಕೆಟ್ಟ ಹೆಸರು ತರಲಾಗುತ್ತಿದೆ ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಸಚಿವ ಕೃಷ್ಣ ಬೈರೇಗೌಡರು ಸೂಚನೆ ನೀಡಿದರು. ಕೊಳಚೆ ನೀರು ಹರಿಯುವುದನ್ನು ತಡೆಯದ ಅಧಿಕಾರಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಅವರು ಒತ್ತಾಯಿಸಿದರು. ಅಲ್ಲದೆ, ಮೀನಿನ ಆರೋಗ್ಯ ಹಾಗೂ ಮಾಂಸದ ಗುಣಮಟ್ಟವನ್ನು ಆರು ತಿಂಗಳಿಗೊಮ್ಮೆ ಪರಿಶೀಲಿಸಲು ಮತ್ತು 𝗜𝗜𝗦𝗰 ಸಂಶೋಧನೆಯನ್ನು ಮುಂದಿನ ಹತ್ತು ವರ್ಷಗಳವರೆಗೆ ಮುಂದುವರಿಸಲು ಅವರು ಸೂಚಿಸಿದರು.

ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್‌ ಪ್ರಸಾತ್‌ ಮನೋಹರ್‌ ಅವರು ಮಾಹಿತಿ ನೀಡಿ, ಬೆಂಗಳೂರು ನಗರದಲ್ಲಿರುವ 33 ಎಸ್.ಟಿ. ಪಿ. ಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದ್ದು, 13 ಎಸ್.ಟಿ.ಪಿ ಗಳಲ್ಲಿ ಈಗಾಗಲೇ ಡಿಸ್ಕ್ ಫಿಲ್ಟರೇಷನ್‌ ತಂತ್ರಜ್ಞಾನ ಅಳವಡಿಸಲಾಗಿದೆ ಎಂದರು. ಹೊಸದಾಗಿ 600 ಎಂ.ಎಲ್.ಡಿ ಕೊಳಚೆ ನೀರು ಶುದ್ಧೀಕರಣಕ್ಕೂ ಸರ್ಕಾರ ಅನುಮೋದನೆ ನೀಡಿದ್ದು, ಜೂನ್‌ ಅಂತ್ಯಕ್ಕೆ ಕೆ.ಸಿ.ವ್ಯಾಲಿಗೆ 100 ಎಂ.ಎಲ್.ಡಿ ಹೆಚ್ಚುವರಿ ನೀರು ನೀಡಲಾಗುವುದು ಎಂದು ತಿಳಿಸಿದರು.

ಸಂಸ್ಕರಿಸಿದ ನೀರಿನ ಬಗ್ಗೆ ನಡೆಯುತ್ತಿರುವ ಅಪಪ್ರಚಾರವನ್ನು ತಡೆಯಲು ಹಾಗೂ ಕೊಳಚೆ ನೀರು ಕೆರೆಗಳಿಗೆ ಸೇರುವುದನ್ನು ತಪ್ಪಿಸಲು ಸರ್ಕಾರದ ಮಟ್ಟದಲ್ಲಿ ದೃಢ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರಾದ ಕೆ.ಎಚ್‌ ಮುನಿಯಪ್ಪ ಮತ್ತು ಸುಧಾಕರ್‌ ಅವರು ಭರವಸೆ ನೀಡಿದರು.


Share

You cannot copy content of this page