ಸಮಗ್ರ ಸುದ್ದಿ

2026ನೇ ಸಾಲಿನ ಕರ್ನಾಟಕ ಸರ್ಕಾರಿ ಶೈಕ್ಷಣಿಕ ಸಂಸ್ಥೆಯ ಭೂಮಿಗಳ (ರಕ್ಷಣೆ ಮತ್ತು ಸಕ್ರಮಾತಿ) ವಿಧೇಯಕ ಅಂಗೀಕಾರ

Share

ಬೆಂಗಳೂರು: 2026ನೇ ಸಾಲಿನ ಕರ್ನಾಟಕ ಸರ್ಕಾರಿ ಶೈಕ್ಷಣಿಕ ಸಂಸ್ಥೆಯ ಭೂಮಿಗಳ (ರಕ್ಷಣೆ ಮತ್ತು ಸಕ್ರಮಾತಿ) ವಿಧೇಯಕವು ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರವಾಯಿತು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಮಧು ಬಂಗಾರಪ್ಪ ಸದರಿ ವಿಧೇಯಕವನ್ನು ಪರ್ಯಾಲೋಚಿಸಿ ಅನುಮೋದಿಸಬೇಕೆಂದು ಕೋರಿ ವಿಧೇಯಕದ ಉದ್ದೇಶಗಳನ್ನು ಸದನದಲ್ಲಿ ತಿಳಿಸಿದರು, ಈ ವಿಧೇಯಕವು ಕರ್ನಾಟಕದ ಹಲವು ಭಾಗಗಳ್ಲಿ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳು ಹಲವು ಬಾರಿ ಔಪಚಾರಿಕ ದಸ್ತಾವೇಜು ಅಥವಾ ನೋಂದಾಯಿತ ವರ್ಗಾವಣೆಯಿಲ್ಲದೆ ವ್ಯಕ್ತಿಗಳು, ಕುಟುಂಬಗಳು ಅಥವಾ ಸಮುದಾಯ ಸಂಸ್ಥೆಗಳು ದಾನಮಾಡಿದ ಭೂಮಿಗಳ ಮೇಲೆ ಸ್ಥಾಪಿಸಲಾಗಿದೆ.

ಸದ್ಬಾವನೆಯಿಂದ ಮಾಡಲಾದ ಈ ದಾನಗಳು ಹಲವು ಪೀಳಿಗೆಗಳ ಮಕ್ಕಳಿಗೆ ಶಿಕ್ಷಣ ಸೇವೆ ಸಲ್ಲಿಸಿದ್ದು, ಅತ್ಯವಶ್ಯಕ ಶೈಕ್ಷಣಿಕ ಮೂಲಭೂತ ಸೌಕರ್ಯದೊಂದಿಗೆ ರಾಜ್ಯದ ಬೆಳವಣಿಗೆಯನ್ನು ಸಾಧ್ಯವಾಗಿಸಿವೆ. ದಸ್ತಾವೇಜುಗಳ ತಾಂತ್ರಿಕ ನ್ಯೂನ್ಯತೆಗಳ ಆಧಾರದ ಮೇಲೆ, ಉತ್ತರಾಧಿಕಾರಿಗಳು ಅಥವಾ ಕಾನೂನು ಬದ್ಧ ವಾರಸುದಾರರು ಇತ್ತೀಚೆಗೆ ಕ್ಲೇಮುಗಳನ್ನು ಮಾಡುತ್ತಿದ್ದು, ಅವರ ವ್ಯಾಜ್ಯಗಳು ನಿರ್ಮಾಣ ಸ್ಥಗಿತಗೊಳ್ಳಲು ಮತ್ತು ಭೂ-ಸ್ಥಿತಿಗತಿಗೆ ಅಸ್ಥಿರತೆಗೆ ಕಾರಣವಾಗಿವೆ ಎಂದು ತಿಳಿಸಿದರು.

ಪ್ರಸ್ತಾವಿತ ವಿಧೇಯಕವು ಸಿಂಧುವಾದ ಹಕ್ಕುಗಳನ್ನು ನ್ಯಾಯಸಮ್ಮತವಲ್ಲದ ರೀತಿಯಲ್ಲಿ ಶಮನಗೊಳಿಸದೆಯೇ, ಆದರೆ ನೈಜ ಕ್ಲೇಮುಗಳನ್ನು ಮಾಡಲು ಸೀಮಿತ ಗವಾಕ್ಷಿ ಮತ್ತು ಅಪೀಲಿಗಾಗಿ ವೇದಿಕೆಯನ್ನು ಒಳಗೊಂಡಂತೆ ಪ್ರಕ್ರಿಯಾತ್ಮಕ ರಕ್ಷಣೆಯನ್ನು ಉಪಬಂಧಿಸುವುದು. ಇದು ವೈಯಕ್ತಿಕ ಸ್ವತ್ತಿನ ಹಕ್ಕುಗಳೊಂದಿಗೆ ದೀರ್ಘಕಾಲಿ ಸಾರ್ವಜನಿಕ ಹಿತಾಸಕ್ತಿಯನ್ನು ಸರಿದೂಗಿಸುವ ಗುರಿಯನ್ನು ಹೊಂದಿದ್ದು, ಶಿಕ್ಷಣದ ಮೂಲಭೂತ ಹಕ್ಕನ್ನು ಎತ್ತಿಹಿಡಿಯುವುದು ಹಾಗೂ ಸರ್ಕಾರಿ ಶೈಕ್ಷಣಿಕ ಮೂಲಸೌಕರ್ಯದ ಕಾನೂನು ಖಚಿತತೆಯನ್ನು ಸಂರಕ್ಷಿಸುವುದು ವಿಧೇಯಕದ ಉದ್ದೇಶವಾಗಿದೆ ಎಂದು ಸಚಿವರು ವಿವರಿಸಿದರು.

ವಿರೋಧಪಕ್ಷದ ನಾಯಕ ಆರ್.ಅಶೋಕ್, ಜಿ.ಟಿ.ದೇವೇಗೌಡ ಹಾಗೂ ಇನ್ನಿತರ ಸದಸ್ಯರು ವಿಧೇಯಕವನ್ನು ಸ್ವಾಗತಿಸಿ, ಸದರಿ ವಿಧೇಯಕವು ಸ್ವಾಗತಾರ್ಹವಾಗಿದೆ ಎಂದು ತಿಳಿಸಿದರು. ವಿಧೇಯಕವು ಸರ್ವಾನುಮತದಿಂದ ಅಂಗೀಕರಿಸಲ್ಪಟ್ಟಿತು.


Share

You cannot copy content of this page