ಸಮಗ್ರ ಸುದ್ದಿ

ಪಾರಂಪರಿಕ ಕಟ್ಟಡ ಸುತ್ತ ವಾಣಿಜ್ಯ ಚಟುವಟಿಕೆ ಇಲ್ಲ: ಬೈರತಿ ಸುರೇಶ್

Share

ಬೆಂಗಳೂರು: ರಾಜ್ಯದ ಮಹಾನಗರ ಪಾಲಿಕೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಪಾರಂಪರಿಕ ಕಟ್ಟಡಗಳ 100 ಮೀಟರ್ ಸುತ್ತಮುತ್ತ ಯಾವುದೇ ವಾಣಿಜ್ಯ ಚಟುವಟಿಕೆಗಳು ಮತ್ತು ಬಹುಮಹಡಿ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಸ್ಪಷ್ಟಪಡಿಸಿದ್ದಾರೆ.

ವಿಧಾನಪರಿಷತ್ತಿನಲ್ಲಿ ಸದಸ್ಯ ಕೆ.ಶಿವಕುಮಾರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜಿಲ್ಲಾ ಮಟ್ಟದಲ್ಲಿ ಪಾರಂಪರಿಕ ತಾಣಗಳ ಸಂರಕ್ಷಣಾ ಸಮಿತಿಗಳು ಕಾರ್ಯನಿರ್ವಹಿಸುತ್ತಿದ್ದು, ಪಾರಂಪರಿಕ ಕಟ್ಟಡಗಳ ಸ್ಥಿತಿಗತಿಗಳ ಬಗ್ಗೆ ಕಾಲಕಾಲಕ್ಕೆ ಸಭೆ ಸೇರಿ ಅವಲೋಕನ ಮಾಡುತ್ತಿವೆ. ಈ ಸಮಿತಿಗಳು ನೀಡುವ ಶಿಫಾರಸುಗಳ ಆಧಾರದಲ್ಲಿ ಪಾರಂಪರಿಕ ಕಟ್ಟಡಗಳ ಸುತ್ತಮುತ್ತಲಿನ ಚಟುವಟಿಕೆಗಳಿಗೆ ಅನುಮತಿ ನೀಡುವುದು ಅಥವಾ ನಿಯಂತ್ರಣ ಮಾಡುವ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದರು.

ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಲ್ಯಾನ್ಸ್ ಡೌನ್ ಕಟ್ಟಡ, ದೇವರಾಜ ಮಾರುಕಟ್ಟೆಗಳು, ವಾಣಿವಿಲಾಸ ಮಾರುಕಟ್ಟೆ ಮತ್ತು ಮಂಡಿ ಮೊಹಲ್ಲಾ ಮಾರುಕಟ್ಟೆಗಳು ಶಿಥಿಲಾವಸ್ಥೆಯಲ್ಲಿರುವುದನ್ನು ಸರ್ಕಾರ ಗಮನಿಸಿದೆ. ಈ ಹಿನ್ನೆಲೆಯಲ್ಲಿ ಲ್ಯಾನ್ಸ್ ಡೌನ್ ಕಟ್ಟಡವನ್ನು ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಾಣ ಮಾಡಲು ಸರ್ಕಾರ ಯೋಜನಾ ವರದಿ ಸಿದ್ಧಪಡಿಸಿತ್ತು. ಆದರೆ, ಇದಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನೀಡುವ ಆದೇಶದ ನಂತರ ಸರ್ಕಾರ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

ಪಾರಂಪರಿಕ ಕಟ್ಟಡಗಳ ದುರಸ್ತಿ ಕಾರ್ಯಗಳಿಗಾಗಿ ಜಿಲ್ಲಾಧಿಕಾರಿಗಳ ಬಳಿ ಸಾಕಷ್ಟು ಹಣವಿದೆ. ಅಗತ್ಯ ಬಿದ್ದಾಗ ಬಳಸಿಕೊಳ್ಳಲು ಅವರಿಗೆ ಅಧಿಕಾರ ನೀಡಲಾಗಿದೆ ಎಂದು ತಿಳಿಸಿದ ಸಚಿವ ಬೈರತಿ ಸುರೇಶ್ ಅವರು, ಪಾರಂಪರಿಕ ಕಟ್ಟಡಗಳ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ ಎಂದು ತಿಳಿಸಿದರು.

ಎಸ್ ಟಿಪಿ ಘಟಕಗಳಿಗೆ 2250 ಕೋಟಿ ರೂ.
ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು, ಹೊಸದಾಗಿ ರಚನೆಯಾಗಿರುವ 11 ನಗರಸಭೆಗಳ ವ್ಯಾಪ್ತಿಗೆ ಸುತ್ತಮುತ್ತಲಿನ ಗ್ರಾಮಗಳನ್ನೂ ಸೇರ್ಪಡೆ ಮಾಡಲಾಗಿದೆ. ಹೀಗಾಗಿ ಇಲ್ಲಿ ಕಸ ವಿಲೇವಾರಿಯಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯಯ ಉಂಟಾಗುತ್ತಿದೆ. ಈ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಿ ಉತ್ತಮ ರೀತಿಯಲ್ಲಿ ಕಸ ವಿಲೇವಾರಿ ಮಾಡಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 7304 ಟನ್ ನಷ್ಟು ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, 6083 ಟನ್ ನಷ್ಟು ಕಸವನ್ನು ಸಂಸ್ಕರಣೆ ಮಾಡಲಾಗುತ್ತಿದೆ ಎಂದು ತಿಳಿಸಿದ ಅವರು, ರಾಜ್ಯಾದ್ಯಂತ ನಗರ ಸ್ಥಳೀಯ ಸಂಸ್ಥೆಗಳಲ್ಲಿ 2250 ಕೋಟಿ ರೂಪಾಯಿ ವೆಚ್ಚದಲ್ಲಿ ಎಸ್ ಟಿಪಿ ಘಟಕಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ನಗರಾಭಿವೃದ್ಧಿ ಇಲಾಖೆಯ ಕೆಯುಡಿಐಎಫ್ಸಿ ಮೂಲಕ ಈ ಘಟಕಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ ಎಂದು ಸದನದ ಗಮನಕ್ಕೆ ತಂದರು.

ಇಂದಿರಾ ಕ್ಯಾಂಟೀನ್ ಲೋಪವಿಲ್ಲ
ಸದಸ್ಯ ಕೆ.ಎಸ್.ನವೀನ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಬೈರತಿ ಸುರೇಶ್ ಅವರು, ಇಂದಿರಾ ಕ್ಯಾಂಟೀನ್ ನಿರ್ಮಾಣ ಗುತ್ತಿಗೆಯನ್ನು ಸಂಪೂರ್ಣವಾಗಿ ಪಾರದರ್ಶಕವಾಗಿ ನೀಡಲಾಗಿದೆ. ಇದರಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಪಾಲಿಕೆಗಳಿಗೆ ಸಂಪೂರ್ಣ ವೇತನ ನೀಡಲು ಅಸಾಧ್ಯ
ಮಹಾನಗರ ಪಾಲಿಕೆಗಳ ಸಿಬ್ಬಂದಿಗೆ ವೇತನ ಮತ್ತು ಪಿಂಚಣಿಯ ಶೇ.80 ರಷ್ಟು ವಿಶೇಷ ಹಣಕಾಸು ಆಯೋಗ ಮತ್ತು ಶೇ.20 ರಷ್ಟನ್ನು ಆಯಾ ಸಂಸ್ಥೆಗಳೇ ತಮ್ಮ ಹಣಕಾಸು ಸಂಪನ್ಮೂಲದಿಂದ ಕ್ರೋಢೀಕರಿಸಿ ಭರಿಸಬೇಕಾಗುತ್ತದೆ. ಆದರೆ, ಸಂಪೂರ್ಣ ವೇತನವನ್ನು ರಾಜ್ಯ ಸರ್ಕಾರವೇ ಭರಿಸಲು ಸಾಧ್ಯವಿಲ್ಲ. ಇದೇ ವೇಳೆ, ನಗರ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಗೆ ಪೂರ್ಣ ಪ್ರಮಾಣದಲ್ಲಿ ಸರ್ಕಾರವೇ ವೇತನವನ್ನು ಪಾವತಿಸುತ್ತಿದೆ ಎಂದು ಸದಸ್ಯ ಎಸ್.ವಿ.ಸಂಕನೂರ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ಗುತ್ತಿಗೆದಾರರಿಗೆ ಹಂತಹಂತವಾಗಿ ಹಣ
ಅಮೃತ್ 1 ರಡಿಯಲ್ಲಿ ನಡೆದ ಕಾಮಗಾರಿಗಳಿಗೆ ಸುಮಾರು 600 ಕೋಟಿ ರೂಪಾಯಿಗಳಷ್ಟು ಹಣವನ್ನು ಗುತ್ತಿಗೆದಾರರಿಗೆ ಪಾವತಿ ಮಾಡುವುದು ಬಾಕಿಯಿದೆ. ಹಣಕಾಸು ಇಲಾಖೆಯೊಂದಿಗೆ ಚರ್ಚಿಸಿದ ಬಳಿಕ ಈ ಹಣವನ್ನು ಹಂತಹಂತವಾಗಿ ಗುತ್ತಿಗೆದಾರರಿಗೆ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದೂ ಸಚಿವರು ತಿಳಿಸಿದರು.


Share

You cannot copy content of this page