ಸಮಗ್ರ ಸುದ್ದಿ

ಹಣಕಾಸು ಮಸೂದೆ ಮೇಲಿನ ಚರ್ಚೆ | ಲೋಕಸಭೆಯಲ್ಲಿ ರಾಷ್ಟ್ರೀಯ ಭದ್ರತೆ, ಸಹಕಾರಿ ಒಕ್ಕೂಟ, ದಕ್ಷಿಣ ಕನ್ನಡದ ಅಭಿವೃದ್ಧಿ ಪರ ಧ್ವನಿಯೆತ್ತಿದ ಸಂಸದ ಕ್ಯಾ.ಬ್ರಿಜೇಶ್ ಚೌಟ

Share

ನವದೆಹಲಿ:ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಇಂದು ಲೋಕಸಭೆಯಲ್ಲಿ ಹಣಕಾಸು ವಿಧೇಯಕದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿ, ಹಣಕಾಸು ಶಿಸ್ತು, ತೆರಿಗೆ ಸುಧಾರಣೆ, ರಾಷ್ಟ್ರೀಯ ಭದ್ರತೆ, ಸಹಕಾರಿ ಒಕ್ಕೂಟ ತತ್ವ ಹಾಗೂ ಮಾಜಿ ಸೈನಿಕರ ಕಲ್ಯಾಣ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಸದನದ ಗಮನಸೆಳೆದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜಿಎಸ್‌ಟಿ ಸುಧಾರಣೆಗಳು ದೇಶದ ಆರ್ಥಿಕತೆಯನ್ನು ಬಲಪಡಿಸಿರುವುದಲ್ಲದೆ, ದೈನಂದಿನ ಬಳಕೆಯ ವಸ್ತುಗಳ ಮೇಲಿನ ತೆರಿಗೆ ಕಡಿಮೆ ಮಾಡುವ ಮೂಲಕ ಸಾಮಾನ್ಯ ಕುಟುಂಬಗಳಿಗೆ ನೆರವಾಗಿದೆ ಎಂದು ಅವರು ಶ್ಲಾಘಿಸಿದರು. ಇದೇ ವೇಳೆ ಸರಳೀಕೃತ ಆದಾಯ ತೆರಿಗೆ ಚೌಕಟ್ಟನ್ನು ಸ್ವಾಗತಿಸಿದ ಅವರು, ಇದು ತೆರಿಗೆದಾರರಿಗೆ ಹೆಚ್ಚಿನ ಸ್ಪಷ್ಟತೆ ಮತ್ತು ವಿಶ್ವಾಸವನ್ನು ನೀಡಲಿದೆ ಎಂದು ಅಭಿಪ್ರಾಯಪಟ್ಟರು.

ಬಜೆಟ್ ಅನ್ನು ಕೇವಲ ಆರ್ಥಿಕ ದಾಖಲೆಯಾಗಿ ಮಾತ್ರವಲ್ಲದೆ ರಾಷ್ಟ್ರೀಯ ಭದ್ರತೆಯ ದೃಷ್ಟಿಕೋನದಿಂದಲೂ ಗಮನಿಸಿದ ಕ್ಯಾ. ಬ್ರಿಜೇಶ್ ಚೌಟ, ಸುಭದ್ರ ಆರ್ಥಿಕತೆಯು ಸಶಸ್ತ್ರ ಪಡೆಗಳ ಆಧುನೀಕರಣಕ್ಕೆ ಅಡಿಪಾಯ ಎಂದರು.

ರಕ್ಷಣಾ ವಲಯದ ಹೆಚ್ಚಿನ ಅನುದಾನ ಮತ್ತು ಸ್ವದೇಶಿ ರಕ್ಷಣಾ ಉತ್ಪಾದನೆಗೆ ನೀಡುತ್ತಿರುವ ಉತ್ತೇಜನವನ್ನು ಅವರು ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ, ಸೇವಾವಧಿಯಲ್ಲಿ ಗಂಭೀರವಾಗಿ ಗಾಯಗೊಂಡರೂ ಕರ್ತವ್ಯದ ಮೇಲಿನ ನಿಷ್ಠೆಯಿಂದ ನಿವೃತ್ತಿಯವರೆಗೆ ಸೇವೆ ಸಲ್ಲಿಸುವ ಸೈನಿಕರಿಗೂ ವಿಕಲಚೇತನರ ಪಿಂಚಣಿ ಸೌಲಭ್ಯಗಳನ್ನು ವಿಸ್ತರಿಸಬೇಕು ಅವರು ಇದೇ ವೇಳೆ ಹಣಕಾಸು ಸಚಿವರಲ್ಲಿ ಮನವಿ ಮಾಡಿದರು.

ಸಹಕಾರಿ ಒಕ್ಕೂಟ ವ್ಯವಸ್ಥೆಯ ಕುರಿತು ಮಾತನಾಡಿದ ಕ್ಯಾ.ಬ್ರಿಜೇಶ್ ಚೌಟ ಅವರು, ಕೇಂದ್ರ ಸರ್ಕಾರದ ಯೋಜನೆಗಳ ಲಾಭ ಜನ ಸಾಮಾನ್ಯರಿಗೆ ತಲುಪಲು ರಾಜ್ಯ ಸರ್ಕಾರಗಳ ಸಮಯೋಚಿತ ಅನುಷ್ಠಾನ ಕೂಡ ಅತಿ ಮುಖ್ಯ. ಆದರೆ, ಕರ್ನಾಟಕದಲ್ಲಿ ಜಲ ಜೀವನ್ ಮಿಷನ್ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆಯಂತಹ ಮಹತ್ವದ ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯ ಸರ್ಕಾರದ ಅಸಹಕಾರ, ವಿಳಂಬ ನೀತಿಯಿಂದಾಗಿ ಅನುದಾನ ಸರಿಯಾಗಿ ಬಳಕೆಯಾಗದೆ ಉಳಿದಿದೆ. ಇದರಿಂದ ಬಡ ಕುಟುಂಬಗಳು ಕುಡಿಯುವ ನೀರು ಮತ್ತು ವಸತಿ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಕರಾವಳಿ ಕಡಲ್ಕೊರೆತ: ಶಾಶ್ವತ ಪರಿಹಾರಕ್ಕೆ ಆಗ್ರಹ

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಮತ್ತು ಸೋಮೇಶ್ವರ ಭಾಗದಲ್ಲಿ ತೀವ್ರವಾಗಿರುವ ಕಡಲ್ಕೊರೆತವು ಕೇವಲ ತಾತ್ಕಾಲಿಕ ಸಮಸ್ಯೆಯಲ್ಲ, ಬದಲಾಗಿ ಅಸ್ತಿತ್ವಕ್ಕೆ ಇರುವ ಸವಾಲಾಗಿದೆ ಎಂದು ಸಂಸದರು ಆತಂಕ ವ್ಯಕ್ತಪಡಿಸಿದರು.

ಈ ಸಮಸ್ಯೆಯಿಂದ ಮೀನುಗಾರರ ಮನೆಗಳು ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಉಂಟಾಗುವ ಹಾನಿಯಿಂದ ರಕ್ಷಣೆಗೆ ಕೇಂದ್ರ ಪರಿಸರ ಸಚಿವಾಲಯ ಹಾಗೂ ಭೂವಿಜ್ಞಾನ ಸಚಿವಾಲಯದ ಸಮನ್ವಯದೊಂದಿಗೆ ವೈಜ್ಞಾನಿಕ ಸಮಗ್ರ ಕರಾವಳಿ ರಕ್ಷಣಾ ಯೋಜನೆ ರೂಪಿಸಿ, ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಕೊಂಕಣ ರೈಲ್ವೆ ಭಾರತೀಯ ರೈಲ್ವೆಯೊಂದಿಗೆ ವಿಲೀನಕ್ಕೆ ಒತ್ತಾಯ:

ಕೊಂಕಣ ರೈಲ್ವೆಯು ಪ್ರಸ್ತುತ ಇರುವ ರಚನಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಅದರ ಪೂರ್ಣ ಪ್ರಮಾಣದ ಅಭಿವೃದ್ಧಿಗಾಗಿ ಅದನ್ನು ತಕ್ಷಣವೇ ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಬೇಕು. ಈ ಕುರಿತು ರೈಲ್ವೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಜಾರ್ಜ್ ಫರ್ನಾಂಡಿಸ್ ಅವರ ಕಾಲದ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಇದು ಅನಿವಾರ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ದಕ್ಷಿಣ ಕನ್ನಡದ ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದು, 50ನೇ ವರ್ಷದ ಸಂಭ್ರಮದಲ್ಲಿರುವ ನವ ಮಂಗಳೂರು ಬಂದರಿನ ಪೂರ್ಣ ಸಾಮರ್ಥ್ಯದ ಬಳಕೆಗೆ ರಸ್ತೆ ಸಂಪರ್ಕ ಸುಧಾರಿಸುವುದು ಅನಿವಾರ್ಯವಾಗಿದೆ ಎಂದು ಪ್ರತಿಪಾದಿಸಿದರು.

ಈ ನಿಟ್ಟಿನಲ್ಲಿ ಮಂಗಳೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಕಾರಿಡಾರ್ ಹಾಗೂ ಮಂಗಳೂರು ಬೈಪಾಸ್ ಕಾಮಗಾರಿಗಳಿಗೆ ವೇಗ ನೀಡುವಂತೆ ವಿನಂತಿಸಿದ ಅವರು, ಹಾಸನ-ಮಂಗಳೂರು ರೈಲು ಮಾರ್ಗದ ಶಿರಾಡಿ ಘಾಟ್ ವಿಭಾಗದ ಡಿಪಿಆರ್ ಸಿದ್ಧಪಡಿಸಲು ಅನುಮೋದನೆ ನೀಡಿದ ರೈಲ್ವೆ ಸಚಿವರಿಗೆ ಈ ವೇಳೆ ಧನ್ಯವಾದ ಸಲ್ಲಿಸಿದ್ದಾರೆ. ಜತೆಗೆ ಈ ಕಾಮಗಾರಿಯನ್ನು ಶೀಘ್ರವಾಗಿ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಇದರೊಂದಿಗೆ, ಕೇಂದ್ರ ಸರ್ಕಾರ ಘೋಷಿಸಿರುವ ‘ಸಿಟಿ ಎಕನಾಮಿಕ್ ರೀಜನ್’ ಯೋಜನೆಗೆ ಮಂಗಳೂರು ಅತ್ಯಂತ ಸೂಕ್ತ ನಗರವಾಗಿದ್ದು, ಇದನ್ನು ಆದ್ಯತೆಯ ಮೇಲೆ ಪರಿಗಣಿಸುವಂತೆ ಹಣಕಾಸು ಸಚಿವರಿಗೆ ಮನವಿ ಮಾಡಿದ್ದಾರೆ.


Share

You cannot copy content of this page