ಬೆಂಗಳೂರು: ಶಿವಮೊಗ್ಗ ತ್ಯಾವರೆಕೊಪ್ಪ ಮೃಗಾಲಯದಲ್ಲಿ ನೀರಾನೆ ದಾಳಿಯಿಂದ ಮೃತಪಟ್ಟ ಯುವ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಹೆಸರಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾ ನದಲ್ಲಿ ಅಥವಾ ಬೇರೆ ಕಡೆ ಸ್ಮಾರಕ ನಿರ್ಮಿಸಬೇಕು ಎಂಬ ಸಲಹೆಯನ್ನು ಕುಟುಂಬದವರು ನೀಡಿದ್ದು, ಆದನ್ನು ಸ್ವೀಕರಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಮಂಗಳವಾರ ವಿಧಾನಸಭೆಗೆ ತಿಳಿಸಿದರು.
ಶಿವಮೊಗ್ಗ ಶಾಸಕ ಚನ್ನಬಸಪ್ಪ ಅವರ ಗಮನ ಸಳೆಯುವ ಸೂಚನೆಗ ಉತ್ತರಿಸಿದ ಅವರು, ಕರ್ತವ್ಯಕ್ಕೆ ಸೇರಿ ಕೆಲವೇ ದಿನಗಳಲ್ಲಿ ಈ ದುರ್ಘಟನೆ ನಡೆದಿದೆ. ಇಂದು ಮೃತರ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದೇನೆ. ಆ ವೇಳೆ 3೦ ಲಕ್ಷ ರೂಪಾಯಿ ಪರಿಹಾರ ಕೊಡಲು ಸರ್ಕಾರ ಮುಂದಾಗಿತ್ತು. ಆದರೆ ಕುಟುಂಬಸ್ಥರು ಪರಿಹಾರ ಬೇಡ, ಬನ್ನೇರುಘಟ್ಟ ಅಥವಾ ಬೇರೆ ಮೃಗಾಲಯದಲ್ಲಿ ಸ್ಮಾರಕ ಮಾಡಿ ಎಂದು ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ಸ್ಮಾರಕ ರೂಪಿಸಲು ಸರ್ಕಾರ ಚಿಂತಿಸಲಿದೆ ಎಂದರು.
ಯುವ ವೈದ್ಯೆ ಕೆಲವೇ ದಿನಗಳ ಹಿಂದೆ ಕೆಲಸಕ್ಕೆ ಸೇರಿದ್ದರು. ಉತ್ಸಾಹಿ ಆಗಿದ್ದರು. ಮೃಗಾಲಯದಲ್ಲಿ ಚಿರತೆಯೊಂದಕ್ಕೆ ಚಿಕಿತ್ಸೆ ನೀಡಿ ಸಂರಕ್ಷಣೆ ಮಾಡಿದ್ದರು. ಘಟನೆ ನಡೆದ ರಾತ್ರಿ ಪಕ್ಷಿಯೊಂದಕ್ಕೆ ಆಂಟಿ ಬಯೋಟಿಕ್ಸ್ ನೀಡಲು ಕರ್ತವ್ಯ ನಿರತರಾಗಿ ಹೋಗಿದ್ದರು, ಇಬ್ಬರು ಸಹೋದ್ಯೋಗಿಗಳೂ ಇದ್ದರು. ಪಕ್ಷಿಗೆ ಚಿಕಿತ್ಸೆ ಕೊಟ್ಟ ಬಳಿಕ ಪ್ರತ್ಯೇಕ ಆವರಣದಲ್ಲಿದ್ದ ನೀರಾನೆಯ ಆರೋಗ್ಯ ನೋಡಬೇಕು ಎಂದು ಹೋದಾಗ ಈ ದುರ್ಘಟನೆ ನಡೆದಿದೆ ಎಂದರು.
ವೈದ್ಯೆ ವಿರುದ್ಧ ನಮ್ಮ ಅಧಿಕಾರಿಗಳು ಯಾರಾದರೂ ತಪ್ಪು ಹೇಳಿಕೆ ನೀಡಿದ್ದರೆ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಅರಣ್ಯ ಸಚಿವರು ಸ್ಪಷ್ಟಪಡಿಸಿದರು.
ಈ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಲಾಗಿದ್ದು, ಅರಣ್ಯ ಇಲಾಖೆಯೂ ತನಿಖೆ ಮಾಡುತ್ತಿದೆ. ಪೊಲೀಸರೂ ತನಿಖೆ ಮಾಡುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳು, ಅವರ ಮೊಬೈಲ್ ನಲ್ಲಿರುವ ಸಂದೇಶಗಳು ಎಲ್ಲದರ ಬಗ್ಗೆ ತನಿಖೆ ಆಗಲಿದೆ. ಯಾರದೇ ಕರ್ತವ್ಯ ಲೋಪ ಇದ್ದರೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.
