ಸಮಗ್ರ ಸುದ್ದಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಆರ್ಥಿಕ ಶಿಸ್ತು ಹೊಂದಿರುವ ಆಯವ್ಯಯವನ್ನು ಮಂಡಿಸಿದ್ದಾರೆ- ಬಸವರಾಜ್ ರಾಯರೆಡ್ಡಿ ಅಭಿಪ್ರಾಯ

Share

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ 2026-27 ನೇ ಸಾಲಿನ ಆಯವ್ಯಯವು ಆರ್ಥಿಕ ಶಿಸ್ತನ್ನು ಹೊಂದಿದ್ದು, ಇದುವರೆವಿಗೂ ಅವರು ಮಂಡಿಸಿರುವ 17 ಆಯವ್ಯಯಗಳಲ್ಲೂ ಆರ್ಥಿಕ ಶಿಸ್ತನ್ನು ಇಟ್ಟುಕೊಂಡೇ ಮಂಡಿಸಿದ್ದಾರೆ ಎಂದು ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರರಾದ ಬಸವರಾಜ್ ರಾಯರೆಡ್ಡಿ ಅವರು ಅಭಿಪ್ರಾಯಪಟ್ಟರು.

ಇಂದು ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಆರ್ಥಿಕ ಮಂತ್ರಿಯಾಗಿ, ಉಪಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿಯಾಗಿ ಅಪಾರ ಅನುಭವವನ್ನು ಹೊಂದಿರುವ ಸಿದ್ದರಾಮಯ್ಯ ಅವರು ಈ ಬಾರಿಯೂ ರಾಜ್ಯದ ಅಭಿವೃದ್ಧಿಯ ಹಿತದೃಷ್ಠಿಯಿಂದ ಸಿದ್ಧಪಡಿಸಿರುವ ಈ ಆಯವ್ಯಯವನ್ನು ಎಲ್ಲರೂ ಸರ್ವಾನುಮತದಿಂದ ಅನುಮೋದಿಸಬೇಕೆಂದರು.

ಕೇಂದ್ರ ಸರ್ಕಾರದ ಕಾಯಿದೆಯಲ್ಲಿ ತಿಳಿಸಿರುವಂತೆ ಸಿದ್ದರಾಮಯ್ಯ ಅವರು ತಾವು ಮಂಡಿಸಿರುವ ಎಲ್ಲಾ ಆಯವ್ಯಯದಲ್ಲಿ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು ಬಂದಿದ್ದಾರೆ. ಒಮ್ಮೆಯೂ ಅವರು ಆರ್ಥಿಕ ಶಿಸ್ತನ್ನು ಬಿಟ್ಟು ಹೋಗಿಲ್ಲ. ಆದರೆ ಯಾವುದೇ ಎಮರ್ಜೆನ್ಸಿ ಇಲ್ಲದಿದ್ದರೂ, ಸಕಾರಣವಿಲ್ಲದೆ ಯಡಿಯೂರಪ್ಪ ಅವರು ಆರ್ಥಿಕ ಶಿಸ್ತು ಇಲ್ಲದ ಬಜೆಟ್ ಅನ್ನು 2008-09 ನೇ ಸಾಲಿನಲ್ಲಿ ಮಂಡಿಸಿದ್ದರು. ಹಾಗೆಯೇ ಬಸವರಾಜ್ ಬೊಮ್ಮಯಿ ಅವರು ಕೋವಿಡ್ ಇದ್ದ ಕಾರಣ ಅನಿವಾರ್ಯವಾಗಿ ಆರ್ಥಿಕ ಶಿಸ್ತು ಇಲ್ಲದ ಬಜೆಟ್ ಮಂಡಿಸಿದ್ದರು ಎಂದು ತಿಳಿಸಿದರು.

ಈ ಬಾರಿಯ ಆಯವ್ಯಯದಲ್ಲಿ ಮುಖ್ಯಮಂತ್ರಿ ಅವರು ಪ್ರಮುಖವಾಗಿ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಹಾಗೆಯೇ ಬಂಡವಾಳ ಹೆಚ್ಚಳಕ್ಕೆ ಹೆಚ್ಚಿನ ಆದ್ಯತೆ ಕೊಟ್ಟಿದ್ದಾರೆ.

ಉತ್ತಮ ಜನಕಲ್ಯಾಣ ಕಾರ್ಯಕ್ರಮಗಳನ್ನು ನೀಡುವ ಜೊತೆಗೆ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ವೇಗ ಕೊಟ್ಟಿದ್ದಾರೆ. ತೀರ್ಪು ಬಂದು 16 ವರ್ಷ ಕಳೆದುಹೋಗಿರುವ ಕೃಷ್ಣ ನದಿ ಜಲಾನಯನ ಕಾಮಗಾರಿಗಳನ್ನು ಕೖಗೆತ್ತಿಕೊಳ್ಳುವ ಸಲುವಾಗಿ ಭೂ ಸ್ವಾಧೀನ ಪ್ರಕ್ರಿಯೆಗಾಗಿ ಹಣವನ್ನು ಒದಗಿಸಿದ್ದಾರೆ.

ಹೆಚ್ಚಾಗಿ ಅನಕ್ಷರಸ್ತರಿರುವ ಅಲ್ಪಸಂಖ್ಯಾತರನ್ನು ವಿದ್ಯಾವಂತರನ್ನಾಗಿ ಮಾಡುವ ಸಲುವಾಗಿ ಅವರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.

ನಮ್ಮ ಸರ್ಕಾರ ಉತ್ತಮ ಆಡಳಿತ ನೀಡುತ್ತಿರುವುದರಿಂದಲೇ ಇಂದು ನಮ್ಮ ರಾಜ್ಯಕ್ಕೆ ಹೆಚ್ಚು ವಿದೇಶಿ ಬಂಡವಾಳ ಹೂಡಿಕೆಯಾಗಿದೆ. ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ನಮ್ಮ ರಾಜ್ಯವು ವಿದೇಶಿ ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ.

ಸಿಬ್ಬಂದಿ ಹಾಗೂ ಅಧಿಕಾರಿಗಳ ವರ್ಗಾವಣೆಯಲ್ಲಿನ ಭ್ರಷ್ಟಾಚಾರವನ್ನು ನಿಯಂತ್ರಿಸಿ, ವರ್ಗಾವಣೆಯಲ್ಲಿ ಪಾರದರ್ಶಕತೆಯನ್ನು ತರುವ ಸಲುವಾಗಿ ಕಂದಾಯ, ಅಬಕಾರಿ ಸೇರಿದಂತೆ ಪ್ರಮುಖ ಇಲಾಖೆಗಳಲ್ಲಿ ಕೌನ್ಸಿಲಿಂಗ್ ಮೂಲಕವೆ ವರ್ಗಾವಣೆ ಮಾಡಲಾಗುತ್ತಿದೆ.

ಕೇಂದ್ರ ಸರ್ಕಾರದ ಮಲತಾಯಿ ದೋರಣೆಯಿಂದಾಗಿ ನಮ್ಮ ರಾಜ್ಯಕ್ಕೆ ಆರ್ಥಿಕವಾಗಿ ಅನ್ಯಾಯ ಆಗುತ್ತಿದೆಯೇ ಹೊರತು, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಂದ ಅಲ್ಲ. ನಮ್ಮ ಸರ್ಕಾರ ಜಾರಿಗೆ ತಂದಿರು ಪಂಚ ಗ್ಯಾರಂಟಿ ಯೋಜನೆಯಿಂದ ತಲಾವಾರು ಆದಾಯ ಹೆಚ್ಚಾಗಿದೆ. ತಲಾವಾರು ಆದಾಯದಲ್ಲಿ ದೇಶದಲ್ಲೇ ಎಲ್ಲಾ ರಾಜ್ಯಗಳಿಗಿಂತಲೂ ನಮ್ಮ ರಾಜ್ಯ ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ 3 ನೇ ಸ್ಥಾನದಲ್ಲೂ, ಗುಜರಾತ್ 4 ನೇ ಸ್ಥಾನದಲ್ಲಿದೆ. ಈ ಮಾಹಿತಿಯನ್ನು ಸ್ವತಃ ಕೇಂದ್ರ ವಿತ್ತ ಸಚಿವರೇ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ ಎಂದರು.

ಬಡತನ ರೇಖೆಗಿಂತ ಕೆಳಗಿರುವವರು, ಮಹಿಳೆಯರು, ಶೋಷಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದ ಜನರು, ಪರಿಶಿಷ್ಟ ಜಾತಿ ಮತ್ತು ಪಂಡದ ಜನರ ಆರ್ಥಿಕ ಸ್ಥಿತಿಯನ್ನು ಹೆಚ್ಚಿಸಬೇಕು, ಆ ಮೂಲಕ ಸರ್ವರ ವಿಕಾಸ ಆಗಬೇಕು ಎಂಬುದು ನಮ್ಮ ಸರ್ಕಾರದ ಆಶಯವಾಗಿದೆ.

ಗ್ಯಾರಂಟಿ ಯೋಜನೆಗಳಿಂದಾಗಿ ಸರ್ಕಾರ ಸಾಲವನ್ನು ಹೆಚ್ಚಿಸಿಕೊಂಡಿದೆ ಎಂದು ಆರೋಪಿಸುವವರು ಮೊದಲು ಬಜೆಟ್ ಪುಸ್ತಕವನ್ನು ಸರಿಯಾಗಿ ಓದಿ ತಿಳಿದುಕೊಳ್ಳಬೇಕು. ಯಾವ ಸರ್ಕಾರ ಸಾಲ ಮಾಡದೇ ಆಡಳಿತ ನಡೆಸಿದೆ ಹೇಳಿ? ಎಂದು ವಿರೋಧ ಪಕ್ಷದವರನ್ನು ಪ್ರಶ್ನಿಸಿದರು.

ಇನ್ನು ಭರ್ತಿ ಮಾಡಿಕೊಳ್ಳಲು ಉದ್ದೇಶಿಸಲಾಗಿರುವ 52 ಸಾವಿರ ಹುದ್ದೆಗಳಿಗೆ ಬೇಕಾಗುವ ವೇತನ ವೆಚ್ಚಕ್ಕೆ ಆಯವ್ಯಯದಲ್ಲಿ ಅನುದಾನವನ್ನು ಒದಗಿಸಲಾಗಿದೆ. ಹಾಗಾಗಿ ಸುಮ್ಮ ಸುಮ್ಮನೆ ಸರ್ಕಾರದಲ್ಲಿ ಆಡಳಿತ ನಡೆಸಲು ಹಣ ಇಲ್ಲ. ಆರ್ಥಿಕ ಬಿಕ್ಕಟ್ಟು ಉಂಟಾಗಿದೆ ಎಂದೆಲ್ಲಾ ಹೇಳುವುದು ಸರಿಯಲ್ಲ. ಮುಖ್ಯಮಂತ್ರಿ ಅವರು ಆರ್ಥಿಕ ಶಿಸ್ತನ್ನು ಇಟ್ಟು ಕೊಂಡೆ ಆಯವ್ಯಯವನ್ನು ಸಿದ್ಧಪಡಿಸಿದ್ದಾರೆ ಎಂದರು.


Share

You cannot copy content of this page