ತುಮಕೂರು: ಸೇವಾ ಮನೋಭಾವವೇ ವೈದ್ಯ ವೃತ್ತಿಯ ಶ್ರೇಷ್ಠತೆ, ಹಾಗಾಗಿಯೇ ನಮ್ಮ ಹಿರಿಯರು “ವೈದ್ಯೋ ನಾರಾಯಣೋ ಹರಿಃ” ಎಂದಿದ್ದಾರೆ. ಎರಡು ದಿನಗಳ ಕಾಲ ನಡೆಯುವ ಈ ಸಮ್ಮೇಳನ ಹಲವಾರು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲು ಸಹಾಯಕಾರಿಯಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಹೇಳಿದರು.
ತುಮಕೂರಿನಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ತುಮಕೂರು, ಹಾಸ್ಪಿಟಲ್ ಬೋರ್ಡ್ ಆಪ್ ಇಂಡಿಯಾ ವತಿಯಿಂದ ನಡೆದ ನ್ಯಾಷನಲ್ ಕಾನ್ಫರೆನ್ಸ್ – 2026 ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನರ ದೈಹಿಕ ಅಥವಾ ಮಾನಸಿಕ ಸಮಸ್ಯೆಯನ್ನು ನೀವು ಮಾತ್ರ ಪರಿಹಾರ ನೀಡಿ ಸಹಜ ಬದುಕನ್ನು ಬದುಕಲು ನೇರವಾಗಲು ಸಾಧ್ಯ. ಧನ ಸಹಾಯ ಮಾಡಬಹುದು, ವೃತ್ತಿಯಲ್ಲಿ ಸಹಾಯ ಮಾಡಬಹುದು ಆದರೆ ನೆಮ್ಮದಿ ನೀಡಲು ವೈದ್ಯರು ಮಾತ್ರ ಸಾಧ್ಯ. ಜೀವ ಉಳಿಸಲು ನಿಮ್ಮಿಂದ ಮಾತ್ರ ಸಾಧ್ಯ ಎಂದರು.
ಹಾಗೆಯೇ ಹಲವಾರು ಸಮಸ್ಯೆಗಳು ವೈದ್ಯರಿಗೆ ಇದೆ. ನಿಮ್ಮ ತಪ್ಪಿಲ್ಲದೇ ರೋಗಿಗೆ ಏನಾದರೂ ಅದಕ್ಕೂ ನೀವೇ ಕಾರಣ ಎಂದು ನಿಮ್ಮನ್ನೇ ದೂರುತ್ತಾರೆ. ನೀವು ಹಲವಾರು ಕಾನೂನು, ಗೈಡ್ ಲೈನ್ಸ್ ಪಾಲಿಸಿ ಕೆಲಸ ಮಾಡಬೇಕಾದ ಒತ್ತಡವೂ ನಿಮಗೆ ಇದೆ. ಈಗ ಅತಿಯಾದ ಕಮರ್ಷಿಯಲ್ ಸಮಸ್ಯೆ ಆರೋಗ್ಯ ಕ್ಷೇತ್ರವನ್ನು ಬಾಧಿಸುತ್ತಿದೆ. ನೀವೂ ಕೆಲವೊಮ್ಮೆ ಅನಿವಾರ್ಯತೆಗೆ ಸಿಲುಕುತ್ತೀರಿ. ಆಸ್ಪತ್ರೆಗಳಲ್ಲಿ ಹಣಕಾಸು ಆಧಿಕಾರಿಗಳು ಬಂದ ಮೇಲೆ ವೈದ್ಯರು ಟಾರ್ಗೆಟ್ ಎಂಬ ವ್ಯವಸ್ಥೆಗೆ ಒಗ್ಗಿಕೊಳ್ಳಬೇಕಾದ ಅನಿವಾರ್ಯತೆ ನಿಮಗೆ ಇದೆ. ಆದರೆ ಸೇವಾ ಮನೋಬಾವ ಇಲ್ಲದೇ ಇದ್ದರೆ ವೈದ್ಯ ವೃತ್ತಿಗೆ ಗೌರವವೇ ಇರುವುದಿಲ್ಲ. ಹಾಗಾಗಿ ಬಡಜನರು ಬಂದಾಗ ಕರುಣೆಯ ದೃಷ್ಟಿ ವೈದ್ಯರು ಇರಿಸಿಕೊಳ್ಳಲೇಬೇಕು ಎಂದು ಹೇಳಿದರು.
ವೈದ್ಯರ ಮೇಲಿನ ದೌರ್ಜನ್ಯಕ್ಕೆ ಸರ್ಕಾರ ಹಲವಾರು ಕಠಿಣ ಕಾನೂನನ್ನು ತಂದು ನಿಮಗೆ ರಕ್ಷಣೆ ಒದಗಿಸಿದೆ. ಈಚೆಗೆ ನಾನು ಹಾಗೂ ಸಚಿವರಾದ ಡಾ. ಜಿ ಪರಮೇಶ್ವರ ಅವರು ಸರಣಿ ಸಭೆ ನಡೆಸಿ ಫೈರ್ ಲೈಸೆನ್ಸ್ ಕುರಿತು ಇದ್ದ ನಿಮ್ಮ ಬಹುದಿನದ ಸಮಸ್ಯೆಗೆ ಪರಿಹಾರ ನೀಡಿದ್ದೇವೆ. ಕೆಪಿಎಂಎ ನೋಂದಣಿಯಲ್ಲೂ ಬದಲಾವಣೆ ತಂದು ಕ್ಲಿನಿಕ್ ಪ್ರಾರಂಭಿಸಿ ನಂತರ ಆರು ತಿಂಗಳ ಒಳಗಾಗಿ ಕಾಗದಪತ್ರ ನೀಡಬಹುದಾಗಿದೆ. ಇದರಿಂದ ಅನಗತ್ಯ ತೊಂದರೆ ತಪ್ಪಿಸಲಾಗಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಸಾಮಾನ್ಯ ಚಿಕಿತ್ಸೆಗೆ ವಿಧಿಸುವ ರೇಟ್ ಗಳ ಕುರಿತು ಸರ್ಕಾರ ನಿಮ್ಮ ಜೊತೆ ಚರ್ಚಿಸಲು ಉತ್ಸುಕವಾಗಿದೆ. ಯಾಕೆಂದರೆ ಸಾಮಾನ್ಯ ಚಿಕಿತ್ಸೆಗೆ ಒಂದೊಂದು ಆಸ್ಪತ್ರೆಗಳಲ್ಲಿ ಒಂದೊಂದು ದರಪಟ್ಟಿ ಇದೆ. ಇದರ ಐಎಂಎ ಕೂಡ ಚರ್ಚೆ ಮಾಡಬೇಕಾಗಿದೆ. ಇದಕ್ಕೊಂದು ಮಾನದಂಡ ನಿಗದಿ ಮಾಡುವುದರಿಂದ ಸಾರ್ವಜನಿಕರಿಗೆ ಅನುಕೂಲ ಆಗಲಿದೆ.
ಕಾರ್ಯಕ್ರಮದಲ್ಲಿ ಗೃಹಸಚಿವರಾದ ಡಾ ಜಿ ಪರಮೇಶ್ವರ, ಶಾಸಕರಾದ ಎನ್ ಟಿ ಶ್ರೀನಿವಾಸ, ಶ್ರೀ ಜ್ಯೋತಿ ಗಣೇಶ್, ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ ಹಾಗೂ ಐಎಂಎ ಪದಾಧಿಕಾರಿಗಳು ಉಪಸ್ಥಿತರಿದ್ದರು.
