ಬೆಂಗಳೂರು: ಶಾಸಕರಿಗೆ ಐಪಿಎಲ್ ಪಂದ್ಯಗಳ 3 ಟಿಕೆಟ್ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 2 ಟಿಕೆಟ್ ಉಚಿತವಾಗಿ ನೀಡಲು ಒಪ್ಪಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 2 ಹೆಚ್ಚುವರಿ ಟಿಕೆಟ್ ಅನ್ನು ಖರೀದಿಸಲು ಅವಕಾಶ ನೀಡಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಶಾಸಕರಿಗೆ ಕ್ರಿಕೆಟ್ ಪಂದ್ಯಗಳ ಟಿಕೆಟ್ ವಿತರಣೆ ಕುರಿತು ಇಂದು ನಾನು ಕೆಎಸ್ ಸಿಎ ಅಧ್ಯಕ್ಷರು ಪದಾಧಿಕಾರಿಗಳು, ಡಿಎನ್ಎ ಸಂಸ್ಥೆ ಹಾಗೂ ಆರ್ ಸಿಬಿ ವ್ಯವಸ್ಥಾಪಕರೊಂದಿಗೆ ಚರ್ಚೆ ಮಾಡಿದೆ. ಕಳೆದ ವಾರ ಮೊದಲ ಪಂದ್ಯದ ಟಿಕೆಟ್ ಮಾರಾಟವಾಗಿದ್ದ ಹಿನ್ನೆಲೆಯಲ್ಲಿ 2 ಟಿಕೆಟ್ ನೀಡಲು ಒಪ್ಪಿದ್ದರು. ಇಂದು ಮತ್ತೆ ಸಭೆ ಮಾಡಿದ್ದೇವೆ. ಕ್ರಿಕೆಟ್ ಸಂಸ್ಥೆಯವರು ಅನೇಕ ಒಪ್ಪಂದಗಳನ್ನು ಮಾಡಿಕೊಂಡಿರುತ್ತಾರೆ. ಹೀಗಾಗಿ ಈ ತೀರ್ಮಾನಕ್ಕೆ ಬರಲಾಗಿದೆ. ಇದರೊಂದಿಗೆ ಈ ವಿಚಾರ ಇಲ್ಲಿಗೆ ಅಂತ್ಯಗೊಳಿಸಲಾಗುತ್ತಿದೆ. ಯಾರಿಗಾದರೂ ಐಪಿಎಲ್ ಟಿಕೆಟ್ ಬಗ್ಗೆ ಆಸಕ್ತಿ ಇಲ್ಲವಾದರೆ, ಅವರು ಈ ಬಗ್ಗೆ ನಮಗೆ ಲಿಖಿತ ರೂಪದಲ್ಲಿ ನೀಡಲಿ, ನಾವು ಅವರಿಗೆ ಟಿಕೆಟ್ ನೀಡುವುದಿಲ್ಲ. ಇಲ್ಲಿ ಯಾರಿಗೂ ಬಲವಂತವಿಲ್ಲ ಎಂದರು.
ಶಾಸಕರು ಹೆಚ್ಚಿನ ಟಿಕೆಟ್ ಗಳಿಗೆ ಬೇಡಿಕೆ ಇಟ್ಟಿದ್ದ ಬಗ್ಗೆ ಕೇಳಿದಾಗ, ಅನೇಕ ಬೇಡಿಕೆಗಳು ಬರುತ್ತವೆ. ಎಲ್ಲವನ್ನು ಈಡೇರಿಸಲು ಆಗುವುದಿಲ್ಲ. ಅವರ ಬೇಡಿಕೆಗಳ ಆಧಾರದ ಮೇಲೆ ಚರ್ಚೆ ಮಾಡಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಈ ತೀರ್ಮಾನ ಮಾಡಲಾಗಿದೆ. ನಾನು ರಾಜಸ್ಥಾನ, ಮುಂಬೈ, ದೆಹಲಿ, ಕೊಲ್ಕತ್ತಾ ಹಾಗೂ ಗುಜರಾತ್ ಅಧಿಕಾರಿಗಳ ಜತೆಗೂ ಚರ್ಚೆ ಮಾಡಿದ್ದು, ಸುಮಾರು 50-60% ಟಿಕೆಟ್ ಗಳನ್ನು ಸರ್ಕಾರಿ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ವರ್ಗದವರಿಗೆ ವಿತರಣೆ ಮಾಡಲಾಗುತ್ತಿದೆ. ಅವರಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಹಸ್ತಕ್ಷೇಪ ಕಡಿಮೆ ಇದೆ ಎಂದರು.
ಕ್ರೀಡಾಂಗಣದಲ್ಲಿ ಆಸನ ಸಂಖ್ಯೆ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚನೆ
ಇನ್ನು ಕ್ರಿಡಾಂಗಣದ ಬಗ್ಗೆಯೂ ಚರ್ಚೆ ಮಾಡಲಾಗಿದ್ದು, ಯಾವ ರೀತಿ ಆಸನಗಳ ಸಂಖ್ಯೆ ಹೆಚ್ಚಿಸಬೇಕು ಎಂದು ಮಾತನಾಡಿದ್ದೇವೆ. ಬೇರೆ ಕಡೆ ಕ್ರೀಡಾಂಗಣ ನಿರ್ಮಾಣಕ್ಕೆ ಜಾಗ ಗುರುತಿಸಲು ಜಿಬಿಎ ಆಯುಕ್ತರ ಜತೆ ಚರ್ಚೆ ಮಾಡಲಾಗಿದೆ. ಈ ಕುರಿತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲು ಸೂಚಿಸಿದ್ದೇವೆ. ಅವರು ಪ್ರಸ್ತಾವನೆ ಸಲ್ಲಿಸಿದ ಬಳಿಕ ಸರ್ಕಾರ ಮಟ್ಟದಲ್ಲಿ ಚರ್ಚೆ ಮಾಡಿ ಅಗತ್ಯ ಅನುಮತಿ ನೀಡಲಾಗುವುದು. 20 ಸಾವಿರ ಆಸನಗಳ ಸಂಖ್ಯೆ ಹೆಚ್ಚಳ ಮಾಡಿದರೆ ಜನರಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.
ಕೆಎಸ್ ಸಿಎ ವ್ಯವಹಾರಗಳಲ್ಲಿ ಅತಿಯಾದ ಹಸ್ತಕ್ಷೇಪ ಮಾಡಲ್ಲ
ಐಪಿಎಲ್ ಪಂದ್ಯಾವಳಿಯಲ್ಲಿ ಶಾಸಕರು ಹಾಗೂ ಸಚಿವರಿಗೆ ಪ್ರತ್ಯೇಕ ಗ್ಯಾಲರಿ ಮಾಡಬೇಕು ಎಂಬ ಬೇಡಿಕೆ ಬಗ್ಗೆ ಕೇಳಿದಾಗ, ನಾನು ಆ ವಿಚಾರಕ್ಕೆಲ್ಲಾ ಹೋಗುವುದಿಲ್ಲ. ಇದನ್ನು ಕೆಎಸ್ ಸಿಎ ಪದಾಧಿಕಾರಿಗಳಿಗೆ ಬಿಟ್ಟ ವಿಚಾರ. ಅವರ ವ್ಯವಹಾರಗಳಲ್ಲಿ ಅತಿಯಾಗಿ ಹಸ್ತಕ್ಷೇಪ ಮಾಡುವುದಿಲ್ಲ. ನಾವು ಶಾಸಕರು, ಸಂಸದರಾಗಿರಬಹುದು. ಶಾಸಕರಿಂದ ಟಿಕೆಟ್ ಮನವಿ ಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ಉಳಿದಂತೆ ಬೇರೆ ವಿಚಾರದಲ್ಲಿ ನಾನು ಹೋಗುವುದಿಲ್ಲ ಎಂದು ತಿಳಿಸಿದರು.
ಈಗಾಗಲೇ ಸರ್ಕಾರ ಕ್ರೀಡಾಂಗಣ ನಿರ್ಮಾಣ ಮಾಡಲು ಮುಂದಾಗಿದ್ದು, ಕೆಎಸ್ ಸಿಎಗೂ ಕ್ರೀಡಾಂಗಣ ನಿರ್ಮಾಣಕ್ಕೆ ಜಾಗ ನೀಡಲಾಗುವುದೇ ಎಂದು ಕೇಳಿದಾಗ, ನಾವು ಈಗಾಗಲೇ ಕೆಎಸ್ ಸಿಎ ಅವರಿಗೆ 25 ಎಕರೆ ಜಾಗ ನೀಡಿದ್ದೇವೆ, ತುಮಕೂರು, ಮೈಸೂರಿನಲ್ಲಿ ಜಾಗ ನೀಡಿದ್ದೇವೆ. ಬೆಂಗಳೂರಿನಲ್ಲಿ ಕೆಹೆಚ್ ಬಿ ವತಿಯಿಂದಲೂ ಕ್ರೀಡಾಂಗಣ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಸೂರ್ಯನಗರದಲ್ಲಿ ನಿರ್ಮಾಣ ಮಾಡುತ್ತಿರುವುದು ಎಲ್ಲರಿಗೂ ಅನುಕೂಲವಾಗಲಿ ಎಂದು ಎಲ್ಲಾ ಕ್ರೀಡೆಗಳಿಗೆ ಪ್ರಯೋಜನವಾಗುವಂತೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
