ಬೆಂಗಳೂರು:ಜಿಬಿಎ ವ್ಯಾಪ್ತಿಯಲ್ಲಿ ಕಟ್ಟಡ ಉಪವಿಧಿಗಳ ತಿದ್ದುಪಡಿಗಾಗಿ ಕರಡು ಅಧಿಸೂಚನೆ ಪ್ರಕಟಿಸಿದ್ದು, ಅಧಿಸೂಚನೆ ಪ್ರಕಟವಾದ 30 ದಿನಗಳಲ್ಲಿ ಆಯಾ ನಗರ ಪಾಲಿಕೆಗಳಲ್ಲಿ ಆಕ್ಷೇಪಣೆ ಹಾಗೂ ಸಲಹೆಗಳನ್ನು ಅವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ತಿಳಿಸಿದ್ದಾರೆ.
ಉಪ ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ ಶಿವಕುಮಾರ್* ರವರ ಮಾರ್ಗದರ್ಶನದಂತೆ ರಾಜ್ಯ ಸರ್ಕಾರವು ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿನ ಕಟ್ಟಡ ನಿರ್ಮಾಣದಾರರಿಗೆ ಸಂತೋಷಕರ ಸುದ್ದಿಯನ್ನು ನೀಡಿರುತ್ತದೆ.
ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಿರುವ ಹಲವಾರು ಕಟ್ಟಡ ನಿರ್ಮಾಣದಾರರ ಸಂಕಷ್ಟವನ್ನು ಪರಿಗಣಿಸಿ, ಕಟ್ಟಡ ನಿರ್ಮಾಣಗಳಲ್ಲಿನ ಉಲ್ಲಂಘನೆ ಮಿತಿಯನ್ನು ಹಾಲಿ ಇರುವ ಶೇ. 5 ರಿಂದ ಶೇ.15 ಕ್ಕೆ ಹೆಚ್ಚಿಸಲು ಸರ್ಕಾರವು ಮಹತ್ವಪೂರ್ಣವಾದ ಮತ್ತು ಜನಪರವಾದ ನಿರ್ಧಾರವನ್ನು ಕೈಗೊಂಡಿದೆ.
ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಭೂಮಿಯ ಅತೀವವಾದ ಬೆಲೆಯಿಂದ ಮತ್ತು ಹಲವು ಅನಿವಾರ್ಯ ಕಾರಣಗಳಿಂದ ನಿವೇಶನ ಮಾಲೀಕರು ಮಂಜೂರಾತಿ ನಕ್ಷೆಗೆ ವ್ಯತಿರಿಕ್ತವಾಗಿ ಕೆಲವೊಂದು ಬದಲಾವಣೆಗಳೊಂದಿಗೆ ಕಡಿಮೆ ನಡುಜಾಗಗಳನ್ನು ಬಿಟ್ಟು ಹೆಚ್ಚುವರಿ ಕಟ್ಟಡ ನಿರ್ಮಾಣ ಮಾಡಿ ಸಂಕಷ್ಟ ಅನುಭವಿಸುತ್ತಿರುವುದು ಕಂಡು ಬಂದಿರುತ್ತದೆ. ಕಾರಣ ಹಾಲಿ ನಿಯಮಗಳಲ್ಲಿ ಶೇ.5 ರಷ್ಟು ಉಲ್ಲಂಘನೆಗಳನ್ನು ಮಾತ್ರ ಸಕ್ರಮಗೊಳಿಸಲು ಅವಕಾಶವಿರುತ್ತದೆ.
ಇಂತಹ, ಬಹುತೇಕ ಕಟ್ಟಡಗಳಲ್ಲಿ ಉಲ್ಲಂಘನೆ ಪ್ರಮಾಣವು ಶೇ.5 ಕ್ಕಿಂತ ಹೆಚ್ಚಾಗಿರುತ್ತದೆ. ಈ ರೀತಿ ನಿರ್ಮಾಣವಾಗಿರುವ ಹಲವಾರು ಕಟ್ಟಡಗಳಿಗೆ ನಗರ ಪಾಲಿಕೆಗಳಿಂದ ಸ್ವಾಧೀನಾನುಭವ ಪ್ರಮಾಣ ಪತ್ರ ದೊರೆಯದೇ ಕಟ್ಟಡಗಳಿಗೆ ನೀರು ಸರಬರಾಜು ಹಾಗೂ ವಿದ್ಯುತ್ ಸಂಪರ್ಕ ಪಡೆಯಲು ಸಾಧ್ಯವಾಗುತ್ತಿಲ್ಲ.
ಆದ್ದರಿಂದ, ವಾಸ್ತವಿಕ ಅಂಶಗಳನ್ನು ಮನಗಂಡು ಜನರ ಸಂಕಷ್ಟಕ್ಕೆ ಪರಿಹಾರ ನೀಡಲು ಕಟ್ಟಡ ಉಪವಿಧಿಗಳು 2003 ರ ಉಪವಿಧಿ 6ಕ್ಕೆ ತಿದ್ದುಪಡಿ ತಂದು, ಕಟ್ಟಡಗಳ ಉಲ್ಲಂಘನೆ ಮಿತಿಯನ್ನು ಶೇ.5 ರ ಬದಲಾಗಿ ಶೇ.15 ರ ವರೆಗೆ ಹೆಚ್ಚಿಸಿ, ಅದಕ್ಕೆ ದಂಡ ಪಾವತಿಸಿಕೊಂಡು ಕ್ರಮಬದ್ದಗೊಳಿಸಲು ಸರ್ಕಾರವು ತೀರ್ಮಾನಿಸಿರುತ್ತದೆ. ಅದರಂತೆ ಬೆಂಗಳೂರು ನಗರದ ಕಟ್ಟಡ ಉಪವಿಧಿಗಳಿಗೆ ತಿದ್ದುಪಡಿ ತರಲು ದಿನಾಂಕ: 01-04-2026 ರಂದು ಎಲ್ಲಾ 5 ನಗರ ಪಾಲಿಕೆಗಳಿಂದ ಕರಡು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.
ಈ ತಿದ್ದುಪಡಿಯು ಬೆಂಗಳೂರು ನಗರದ ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ಸರ್ಕಾರವು ಕೈಗೊಂಡಿರುವ ಒಂದು ಮಹತ್ವಪೂರ್ಣವಾದ ಮತ್ತು ಜನಪರ ಕಾಳಜಿಯ ನಿರ್ಧಾರವಾಗಿದ್ದು, ಇದರ ಹೊರತಾದ ಹೆಚ್ಚುವರಿ ಉಲ್ಲಂಘನೆಗಳ ವಿಚಾರದಲ್ಲಿ ಇನ್ನೂ ಹೆಚ್ಚಿನ ಕಠಿಣ ಅನುಷ್ಠಾನ ಕ್ರಮಗಳನ್ನು ಜಾರಿಗೊಳಿಸಲು ಸಹ ಯೋಜಿಸಲಾಗುತ್ತಿದೆ.
ಆದ್ದರಿಂದ, ಜನರ ಸಂಕಷ್ಟಗಳನ್ನು ಪರಿಹರಿಸಲು ಕೈಗೊಂಡಿರುವ ನಿರ್ಧಾರ ಮತ್ತು ಜನ ಸಾಮಾನ್ಯರ ಆರೋಗ್ಯಕರ ಜೀವನಕ್ಕಾಗಿ ಬೇಕಾದ ಗಾಳಿ, ಬೆಳಕು ಮತ್ತು ಸುರಕ್ಷತೆ ಮಾನದಂಡಗಳನ್ನು ಪರಿಗಣಿಸಿ, ರೂಪಿಸಲಾಗಿರುವ ಈ ತಿದ್ದುಪಡಿ ಉಪವಿಧಿಗಳಲ್ಲಿ ಈಗ ಪ್ರಸ್ತಾಪಿಸಿರುವ ಶೇ. 15 ರ ಉಲ್ಲಂಘನೆ ಪ್ರಮಾಣದ ವಿನಾಯಿತಿಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ಈ ಉಪವಿಧಿಗಳ ಬಗ್ಗೆ ಸಂಬಂಧಪಟ್ಟ ನಗರ ಪಾಲಿಕೆಗಳ ಆಯುಕ್ತರಿಗೆ ಸಾರ್ವಜನಿಕರು ಸಲಹೆಗಳು ಇದ್ದಲ್ಲಿ 2026 ನೇ ಏಪ್ರಿಲ್ 30 ರೊಳಗೆ ಸಲ್ಲಿಸಬಹುದು.
ಈ ಅಧಿಸೂಚನೆಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಂತರ್ಜಾಲ https://updates.bbmpgov.in/public ರಲ್ಲಿ ಸಾರ್ವಜನಿಕರು ವೀಕ್ಷಿಸಬಹುದಾಗಿರುತ್ತದೆ. ಸಾರ್ವಜನಿಕರು ಕರಡು ಕಟ್ಟಡ ಉಪವಿಧಿಗಳ ಬಗ್ಗೆ ರಚನಾತ್ಮಕವಾದ ಸಲಹೆ ಸೂಚನೆಗಳನ್ನು ನೀಡುವಂತೆ ಕೋರಿದೆ. ಸಲಹೆ ಸೂಚನೆಗಳನ್ನು ಧನಾತ್ಮಕವಾಗಿ ಸ್ವೀಕರಿಸಿ, ತೀರ್ಮಾನ ಕೈಗೊಂಡು ಸಾರ್ವಜನಿಕರ ಹಿತದೃಷ್ಟಿಯಿಂದ ಉಪವಿಧಿಗಳನ್ನು ಅಂತಿಮವಾಗಿ ಅಧಿಸೂಚಿಸಲಾಗುವುದು ಎಂದು ಪ್ರಕಟಿಸಿದೆ.
ಆಕ್ಷೇಪಣೆ & ಸಲಹೆಗಳನ್ನು ಸಲ್ಲಿಸಬೇಕಾದ ನಗರಪಾಲಿಕೆ ಕಛೇರಿಗಳ ವಿವರ:
ಬೆಂಗಳೂರು ಉತ್ತರ ನಗರ ಪಾಲಿಕೆ:ಆಯುಕ್ತರು, ಬೆಂಗಳೂರು ಉತ್ತರ ನಗರ ಪಾಲಿಕೆ, ಅಮೃತಹಳ್ಳಿ ಮುಖ್ಯ ರಸ್ತೆ, ಬ್ಯಾಟರಾಯನಪುರ, ಬೆಂಗಳೂರು-560092
ಬೆಂಗಳೂರು ಕೇಂದ್ರ ನಗರ ಪಾಲಿಕೆ:ಆಯುಕ್ತರು,
ಬೆಂಗಳೂರು ಕೇಂದ್ರ ನಗರ ಪಾಲಿಕೆ, 10ನೇ ಮಹಡಿ, ಪಬ್ಲಿಕ್ ಯುಟಿಲಿಟಿ ಬಿಲ್ಡಿಂಗ್(ಪಿಯುಬಿ), ಎಂಜಿ ರಸ್ತೆ, ಬೆಂಗಳೂರು-560001.
ಬೆಂಗಳೂರು ಪೂರ್ವ ನಗರ ಪಾಲಿಕೆ:ಆಯುಕ್ತರು,
ಬೆಂಗಳೂರು ಪೂರ್ವ ನಗರ ಪಾಲಿಕೆ, ಆರ್.ಹೆಚ್.ಬಿ ಕಾಲೋನಿ, ಫಿಯೋನಿಕ್ಸ್ ಮಾಲ್ ಎದುರು, ಬೆಂಗಳೂರು-560048.
ಬೆಂಗಳೂರು ದಕ್ಷಿಣ ನಗರ ಪಾಲಿಕೆ:ಆಯುಕ್ತರು,
ಬೆಂಗಳೂರು ದಕ್ಷಿಣ ನಗರ ಪಾಲಿಕೆ, ಪಾಲಿಕೆ ವಾಣಿಜ್ಯ ಕಟ್ಟಡ, 9ನೇ ಮುಖ್ಯ ರಸ್ತೆ, 9ನೇ ಕ್ರಾಸ್ ರಸ್ತೆ, ಜಯನಗರ 2ನೇ ಬ್ಲಾಕ್, ಬೆಂಗಳೂರು-560001.
ಬೆಂಗಳೂರು ಪಶ್ಚಿಮ ನಗರ ಪಾಲಿಕೆ:ಆಯುಕ್ತರು,
ಬೆಂಗಳೂರು ಪಶ್ಚಿಮ ನಗರ ಪಾಲಿಕೆ, 16ನೇ ಕ್ರಾಸ್ ರಸ್ತೆ, ಐ.ಪಿ.ಪಿ ಕೇಂದ್ರ, ಮಲ್ಲೇಶ್ವರಂ, ಬೆಂಗಳೂರು-560003 ಈ ವಿಳಾಸಗಳಿಗೆ ಸಲಹೆ ಮತ್ತು ಆಕ್ಷೇಪಣೆ ಸಲ್ಲಿಸಬಹುದು.
