ಸಮಗ್ರ ಸುದ್ದಿ

ಕಾವೇರಿ ವಿಚಾರದಲ್ಲಿ ರೈತರ ಹಿತ ಕಾಪಾಡುವುದು ನನ್ನ ಕರ್ತವ್ಯ: ಸಿಎಂ ಡಿ ಕೆ ಶಿವಕುಮಾರ್

Share

ಮಡಿಕೇರಿ:ರಾಜ್ಯದ ಜಲಾಶಯಗಳು ಇನ್ನೂ ಸಂಪೂರ್ಣವಾಗಿ ತುಂಬಿಲ್ಲ. ನಮ್ಮ ರೈತರನ್ನು ಬದುಕಿಸುವ ಸವಾಲಿನ ಜೊತೆಗೆ ಕಾನೂನನ್ನೂ ಕಾಪಾಡಬೇಕು. ಎರಡೂ ಬಹಳ ಮುಖ್ಯ. ಕಾವೇರಿ ವಿಚಾರದಲ್ಲಿ ರೈತರ ಹಿತ ಕಾಯುವುದು ನನ್ನ ಕರ್ತವ್ಯ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.

ಕೊಡಗಿನ ಭಾಗಮಂಡಲದಲ್ಲಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಭಾನುವಾರ ಪ್ರತಿಕ್ರಿಯೆ ನೀಡಿದರು.

ಕುಡಿಯುವ ನೀರು, ಕೃಷಿಗೆ ಜಲಾಶಯಗಳಲ್ಲಿನ ನೀರಿನ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡೇ ನಾವು ನಿರ್ಧಾರ ಕೈಗೊಳ್ಳಬೇಕು.‌ ಉತ್ತಮ ಮಳೆಯಾಗಿ ಬೆಳೆ ಸಮೃದ್ಧಿಯಾಗಬೇಕು, ರೈತರಿಗೆ ಅನ್ನ ಸಿಗಬೇಕು ಎಂಬುದು ನಮ್ಮ ಆಶಯ‌ ಎಂದು ತಿಳಿಸಿದರು.

ನಮ್ಮ ರಾಜ್ಯದ ಒಳಗೆ ಯಾವುದೇ ಅಣೆಕಟ್ಟು ಕಟ್ಟಲು ಅಭ್ಯಂತರವಿಲ್ಲ ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ‌. ಕೇಂದ್ರ ಸರ್ಕಾರ ಕೂಡ ತಮಿಳುನಾಡಿನ ಸಂಸದರಿಗೆ ಉತ್ತರ ನೀಡುವಾಗಲೂ ಸ್ಪಷ್ಟಪಡಿಸಿದೆ. ಮೇಕೆದಾಟು ನಿರ್ಮಾಣದಿಂದ ತಮಿಳುನಾಡಿಗೆ ನಿಗದಿಯಾಗಿರುವ 177.25 ಟಿಎಂಸಿ ನೀರಿನ ಹಂಚಿಕೆಗೆ ತೊಂದರೆಯಾಗುವುದಿಲ್ಲ. ಸಂಕಷ್ಟದ ಸಂದರ್ಭದಲ್ಲಿ ನೀರು ಹಂಚಿಕೆಗೆ ಪ್ರತ್ಯೇಕ ನಿಯಮಗಳಿವೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವೂ ಈ ಬಗ್ಗೆ ಅಗತ್ಯ ನಿರ್ದೇಶನಗಳನ್ನು ನೀಡಿದೆ. ನಮ್ಮ ಡ್ಯಾಮ್‌ಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾದರೆ ಅನಗತ್ಯ ಸಂಕಷ್ಟ ಎದುರಾಗಬಹುದು. ಆ ಪರಿಸ್ಥಿತಿ ಬರಬಾರದು. ನಾವು ಕಾನೂನು ಪಾಲಿಸದಿದ್ದರೆ ಅಣೆಕಟ್ಟು ನಿಯಂತ್ರಣವನ್ನ ಕೇಂದ್ರ ಸರ್ಕಾರಕ್ಕೆ ಕೊಡಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದರು‌.

“ಕಾವೇರಿ ನದಿಗೆ ಹಾಗೂ ಕನ್ನಂಬಾಡಿ ಕಟ್ಟೆ ಅನ್ನದ ತಟ್ಟೆ. ನಮ್ಮ ರೈತರು ಬೆಳೆ ತೆಗೆಯಲಿ, ಅವರು ಉಳಿಯಲಿ ಎಂದು ತಾಯಿ ಕಾವೇರಿಗೆ ಪ್ರಾರ್ಥನೆ ಸಲ್ಲಿಸಿದ್ದೇನೆ. ಮೇಕೆದಾಟು ಹೋರಾಟ “ನಮ್ಮ ನೀರು, ನಮ್ಮ ಹಕ್ಕು” ಸಂದರ್ಭದಲ್ಲಿ ಕಾವೇರಿ ತಾಯಿಗೆ ಪ್ರಾರ್ಥನೆ ಸಲ್ಲಿಸಿದ್ದೆ. ಮೂರು ವರ್ಷಕ್ಕೊಮ್ಮೆ ಇಂತಹ ನೀರಿನ ಸಮಸ್ಯೆ ಎದುರಾಗುವುದು ಪ್ರಕೃತಿಯ ನಿಯಮ” ಎಂದು ಹೇಳಿದರು.

*ಮಳೆಗಾಗಿ ಶೃಂಗೇರಿಯ ಕಿಗ್ಗದಲ್ಲಿ ಪ್ರಾರ್ಥನೆ

ಮಳೆಗಾಗಿ ರಾಜ್ಯದ ಜನರ ಪ್ರಾರ್ಥನೆಯೂ ಅಗತ್ಯ. ಮಳೆಗಾಗಿಯೇ ಪ್ರಾರ್ಥನೆ ಸಲ್ಲಿಸಲು ಇರುವ ಶೃಂಗೇರಿಯ ಕಿಗ್ಗದಲ್ಲಿಯೂ ಮಳೆಗಾಗಿ ಪ್ರಾರ್ಥನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು, ಸ್ಥಳೀಯ ಶಾಸಕರಿಗೆ ತಿಳಿಸಲಾಗುವುದು ಎಂದರು.

“ರಾಜ್ಯದ ಜನತೆ, ಪಕ್ಷದ ನಾಯಕರು ಹಾಗೂ ಗುರುಗಳ ಆಶೀರ್ವಾದದಿಂದ ಕಳೆದ 45 ವರ್ಷಗಳಿಂದ ನಾನು ನಡೆಸಿದ ಹೋರಾಟಕ್ಕೆ ಫಲ. ಪ್ರಾರ್ಥನೆಗೆ ಫಲ ಸಿಕ್ಕಿದೆ” ಎಂದರು.

ಯಾವುದೇ ಸಂಘಟನೆಯಾದರೂ ಕಾನೂನು ಪಾಲಿಸಬೇಕು

ಸರ್ಕಾರಿ ಜಾಗಗಳಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ಪಡೆಯಬೇಕು ಎನ್ನುವ ನಿಯಮದ ಬಗ್ಗೆ ಬಿಜೆಪಿ ನಾಯಕ ಬಿ ಎಲ್ ಸಂತೋಷ್ ಆಕ್ಷೇಪದ ಬಗ್ಗೆ ಕೇಳಿದಾಗ, “ನಾವು ಮೊದಲಿನಿಂದಲೂ ಯಾವುದನ್ನೋ ಹಿಡಿದುಕೊಂಡು ರಾಜಕೀಯ ಮಾಡುವುದಿಲ್ಲ. ಯಾರೂ ಗಾಬರಿಪಡುವ ಅಗತ್ಯವಿಲ್ಲ. ಯಾವುದೇ ಸಂಘಟನೆಯಾಗಲಿ ಕಾನೂನು ಪಾಲಿಸಬೇಕು. ಸರ್ಕಾರಕ್ಕೆ ಅನುಮತಿ ಕೋರಿ ಅರ್ಜಿ ಬಂದರೆ, ನಿಯಮಾನುಸಾರ ಅಗತ್ಯ ಅನುಮತಿ ಹಾಗೂ ಸಿಬ್ಬಂದಿ ವ್ಯವಸ್ಥೆ ಮಾಡಲಾಗುವುದು” ಎಂದು ಹೇಳಿದರು.

“ಕೃಷ್ಣ ಬೈರೇಗೌಡರು ಸಹ ಫ್ರೀಡಂ ಹಬ್ಬ ಮಾಡಲು ಸರ್ಕಾರದ ಅನುಮತಿ ಪಡೆದರು. ದಳ, ಬಿಜೆಪಿ, ಕಾಂಗ್ರೆಸ್ ಹಾಗೂ ಇತರೇ ಸಂಘಟನೆಗಳು ಯಾರೇ ಆದರೂ ನಾವೆಲ್ಲರೂ ಕಾನೂನಿನ ಚೌಕಟ್ಟಿನಲ್ಲಿ ಕಾರ್ಯಕ್ರಮ ನಡೆಸಲು ಅವಕಾಶವಿದೆ” ಎಂದರು.

“ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ವೋಟ್ ಚೋರಿ ಹೋರಾಟದ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲು ಜಾಥಾ ಮಾಡಬೇಕಾಗಿತ್ತು. ಆಗ ನಾವು ಅಧಿಕಾರ ದುರುಪಯೋಗ ಮಾಡಬಾರದು ಎಂಬ ಕಾರಣಕ್ಕೆ ಕಾನೂನು ಪಾಲಿಸುವಂತೆ ಮನವಿ ಮಾಡಿದ್ದೆವು. ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಗೌರವಿಸುವುದು ನಮ್ಮ ಜವಾಬ್ದಾರಿ” ಎಂದು ತಿಳಿಸಿದರು.

“ನಾವು ಅಧಿಕಾರದಲ್ಲಿದ್ದೇವೆ ಎಂಬ ಕಾರಣಕ್ಕೆ ಅಧಿಕಾರ ದುರುಪಯೋಗ ಮಾಡಬಾರದು. ನ್ಯಾಯಾಲಯ ನೀಡಿರುವ ಕಾನೂನಿಗೆ ನಾವು ಗೌರವ ಕೊಡುತ್ತೇವೆ. ಅಂದು ಪರಮೇಶ್ವರ್ ಅವರು ಸೇರಿದಂತೆ ನಾವೆಲ್ಲರೂ ರಾಹುಲ್ ಗಾಂಧಿ ಅವರಲ್ಲಿ ಮನವಿ ಮಾಡಿ ಕಾನೂನಿಗೆ ಗೌರವ ನೀಡಿದೆವು” ಎಂದು ಹೇಳಿದರು.

ಸ್ವಾತಂತ್ರ್ಯ ಉಪ್ಪಿನ ಸತ್ಯಾಗ್ರಹ, ಚರಕದಿಂದ ಮಾತ್ರ ಬರಲಿಲ್ಲ ಎನ್ನುವ ಬಿ ಎಲ್ ಸಂತೋಷ್ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಹಿರಿಯರಿದ್ದಾರೆ. ಅವರ ಮಾರ್ಗದರ್ಶನವನ್ನೂ ಕೇಳೋಣ. ಕಾನೂನಿನಲ್ಲಿ ಇದ್ದಂತಹ ಅಂಶಗಳಿಗೆ ನಾವು ಇನ್ನೂ ಸ್ಪಷ್ಟತೆ ಕೊಟ್ಟಿದ್ದೇವೆ ಅಷ್ಟೇ.‌ ಯಾರೂ ಗಾಬರಿಯಾಗಬೇಡಿ” ಎಂದರು.


Share

You cannot copy content of this page