ಕನಕಗಿರಿ:ಕೊಪ್ಪಳ ಜಿಲ್ಲೆಯ ತೋಟಗಾರಿಕೆ ಪಾರ್ಕ್ ನಿಂದ ಉತ್ತರ ಕರ್ನಾಟಕದ ಜಿಲ್ಲೆಗಳ ತೋಟಗಾರಿಕಾ ಬೆಳೆಗಳಿಗೆ ಸ್ಥಳೀಯವಾಗಿಯೇ ಮಾರುಕಟ್ಟೆ ಲಭ್ಯವಾಗಲಿದ್ದು, ಉದ್ಯೋಗ ಸೇರಿದಂತೆ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಹೇಳಿದರು.
ಕನಕಗಿರಿ ವಿಧಾನಸಭಾ ಕ್ಷೇತ್ರದ ಸಿರಿವಾರದಲ್ಲಿ ಭಾನುವಾರ ರೂ. 9.9 ಕೋಟಿ ಮೊತ್ತದ ತೋಟಗಾರಿಕೆ ಪಾರ್ಕ್ ನ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಸಚಿವರು ಮಾತನಾಡಿದರು.
ಖಾಸಗಿ ಮತ್ತು ಸರ್ಕಾರಿ ಸಹಭಾಗಿತ್ವದ ಯೋಜನೆ ಇದಾಗಿದ್ದು, 194 ಎಕರೆ ಪ್ರದೇಶದಲ್ಲಿ ಪಾರ್ಕ್ ನಿರ್ಮಾಣಗೊಳ್ಳಲಿದೆ. ಯೋಜನೆಯಿಂದ ರೈತರಿಗೆ ಅನುಕೂಲ ಕಲ್ಪಿಸುವುದು, ತೋಟಗಾರಿಕಾ ಉತ್ಪನ್ನಗಳಿಗೆ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಸಿಗಲಿದೆ. ಇಂದು ಬೀಜ ಬಿತ್ತಿದ್ದು, ಭವಿಷ್ಯದಲ್ಲಿ ಹೆಮ್ಮರವಾಗಿ ಬೆಳೆಯಲಿದೆ ಎಂದರು.
ಐದಾರು ಸಾವಿರ ಮಂದಿಗೆ ಉದ್ಯೋಗ: ಯೋಜನೆಯಿಂದ ಈ ಭಾಗದ ಐದಾರು ಸಾವಿರ ಮಂದಿಗೆ ಉದ್ಯೋಗ ಲಭಿಸಲಿದ್ದು, ರೈತರು ತಾವು ಬೆಳೆದ ಬೆಳೆಗೆ ಇಲ್ಲಿಯೇ ಮಾರುಕಟ್ಟೆ, ಕೋಲ್ಡ್ ಸ್ಟೋರೇಜ್ ಹಾಗೂ ಸಂಶೋಧನಾ ಕೇಂದ್ರ ಬರಲಿದೆ. ಪ್ರತಿಯೊಂದು ಕಾಮಗಾರಿಗೆ ಹಂತ-ಹಂತವಾಗಿ ಚಾಲನೆ ನೀಡಲಾಗುವುದು.
ಅಲ್ಲದೆ, ಬ್ಯಾಂಕ್, ರಸ್ತೆ ಸೇರಿದಂತೆ ಎಲ್ಲಾ ಮೂಲ ಸೌಲಭ್ಯಗಳು ದೊರಕಲಿವೆ. ಅಂದಿನ ಬಿಜೆಪಿ ಸರ್ಕಾರ ನಯಾ ಪೈಸೆ ಅನುದಾನ ಮೀಸಲಿಡದೆ ಈ ಯೋಜನೆಯನ್ನು ಘೋಷಿಸಿತ್ತು. ರೈತರಿಗೆ ಅನುಕೂಲವಾಗಲಿದೆ ಎಂಬ ಕಾರಣಕ್ಕೆ ಯೋಜನೆಯನ್ನು ನಾನು ಸಚಿವ ಸಂಪುಟಕ್ಕೆ ತಂದು ಅನುದಾನ ಮೀಸಲಿರಿಸಿ ಯೋಜನೆಯನ್ನು ಕಾರ್ಯ ರೂಪಕ್ಕೆ ತರುವ ಕೆಲಸ ಮಾಡಿದ್ದೇವೆ. ವಿಶೇಷವಾಗಿ ಅಮೆರಿಕಾಕ್ಕೆ ಭೇಟಿ ನೀಡಿ ಅಲ್ಲಿನ ತೋಟಗಾರಿಕಾ ಪಾರ್ಕ್ ಬಗ್ಗೆ ಅಧ್ಯಯನ ಕೂಡ ನಡೆಸಿದ್ದೆ ಎಂದು ತಿಳಿಸಿದರು.
ಹಿಂದೆ ನಾನು ಸಣ್ಣ ನೀರಾವರಿ ಸಚಿವನಾಗಿದ್ದಾಗ ಕೆರೆ ತುಂಬಿಸುವ ಯೋಜನೆ ತಂದಾಗ ಹಲವು ಮಂದಿ ಬೊಬ್ಬೆ ಹಾಕಿದ್ದರು. ಟೀಕೆ-ಟಿಪ್ಪಣಿ ಎದುರಿಸಿದ್ದೆ. ಕ್ಷೇತ್ರದಲ್ಲಿನ ಕೆರೆಗಳು ತುಂಬಿದಾಗ ಎಲ್ಲಾ ಬಾಯಿಗೆ ಬೀಗ ಹಾಕಿಕೊಂಡರು. ಇದೀಗ ತೋಟಗಾರಿಕಾ ಪಾರ್ಕ್ ಎಂಬ ಯೋಜನೆಯ ಸಸಿ ನೆಟ್ಟಿದ್ದೀನಿ. ಭವಿಷ್ಯದಲ್ಲಿ ಇದು ಹೆಮ್ಮರವಾಗಿ ಬೆಳೆಯಲಿದೆ. ರೈತರು ಯೋಜನೆಯ ಉಪಯೋಗ ಪಡೆದುಕೊಳ್ಳಬೇಕು.
ರೈತರ ಜಮೀನುಗಳಿಗೆ ತೊಂದರೆಯಾಗದಂತೆ ಪಾರ್ಕ್ ನ ಸುತ್ತ ರಸ್ತೆ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.
