ಸಮಗ್ರ ಸುದ್ದಿ

ವಿಚಾರ ಸ್ವಾತಂತ್ರ್ಯದ ಪ್ರತಿಪಾದಕಿ ಅಕ್ಕ ಮಹಾದೇವಿ ಎಲ್ಲ ಕಾಲಕ್ಕೂ ಪ್ರೇರಣೆ: ಸಚಿವ ಈಶ್ವರ ಖಂಡ್ರೆ

Share

ದಾವಣಗೆರೆ: ವಿಚಾರ ಸ್ವಾತಂತ್ರ್ಯದ ಪ್ರತಿಪಾದಕಿಯಾಗಿದ್ದ ಶಿವಶರಣೆ ಅಕ್ಕಮಹಾದೇವಿ ಸರ್ವಕಾಲಕ್ಕೂ ಪ್ರೇರಣೆಯಾಗಿದ್ದು, ವಿಶ್ವದ ಎಲ್ಲ ಮಹಿಳೆಯೆರಿಗೂ ಆದರ್ಶವಾಗಿದ್ದಾರೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

ದಾವಣಗೆರೆ ದೊಡ್ಡ ಪೇಟೆಯಶ್ರೀ ವಿರಕ್ತಮಠದ ಬಸವ ಕೇಂದ್ರದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಆಯೋಜಿಸಿದ್ದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತವಾಡಿ, ಮಹಿಳಾ ಸಬಲೀಕರಣಕ್ಕೆ 12ನೇ ಶತಮಾನದಲ್ಲೇ ಹೋರಾಡಿದ ಅಕ್ಕ ವಿಚಾರ ಸ್ವಾತಂತ್ರ್ಯದ ಪ್ರತಿಪಾದಕಿಯಾಗಿದ್ದರು. ಮಾತು ತಪ್ಪಿದ ಗಂಡನನ್ನು ಧಿಕ್ಕರಿಸಿ ವಿಚಾರಸ್ವಾತಂತ್ರ್ಯವನ್ನು ಆಯ್ದುಕೊಂಡರು ಎಂದರು.

ಶಿವಶರಣೆ, ವಚನಕಾರ್ತಿ ಅಕ್ಕ ಈ ನಾಡಿಗೆ, ಸಾಹಿತ್ಯಕ್ಕೆ ನೀಡುವ ಕೊಡುಗೆ ಅಪ್ರತಿಮವಾದ್ದು, ಶ್ರೀಶೈಲ ಮಲ್ಲಿಕಾರ್ಜುನ ಅಂಕಿತದೊಂದಿಗೆ ಸಮಾಜಕ್ಕೆ ವಚನಾಮೃತವನ್ನೇ ಉಣಬಡಿಸಿದ ಅಕ್ಕರೆಯ ಅಕ್ಕ ಇಡೀ ಸ್ತ್ರೀ ಕುಲಕ್ಕೆ ಅಂದಿಗೂ, ಇಂದಿಗೂ, ಎಂದೆಂದಿಗೂ ಪ್ರೇರಣೆಯಾಗಿದ್ದಾರೆ ಎಂದೂ ಈಶ್ವರ ಖಂಡ್ರೆ ತಿಳಿಸಿದರು.

ಬದುಕಲ್ಲಿ ಎಷ್ಟೇ ಕಷ್ಟ ಬಂದರೂ ಎದೆಗುಂದದೆ ಎದುರಿಸಬೇಕು, ಗೆದ್ದು ಜಯಿಸಬೇಕು ಎಂದು ಅಕ್ಕಮಹಾದೇವಿ ಸಾರಿದ್ದಾರೆ. ಇದು ಎಲ್ಲ ಮಹಿಳೆಯರಿಗೂ ನೀತಿ ಪಾಠವಾಗಿದೆ ಎಂದು ಅರಣ್ಯ ಸಚಿವರು ಅಭಿಪ್ರಾಯಪಟ್ಟರು.

ಅನುಭವ ಮಂಟಪದಲ್ಲಿ ಅಕ್ಕ ಎದುರಿಸಿದ ಪ್ರಶ್ನೆಗಳು, ಅಕ್ಕ ಕೊಟ್ಟ ಉತ್ತರಗಳು ಅಕ್ಕನ ಚಿಂತನೆಯ ಔನತ್ಯವನ್ನು ಸಾರುತ್ತವೆ. ಜ್ಞಾನ ವೈರಾಗ್ಯದಿಂದ ಅಕ್ಕ ಮಹಾದೇವಿಯವರು ಎಂದರು.

ಸ್ತ್ರೀ ಸಮಾನತೆ ಇಲ್ಲದಿದ್ದ ಕಾಲಘಟ್ಟದಲ್ಲಿ ಮಹಿಳೆಗೂ ಸಮಾಜದಲ್ಲಿ ಸಮಾನ ಸ್ಥಾನಮಾನ ಸಿಗಬೇಕು, ನೀತಿ ನಿರೂಪಣೆಯಲ್ಲಿ ಆಕೆಯ ಪಾಲೂ ಮಹತ್ವದ್ದು ಎಂಬುದನ್ನು ಅಕ್ಕ ಪ್ರತಿಪಾದಿಸಿದರು. ನಾವೆಲ್ಲರೂ ಅಕ್ಕನ ಆದರ್ಶ ಪಾಲಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಚಿವರುಗಳಾದ ಎಂ.ಬಿ. ಪಾಟೀಲ್, ಶರಣಪ್ರಕಾಶ ಪಾಟೀಲ್ ಮತ್ತಿತರರು ಪಾಲ್ಗೊಂಡಿದ್ದರು.


Share

You cannot copy content of this page