ಬೆಂಗಳೂರು: ದೀರ್ಘಕಾಲದಿಂದ ನೀರಿನ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ‘ಒನ್ ಟೈಮ್ ಸೆಟಲ್‌ಮೆಂಟ್’ (𝗢𝗻𝗲 𝗧𝗶𝗺𝗲 𝗦𝗲𝘁𝘁𝗹𝗲𝗺𝗲𝗻𝘁 – 𝗢𝗧𝗦) ಯೋಜನೆಯ ಪ್ರಕ್ರಿಯೆಯನ್ನು ಜಲಮಂಡಳಿಯು ಅಧಿಕೃತವಾಗಿ ಆರಂಭಿಸಿದೆ. ಈ ಬಾರಿಯ ನೀರಿನ ಬಿಲ್ ಜೊತೆಯಲ್ಲೇ 𝗢𝗧𝗦 ಯೋಜನೆ ಅಡಿಯಲ್ಲಿ ಬರುವ ಗ್ರಾಹಕರಿಗೆ ಪಾವತಿ ಮಾಹಿತಿಯನ್ನೊಳಗೊಂಡ ನೋಟಿಸ್ ಜಾರಿಗೊಳಿಸಲಾಗುವುದು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (𝗕𝗪𝗦𝗦𝗕) ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಯುಗಾದಿ ಹಬ್ಬದ ವಿಶೇಷ ಕೊಡುಗೆಯಾಗಿ ಜಲಮಂಡಳಿ ವತಿಯಿಂದ ಈ 𝗢𝗧𝗦 ಯೋಜನೆಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇತ್ತೀಚೆಗಷ್ಟೇ ಪ್ರಕಟಿಸಿದ್ದರು ಎಂಬುದನ್ನು ಸ್ಮರಿಸಿದ್ದಾರೆ.
𝗕𝗪𝗦𝗦𝗕 ವ್ಯಾಪ್ತಿಯಲ್ಲಿರುವ ಸುಮಾರು 𝟭𝟭 ಲಕ್ಷ ನೀರಿನ ಸಂಪರ್ಕಗಳ ಪೈಕಿ, 𝟱.𝟭𝟭 ಲಕ್ಷ ಗ್ರಾಹಕರು ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ. 𝟮𝟬𝟮𝟲 ರ ಫೆಬ್ರವರಿ ಅಂತ್ಯದ ಮಾಹಿತಿಯಂತೆ, ಒಟ್ಟು ಬಾಕಿ ಮೊತ್ತ ರೂ. 𝟴𝟱𝟭.𝟯𝟯 ಕೋಟಿಗಳಾಗಿದ್ದು, ಇದರಲ್ಲಿ ಅಸಲು ಮೊತ್ತ ರೂ. 𝟱𝟯𝟵.𝟰𝟯 ಕೋಟಿ ಹಾಗೂ ಬಡ್ಡಿ ರೂ. 𝟯𝟭𝟭.𝟵𝟬 ಕೋಟಿ ಸೇರಿದೆ. ಈ ಬೃಹತ್ ಬಾಕಿಯನ್ನು ಸುಲಭವಾಗಿ ಪಾವತಿಸಲು ಹಾಗೂ ಗ್ರಾಹಕರ ಮೇಲಿನ ಆರ್ಥಿಕ ಹೊರೆ ತಗ್ಗಿಸಲು, ಏಪ್ರಿಲ್ 𝟮𝟬𝟮𝟲 ರಿಂದ ಜೂನ್ 𝟮𝟬𝟮𝟲 ರವರೆಗೆ (𝟯 ತಿಂಗಳ ಅವಧಿ) ಈ 𝗢𝗧𝗦 ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.
ಬಿಲ್ ಜೊತೆಯಲ್ಲೇ ಸಮಗ್ರ ಮಾಹಿತಿ
“ಯೋಜನೆಯ ಯಶಸ್ವಿ ಜಾರಿಗೆ ಈಗಾಗಲೇ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. 𝗢𝗧𝗦 ಯೋಜನೆಗೆ ಅರ್ಹರಾಗಿರುವ ಗ್ರಾಹಕರಿಗೆ ಈ ತಿಂಗಳ ನೀರಿನ ಬಿಲ್ ಜೊತೆಯಲ್ಲಿಯೇ ಸಮಗ್ರ ಮಾಹಿತಿಯನ್ನು ಒದಗಿಸಲಾಗುವುದು. ಬಾಕಿ ಮೊತ್ತ, ಮನ್ನಾ ಆಗುವ ಬಡ್ಡಿ, ಪಾವತಿಸಬೇಕಾದ ಅಂತಿಮ ಮೊತ್ತ, ಪಾವತಿಸುವ ವಿಧಾನ ಹಾಗೂ ಯೋಜನೆಯ ಮಾನದಂಡಗಳ ಸಂಪೂರ್ಣ ವಿವರಗಳನ್ನು ಒಳಗೊಂಡಿರುವ ಪ್ರತ್ಯೇಕ ಪತ್ರವನ್ನು ಬಿಲ್ ಜೊತೆಯಲ್ಲೇ ನೀಡಲಾಗುವುದು,” ಎಂದು ಡಾ. ರಾಮ್ ಪ್ರಸಾತ್ ಮನೋಹರ್ ವಿವರಿಸಿದ್ದಾರೆ.
ಬಹುದಿನಗಳಿಂದ ನೀರಿನ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರು, ಬಡ್ಡಿ ಮನ್ನಾದ ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಅಸಲು ಹಣವನ್ನು ಪಾವತಿಸುವ ಮೂಲಕ ಮಂಡಳಿಯೊಂದಿಗೆ ಕೈಜೋಡಿಸಬೇಕು ಎಂದು ಜಲಮಂಡಳಿ ಅಧ್ಯಕ್ಷರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
