ಸಮಗ್ರ ಸುದ್ದಿ

ಉಕ್ಕು ಉತ್ಪಾದನೆಯಲ್ಲಿ ಸ್ವಾವಲಂಬನೆ; ಸಂಶೋಧನೆ, ಅಭಿವೃದ್ಧಿ, ನಾವಿನ್ಯತೆಗೆ ಒತ್ತು – ಹೆಚ್.ಡಿ. ಕುಮಾರಸ್ವಾಮಿ|ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಉಕ್ಕು ಕ್ಷೇತ್ರ ಸ್ವಾವಲಂಬನೆ, ಸುಸ್ಥಿರತೆಯತ್ತ ಮುನ್ನಡೆ

Share

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು 2023ರ ಹೊತ್ತಿಗೆ ವಾರ್ಷಿಕ 300 ದಶಲಕ್ಷ ಟನ್ ಉಕ್ಕನ್ನು ದೇಶೀಯವಾಗಿ ಉತ್ಪಾದನೆ ಮಾಡಬೇಕು ಎಂದು ಗುರಿ ನಿಗದಿ ಮಾಡಿದ್ದು, ಆ ಗುರಿಯನ್ನು ಮುಟ್ಟಲು ಈ ಕ್ಷೇತ್ರದಲ್ಲಿ ಸಂಶೋಧನೆ, ಅಭಿವೃದ್ಧಿ, ನಾವಿನ್ಯತೆಗೆ ಇನ್ನೂ ಹೆಚ್ಚು ಒತ್ತು ನೀಡಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರತಿಪಾದಿಸಿದರು.

ನವದೆಹಲಿಯಲ್ಲಿ ಮಂಗಳವಾರ ಸಚಿವರು ಉಕ್ಕು ಕ್ಷೇತ್ರದಲ್ಲಿನ ಸಂಶೋಧನೆ ಮತ್ತು ಅಭಿವೃದ್ಧಿಯ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ಇದಕ್ಕೆ ಪೂರಕವಾಗಿ ಕೇಂದ್ರ ಸರಕಾರವು ಈಗಾಗಲೇ ಉಕ್ಕು ವಲಯದಲ್ಲಿ ಸಂಶೋಧನೆ, ಅಭಿವೃದ್ಧಿ, ನಾವನ್ಯತೆಗೆ ಹೆಚ್ಚು ಉತ್ತೇಜನ ನೀಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರೋತ್ಸಾಹ ನೀಡಲಾಗುವುದು ಎಂದು ಅವರು ಹೇಳಿದರು.

ಸಂಶೋಧನೆ ಮತ್ತು ನಾವೀನ್ಯತೆಯನ್ನು ಸ್ಪಷ್ಟ, ಪರಿಣಾಮಕಾರಿ ಕೈಗಾರಿಕಾ ಫಲಿತಾಂಶವನ್ನಾಗಿ ಪರಿವರ್ತಿಸುವ ಅಗತ್ಯವನ್ನು ಒತ್ತಿ ಹೇಳಿದ ಸಚಿವರು; ಭಾರತದ ಉಕ್ಕು ಸಂಶೋಧನೆ ಮತ್ತು ತಂತ್ರಜ್ಞಾನ ಮಿಷನ್ (ಎಸ್‌ಆರ್‌ಟಿಎಂಐ) ಆಯೋಜಿಸಿರುವ ಕಾರ್ಯಾಗಾರವು ಕೈಗಾರಿಕೆ, ಶೈಕ್ಷಣಿಕ, ನವೋದ್ಯಮಗಳು ಮತ್ತು ಸರ್ಕಾರದ ಪ್ರಮುಖ ಪಾಲುದಾರರನ್ನು ಒಟ್ಟುಗೂಡಿಸಿಕೊಂಡು ನಾವೀನ್ಯತೆಯ ಮೂಲಕ ಭಾರತದ ಉಕ್ಕು ವಲಯವನ್ನು ಬಲಪಡಿಸುವ ಬಗ್ಗೆ ಚರ್ಚಿಸುತ್ತಿರುವುದು ಶ್ಲಾಘನೀಯ ಎಂದರು.

ಭಾರತದ ಬೆಳವಣಿಗೆಯ ಕಥೆಯಲ್ಲಿ ಉಕ್ಕು ಕ್ಷೇತ್ರದ ಕಾರ್ಯತಂತ್ರದ ಮಹತ್ವವನ್ನು ಸಚಿವರು ಒತ್ತಿ ಹೇಳಿದರಲ್ಲದೆ, ಈ ಕ್ಷೇತ್ರದ ಭವಿಷ್ಯ ಬೆಳವಣಿಗೆ ಬಗ್ಗೆ ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಬೆಳಕು ಚೆಲ್ಲಿದರು. “ಭಾರತವು ಸ್ವಾವಲಂಬಿಯಾಗಿ, ಜಾಗತಿಕವಾಗಿ ಸ್ಪರ್ಧಾತ್ಮಕ ಮತ್ತು ತಾಂತ್ರಿಕವಾಗಿ ಮುಂದುವರಿದ ರಾಷ್ಟ್ರವಾಗುವ ಸ್ಪಷ್ಟ ದೃಷ್ಟಿಕೋನದೊಂದಿಗೆ ಮುಂದುವರಿಯುತ್ತಿದೆ. ಉಕ್ಕು ವಲಯವು ಈ ದೃಷ್ಟಿಕೋನಕ್ಕೆ ಕೇಂದ್ರವಾಗಿದೆ” ಎಂದು ಅವರು ಹೇಳಿದರು.

ಈ ಪರಿವರ್ತನೆಗೆ ಚಾಲನೆ ನೀಡುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಅವರು ಮತ್ತಷ್ಟು ಶ್ಲಾಘಿಸಿದರಲ್ಲದೆ, “ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಸರ್ಕಾರವು ಆತ್ಮನಿರ್ಭರ ಭಾರತಕ್ಕೆ ಬಲವಾದ ಒತ್ತು ನೀಡಿದೆ. ಉಕ್ಕು ವಲಯದಲ್ಲಿ ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಮತ್ತು ಸ್ಥಳೀಯ ಉತ್ಪಾದನಾ ಸಾಮರ್ಥ್ಯಗಳನ್ನು ನಿರ್ಮಿಸುವುದು ಇದರಲ್ಲಿ ಸೇರಿವೆ” ಎಂದು ಅವರು ಹೇಳಿದರು.

ವಿಶೇಷ ಉಕ್ಕಿಗಾಗಿ ಉತ್ಪಾದನೆ ಸಂಬಂಧಿತ ಪ್ರೋತ್ಸಾಹಕ (ಪಿಎಲ್ಐ) ಯೋಜನೆ, ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಮತ್ತು ಮುಂಬರುವ ಹಸಿರು ಉಕ್ಕು ಮಿಷನ್‌ನಂತಹ ಭವಿಷ್ಯವಾಣಿಯ ಉಪಕ್ರಮಗಳ ಜತೆಗೆ, ವಿಶೇಷ ಉಕ್ಕನ್ನು ಸುಸ್ಥಿರತೆ ಮತ್ತು ನಾವೀನ್ಯತೆಯತ್ತ ಕೊಂಡೊಯ್ಯುವ ಪ್ರಮುಖ ನೀತಿ ಮಧ್ಯಸ್ಥಿಕೆಗಳನ್ನು ಸಚಿವರು ಮಹತ್ವಪೂರ್ಣವಾಗಿ ಉಲ್ಲೇಖಿಸಿದರು.

ಕಾರ್ಯಾಗಾರದ ಪ್ರಮುಖ ವಿಷಯಗಳನ್ನು ಉಲ್ಲೇಖಿಸಿದ ಸಚಿವರು; ಆರ್ಥಿಕತೆ, ತ್ಯಾಜ್ಯ ಬಳಕೆ, ನವೋದ್ಯಮ, ನಾವೀನ್ಯತೆ ಮತ್ತು ಹಸಿರು ಉಕ್ಕಿನ ತಂತ್ರಜ್ಞಾನಗಳು ಕೇವಲ ತಾಂತ್ರಿಕ ಕ್ಷೇತ್ರಗಳಲ್ಲ, ಬದಲಾಗಿ ರಾಷ್ಟ್ರೀಯ ಆದ್ಯತೆಗಳು ಆಗಿವೆ. ಈ ವಲಯದ ಭವಿಷ್ಯದ ಪಥವನ್ನು ಅವು ವ್ಯಾಖ್ಯಾನಿಸುತ್ತವೆ ಎಂದು ಹೇಳಿದರು.

ನಾವೀನ್ಯತೆಯು ನೈಜ ಫಲಿತಾಂಶಗಳಿಗೆ ಕಾರಣವಾಗುತ್ತದೆ ಎಂದು ಖಚಿತಪಡಿಸಿಕೊಳ್ಳುವ ಮಹತ್ವವನ್ನು ಸಚಿವರು ಒತ್ತಿ ಹೇಳಿದರಲ್ಲದೆ, ನಾವೀನ್ಯತೆ ಎನ್ನುವುದು ಚರ್ಚೆಗಳಿಗೆ ಮಾತ್ರ ಸೀಮಿತವಾಗಿರಬಾರದು. ಅದು ವಿಚಾರಗಳಿಂದ ಅನುಷ್ಠಾನಕ್ಕೆ, ಸಂಶೋಧನೆಯಿಂದ ಫಲಿತಾಂಶಗಳತ್ತ ಚಲಿಸುತ್ತಿರಬೇಕು ಎಂದು ಪ್ರತಿಪಾದಿಸಿದರು.

ದಿನವಿಡೀ ನಡೆದ ಈ ಕಾರ್ಯಾಗಾರವು ಪ್ರಕ್ರಿಯೆಯ ದಕ್ಷತೆ, ಸುಸ್ಥಿರತೆ ಮತ್ತು ಸುಧಾರಿತ ಸಾಮಗ್ರಿಗಳಲ್ಲಿ ಅತ್ಯಾಧುನಿಕ ಪರಿಹಾರಗಳನ್ನು ಪ್ರದರ್ಶಿಸುವ ನವೋದ್ಯಮಗಳ ಪ್ರಸ್ತುತಿ ಮತ್ತು ಭಾರತೀಯ ಉಕ್ಕು ಪ್ರಾಧಿಕಾರ (SAIL), ಟಾಟಾ ಸ್ಟೀಲ್ ಮತ್ತು ಜಿಂದಾಲ್‌ ಸ್ಟೀಲ್‌ ನಂತಹ ಪ್ರಮುಖ ಸಂಸ್ಥೆಗಳು ಮತ್ತು ಉದ್ಯಮ ಪಾಲುದಾರರ ನೇತೃತ್ವದ ತಾಂತ್ರಿಕ ಚರ್ಚೆಗಳನ್ನು ಒಳಗೊಂಡಂತೆ ವಿವಿಧ ಆಯಾಮಗಳನ್ನು ಒಳಗೊಂಡಿತ್ತು.

ಉಕ್ಕು ಸಚಿವಾಲಯದ ಕಾರ್ಯದರ್ಶಿ ಸಂದೀಪ್‌ ಪೌಂಡ್ರಿಕ್‌ ಸೇರಿದಂತೆ ಇನ್ನಿತರ ಉನ್ನತ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗಿಯಾಗಿದ್ದರು.


Share

You cannot copy content of this page