ಬೆಂಗಳೂರು: ಪ್ರವಾಸೋಧ್ಯಮ, ಆತಿಥ್ಯ ಕೌಶಲ್ಯ ಮಂಡಳಿ (ಟಿಎಚ್‌ಎಸ್‌ಸಿ) ಹಾಗೂ ಡಿಯಾಜಿಯೋ ಇಂಡಿಯಾ ಸಹಭಾಗಿತ್ವದಲ್ಲಿ ಲರ್ನಿಂಗ್ ಫಾರ್ ಲೈಫ್’ ಯೋಜನೆಯಡಿ 300ಕ್ಕೂ ಹೆಚ್ಚು ಯುವಕರಿಗೆ ಕೌಶಲ್ಯ ತರಬೇತಿ ನೀಡಲಾಗಿದೆ.
ನಗರದಲ್ಲಿ ನಡೆದ ಸಮಾರಂಭದಲ್ಲಿ ತರಬೇತಿ ಪಡೆದ ಯುವಕರಿಗೆ ನಡೆದ ಪದವಿ ಪ್ರದಾನ ಮಾಡಲಾಯಿತು. ಈ ವೇಳೆ ಮಾತನಾಡಿದ ಟಿಎಚ್‌ಎಸ್‌ಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜನ್ ಬಹಾದೂರ್, ನಮ್ಮಲ್ಲಿ ಸಾಕಷ್ಟು ಯುವಕರು ಕೌಶಲ್ಯ ತರಬೇತಿಯಿಂದ ವಂಚಿತರಾಗಿ, ಸೂಕ್ತ ಉದ್ಯೋಗ ಪಡೆಯಲು ಶ್ರಮಿಸುತ್ತಿದ್ದಾರೆ. ಹೀಗಾಗಿಯೇ 2020ರಿಂದ ಲರ್ನಿಂಗ್ ಫಾರ್ ಲೈಫ್’ ಯೋಜನೆ ಜಾರಿ ಮಾಡಿದ್ದು, ಸುಮಾರು 8500 ಯುವಕರಿಗೆ ತರಬೇತಿ ನೀಡಲಾಗಿದೆ. ಈ ಸಾಲಿನಲ್ಲಿ ಸುಮಾರು 300 ಯುವಕರು ತರಬೇತಿ ಪೂರ್ಣಗೊಳಿಸಿದ್ದು, ಅವರಿಗೆ ಪ್ರಮಾಣಪತ್ರವನ್ನೂ ನೀಡಲಾಗಿದೆ.
ಅಷ್ಟೆ ಅಲ್ಲದೆ, ಇಲ್ಲಿ ಕೌಶಲ್ಯ ತರಬೇತಿ ಪಡೆದವರಿಗೆ ಉದ್ಯೋಗ ಖಾತರಿಯೂ ಸಿಗಲಿದೆ. ಈ ಯೋಜನೆಯಡಿ ಸುಮಾರು 750ಕ್ಕೂ ಹೆಚ್ಚು ಕಂಪನಿಗಳೊಂದಿಗೆ ಸಹಯೋಗ ಹೊಂದಿದ್ದು, ಇಲ್ಲಿ ತರಬೇತಿ ಪಡೆದವ ಬಹುತೇಕರು ಉದ್ಯೋಗಸ್ಥರಾಗಿದ್ದಾರೆ ಎಂದರು.
ಡಿಯಾಜಿಯೋ ಇಂಡಿಯಾದ ಕಾರ್ಪೊರೇಟ್ ಸಂಬಂಧಗಳ ನಿರ್ದೇಶಕ ದೇವಾಶಿಶ್ ದಾಸ್‌ಗುಪ್ತ ಮಾತನಾಡಿ, “ಆತಿಥ್ಯ ಕ್ಷೇತ್ರವು ಉದ್ಯೋಗ ಮತ್ತು ಬೆಳವಣಿಗೆಯ ಪ್ರಮುಖ ಮೂಲವಾಗಿದೆ. ‘ಲರ್ನಿಂಗ್ ಫಾರ್ ಲೈಫ್’ ಯೋಜನೆಯ ಮೂಲಕ ನಾವು ಯುವಕರಿಗೆ ಅಗತ್ಯ ಕೌಶಲ್ಯ, ಆತ್ಮವಿಶ್ವಾಸ ಮತ್ತು ಉದ್ಯಮ ಪರಿಚಯವನ್ನು ಒದಗಿಸುತ್ತಿದ್ದೇವೆ. ಭವಿಷ್ಯದಲ್ಲಿ ಪ್ರತಿಯೊಬ್ಬರು ಉದ್ಯೋಗಸ್ಥರಾಗಬೇಕೆಂಬ ಹಿನ್ನೆಲೆಯಲ್ಲಿ ಈ ಯೋಜನೆ ಕೈಗೊಂಡಿದ್ದು, ಯಶಸ್ವಿಯಾಗಿ ಮುನ್ನಡೆಯುತ್ತಾ ಬರುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಂ.ಎಸ್. ರಾಮಯ್ಯ ಹೋಟೆಲ್ ಮ್ಯಾನೇಜ್ ಮೆಂಟ್ ಕಾಲೇಜಿನ ಸ್ಥಾಪಕ ಹಾಗೂ ಪ್ರಾಂಶುಪಾಲ ಪ್ರೊ. ಅಬ್ಬಿ ಮ್ಯಾಥ್ಯೂ ಉಪಸ್ಥಿತರಿದ್ದರು.
