ಸಮಗ್ರ ಸುದ್ದಿ

ನಾವೀನ್ಯತೆ ಸಹಯೋಗ: ಜಾಗತಿಕ ಒಡನಾಟ ಹೆಚ್ಚಿಸಲು ಸಚಿವ ಪ್ರಿಯಾಂಕ್‌ ಖರ್ಗೆ ಒತ್ತು | ನವೋದ್ಯಮಗಳು, ವಾಣಿಜ್ಯ ಸಂಸ್ಥೆಗಳು ಮತ್ತು ಹೂಡಿಕೆದಾರರ ನೆರವಿನಿಂದ ಜಾಗತಿಕ ಪಾಲುದಾರರ ಜೊತೆಗಿನ ಬಾಂಧವ್ಯ ಬಲಪಡಿಸಲು ನಿರ್ಧಾರ

Share

ಬೆಂಗಳೂರು: ರಾಜ್ಯದ ಜಾಗತಿಕ ನಾವೀನ್ಯತಾ ಮೈತ್ರಿಕೂಟದ (ಜಿಐಎ) ಕಾರ್ಯಕ್ರಮ ಬಲಪಡಿಸಲು ಅಂತರರಾಷ್ಟ್ರೀಯ ಒಡನಾಟ ಹಾಗೂ ಸಂಪರ್ಕ ಹೆಚ್ಚಿಸುವ ಅಗತ್ಯ ಇದೆʼ ಎಂದು ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಅಭಿಪ್ರಾಯಪಟ್ಟಿದ್ದಾರೆ.

ಜಾಗತಿಕ ನಾವೀನ್ಯತಾ ಮೈತ್ರಿಕೂಟಕ್ಕೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ಇದೇ ತಿಂಗಳು ನಡೆಯಲಿರುವ ರಾಜತಾಂತ್ರಿಕರ ಜೊತೆಗಿನ ಸಭೆಯ ಪೂರ್ವಭಾವಿಯಾಗಿ ಇಂದು ಇಲ್ಲಿ ಕರ್ನಾಟಕ ಇನ್ನೋವೇಷನ್ ಮತ್ತು ಟೆಕ್ನಾಲಜಿ ಸೊಸೈಟಿನಲ್ಲಿ (ಕೆಐಟಿಎಸ್‌) ನಡೆದ ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಡೀಪ್‌ ಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್ ಮತ್ತು ಅತ್ಯಾಧುನಿಕ ತಯಾರಿಕೆಯಂತಹ ಪ್ರವರ್ಧಮಾನಕ್ಕೆ ಬರುತ್ತಿರುವ ಕ್ಷೇತ್ರಗಳಲ್ಲಿ ನಿರ್ದಿಷ್ಟ ವಲಯ ಕೇಂದ್ರಿತ ಪಾಲುದಾರಿಕೆಗಳನ್ನು ಮುನ್ನಡೆಸುವ ಅಗತ್ಯ ಇದೆ. ಈ ಎಲ್ಲ ಉಪಕ್ರಮಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಿದರೆ ಜಾಗತಿಕ ನಾವೀನ್ಯತೆ ಕೇಂದ್ರವಾಗಿ ಕರ್ನಾಟಕದ ಸ್ಥಾನವು ಮತ್ತಷ್ಟು ಬಲಗೊಳ್ಳಲಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದ ಜಾಗತಿಕ ನಾವೀನ್ಯತೆ ಮೈತ್ರಿಕೂಟದ (ಜಿಐಎ) ಉಪಕ್ರಮಗಳನ್ನು ಬಲಪಡಿಸುವುದನ್ನು ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು. ರಾಜ್ಯದ ನವೋದ್ಯಮಗಳಿಗೆ ಜಾಗತಿಕ ಮಾರುಕಟ್ಟೆ ವಿಸ್ತರಣೆಯ ಅನುಕೂಲತೆ ಕಲ್ಪಿಸುವುದು, ಅಂತರರಾಷ್ಟ್ರೀಯ ಸಹಯೋಗಗಳನ್ನು ಸುಲಲಿತವಾಗಿ ಕಾರ್ಯಗತಗೊಳಿಸುವುದು ಮತ್ತು ಪ್ರಮುಖ ಜಾಗತಿಕ ನಾವೀನ್ಯತೆ ಕೇಂದ್ರವಾಗಿ ಕರ್ನಾಟಕದ ಸ್ಥಾನವನ್ನು ಇನ್ನಷ್ಟು ಬಲಪಡಿಸುವುದಕ್ಕೆ ಕೈಗೊಳ್ಳಬೇಕಾದ ರಚನಾತ್ಮಕ ಕಾರ್ಯಕ್ರಮಗಳನ್ನು ಪರಿಶೀಲಿಸಲಾಯಿತು.

ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನಗಳಿಗಾಗಿ ಜಾಗತಿಕ ನಾವೀನ್ಯತಾ ಮೈತ್ರಿಕೂಟಕ್ಕೆ ಸಂಬಂಧಿಸಿದಂತೆ ಇದೇ ತಿಂಗಳ 17 ರಂದು ನವದೆಹಲಿಯಲ್ಲಿ ರಾಜತಾಂತ್ರಿಕರ ಜೊತೆಗೆ ಸಮಾಲೋಚನೆ ನಡೆಯಲಿದೆ. ಇದರ ಪೂರ್ವಭಾವಿ ಸಿದ್ಧತೆಗಳನ್ನೂ ಸಭೆಯಲ್ಲಿ ಪರಿಶೀಲಿಸಲಾಯಿತು. ಈ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರು ಭಾಗವಹಿಸುವ ನಿರೀಕ್ಷೆಯಿದೆ.

ರಾಯಭಾರಿಗಳು, ಹೈಕಮೀಷನರ್‌ಗಳು ಮತ್ತು ಹಿರಿಯ ರಾಜತಾಂತ್ರಿಕ ಅಧಿಕಾರಿಗಳು ಸೇರಿದಂತೆ 50ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಈ ಕಾರ್ಯಕ್ರಮಕ್ಕೆ ಸಮಾನಾಂತರವಾಗಿ ಉದ್ಯಮಿಗಳ ಜೊತೆಗೆ ಸಭೆ, ಭಾಗಿದಾರರ ಜೊತೆ ಸಮಾಲೋಚನೆ ನಡೆಸುವುದಕ್ಕೂ ಕರ್ನಾಟಕ ಸರ್ಕಾರ ಉದ್ದೇಶಿಸಿದೆ.

ನವೋದ್ಯಮಗಳು, ವಾಣಿಜ್ಯ ಸಂಸ್ಥೆಗಳು ಮತ್ತು ಬಂಡವಾಳ ಹೂಡಿಕೆದಾರರನ್ನು ಒಟ್ಟುಗೂಡಿಸಿ ಜಾಗತಿಕ ಪಾಲುದಾರರ ಜೊತೆಗಿನ ಬಾಂಧವ್ಯ ಬಲಪಡಿಸಲು ತೀರ್ಮಾನಿಸಲಾಗಿದೆ.
ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಉಪಕ್ರಮಗಳ ಮೂಲಕ ಜಾಗತಿಕ ಮಾರುಕಟ್ಟೆಗಳಿಗೆ ಪ್ರವೇಶಿಸಲು ನವೋದ್ಯಮಗಳಿಗೆ ಅಗತ್ಯ ನೆರವು ನೀಡಲು ಪೂರಕವಾದ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಮಾಹಿತಿ ತಂತ್ರಜ್ಞಾನ ಇಲಾಖೆಯು ಕೆಲಸ ಮಾಡುತ್ತಿದೆ.

ಸಭೆಯಲ್ಲಿ ಎಲೆಕ್ಟ್ರಾನಿಕ್ಸ್, ಐಟಿ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಎನ್. ಮಂಜುಳಾ, ಕೆಐಟಿಎಸ್ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಶರಣಪ್ಪ ಸಂಕನೂರ, ಪ್ರಮುಖ ಪಾಲುದಾರರು ಹಾಗೂ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.


Share

You cannot copy content of this page