ಬೆಂಗಳೂರು: ಉನ್ನತ ಶಿಕ್ಷಣದಲ್ಲಿ ಹೆಚ್ಚಿನ ಕೌಶಲ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಉದ್ಯೋಗವಕಾಶಗಳನ್ನು ಕಲ್ಪಿಸಲು ಕ್ಯಾಂಪಸ್ ಟು ಕರಿಯರ್ C2C ಶೃಂಗ ಸಭೆಯನ್ನು ಹಮ್ಮಿಕೊಂಡಿರುವುದಾಗಿ ಉನ್ನತ ಶಿಕ್ಷಣ ಸಚಿವರಾದ ಡಾ. ಎಂಸಿ ಸುಧಾಕರ್ ತಿಳಿಸಿದ್ದಾರೆ.
ಇಂದು ನಡೆದ ಕ್ಯಾಂಪಸ್ ನಿಂದ ವೃತ್ತಿ ಕಡೆಗೆ ಶೃಂಗಸಭೆಯ ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಅವರು, ಸರ್ಕಾರಿ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ಮತ್ತು ಕೈಗಾರಿಕಾ ವಲಯದಲ್ಲಿ ಅವಶ್ಯಕತೆ ಇರುವ ಕೌಶಲ್ಯಾಧಾರಿತ ಶಿಕ್ಷಣ ನೀಡುವ ದೃಷ್ಟಿಯಲ್ಲಿ ಮೇ ತಿಂಗಳಲ್ಲಿ ನಡೆಯಲಿರುವ ಎರಡು ದಿನಗಳ ಕ್ಯಾಂಪಸ್ ಟು ಕರಿಯರ್ ಶೃಂಗಸಭೆಯು ರಾಜ್ಯದ ಉನ್ನತ ಶಿಕ್ಷಣ ಇಲಾಖೆಯ ಮಹತ್ವದ ಹೆಜ್ಜೆಯಾಗಿದೆ ಎಂದರು.
ಈ ಶೃಂಗಸಭೆಯಲ್ಲಿ ರಾಜ್ಯದ ಪ್ರಮುಖ ಕೈಗಾರಿಕಾ ಸಂಸ್ಥೆಗಳು ಶಿಕ್ಷಣ ತಜ್ಞರು ಹಾಗೂ ಸರ್ಕಾರ ಒಂದೆಡೆ ಸೇರಿ ಚರ್ಚಿಸಿ,ರಾಜ್ಯದ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಿ ಕೊಡುವಂತಹ ಶಿಕ್ಷಣ ನೀಡುವ ಮಹತ್ವದ ಕಾರ್ಯ ನಡೆಯಲಿದೆ ಎಂದು ವಿವರಿಸಿದರು.
ಜಾಗತಿಕ ಮಟ್ಟದಲ್ಲಿ ಉನ್ನತ ಶಿಕ್ಷಣ ಸಾಕಷ್ಟು ಬದಲಾಗಿದೆ. ಬದಲಾದ ಪರಿಕಲ್ಪನೆಗೆ ಸೂಕ್ತವಾಗಿ ನಾವು ವಿದ್ಯಾರ್ಥಿಗಳನ್ನು ಕೌಶಲ್ಯಧಾರಿತ ಶಿಕ್ಷಣದೊಂದಿಗೆ ಸಜ್ಜುಗೊಳಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಈ ಶೃಂಗಸಭೆಯಲ್ಲಿ ಕೈಗಾರಿಕೆಗಳಿಗೆ ಅವಶ್ಯಕತೆ ಇರುವ ಕೌಶಲ್ಯವನ್ನು ಆಯಾ ಶಿಕ್ಷಣದಲ್ಲಿ ಅಳವಡಿಸಿ ವಿದ್ಯಾರ್ಥಿಗಳನ್ನು ಯಂತ್ರೋಪಕರಣಗಳೊಂದಿಗೆ ಸಜ್ಜುಗೊಳಿಸುವ ಶೈಕ್ಷಣಿಕ ಕ್ರಿಯೆ ಆಗಲಿದೆ ಎಂದರು.
ಈಗ ಬದಲಾವಣೆ ಅನಿವಾರ್ಯ ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ ಹೊಸ ಪರಿಕಲ್ಪನೆಗಳಿಗೆ ಹಾಗೂ ಕೈಗಾರಿಕೆಗಳಿಗೆ ಅವಶ್ಯಕ ಶಿಕ್ಷಣವನ್ನು ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ನಿರುದ್ಯೋಗ ನಿವಾರಣೆಗೂ ಈ ಹೆಜ್ಜೆ ಮಾರ್ಗ ಕಲ್ಪಿಸಲಿದೆ ಎಂದರು.
ರಾಜ್ಯದ ಪ್ರತಿಷ್ಠಿತ ಕೈಗಾರಿಕಾ ಕಂಪನಿಗಳು ಈ ಎರಡು ದಿನದ ಶೃಂಗಸಭೆಯಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಅವಶ್ಯಕವಾಗಿ ಬೇಕಾಗಿರುವ ಶಿಕ್ಷಣ ಉದ್ಯೋಗ ಮತ್ತು ಅವಕಾಶಗಳ ಸಂಬಂಧಪಟ್ಟಂತೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ ಎಂದು ಡಾ. ಎಂ.ಸಿ ಸುಧಾಕರ್ ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಾದ ಮಂಜುಶ್ರೀ, ಕೌಶಲ್ಯ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಾದ ಮನೋಜ್ ಕುಮಾರ್ ಮೀನಾ, ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಖುಷ್ಬು ಚೌದರಿ, ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ ಸುಧಾಕರ್, ಮಣಿಪಾಲ್ ಅಕಾಡೆಮಿಯ ಏಕಲವ್ಯ ಬರೊಚ, Elets ಟೆಕ್ನೋ ಮಿಡಿಯಾ ಮುಖ್ಯಸ್ಥರಾದ ಡಾ. ರವಿ ಗುಪ್ತ ಹಾಗೂ ಅನುರಾಗ ಗುಪ್ತ ಸೇರಿದಂತೆ ಕೃಷಿ, ಕೌಶಲ್ಯ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಕೈಗಾರಿಕೋದ್ಯಮಿಗಳು ಪಾಲ್ಗೊಂಡಿದ್ದರು.
ರಾಜ್ಯ ಶಿಕ್ಷಣ ನೀತಿ
ರಾಜ್ಯ ಸರ್ಕಾರ ನೂತನ ರಾಜ್ಯ ಶಿಕ್ಷಣ ನೀತಿ ಸಂಬಂಧಪಟ್ಟಂತೆ ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಿರುವ ಸಾಧ್ಯತೆ ಇದೆ. ಈಗಾಗಲೇ ಉನ್ನತ ಶಿಕ್ಷಣದಲ್ಲಿ ರಾಜ್ಯ ಶಿಕ್ಷಣ ನೀತಿಗೆ ಅನುಗುಣವಾಗಿ ಶಿಕ್ಷಣ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗಿದೆ. ಉಳಿದಂತೆ ಶಿಕ್ಷಣದಲ್ಲಿನ ಉತ್ಕೃಷ್ಟತೆ ಕಾಪಾಡಿಕೊಳ್ಳುವ ಸಂಬಂಧ ಪಟ್ಟಂತೆ ಕೆಲವು ಚರ್ಚೆಗಳು ನಡೆಯುತ್ತಿದ್ದು ಆ ಪ್ರಕಾರ ಕೆಲವು ಸಚಿವರು ರಾಜ್ಯ ಶಿಕ್ಷಣ ನೀತಿಯ ಕರಡನ್ನು ಓದುತ್ತಿರುವುದರಿಂದ ವಿಳಂಬವಾಗಿದೆ. ಸದ್ಯದಲ್ಲಿಯೇ ರಾಜ್ಯ ಶಿಕ್ಷಣ ನೀತಿ ಕುರಿತಂತೆ ಸಚಿವ ಸಂಪುಟ ತೀರ್ಮಾನ ಕೈಗೊಳ್ಳಲಿದೆ ಎಂದರು.
ರಾಜ್ಯ ಮುಕ್ತ ವಿಶ್ವವಿದ್ಯಾಲಯ
ಇತ್ತೀಚೆಗೆ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ, ಸರ್ಕಾರ ನಿರ್ಭಂಧ ಹೇರಿದ್ದರು ಸಹ ರಾಜ್ಯ ಉಚ್ಚ ನ್ಯಾಯಾಲಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದಂತೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ನಡೆಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇತ್ತೀಚೆಗೆ ಮುಕ್ತ ವಿಶ್ವವಿದ್ಯಾಲಯಕ್ಕೆ ಕುಲ ಸಚಿವರ ನೇಮಕ ಮಾಡಿ ಹಿಂಪಡೆದಿದ್ದಕ್ಕೆ ಮಾಹಿತಿ ಕೊರತೆ ಕಾರಣ ಎಂದು ಸ್ಪಷ್ಟಪಡಿಸಿದ ಸಚಿವರು, ಮುಕ್ತ ವಿಶ್ವವಿದ್ಯಾಲಯದ ನಿಯಮಾವಳಿಗಳ ಪ್ರಕಾರ ಕುಲಸಚಿವರ ನೇಮಕ ರಾಜ್ಯಪಾಲರಿಗೆ ಒಳಪಡುತ್ತದೆ. ಆದರೆ ಸರ್ಕಾರ ಕುಲ ಸಚಿವರನ್ನು ನೇಮಕ ಮಾಡಿದ್ದು ವಿಶ್ವವಿದ್ಯಾನಿಲಯದ ಕಾನೂನು ನಿಯಮಾವಳಿಗಳ ಪ್ರಕಾರ ಸರಿಯಲ್ಲದ ಕಾರಣ ನೇಮಕಾತಿ ಮಾಡಿದ್ದ ಕುಲಸಚಿವರ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಡಾ. ಎಂ.ಸಿ ಸುಧಾಕರ್ ಸ್ಪಷ್ಟಪಡಿಸಿದರು.
