ಸಮಗ್ರ ಸುದ್ದಿ

ವಿಶ್ವ ಜಲದಿನ ಕಾರ್ಯಕ್ರಮ | ಇತಿ ಮಿತಿಯಲ್ಲಿ ನೀರಿನ ಬಳಕೆ ಮಾಡಿ: ಡಾ.ವಿ.ರಾಮ್‌ಪ್ರಸಾತ್ ಮನೋಹರ್

Share

ಬೆಂಗಳೂರು: ನೀರು ಅಮೂಲ್ಯ. ಪ್ರತಿಯೊಬ್ಬರಿಗೂ ಗುಣಮಟ್ಟ, ಶುದ್ಧ ಕುಡಿಯುವ ನೀರು ನೀಡುವ ಜವಾಬ್ದಾರಿ ನಮ್ಮ ಮೇಲಿದೆ. ಹೀಗಾಗಿ ಸಾಧ್ಯವಾದಷ್ಟು ಇತಿ ಮಿತಿಯಲ್ಲಿ ನೀರಿನ ಬಳಕೆ ಮಾಡುವಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಬಿಡಬ್ಲ್ಯೂಎಸ್‌ಎಸ್‌ಬಿ) ಅಧ್ಯಕ್ಷರಾದ ಡಾ.ವಿ.ರಾಮ್‌ಪ್ರಸಾತ್ ಮನೋಹರ್ ಹೇಳಿದರು.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
ಬೆಂಗಳೂರು ಜಲಮಂಡಳಿ ಅಭಿಯಂತರರ ಸಂಘ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಯೂನಿವರ್ಸಿಟಿಯಲ್ಲಿ ಆಯೋಜಿಸಿದ್ದ “ವಿಶ್ವ ಜಲ ದಿನ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಜನರಿಗೆ ಶುದ್ಧ ಕುಡಿಯುವ ನೀರು ಮಾತು ಒಳಚರಂಡಿ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ನಾವು ಗುಣಮಟ್ಟ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಆದರೂ, ಜನರು ನೀರನ್ನು ಪೋಲು ಮಾಡಬಾರದು. ಇತಿ ಮಿತಿಯಲ್ಲಿ ಬಳಕೆ ಮಾಡಬೇಕು. ನೀರು ಇದೆ ಎಂಬ ಕಾರಣಕ್ಕೆ ದುರ್ಬಳಕೆ ಮೂಡುವುದು ತಪ್ಪು. ಇದಕ್ಕೆ ದಂಡ ಕೂಡ ವಿಧಿಸುತ್ತವೆ ಎಚ್ಚರಿಕೆ ಎಂದರು.

ನೀರನ್ನು ನಾವು ಗಂಗೆ ಎಂದು ಮಾತೃ ಸ್ಥಾನದಲ್ಲಿಟ್ಟು ಪೂಜಿಸುತ್ತೇವೆ. ನಾವು ನದಿಯನ್ನು ಮಾಲಿನ್ಯ ಮಾಡುವುದನ್ನು ನಿಲ್ಲಿಸಬೇಕು. ಏಕೆಂದರೆ, ಮಾಲಿನ್ಯ ಮಾಡುವುದು ಸುಲಭ. ಆದರೆ, ಅದನ್ನು ಸಂಸ್ಕರಿಸಿ ಇತರೆ ಕಾರ್ಯಕ್ಕೆ ಬಳಕೆ ಮಾಡುವುದು ಕಷ್ಟದ ಕೆಲಸ. ಹೀಗಾಗಿ ಎಲ್ಲರೂ ನೀರಿನ ಮಹತ್ವ ಅರಿತು ಬಳಕೆ ಮಾಡಬೇಕು ಎಂದರು.

ಮ್ಯಾಪಿಂಗ್ ಮಲ್ನಾಡ್‌ನ ವಿಷಯ ಸಂಪಾದಕರಾದ ನಿರ್ಮಲಾ ಗೌಡ ಮಾತನಾಡಿ, ಇಂದು ನಾವು ಕೇವಲ ಪರಿಸರ ಬದಲಾವಣೆಯನ್ನು ನೋಡುತ್ತಿಲ್ಲ—ನಾವು ನಮ್ಮ ಭೂಗರ್ಭಜಲ ವ್ಯವಸ್ಥೆಯನ್ನೇ ಬದಲಾಯಿಸುತ್ತಿದ್ದೇವೆ. ಈ ಪ್ರಕ್ರಿಯೆಯಲ್ಲಿ ಜಾಗತಿಕ ಜಲ ಸಮತೋಲನಕ್ಕೂ ಧಕ್ಕೆಯುಂಟಾಗಿದೆ. ಮಾನವ ನಿರ್ಮಿತ ಸಂಶ್ಲೇಷಿತ ವಸ್ತುಗಳು ಹಾಗೂ ಹೊಸ ರಾಸಾಯನಿಕ ಅಂಶಗಳನ್ನು ನೀರಿನ ಮೂಲಗಳಿಗೆ ಸೇರಿಸುವುದರಿಂದ ಅವುಗಳ ಸ್ವಾಭಾವಿಕ ಗುಣಲಕ್ಷಣಗಳು ಮೌನವಾಗಿ ಬದಲಾಗುತ್ತಿವೆ. ಇದು ಪ್ರತ್ಯೇಕ ಸಮಸ್ಯೆಯಲ್ಲ; ವಾತಾವರಣದ ಮಾಲಿನ್ಯದಿಂದ ಉಂಟಾಗುತ್ತಿರುವ ಹವಾಮಾನ ಬದಲಾವಣೆಯೊಂದಿಗೇ ಇದು ನೇರವಾಗಿ ಸಂಬಂಧಿಸಿದೆ.

ವಿಶ್ವ ಆರ್ಥಿಕ ವೇದಿಕೆಯ ರಿಸ್ಕ್ ಅಸೆಸ್ಮೆಂಟ್ ವರದಿಯ ಪ್ರಕಾರ, ಮಾಲಿನ್ಯವು ಜಾಗತಿಕ ಮಟ್ಟದಲ್ಲಿ ಅತಿ ದೊಡ್ಡ ಅಪಾಯಗಳಲ್ಲಿ ಒಂದಾಗಿದೆ—ಇದರ ಜೊತೆಗೆ ನೈಸರ್ಗಿಕ ಸಂಪನ್ಮೂಲಗಳ ಕೊರತೆ, ಹವಾಮಾನ ಬದಲಾವಣೆ ಮತ್ತು ಜೀವ ವೈವಿಧ್ಯತೆಯ ಕುಗ್ಗುವಿಕೆ ಪ್ರಮುಖ ಸವಾಲುಗಳಾಗಿವೆ ಎಂದರು.

ನಮ್ಮ ರಾಜ್ಯದ ಮಟ್ಟದಲ್ಲಿಯೂ ಪರಿಸ್ಥಿತಿ ಚಿಂತಾಜನಕವಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ, ಕರ್ನಾಟಕದ ಕನಿಷ್ಠ 14 ನದಿಗಳು—ತುಂಗಾ, ಭೀಮಾ, ಕಾವೇರಿ ಸೇರಿದಂತೆ—ಮಾಲಿನ್ಯಕ್ಕೆ ಒಳಗಾಗಿವೆ. ಈ ಮಾಲಿನ್ಯವು ಕೇವಲ ಪರಿಸರ ಸಮಸ್ಯೆಯಲ್ಲ. ಇದು ನೇರವಾಗಿ ಮಾನವ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.

ನೀರಿನಲ್ಲಿ ಕಂಡುಬರುವ ಎಂಡೋಕ್ರೈನ್ ವ್ಯತ್ಯಯ ಉಂಟುಮಾಡುವ ರಾಸಾಯನಿಕಗಳು ಬಂಜೆತನ, ಹಾರ್ಮೋನ್ ಅಸಮತೋಲನ, ಥೈರಾಯ್ಡ್ ಸಮಸ್ಯೆಗಳು, ಮನೋನೊಂದು (ಡಿಪ್ರೆಷನ್), ಹಾಗೂ ಅತಿಯಾದ ತೂಕ ಹೆಚ್ಚಳಕ್ಕೆ ಕಾರಣವಾಗುತ್ತಿವೆ. ಬಂಜೆತನದ ಪ್ರಮಾಣ ಹೆಚ್ಚುತ್ತಿರುವುದು ಮತ್ತು ಕ್ಲಿನಿಕ್‌ಗಳ ಸಂಖ್ಯೆ ಹೆಚ್ಚುತ್ತಿರುವುದು ಈ ಸಮಸ್ಯೆಯ ಮೂಲ ಕಾರಣಗಳನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ವೇಳೆ ವಿಜ್ಞಾನಿ ವೀಣಾ ಆರ್.ಅಚ್ಯುತ, ಬೇಸ್ ವಿವಿಯ ರಿಜಿಸ್ಟ್ರಾರ್ ಜಿ.ಎಸ್.ಮಮತಾದೇವಿ, ಆರೋಹಣಾ ಗ್ರಾಮೀಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಎಸ್.ಆಶಾ, ಸಂಘದ ಅಧ್ಯಕ್ಷ ಬಿ.ಸಿ.ಗಂಗಾಧರ, ಉಪಾಧ್ಯಕ್ಷ ರಮಾನಂದ, ಕಾರ್ಯದರ್ಶಿ ಎ.ರಾಜಶೇಖರ, ಖಜಾಂಚಿ ಎಸ್.ಚಂದ್ರಶೇಖರ್ ಇತರರು ಇದ್ದರು.


Share

You cannot copy content of this page