ಸಮಗ್ರ ಸುದ್ದಿ

ಪೊಲೀಸ್ ಠಾಣೆಗೆ ಬರುವ ನೊಂದವರೊಂದಿಗೆ ಗೌರವದಿಂದ ವರ್ತಿಸಿ – ಗೃಹ ಸಚಿವ ಡಾ.ಜಿ.ಪರಮೇಶ್ವರ್

Share

ದೇವನಹಳ್ಳಿ: ನೊಂದವರು, ಶೋಷಿತರಿಗೆ ನ್ಯಾಯ ಕೊಡಿಸಲು ಪೊಲೀಸ್ ಇಲಾಖೆ ಇದೆ. ಈ ನಿಟ್ಟಿನಲ್ಲಿ ಪೊಲೀಸರು ಕೆಲಸ ಮಾಡಬೇಕು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಹೇಳಿದರು.

ಬೆಂಗಳೂರು ನಗರದ ಚಿಕ್ಕಬಾಣವಾರ ಸಹಾಯಕ ಪೊಲೀಸ್ ಆಯುಕ್ತರ ಕಚೇರಿ, ಚಿಕ್ಕಬಾಣಾವರ ಸಂಚಾರ ಪೊಲೀಸ್ ಠಾಣೆಯ ನೂತನ ಕಟ್ಟಡ ನಿರ್ಮಾಣ, ಬೆಂಗಳೂರು ಗ್ರಾಮ ಜಿಲ್ಲೆಯ ಆವತಿಯಲ್ಲಿ ಭಾರತೀಯ ಮೀಸಲು ಪಡೆಯ ಶಂಕುಸ್ಥಾಪನೆ ಹಾಗೂ ವಾಯವ್ಯ ವಿಭಾಗ ಉಪ ಪೊಲೀಸ್ ಆಯುಕ್ತರ ಕಚೇರಿ, ಚಿಕ್ಕ ಬಾಣಾವರ ಪೊಲೀಸ್ ಠಾಣೆಯ ನೂತನ ಕಚೇರಿ,‌ ಈಶಾನ್ಯ ವಿಭಾಗ ಉಪ ಪೊಲೀಸ್ ಆಯುಕ್ತರ ಕಚೇರಿ, ದೇವನಹಳ್ಳಿ ಸಹಾಯಕ‌ ಪೊಲೀಸ್ ಆಯುಕ್ತರ ಕಚೇರಿ ಮತ್ತು ದೇವನಹಳ್ಳಿ ಪೊಲೀಸ್ ಠಾಣೆಯ ನೂತನವಾಗಿ ನಿರ್ಮಿಸಲಾದ ಕಚೇರಿ ಕಟ್ಟಡಗಳ ಉದ್ಘಾಟನೆಯನ್ನು ನೆರವೇರಿಸಿದರು.

ಬಳಿಕ ದೇವನಹಳ್ಳಿಯಲ್ಲಿ‌ ನಡೆದ ವೇದಿಕೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಪೊಲೀಸ್ ಇಲಾಖೆಯ 594 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಚಿಕ್ಕಬಾಣಾವಾರದಲ್ಲಿ 8.60 ಕೋಟಿ ರೂ, ಆವತಿಯಲ್ಲಿ 568 ಕೋಟಿ ರೂ. ಐಆರ್‌ಬಿ ಬೆಟಾಲಿಯನ್ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿದೆ. ಪೊಲೀಸ್ ಇಲಾಖೆಯಲ್ಲಿ ಇಷ್ಟೊಂದು ಮೊತ್ತದ ಅಭಿವೃದ್ಧಿ ಕಾರ್ಯ ನೆರವೇರಿಸಲಾಗಿದೆ. ರಾಜಕೀಯ ಉದ್ದೇಶದಿಂದ ಸರ್ಕಾರದಲ್ಲಿ ದುಡ್ಡು ಇಲ್ಲ ಎಂದು ಹೇಳುತ್ತಾರೆ ಎಂದರು.

ಪೊಲೀಸ್ ಇಲಾಖೆ ಶಿಸ್ತುಬದ್ಧಿನ ಇಲಾಖೆ. ಇಡೀ ದೇಶದಲ್ಲಿ ಶಿಸ್ತು, ಸಂಯಮ ದಿಂದ ಜನಸ್ನೇಹಿಯಾಗಿ ಕೆಲಸ ಮಾಡುತ್ತಿದೆ. ಸರ್ಕಾರವು ಪೊಲೀಸ್ ಇಲಾಖೆಯಲ್ಲಿ ಅನೇಕ ಹೊಸ ಬದಲಾವಣೆಗಳನ್ನು ತಂದಿದೆ.‌ ಕರ್ನಾಟಕ ಪೊಲೀಸ್ ನ್ಯಾಯ ಒದಗಿಸುವುದರಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದರು.

ಯಾವ ಅಧಿಕಾರಿಯೂ ಕೂಡ ರಿಯಲ್ ಎಸ್ಟೇಟ್ ವ್ಯವಹಾರ ಮಾಡಬಾರದು. ಪೊಲೀಸ್ ಠಾಣೆಯಲ್ಲಿ ರಾಜೀ ಪಂಚಾಯಿತಿ ನಡೆಯಬಾರದು. ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಪೊಲೀಸ್ ಠಾಣೆಗೆ ಬಂದವರನ್ನು ಸರಿಯಾದ ರೀತಿಯಲ್ಲಿ ಗೌರವದಿಂದ ವರ್ತಿಸಬೇಕು ಎಂದರು.

ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಎಲ್ಲ ರೀತಿಯ ಸವಲತ್ತು ನಮ್ಮ ಸರ್ಕಾರ ಒದಗಿಸಿದೆ. ಪೊಲೀಸ್ ಗೃಹ ಯೋಜನೆಯಡಿ 38 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತವಾದ ವಸತಿ ನಿರ್ಮಿಸಲಾಗುತ್ತಿದೆ. ಈವರೆಗೆ ಸಿಬ್ಬಂದಿಗಳಿಗೆ ಶೇ. 40ರಷ್ಟು ವಸತಿಗಳನ್ನು ನಿರ್ಮಿಸಿ ಕೊಡಲಾಗಿದೆ. ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದ ಅಕ್ರಮದಿಂದ ನೆನೆಗುದಿಗೆ ಬಿದ್ದಿದ್ದ ಪಿಎಸ್‌ಐ ನೇಮಕಾತಿಯನ್ನು ಪೂರ್ಣಗೊಳಿಸಿದ್ದೇವೆ. ಶೀಘ್ರದಲ್ಲಿ ಇನ್ನಷ್ಟು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ‌ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಹೆಚ್.ಮುನಿಯಪ್ಪ, ಚಿಕ್ಕಬಳ್ಳಾಪುರ ಸಂಸದರಾದ ಡಾ. ಕೆ.ಸುಧಾಕರ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ಡಾ. ಎಂ.ಎ.ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್, ಜಂಟಿ ಪೊಲೀಸ್ ಆಯುಕ್ತರಾದ ರಮೇಶ್ ಬಾನೋಥ್, ವಂಶಿಕೃಷ್ಣ, ಪ್ರೆಸ್ಟಿಜ್ ಗ್ರೂಪ್ ಸಂಸ್ಥೆಯ ಮುಖ್ಯಸ್ಥರಾದ ನದೀಮ್ ಮತ್ತು ನಹೀಮ್ ಉಪಸ್ಥಿತರಿದ್ದರು.


Share

You cannot copy content of this page