ಸಮಗ್ರ ಸುದ್ದಿ

ಬಿಐಎಎಲ್, ಇಂಡಿಗೋ ಮತ್ತು ಐಎಟಿಎ ಸಹಯೋಗದಲ್ಲಿ ಹೊಸ ಮೈಲಿಗಲ್ಲು; ಸ್ಪರ್ಶರಹಿತ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ತಾಂತ್ರಿಕ ಪ್ರಯೋಗ ಯಶಸ್ವಿ

Share

ಬೆಂಗಳೂರು : ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ, ಇಂಡಿಗೋ, ಡಿಜಿ ಯಾತ್ರಾ ಫೌಂಡೇಶನ್ ಹಾಗೂ ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಘಟನೆಗಳ (ಐಎಟಿಎ) ಸಹಭಾಗಿತ್ವದಲ್ಲಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿ ಟಿಕೆಟ್‌ ಕಾಯ್ದಿರಿಸುವಿಕೆಯಿಂದ ಹಿಡಿದು, ಬುಕಿಂಗ್ ನಿರ್ವಹಣೆ ಹಾಗೂ ಬಯೋಮೆಟ್ರಿಕ್ ಆಧಾರಿತ ತಡೆರಹಿತ ಪ್ರಯಾಣದವರೆಗಿನ ಅಂತಾರಾಷ್ಟ್ರೀಯ ಪ್ರಯಾಣದ ಸಮಗ್ರ ಪ್ರಕ್ರಿಯೆಗಳನ್ನು ತಾಂತ್ರಿಕ ಪ್ರಯೋಗಗಳ ಮೂಲಕ ಯಶಸ್ವಿಯಾಗಿ ಪ್ರದರ್ಶಿಸಲಾಯಿತು.

ಭಾರತದಲ್ಲಿ ಇದೇ ಮೊದಲ ಬಾರಿಗೆ ನಡೆದ ಈ ವಿನೂತನ ಪ್ರಯೋಗವು ಜಾಗತಿಕ ಮಟ್ಟದಲ್ಲಿ ಅಂತಾರಾಷ್ಟ್ರೀಯ ಸ್ಪರ್ಶರಹಿತ ಪ್ರಯಾಣ ವ್ಯವಸ್ಥೆಗಳ ಸಾಧ್ಯತೆ ಪರಿಶೀಲನೆಗಾಗಿ ಕೈಗೊಳ್ಳಲಾಗುತ್ತಿರುವ ಮಹತ್ವದ ಹಂತವಾಗಿದೆ.

ಈ ವರ್ಷದ ಆರಂಭದಲ್ಲಿ, ಇಂಡಿಗೋ ಮತ್ತು ಡಿಜಿ ಯಾತ್ರಾ ಫೌಂಡೇಶನ್, ವಿಮಾನ ನಿಲ್ದಾಣಗಳಲ್ಲಿ ಸಂಪರ್ಕರಹಿತ ಪ್ರಯಾಣಿಕರ ಪ್ರಕ್ರಿಯೆಗಾಗಿ ಬಯೋಮೆಟ್ರಿಕ್ ತಂತ್ರಜ್ಞಾನವನ್ನು ಒಳಗೊಂಡ ಅತ್ಯಾಧುನಿಕ ಸ್ವಯಂ-ಗುರುತು ವ್ಯವಸ್ಥೆಯಾದ ‘ಸೆಲ್ಫ್-ಸೋವರಿನ್ ಐಡೆಂಟಿಟಿ’ಯನ್ನು (ಎಸ್‌ಎಸ್‌ಐ) ಯಶಸ್ವಿಯಾಗಿ ಜಾರಿಗೆ ತಂದಿದ್ದವು.

ಅಷ್ಟೇ ಅಲ್ಲದೆ, ಮೊಬೈಲ್ ಅಪ್ಲಿಕೇಶನ್‌ಗಳ ನಡುವೆ ಬೋರ್ಡಿಂಗ್ ಪಾಸ್‌ಗಳನ್ನು ಸುಲಭವಾಗಿ ಹಂಚಿಕೊಳ್ಳಲು ಅನುವಾಗುವಂತೆ ‘ಆ್ಯಪ್-ಟು-ಆ್ಯಪ್’ ಸಂಯೋಜನೆಯನ್ನು ರೂಪಿಸಿದ್ದವು. ಇದೇ ಯಶಸ್ವಿ ಮಾದರಿಯನ್ನು ಆಧರಿಸಿ, ಇಂಡಿಗೋ ಮತ್ತು ಡಿಜಿ ಯಾತ್ರಾ ಫೌಂಡೇಶನ್ ಸಂಸ್ಥೆಗಳು ಬಿಐಎಎಲ್ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಪ್ರಯಾಣಕ್ಕೂ ಈ ತಂತ್ರಜ್ಞಾನದ ಕಾರ್ಯಸಾಧ್ಯತೆ ಮತ್ತು ವಿಸ್ತರಣಾ ಸಾಮರ್ಥ್ಯವನ್ನು ಯಶಸ್ವಿಯಾಗಿ ಪ್ರದರ್ಶಿಸಿವೆ. ಇದು ಈ ತಂತ್ರಜ್ಞಾನದ ಪೂರ್ಣ ಪ್ರಮಾಣದ ಅನುಷ್ಠಾನಕ್ಕೆ ಇಟ್ಟ ಮಹತ್ವದ ಹೆಜ್ಜೆಯಾಗಿದ್ದು, ಡಿಜಿಟಲ್ ಪ್ರಯಾಣದ ಮುಂದಿನ ಹಂತಕ್ಕೆ ನಾಂದಿ ಹಾಡಿದೆ.

ದೇಶೀಯ ಪ್ರಯಾಣಿಕರ ತಡೆರಹಿತ ಮತ್ತು ಸುರಕ್ಷಿತ ಪ್ರಯಾಣಕ್ಕಾಗಿ ‘ಡಿಜಿ ಯಾತ್ರಾ’ವನ್ನು ಜಾರಿಗೆ ತರುವಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಮುಂಚೂಣಿಯಲ್ಲಿದ್ದು, ಅತ್ಯುನ್ನತ ಮಟ್ಟದ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇದೀಗ ಈ ಬಯೋಮೆಟ್ರಿಕ್‌ ಆಧಾರಿತ ಸ್ಪರ್ಶರಹಿತ ವ್ಯವಸ್ಥೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೂ ವಿಸ್ತರಿಸಲಾಗುತ್ತಿದೆ. ಇದರೊಂದಿಗೆ ಜಾಗತಿಕ ಮಟ್ಟದ ಈ ಯೋಜನೆಯಲ್ಲಿ ಭಾಗವಹಿಸುತ್ತಿರುವ ಭಾರತದ ಏಕೈಕ ವಿಮಾನ ನಿಲ್ದಾಣವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಗುರುತಿಸಿಕೊಂಡಿದೆ.

ಈ ಕುರಿತು ಮಾತನಾಡಿದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ ಮುಖ್ಯ ತಾಂತ್ರಿಕ ಅಧಿಕಾರಿ ಜಾರ್ಜ್ ಫಾಂಥೋಮ್ ಅವರು, ಬಯೋಮೆಟ್ರಿಕ್‌ ಆಧಾರಿತ ಪ್ರಯಾಣ ವ್ಯವಸ್ಥೆಯನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸುತ್ತಿದ್ದೇವೆ. ಪ್ರಯಾಣಿಕರಿಗೆ ಸುಗಮ, ಸುರಕ್ಷಿತ ಹಾಗೂ ತಂತ್ರಜ್ಞಾನ ಆಧಾರಿತ ಅನುಭವ ಒದಗಿಸುವುದು ನಮ್ಮ ಗುರಿಯಾಗಿದೆ. ಈ ತಾಂತ್ರಿಕ ಪ್ರಯೋಗಗಳು ಸ್ಪರ್ಶರಹಿತ ಪ್ರಯಾಣ ವ್ಯವಸ್ಥೆಯನ್ನು ವ್ಯಾಪಕವಾಗಿ ಜಾರಿಗೆ ತರಲು ನೆರವಾಗಲಿವೆ ಎಂದು ತಿಳಿಸಿದರು.

ಇಂಡಿಗೋ ವಿಮಾನಸಂಸ್ಥೆಯ ಡಿಜಿಟಲ್ ಮತ್ತು ಮಾಹಿತಿ ವಿಭಾಗದ ಮುಖ್ಯಸ್ಥ ನೀತನ್ ಚೋಪ್ರಾ ಅವರು ಮಾತನಾಡಿ, ತಂತ್ರಜ್ಞಾನ ಮತ್ತು ಪ್ರಯಾಣಿಕರ ಅನುಭವವನ್ನು ಒಟ್ಟುಗೂಡಿಸುವ ಮೂಲಕ ಭವಿಷ್ಯದ ವಿಮಾನ ಪ್ರಯಾಣವನ್ನು ರೂಪಿಸುವತ್ತ ನಾವು ಬದ್ಧರಾಗಿದ್ದೇವೆ. ಡಿಜಿಟಲ್ ಗುರುತು ಹಾಗೂ ಬಯೋಮೆಟ್ರಿಕ್‌ ತಂತ್ರಜ್ಞಾನ ಬಳಸಿ ಸ್ಪರ್ಶರಹಿತ ಪ್ರಯಾಣವನ್ನು ಸಾಧ್ಯವಾಗಿಸುವಲ್ಲಿ ಈ ಪ್ರಯೋಗಗಳು ಮಹತ್ವದ ಸಾಧನೆಯಾಗಿವೆ ಎಂದು ತಿಳಿಸಿದರು.

ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಘಟನೆಯ ಮಾಹಿತಿ ಮತ್ತು ದತ್ತಾಂಶ ವಿಭಾಗದ ಮುಖ್ಯಸ್ಥ ಕಿಮ್ ಮಕಾಲೇ ಅವರು ಮಾತನಾಡಿ, ಭಾರತವು ಡಿಜಿಟಲ್ ಹಾಗೂ ಸ್ಪರ್ಶರಹಿತ ಪ್ರಯಾಣ ವ್ಯವಸ್ಥೆಯಲ್ಲಿ ಜಾಗತಿಕ ನಾಯಕತ್ವದತ್ತ ಸಾಗುತ್ತಿದೆ. ಇಂಡಿಗೋ, ಡಿಜಿ ಯಾತ್ರಾ ಮತ್ತು ಬೆಂಗಳೂರು ವಿಮಾನ ನಿಲ್ದಾಣದ ಸಹಭಾಗಿತ್ವವು ಜಾಗತಿಕ ಮಟ್ಟದಲ್ಲಿ ಅನುಸರಿಸಬಹುದಾದ ಮಾದರಿಯನ್ನು ನಿರ್ಮಿಸಿದೆ ಎಂದು ವಿವರಿಸಿದರು.

ಡಿಜಿ ಯಾತ್ರಾ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಖಡಕ್‌ ಭಾವಿ ಅವರು ಮಾತನಾಡಿ, ಪ್ರಯಾಣಿಕರ ಗುರುತನ್ನು ಮುಂಚಿತವಾಗಿ ದೃಢೀಕರಿಸಿ, ಮುಖದ ಗುರುತಿನ ಮೂಲಕ ಸಂಪೂರ್ಣ ಪ್ರಯಾಣ ಪ್ರಕ್ರಿಯೆಯನ್ನು ನಿರ್ವಹಿಸುವ ವ್ಯವಸ್ಥೆಯನ್ನು ನಾವು ಯಶಸ್ವಿಯಾಗಿ ಪ್ರದರ್ಶಿಸಿದ್ದೇವೆ. ಇದು ಸುರಕ್ಷತೆ, ವೇಗ ಮತ್ತು ಸುಗಮ ಪ್ರಯಾಣವನ್ನು ಒಟ್ಟುಗೂಡಿಸುವ ಭವಿಷ್ಯದ ಪ್ರಯಾಣ ಮಾದರಿಯಾಗಿದೆ ಎಂದು ತಿಳಿಸಿದರು.

ಈ ತಾಂತ್ರಿಕ ಪ್ರಯೋಗವು ಡಿಜಿಟಲ್ ಗುರುತು, ದತ್ತಾಂಶ ಸುರಕ್ಷತೆ ಹಾಗೂ ಜಾಗತಿಕ ಮಾನದಂಡಗಳಿಗೆ ಹೊಂದಿಕೊಳ್ಳುವ ಸ್ಪರ್ಶರಹಿತ ಪ್ರಯಾಣ ವ್ಯವಸ್ಥೆಯನ್ನು ರೂಪಿಸುವತ್ತ ಮಹತ್ವದ ಹೆಜ್ಜೆಯಾಗಿದೆ. ಮುಂದಿನ ದಿನಗಳಲ್ಲಿ ಈ ವ್ಯವಸ್ಥೆಯನ್ನು ಇನ್ನಷ್ಟು ವಿಮಾನ ನಿಲ್ದಾಣಗಳಿಗೆ ವಿಸ್ತರಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಅನುಷ್ಠಾನಗೊಳಿಸುವ ಉದ್ದೇಶ ಹೊಂದಲಾಗಿದೆ.


Share

You cannot copy content of this page