ಶಿಕ್ಷಣ / ಉದ್ಯೋಗ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ವಾಣಿಜ್ಯ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ದಿಶಾಗೆ 600 ಅಂಕ

Share

ಬೆಂಗಳೂರು:ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಫಲಿತಾಂಶದಲ್ಲಿ ದಾಖಲೆಯ ಹೆಚ್ಚಳವಾಗಿದೆ. ಕಳೆದ ವರ್ಷಕ್ಕಿಂತ ಶೇಕಡ 12 ರಷ್ಟು ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

7,10,363 ವಿದ್ಯಾರ್ಥಿಗಳ ಪೈಕಿ 6,10,000 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಳೆದ ವರ್ಷ ಶೇಕಡ 73.45ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಇದರೊಂದಿಗೆ ಈ ಬಾರಿ ಪಿಯುಸಿ ಫಲಿತಾಂಶದಲ್ಲಿ ಭಾರೀ ಸುಧಾರಣೆ ಕಂಡು ಬಂದಿದೆ.

ವಾಣಿಜ್ಯ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ 600 ಅಂಕಗಳಿಗೆ 600 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಕಲಾ ವಿಭಾಗದಲ್ಲಿ ಕೊಟ್ಟೂರಿನ ಇಂದು ಪಿಯು ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರಾದ ಸಂಗೀತ ಹಾಗೂ ಅರ್ಚನಾ ತಲಾ 598 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳಾದ ನಂದನ್ ನಾಯಕ್ ಹಾಗೂ ಸಮನ್ಯು ಎಸ್. ಶೆಟ್ಟಿ 600ಕ್ಕೆ 598 ಅಂಕ ಗಳಿಸಿ ದಾಖಲೆ ಬರೆದಿದ್ದಾರೆ. ತಮ್ಮ ಸಾಧನೆಯ ಬಗ್ಗೆ ಸಂತಸ ಹಂಚಿಕೊಂಡಿರುವ ಸಮನ್ಯು ಎಸ್. ಶೆಟ್ಟಿ ನಿರಂತರ ಓದು, ಉಪನ್ಯಾಸಕರ ನಿರಂತರ ಪ್ರೋತ್ಸಾಹದಿಂದ ಉತ್ತಮ ಅಂಕಗಳಿಸಲು ಸಾಧ್ಯವಾಯಿತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.


Share

You cannot copy content of this page