ಸಮಗ್ರ ಸುದ್ದಿ

ಕುಡಿಯುವ ನೀರಿನ ಸಮಸ್ಯೆಯನ್ನು ಕೂಡಲೇ ಬಗೆಹರಿಸಿಅಧಿಕಾರಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಕಟ್ಟುನಿಟ್ಟಿನ ಸೂಚನೆ| ಪಂಪ್ ಆಪರೇಟರ್ ಹಾಗೂ ಅಗತ್ಯ ಸಿಬ್ಬಂದಿ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸಿ

Share

ಕಲಬುರಗಿ: ಜಿಲ್ಲೆಯಲ್ಲಿ ಮುಂದಿನ ಎರಡು‌ ತಿಂಗಳಲ್ಲಿ ತಲೆದೋರಬಹುದಾದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಅಗತ್ಯ ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ‌ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಕುಡಿಯುವ ನೀರಿನ ಸ್ಥಿತಿಗತಿಯ ಬಗ್ಗೆ ಚರ್ಚಿಸಲು ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಸಚಿವರು, ಗ್ರಾಮೀಣ ಮಟ್ಟದಲ್ಲಿ ಪಂಪ್ ಆಪರೇಟರ್ ಇಲ್ಲದ ನೆವದಿಂದ ಕುಡಿಯುವ ನೀರಿನ‌ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿರುವ ದೂರುಗಳಿವೆ. ಪಂಪ್ ಆಪರೇಟರ್ ಸೇರಿದಂತೆ ಅಗತ್ಯವಿರುವ ಸಿಬ್ಬಂದಿಗಳ ನೇಮಕಕ್ಕೆ ಈ ಕೂಡಲೇ ಸಂಬಂಧಪಟ್ಟ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಸ್ತಾವನೆ ಕಳಿಸಬೇಕು ಎಂದು ನಿರ್ದೇಶನ ನೀಡಿದರು.

ಆಳಂದ್ ಹಾಗೂ ಅಫಜಲ್ ಪುರ ತಾಲೂಕಿನ‌ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಶಾಸಕರಾದ ಬಿ.ಆರ್. ಪಾಟೀಲ್ ಹಾಗೂ ಎಂ ವೈ ಪಾಟೀಲ್ ಸಭೆಯ ಗಮನಕ್ಕೆ ತಂದರು.

ಬಹುತೇಕ ಇಂಜಿನಿಯರಗಳು ಹಾಗೂ ಪಿಡಿಓ ಗಳು ಕಲಬುರಗಿ ಯಲ್ಲೆ ಮನೆ ಮಾಡಿದ್ದು ಮಧ್ಯಾಹ್ನದ ನಂತರ ಗ್ರಾಮಗಳಿಗೆ ಹೋಗಿ ಸಂಜೆ ವೇಳೆಗೆ ವಾಪಸ್ ಬರುತ್ತಾರೆ. ಹಾಗಾದರೆ, ಜನರ ಕಷ್ಟ ಅರಿತುಕೊಳ್ಳುವುದು ಯಾವಾಗ? ಪಿಡಿಓಗಳು ಫೋನ್ ಮಾಡಿದರೆ‌ ಸ್ವೀಕರಿಸುವುದಿಲ್ಲ. ನಾನು ಮಾಡಿದರೂ ಕೂಡಾ ಕರೆ ಸ್ವೀಕರಿಸಲ್ಲ ಎಂದು ಬಿ.ಆರ್ ಪಾಟೀಲ್ ಅಸಮಧಾನ ವ್ಯಕ್ತಪಡಿಸಿ ಅಂತಹ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 236 ಗ್ರಾಮಗಳಲ್ಲಿ ಕುಡಿಯುವ ನೀರಿನ‌ ಕೊರತೆ ಎದುರಾಗಬಹುದೆಂದು ಅಂದಾಜಿಸಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ವಿಭಾಗದ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.

ಈ 236 ಗ್ರಾಮಗಳ ಪೈಕಿ, ಅಫಜಲಪುರ ತಾಲೂಕಿನಲ್ಲಿ 43, ಆಳಂದ- 45, ಚಿಂಚೋಳಿ- 14, ಚಿತ್ತಾಪುರ – 25, ಜೇವರ್ಗಿ-16, ಕಲಬುರಗಿ – 20, ಕಾಳಗಿ- 20, ಕಮಲಾಪುರ- 11, ಸೇಡಂ- 28, ಶಹಾಬಾದ್ – 7 ಹಾಗೂ ಯಡ್ರಾಮಿ ತಾಲೂಕಿನಲ್ಲಿ 7 ಗ್ರಾಮಗಳೆಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.

ಆಗ ಮಧ್ಯೆ ಪ್ರವೇಶಿಸಿ ಮಾತನಾಡಿದ ಸಚಿವರು ಕುಡಿಯುವ ನೀರು ಸರಬರಾಜು ಮಾಡಲು ಪರ್ಯಾಯ ಮಾರ್ಗಗಳನ್ನು‌ ಅನುಸರಿಸಿ. ಬಾಡಿಗೆ ಬೋರ್ ವೆಲ್, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿ. ಆರ್ ಓ ಪ್ಲಾಂಟ್ ಗಳ ರಿಪೇರಿ ಅಗತ್ಯವಿದ್ದರೆ ಕೂಡಲೇ ಮಾಡಿಸಿ. ಯಾವುದೇ ಕಾರಣಕ್ಕೂ ಸಮಸ್ಯೆ ಉದ್ಭವವಾಗದಂತೆ ಕ್ರಮವಹಿಸಬೇಕು. ವಿಳಂಬ ಧೋರಣೆ ಅಥವಾ ನಿರ್ಲಕ್ಷ್ಯತನ ವಹಿಸಿದರೆ ಸಹಿಸಲಾಗದು ಎಂದು ಖಡಕ್ ಎಚ್ಚರಿಕೆ ನೀಡಿದರು.

ಇಡೀ ದೇಶದಲ್ಲಿಯೇ ನಮ್ಮ ರಾಜ್ಯ ಮಾತ್ರ ಜೆಜೆಎಂ‌ ಕಾಮಗಾರಿಗೆ ಅನುದಾನ‌ ಒದಗಿಸುತ್ತಿದೆ. ಆದರೆ ಅಧಿಕಾರಿಗಳು ಗುತ್ತಿಗೆದಾರರ ಬೆನ್ನುಬಿದ್ದು ಕಾಮಗಾರಿ ಪೂರ್ಣಗೊಳಿಸುತ್ತಿಲ್ಲ. ಹಾಗಾಗಿ, ಜೆಜೆಎಂ ಕಾಮಗಾರಿಗಳು ಪೂರ್ಣಗೊಳ್ಳಲು ವಿಳಂಬವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಚಿವರು ಈ ಬಗ್ಗೆ ತುರ್ತು ಕ್ರಮಹಿಸುವಂತೆ ಸಿಇಓ‌ ಭಂವರ್ ಸಿಂಗ್ ಮೀನಾ ಗೆ ಸೂಚಿಸಿದರು.

ಕುಡಿಯುವ ನೀರು ಒದಗಿಸುವ ಪಂಪ್ ಸೆಟ್ ಗಳಿಗೆ ಸಂಪರ್ಕ ಕಲ್ಪಿಸಲಾದ ಕಡೆಗೆ ವಿದ್ಯುತ್ ಸರಬರಾಜು ಮಾಡಲು ತೊಂದರೆಯಾಗದಂತೆ ಅಥವ ಕಡಿತಗೊಳಿಸದಂತೆ ಜೆಸ್ಕಾಂ ಅಧಿಕಾರಿಗಳಿಗೆ ಸಚಿವರು ಸೂಚಿಸಿ, ಹೊಸ ಬೋರ್ ವೆಲ್ ಕೊರೆಸುವಾಗ ತಡ ಮಾಡದೆ ವಿದ್ಯುತ್ ಸಂಪರ್ಕ ಕೊಡಿ ಎಂದು ಹೇಳಿದರು.

ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ಗಳಿಗೆ ಕುಡಿಯುವ ನೀರಿನ‌ ತುರ್ತು ಯೋಜನೆ ಜಾರಿಗೊಳಿಸಲು ಪಂಚಾಯತ ಗಳಲ್ಲಿ ಪ್ರತ್ಯೇಕ ಅನುದಾನವಿಲ್ಲ. ಹಾಗಾಗಿ, ಕಾಂಟಿಜೆನ್ಸ್ ಅಡಿಯಲ್ಲಿ ಅನುದಾನ ಬಿಡುಗಡೆ ಮಾಡುವಂತೆ ಬಿ.ಆರ್. ಪಾಟೀಲ್, ಜಿಲ್ಲಾಧಿಕಾರಿಗೆ ಕೋರಿದರು.

ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ. ಪಿಡಿಓಗಳು ಏನು ಮಾಡುತ್ತಿದ್ದೀರಿ? ಇಓ ಗಳು ಈ ಬಗ್ಗೆ ನೋಡುತ್ತಿಲ್ಲವಾ? ಎಂದು ಹರಿಹಾಯ್ದ ಸಚಿವರು, ನಾನು ಇತ್ತೀಚಿಗೆ ಕೇರಳಕ್ಕೆ ಹೋಗಿದ್ದೆ ಅಲ್ಲಿ ಕಸ ಕಂಡು ಬರಲೇಇಲ್ಲ‌. ಸ್ವಚ್ಚತೆಗೆ ಅವರು ನೀಡುವ ಪ್ರಾಮುಖ್ಯತೆ ಅದ್ಭುತ. ಅನುದಾನವೂ ಕೂಡಾ ಅವರಂತೆ ನಮಗೂ ಸಿಗುತ್ತಿದೆ ಅದನ್ನು ಬಳಸಿಕೊಂಡು ಗ್ರಾಮೀಣ ಭಾಗಗಳ ಸ್ವಚ್ಛತೆಗೆ ಕ್ರಮವಹಿಸಿ ಎಂದು ಸೂಚಿಸಿದರು.

ಸರ್ಕಾರದಿಂದ ನಿಮಗೆ ಬೇಕಾಗುವ ಅನುದಾನ ತರುವ ಜವಾಬ್ದಾರಿ ನನಗೆ ಬಿಡಿ ಘನತ್ಯಾಜ್ಯ ನಿರ್ವಹಣೆಯನ್ನು ವೈಜ್ಞಾನಿಕ‌ ವಿಲೇವಾರಿ ಹೇಗೆ ಮಾಡಬೇಕು ಎನ್ನುವ ಬಗ್ಗೆ ನೀವು ನಿಮ್ಮದೇ ಆದ ಪ್ಲಾನ್ ಹಾಕಿಕೊಳ್ಳಿ. ಘನ ತ್ಯಾಜ್ಯ ನಿರ್ವಹಣೆಯನ್ನು ನೀವು ಪ್ರಮುಖ ವಿಷಯವನ್ನಾಗಿ ತೆಗೆದುಕೊಳ್ಳದೇ ಹೋದರೆ ಗ್ರಾಮೀಣ ಭಾಗಗಳಲ್ಲಿ ಸ್ವಚ್ಛತೆ ಮರಿಚೀಕೆಯಾಗುತ್ತದೆ ಎಂದರು.

ರಾಜ್ಯದಲ್ಲಿ ಈ ಸಲ ಗ್ರಾಮಪಂಚಾಯತಿ ಅಡಿಯಲ್ಲಿ ರೂ 1,397 ಕೋಟಿ ತೆರಿಗೆ ಸಂಗ್ರಹವಾಗಿದೆ. ಇದೂ ಕೂಡಾ‌ ನಿಮ್ಮಿಂದ ಸಾಧ್ಯವಾಗಿದೆ. ಮುಂದಿನ ಸಲ ಇದು ರೂ 2,000 ಕೋಟಿಗೆ ತೆಗೆದುಕೊಂಡು ಹೋಗಬಹುದು. ನೀವು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಕಾಯಿದೆ ಹಾಗೂ ಅದರ ಅನುಕೂಲಗಳ ಬಗ್ಗೆ ಅಧ್ಯಯನ ಮಾಡಿ ಜನರಿಗೆ ಅನುಕೂಲವಾಗುವಂತ ಕೆಲಸ ಮಾಡಿ. ಕುಡಿಯುವ ನೀರು, ನೈರ್ಮಲ್ಯ, ಸ್ವಚ್ಛತೆ, ಶೌಚಾಲಯ, ಈ ಮುಂತಾದ ವಿಷಯಗಳ ಬಗ್ಗೆ ಅತ್ಯಂತ ಹೆಚ್ಚಿನ ಆದ್ಯತೆ ನೀಡಿ ಗ್ರಾಮೀಣ ಭಾಗಗಳ ಅಭಿವೃದ್ದಿಗೆ ಹೆಚ್ಚಿನ ಶ್ರಮವಹಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಮೇವಿನ ಕೊರತೆ ಇಲ್ಲ ಎಂದು ಹೇಳಿದ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿಲ್ಲೆಯಲ್ಲಿ ಏರುತ್ತಿರುವ ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರು, ಮಹಿಳೆಯರು, ಗರ್ಭಿಣಿಯರು, ವೃದ್ದರು ಹಾಗೂ ಮಕ್ಕಳು ಅನುಸರಿಸಬೇಕಾಗುವು ಅಗತ್ಯ ಕ್ರಮಗಳ ಬಗ್ಗೆ ಅಧಿಕಾರಿಗಳ ಮೂಲಕ ಈಗಾಗಲೇ ಅರಿವು ಮೂಡಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಎಂ ಎಲ್ ಎ ಎಂ ವೈ. ಪಾಟೀಲ್, ಅಲ್ಲಮಪ್ರಭು, ಅವಿನಾಶ್ ಜಾಧವ್, ಕನಿಜ್ ಫಾತೀಮಾ, ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಸಿಒಇ ಭಂವರ್ ಸಿಂಗ್ ಮೀನಾ, ಪೊಲೀಸ್ ಕಮೀಷನರ್ ಶರಣಪ್ಪ, ಎಸ್ ಪಿ ಅಡ್ಡೂರು ಶ್ರೀನಿವಾಸಲು ಸೇರಿದಂತೆ ಅಧಿಕಾರಿಗಳು ಇದ್ದರು.


Share

You cannot copy content of this page