ಬೆಂಗಳೂರು: ಉದ್ಯಮ ಹಾಗೂ ರಾಜ್ಯ ಸರ್ಕಾರದ ನಡುವಣ ಸಹಯೋಗ ಹೆಚ್ಚಿಸಿ, ಭವಿಷ್ಯದ ಅಗತ್ಯಗಳಿಗೆ ಕುಶಲ ಮಾನವ ಸಂಪನ್ಮೂಲದ ಸಮರ್ಥ ಬಳಕೆ, ನವೋದ್ಯಮಗಳ ನೆರವು ಹಾಗೂ ತಂತ್ರಜ್ಞಾನ ಆಧಾರಿತ ಬೆಳವಣಿಗೆಯ ಮೂಲಕ ರಾಜ್ಯದಲ್ಲಿನ ಜಾಗತಿಕ ಸಾಮರ್ಥ್ಯ ಕೇಂದ್ರಗಳ ( ಜಿಸಿಸಿ) ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ರಾಜ್ಯ ಸರ್ಕಾರದ ಬದ್ಧತೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪುನರುಚ್ಚರಿಸಿದ್ದಾರೆ.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಏರ್ಪಡಿಸಿದ್ದ ‘ಕ್ಯಾಟಲಿಸ್ಟ್ ಕನೆಕ್ಟ್’ ಕಾರ್ಯಕ್ರಮದಲ್ಲಿ 225ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) ಪ್ರಮುಖರ ಜೊತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ʼಪ್ರತಿಭಾವಂತ ಮಾನವ ಸಂಪನ್ಮೂಲವೇ ಕರ್ನಾಟಕದ ಅತಿದೊಡ್ಡ ಶಕ್ತಿಯಾಗಿದೆ. ಉದ್ಯಮದ ಅಗತ್ಯಗಳು ನಿರಂತರವಾಗಿ ಬದಲಾಗುತ್ತಿರುವ ಹಿನ್ನೆಲೆಯಲ್ಲಿ, ನಾವು ಹೊಸ ಕೌಶಲಗಳನ್ನು ನಿರಂತರವಾಗಿ ಬೆಳೆಸುವುದರ ಜೊತೆಗೆ, ನಮ್ಮ ಕಾರ್ಯಕ್ರಮಗಳನ್ನು ಜಾಗತಿಕ ಉದ್ಯಮದ ನಿರೀಕ್ಷೆಗಳಿಗೆ ಹೊಂದುವಂತೆ ರೂಪಿಸಬೇಕಾಗಿದೆ. ರಾಜ್ಯದ ಕೈಗಾರಿಕೆ – ಆರ್ಥಿಕತೆಯ ಮುಂದಿನ ಹಂತ ರೂಪಿಸುವಲ್ಲಿ ಜಾಗತಿಕ ಸಾಮರ್ಥ್ಯ ಕೇಂದ್ರಗಳು ನಮ್ಮ ಪಾಲುದಾರರಾಗಬೇಕು ಎಂಬುದು ರಾಜ್ಯ ಸರ್ಕಾರದ ನಿರೀಕ್ಷೆಯಾಗಿದೆ.
ಪ್ರವರ್ಧಮಾನಕ್ಕೆ ಬರುತ್ತಿರುವ ರಾಜ್ಯದ ಇತರ ನಗರಗಳಲ್ಲಿ ಕೈಗೆಟುಕುವ ದರದಲ್ಲಿ ಕಚೇರಿ ಮೂಲಸೌಕರ್ಯ ಒದಗಿಸಿ, ಜಿಸಿಸಿ ಬೆಳವಣಿಗೆಗೆ ಅಗತ್ಯವಾದ ಪೂರಕ ವ್ಯವಸ್ಥೆ ರೂಪಿಸಲು ಆದ್ಯತೆ ನೀಡಲಾಗುವುದುʼ ಎಂದೂ ಮುಖ್ಯಮಂತ್ರಿ ಹೇಳಿದ್ದಾರೆ.
ಜಿಸಿಸಿ ವಿಷನ್ ಗ್ರೂಪ್‌ನಡಿ ವಲಯವಾರು ಕಾರ್ಯಪಡೆಗಳ ರಚನೆ:
ಜಿಸಿಸಿ ವಿಷನ್ ಗ್ರೂಪ್‌ನಡಿ ವಲಯ-ನಿರ್ದಿಷ್ಟ ಕಾರ್ಯಪಡೆಗಳನ್ನು ರಚಿಸಲು ರಾಜ್ಯ ಸರ್ಕಾರ ನಿರ್ಧರಿಸಿರುವುದು ಈ ಸಂವಾದದ ಪ್ರಮುಖ ಫಲಶ್ರುತಿಯಾಗಿದೆ.
ಉದ್ಯಮದ ಮುಖಂಡರ ಸಲಹೆ ಆಧರಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ಈ ಕಾರ್ಯಪಡೆಗಳು ಸೈಬರ್ ಸುರಕ್ಷತೆ, ಬ್ಯಾಂಕಿಂಗ್-ಹಣಕಾಸು ಸೇವೆಗಳು ಮತ್ತು ವಿಮೆ (ಬಿಎಫ್‌ಎಸ್‌ಐ), ರಿಟೇಲ್ ವ್ಯಾಪಾರ ಸೇರಿದಂತೆ ಪ್ರಮುಖ ವಲಯಗಳ ಮೇಲೆ ಗಮನ ಕೇಂದ್ರೀಕರಿಸಲಿದ್ದು, ಪ್ರವರ್ಧಮಾನಕ್ಕೆ ಬರುತ್ತಿರುವ ಅವಕಾಶಗಳು, ಸವಾಲುಗಳು ಹಾಗೂ ಅಗತ್ಯ ನೀತಿ ಕ್ರಮಗಳನ್ನು ಸರ್ಕಾರ ಮತ್ತು ಉದ್ಯಮ ವಲಯ ಜಂಟಿಯಾಗಿ ಗುರುತಿಸಲು ವೇದಿಕೆ ಒದಗಿಸಲಿವೆ.
ʼಮುಂದಿನ ಎರಡು ವಾರಗಳಲ್ಲಿ ಈ ಕಾರ್ಯಪಡೆಗಳನ್ನು ಕಾರ್ಯರೂಪಕ್ಕೆ ತರಲು ಸರ್ಕಾರವು ಜಿಸಿಸಿ ವಿಷನ್ ಗ್ರೂಪ್ ಜೊತೆಗೆ ಸಮನ್ವಯ ಸಾಧಿಸಲಿದೆ. ವಲಯವಾರು ಕಾರ್ಯಪಡೆಗಳು ಉದ್ಯಮದ ಜೊತೆಗಿನ ಸಹಯೋಗ ಹೆಚ್ಚಿಸುವುದರ ಜೊತೆಗೆ, ಸರ್ಕಾರ ಮತ್ತು ಜಿಸಿಸಿ-ಗಳು ಒಟ್ಟಾಗಿ ಕಾರ್ಯನಿರ್ವಹಿಸಬಹುದಾದ ಕ್ಷೇತ್ರಗಳನ್ನು ಗುರುತಿಸಲು ಸಹಕಾರಿಯಾಗಲಿವೆ” ಎಂದು ಗೃಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್ ಎಂ. ಖರ್ಗೆ ಅವರು ಹೇಳಿದ್ದಾರೆ.
ಕಾರ್ಪೊರೇಟ್‌ಗಳಲ್ಲಿ ಬಳಸಿದ ಲ್ಯಾಪ್‌ಟಾಪ್‌ಗಳ ಮರುಬಳಕೆ ಚಿಂತನೆಗೆ ಸಮ್ಮತಿ:
ಕಾರ್ಪೊರೇಟ್‌ಗಳಲ್ಲಿ ಬಳಸಿದ ಲ್ಯಾಪ್‌ಟಾಪ್, ಕಂಪ್ಯೂಟರ್ ಮತ್ತು ಇತರ ಬಳಸಬಹುದಾದ ಐಟಿ ಸಾಧನ – ಸಲಕರಣೆಗಳನ್ನು ರಾಜ್ಯದಾದ್ಯಂತ ಗ್ರಾಮೀಣ ಶಾಲೆಗಳು ಮತ್ತು ಸ್ಥಳೀಯ ಸರ್ಕಾರಿ ಸಂಸ್ಥೆಗಳಲ್ಲಿ ಮರು ಬಳಕೆ ಮಾಡಲು ವ್ಯವಸ್ಥಿತ ಕಾರ್ಯಕ್ರಮ ರೂಪಿಸಲು ಸರ್ಕಾರ ಮುಂದಾಗಿರುವುದು ಈ ಸಂವಾದ ಕಾರ್ಯಕ್ರಮದ ಇನ್ನೊಂದು ಪ್ರಮುಖ ನಿರ್ಧಾರವಾಗಿದೆ.
ಫಿಡೆಲಿಟಿ ಮತ್ತು ಸರ್ಕಾರದ ಸಹಭಾಗಿತ್ವದಲ್ಲಿ ಈಗಾಗಲೇ 1,000 ಲ್ಯಾಪ್‌ಟಾಪ್‌ಗಳನ್ನು ಗ್ರಾಮೀಣ ಶಾಲೆಗಳಿಗೆ ಮರುಹಂಚಿಕೆ ಮಾಡಿರುವ ಅನುಭವ ಹಾಗೂ ಉತ್ತಮ ಫಲಿತಾಂಶದ ಆಧಾರದ ಮೇಲೆ, ಈ ಉಪಕ್ರಮವನ್ನು ರಾಜ್ಯವ್ಯಾಪಿಯಾಗಿ ವಿಸ್ತರಿಸುವ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ. ಐಟಿ ಉದ್ಯೋಗಿಗಳು ಮೂರು ವರ್ಷಗಳವರೆಗೆ ಬಳಸಿ ಕಂಪನಿಗೆ ಹಿಂತಿರುಗಿರುವ ಲ್ಯಾಪ್‌ಟಾಪ್‌ಗಳನ್ನು ಗ್ರಾಮೀಣ ಭಾಗದ ಶಾಲೆಗಳು ಮತ್ತು ಸ್ಥಳೀಯ ಆಡಳಿತದಲ್ಲಿ ಬಳಸಲು ಒದಗಿಸುವುದು ಈ ಉಪಕ್ರಮದ ಉದ್ದೇಶವಾಗಿದೆ.
ಈ ಪ್ರಸ್ತಾವನೆ ಸ್ವಾಗತಿಸಿದ ಸಚಿವ ಪ್ರಿಯಾಂಕ್ ಎಂ. ಖರ್ಗೆ ಅವರು, ʼಕಾರ್ಪೊರೇಟ್‌ಗಳಲ್ಲಿ ಬಳಸಿದ ಐಟಿ ಸಾಧನಗಳ ಮರುಬಳಕೆಗೆ ಉದ್ಯಮದ ಜೊತೆ ಕೈಜೋಡಿಸಲು ಸರ್ಕಾರ ಸಿದ್ಧವಿದೆ. ಗ್ರಾಮೀಣ ಶಾಲೆಗಳು ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ತಂತ್ರಜ್ಞಾನ ಸಾಧನಗಳ ಅಗತ್ಯ ಹೆಚ್ಚಿದ್ದು, ಇಂತಹ ಉಪಕ್ರಮಗಳು ಸ್ಥಳೀಯ ಆಡಳಿತವನ್ನು ಮತ್ತಷ್ಟು ಬಲಪಡಿಸಲಿವೆ. ಗ್ರಾಮ ಲೆಕ್ಕಿಗರಿಗೆ ಇಂತಹ ಲ್ಯಾಪ್‌ಟಾಪ್‌ಗಳನ್ನು ನೀಡಿದ್ದರಿಂದ ಗ್ರಾಮೀಣ ಭಾಗದಲ್ಲಿ ತೆರಿಗೆ ಸಂಗ್ರಹವು ₹ 450 ಕೋಟಿಗಳಿಂದ ₹ 1,500 ಕೋಟಿಗೆ ಹೆಚ್ಚಳಗೊಂಡಿದೆʼ ಎಂದರು.
ಕ್ಯಾಟಲಿಸ್ಟ್ ಕನೆಕ್ಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಸಿಸಿ ಪ್ರಮುಖರಿಂದ ಈ ಪ್ರಸ್ತಾವನೆಗೆ ಉತ್ತಮ ಸ್ಪಂದನೆ ದೊರೆತಿದ್ದು, ಭಾಗವಹಿಸಿದ್ದವರಲ್ಲಿ ಶೇಕಡ 60ರಷ್ಟು ಮಂದಿ ಈ ಉಪಕ್ರಮದಲ್ಲಿ ಪಾಲ್ಗೊಳ್ಳಲು ಆಸಕ್ತಿ ವ್ಯಕ್ತಪಡಿಸಿದ್ದಾರೆ.
ʼಕಾರ್ಪೊರೇಟ್‌ಗಳಲ್ಲಿ ಬಳಸಿದ ಲ್ಯಾಪ್‌ಟಾಪ್, ಕಂಪ್ಯೂಟರ್ ಮತ್ತು ಇತರ ಬಳಸಬಹುದಾದ ಐಟಿ ಸಾಧನ – ಸಲಕರಣೆಗಳನ್ನು ಗ್ರಾಮೀಣ ಶಾಲೆಗಳು ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಮರುಬಳಕೆ ಮಾಡಲು ಉದ್ಯಮದ ಜೊತೆ ಕೈಜೋಡಿಸಲು ಸರ್ಕಾರ ಸಿದ್ಧವಿದೆ ಎಂದು ಗೃಹ ಐಟಿ-ಬಿಟಿ, ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
