ನವದೆಹಲಿ: ಭಾರತದ ಶುದ್ಧ ಇಂಧನ ಪರಿವರ್ತನೆ ವೇಗ ಪಡೆದುಕೊಳ್ಳುತ್ತಿದ್ದು, ಒಂದೇ ವರ್ಷದಲ್ಲಿ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯ 297 Gwಗೆ ಏರಿದೆ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ನವೀಕರಿಸಬಹುದಾದ ಇಂಧನದಲ್ಲಿ ಭಾರತ ಜಾಗತಿಕವಾಗಿ ಅಗ್ರ ಪಂಕ್ತಿಯಲ್ಲಿದ್ದು, ಇದೀಗ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವನ್ನು 297.36 gwಗೆ ಹೆಚ್ಚಿಸಿಕೊಂಡಿದೆ. ಕಳೆದ ವರ್ಷ ಜೂನ್ ನಲ್ಲಿ 242.78 gw ಇದ್ದದ್ದು, 2026ರ ಜೂನ್ ವೇಳೆಗೆ 55 gw ಉತ್ಪಾದನಾ ಸಾಮರ್ಥ್ಯ ವೃದ್ಧಿಸಿದೆ ಎಂದು ಹೇಳಿದ್ದಾರೆ.
ಸ್ಥಾಪಿತ ಸೌರಶಕ್ತಿ ಸಾಮರ್ಥ್ಯದಲ್ಲೂ ಭಾರತ ಮಹತ್ವದ ಸಾಧನೆಗೈಯುತ್ತಿದೆ. ಒಂದೇ ವರ್ಷದಲ್ಲಿ 162.15 Gw ದಾಖಲಿಸಿದೆ. ಪಿಎಂ ಸೂರ್ಯಘರ್, ಪಿಎಂ ಕುಸುಮ್ ಯೋಜನೆ ಸೇರಿದಂತೆ ಸೌರಶಕ್ತಿ ಉತ್ಪಾದನೆಯಲ್ಲಿ ಮಹತ್ವದ ಮೈಲುಗಲ್ಲಿರಿಸಿದೆ. 2025-26ರ ಜೂನ್ ನಡುವಿನ ಒಂದೇ ವರ್ಷದಲ್ಲಿ 46 gw ಗೂ ಅಧಿಕ ಹೆಚ್ಚಳ ಕಂಡಿದೆ ಎಂದಿದ್ದಾರೆ.
2025ರ ಜೂನ್ ವೇಳೆಗೆ 116.25 gw ಇದ್ದ ಸೌರಶಕ್ತಿ ಸಾಮರ್ಥ್ಯ ಇದೀಗ 162 gw ದಾಟಿದೆ. ಅಂತೆಯೇ ಪವನ ವಿದ್ಯುತ್ ಸಾಮರ್ಥ್ಯವೂ ಅಧಿಕಗೊಂಡಿದೆ. 57.44gw ಗೆ ಹೆಚ್ಚಿದೆ. ಈ ಎಲ್ಲಾ ಮೂಲಗಳಿಂದ ಭಾರತದ ಶುದ್ಧ ಇಂಧನ ಪರಿವರ್ತನೆಯು ಅಭೂತಪೂರ್ವ ವೇಗ ಪಡೆಯುತ್ತಿದೆ ಎಂದು ಜೋಶಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ, ಸಮರ್ಥ ನಾಯಕತ್ವದಲ್ಲಿ ಮುನ್ನಡೆಗಿರುವ ಭಾರತ ಇಂಧನ ವಲಯದಲ್ಲೂ ಆತ್ಮನಿರ್ಭರವಾಗುವತ್ತ ದೃಢ ಹೆಜ್ಜೆಯಿರಿಸಿದೆ. ಮುಂದಿನ ಪೀಳಿಗೆಗೆ ಹಸಿರು ಮತ್ತು ಸುಸ್ಥಿರ, ಸುಭದ್ರ ಭಾರತವನ್ನು ಕೊಡಮಾಡಲಿದ್ದಾರೆ ಎಂದು ಜೋಶಿ ಪ್ರತಿಪಾದಿಸಿದ್ದಾರೆ.
