ಬೆಂಗಳೂರು:ಜಿಬಿಎ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಜೊತೆಗೆ ಮಳೆಗಾಲಕ್ಕೂ ಮುನ್ನ ಕಾಮಗಾರಿಗಳನ್ನು ಪೂರ್ಣಗೊಳಿಸಲು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾದ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಬಿಎ ವ್ಯಾಪ್ತಿಯಲ್ಲಿ ಪೂರ್ವ ಮುಂಗಾರು ಮಳೆ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ನಗರದಲ್ಲಿರುವ ಹಲವು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಅವರು ಮಾತನಾಡಿದರು.
ಕೇಂದ್ರೀಯ ವಿಹಾರ್ ಹಾಗೂ ಕೋಗಿಲು ಜಂಕ್ಷನ್ ಪರಿಶೀಲನೆ:
ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್ ಪ್ರದೇಶ ಹಾಗೂ ಕೋಗಿಲು ಜಂಕ್ಷನ್‌ನಲ್ಲಿ ಪ್ರವಾಹ ತಡೆಗಟ್ಟುವ ನಿಟ್ಟಿನಲ್ಲಿ ಯಲಹಂಕ ಕೆರೆಯ ವೆಂಕಟಾಲ ಕೆರೆ ಕೋಡಿಯಿಂದ ಜಕ್ಕೂರು ಕೆರೆಯವರೆಗೆ 2.7 ಕಿ.ಮೀ ಉದ್ದದ 35 ಮೀ. ಅಗಲದ ರಾಜಕಾಲುವೆ ಹಾಗೂ ಎರಡೂ ಬದಿಯಲ್ಲಿ 30 ಅಡಿ ರಸ್ತೆ ನಿರ್ಮಾಣ ಕಾರ್ಯಕ್ಕೆ ಅಧಿಸೂಚನೆ ಹೊರಡಿಸಲಾಗಿದೆ.
ಮೊದಲ ಹಂತದಲ್ಲಿ 1.5 ಕಿ.ಮೀ ಉದ್ದದ ಆರ್‌ಸಿಸಿ ತಡೆಗೋಡೆ ಸಹಿತ ರಾಜಕಾಲುವೆ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಭಾಗದಲ್ಲಿ ಮಳೆ ನೀರು ಸರಾಗವಾಗಿ ಹರಿಯುವಂತೆ ಕಚ್ಚಾ ಡ್ರೈನ್ ನಿರ್ಮಿಸಲಾಗಿದೆ. ಈ ಮಳೆಗಾಲದಲ್ಲಿ ಪ್ರವಾಹ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದರು.
ಯಲಹಂಕ ಕೆರೆ ಬಳಿ ನಡೆಯುತ್ತಿರುವ ಕಾಮಗಾರಿಯನ್ನು ಡ್ರೋನ್ ಮೂಲಕ ದೃಶ್ಯಾವಳಿ ಸೆರೆಹಿಡಿದು ವಿವರಣೆ ನೀಡಲು ಸೂಚಿಸಿದರು. ಜೊತೆಗೆ ಕೋಗಿಲು ಜಂಕ್ಷನ್ ಮೇಲ್ಸೇತುವೆ ಕೆಳಭಾಗದಲ್ಲಿರುವ ಮಳೆ ನೀರುಗಾಲುವೆಯನ್ನು ಪರಿಶೀಲಿಸಿ, ಅದಕ್ಕೆ ಸರಿಯಾದ ಗ್ರಿಲ್ ಅಳವಡಿಸಿ, ಹೂಳೆತ್ತಿ ಸ್ವಚ್ಛವಾಗಿಡಲು ಸೂಚಿಸಿದರು. ಮಳೆಗಾಲದ ವೇಳೆ ಈ ಸ್ಥಳದಲ್ಲಿ ಸಕ್ರಿಯವಾಗಿ ಒಂದು ತಂಡವನ್ನು ನಿಯೋಜಿಸುವಂತೆ ನಿರ್ದೇಶನ ನೀಡಿದರು.
ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್ ಪ್ರದೇಶದಲ್ಲಿ ಈ ಬಾರಿ ಯಾವುದೇ ತೊಂದರೆ ಉಂಟಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಳೆ ನೀರನ್ನು ಯಲಹಂಕ ಕೆರೆಯಿಂದ ಜಕ್ಕೂರು ಕೆರೆಗೆ ಹರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಕಾರ್ಯಪಾಲಕ ಅಭಿಯಂತರರು ಮಾಹಿತಿ ನೀಡಿದರು.
ಟಾಟಾ ನಗರ ಪ್ರವಾಹ ಪೀಡಿತ ಪ್ರದೇಶ ಪರಿಶೀಲನೆ:
ಟಾಟಾನಗರದಲ್ಲಿ 2024ರಲ್ಲಿ ಹೆಚ್ಚಿನ ಮಳೆಯಿಂದ ಉಂಟಾದ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿದರು. ಈ ಭಾಗದಲ್ಲಿ ದೊಡ್ಡಬೊಮ್ಮಸಂದ್ರ ಕೆರೆಯಿಂದ ಟಾಟಾನಗರವರೆಗೆ 900 ಮೀ. ಉದ್ದದ 20 ಅಡಿ ಅಗಲದ ಮಳೆನೀರುಗಾಲುವೆ ನಿರ್ಮಾಣ ಮಾಡಲಾಗುತ್ತಿದ್ದು, ತಡೆಗೋಡೆಯನ್ನು ಎತ್ತರಿಸಲಾಗುತ್ತಿದೆ.
ಎಲ್ಲಾ ಕಾಲುವೆಗಳಲ್ಲಿ ಹೂಳೆತ್ತುವ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು. ಪ್ರವಾಹ ತಡೆಗಟ್ಟಲು ಔಟ್‌ಲೆಟ್‌ಗಳ ಅಗಲೀಕರಣ ಮತ್ತು ನಿರ್ವಹಣೆ ಮಾಡುವ ಜೊತೆಗೆ 3–4 ಮಿಸ್ಸಿಂಗ್ ಲಿಂಕ್‌ಗಳನ್ನು 15 ದಿನಗಳಲ್ಲಿ ಪೂರ್ಣಗೊಳಿಸಲು ನಿರ್ದೇಶನ ನೀಡಿದರು.
ಒಳಚರಂಡಿಯ ಕೊಳಚೆ ನೀರು ಮಳೆನೀರುಗಾಲುವೆಗಳಿಗೆ ಸೇರುವುದನ್ನು ತಡೆಯಲು ಕ್ರಮವಹಿಸಬೇಕು. ಟಾಟಾನಗರ ರಾಯಲ್ ಮಾರ್ಟ್ ಬಳಿಯ ಮಳೆನೀರುಗಾಲುವೆ ಕಿರಿದಾಗಿರುವುದರಿಂದ ಪಕ್ಕದ ಜಾಗವನ್ನು ವಶಪಡಿಸಿಕೊಂಡು ಅಗಲೀಕರಣ ಮಾಡುವಂತೆ ಸೂಚಿಸಿದರು.
ಹೆಬ್ಬಾಳ ಕೆರೆ ವೆಟ್‌ಲ್ಯಾಂಡ್ ಪರಿಶೀಲನೆ:
192 ಎಕರೆ ವ್ಯಾಪ್ತಿಯ ಹೆಬ್ಬಾಳ ಕೆರೆಯಲ್ಲಿ 15.90 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ. ಭದ್ರಪ್ಪ ಬಡಾವಣೆಯಲ್ಲಿ ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರವು ಸುಮಾರು 16 ಎಕರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಕೊಳಗಳನ್ನು ನಿರ್ಮಿಸಿತ್ತು. ಈ ಕೊಳಗಳನ್ನು ತೆರವುಗೊಳಿಸಿದ ಬಳಿಕ ವೆಟ್‌ಲ್ಯಾಂಡ್ ಹಾಗೂ ಇನ್ ಲೆಟ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಅದನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಿದರು.
ಹೆಬ್ಬಾಳ ಜಂಕ್ಷನ್ ಪರಿಶೀಲನೆ:
ಹೆಬ್ಬಾಳ ಜಂಕ್ಷನ್ ಕೆಳಭಾಗದಲ್ಲಿ ಮಳೆನೀರನ್ನು ಕೆರೆಗೆ ಹರಿಸುವ ವ್ಯವಸ್ಥೆ ಮಾಡಲಾಗುತ್ತಿದ್ದು, ವೆಟ್‌ಲ್ಯಾಂಡ್ ಅಭಿವೃದ್ಧಿ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಲು ಸೂಚಿಸಿದರು.
ವಿಮಾನ ನಿಲ್ದಾಣದ ದಿಕ್ಕಿನ ಮುಖ್ಯ ಕ್ಯಾರೇಜ್ ವೇ ಡೌನ್ ರ‍್ಯಾಂಪ್, ಸರ್ವಿಸ್ ರಸ್ತೆಗಳು ಹಾಗೂ ಬಸ್ ನಿಲ್ದಾಣದ ಬಳಿ ಸೇರಿದಂತೆ 4 ಜಲಾವೃತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲಾಗಿದೆ. ತುಮಕೂರು ರಸ್ತೆ ಲೂಪ್‌ನಿಂದ ಡೌನ್ ರ‍್ಯಾಂಪ್ ಭಾಗದ ಕಾಮಗಾರಿ ಪ್ರಗತಿಯಲ್ಲಿದ್ದು, 15 ದಿನಗಳಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಿದರು.
ಮಾನ್ಯತಾ ಟೆಕ್ ಪಾರ್ಕ್ ಪರಿಶೀಲನೆ:
ಮಾನ್ಯತಾ ಟೆಕ್ ಪಾರ್ಕ್ ಹಾಗೂ ವೀರಣ್ಣಪಾಳ್ಯ ಹೊರ ವರ್ತು ರಸ್ತೆಯಲ್ಲಿ ಜಲಾವೃತ ಸಮಸ್ಯೆ ದೀರ್ಘಕಾಲದಿಂದ ಇದೆ. ಕೆಲವು ಜಾಗಗಳು ಖಾಸಗಿ ಮಾಲೀಕತ್ವದಲ್ಲಿರುವುದು ಕಂಡುಬಂದರೂ, ಅವುಗಳನ್ನು ಪಡೆದು ಖಾಸಗಿ ವೆಚ್ಚದಲ್ಲೇ ಮಳೆನೀರುಗಾಲುವೆ ನಿರ್ಮಾಣ ಮಾಡಲಾಗುತ್ತಿದೆ.
ವೀರಣ್ಣಪಾಳ್ಯದಿಂದ ಹೆಬ್ಬಾಳ ವ್ಯಾಲಿವರೆಗೆ 1.2 ಕಿ.ಮೀ ಉದ್ದದ ಎರಡು ಮಾನವ ನಿರ್ಮಿತ ಕಾಲುವೆಗಳ ಕಾಮಗಾರಿ ಪ್ರಗತಿಯಲ್ಲಿದ್ದು, 800 ಮೀ. ಆರ್‌ಸಿಸಿ ತಡೆಗೋಡೆ ನಿರ್ಮಿಸಲಾಗಿದೆ. ಉಳಿದ ಭಾಗದಲ್ಲೂ ಆರ್‌ಸಿಸಿ ಕಾಮಗಾರಿ ಕೈಗೊಳ್ಳಲು ಸೂಚಿಸಿದರು.
ನಾಗವಾರ ಜಂಕ್ಷನ್ ಪರಿಶೀಲನೆ:
ನಾಗವಾರ ಜಂಕ್ಷನ್‌ನಲ್ಲಿ ಗೇಲ್ ಗ್ಯಾಸ್ ಲೈನ್ ಸ್ಥಳಾಂತರಗೊಂಡಿದ್ದು, ಕಲ್ವರ್ಟ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಜಲಮಂಡಳಿಯ 700 ಮೀ. ಕಾಮಗಾರಿಯಲ್ಲಿ 70 ಮೀ. ಬಾಕಿಯಿದ್ದು, ಅದನ್ನು 15 ದಿನಗಳಲ್ಲಿ ಪೂರ್ಣಗೊಳಿಸಬೇಕು. ನಂತರ ಜಂಕ್ಷನ್ ಭಾಗಕ್ಕೆ 15 ದಿನಗಳಲ್ಲಿ ಕಾಂಕ್ರೀಟ್ ಹಾಕಿ ಯಾವುದೇ ರೀತಿಯ ಪ್ರವಾಹ ಆಗದಂತೆ ಕ್ರಮವಹಿಸಲು ಸೂಚಿಸಿದರು.
ಹೆಚ್.ಬಿ.ಆರ್ ಲೇಔಟ್ ಪರಿಶೀಲನೆ:
ಹೆಚ್.ಬಿ.ಆರ್ ಲೇಔಟ್‌ನಲ್ಲಿ ಜಲಮಂಡಳಿ ವತಿಯಿಂದ ಇನ್‌ಟೇಕ್ ವೆಲ್ ನಿರ್ಮಿಸಿ ನೀರನ್ನು ಹೆಬ್ಬಾಳ ಕಡೆಗೆ ಹರಿಸುವ ಯೋಜನೆ ಕೈಗೊಳ್ಳಲಾಗಿದೆ. ಕಲ್ಲಿನ ಅಡಚಣೆಯಿಂದ ಕಾಮಗಾರಿ ವಿಳಂಬವಾಗಿದ್ದು, ಅಕ್ಟೋಬರ್ ಅಂತ್ಯದೊಳಗೆ ಪೂರ್ಣಗೊಳಿಸಲು ಗಡುವು ನೀಡಲಾಗಿದೆ. ತಾತ್ಕಾಲಿಕವಾಗಿ ಪಂಪ್ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ.
ಗೆದ್ದಲಹಳ್ಳಿ ರೈಲ್ವೆ ವೆಂಟ್ ಕಾಮಗಾರಿ ಪರಿಶೀಲನೆ:
ಗೆದ್ದಲಹಳ್ಳಿಯಲ್ಲಿ ಬಾಕ್ಸ್ ಕಲ್ವರ್ಟ್ ಕಾಮಗಾರಿ ಪೂರ್ಣಗೊಂಡಿದ್ದು, ರೈಲ್ವೆ ಅನುಮತಿ ನಂತರ ವಿದ್ಯುತ್ ಲೈನ್ ಸ್ಥಳಾಂತರಿಸಿ ಮೇ 2ರೊಳಗೆ ಮೊದಲ ಹಂತ ಬಾಕ್ಸ್ ಪುಶಿಂಗ್ ಕಾರ್ಯ ಪೂರ್ಣಗೊಳಿಸಲು ಯೋಜಿಸಲಾಗಿದೆ. ಮತ್ತೊಂದು ಭಾಗದ ಬಾಕ್ಸ್ ಪುಶಿಂಗ್ ಅನ್ನು ಮೇ ಅಂತ್ಯದೊಳಗಾಗಿ ಪೂರ್ಣಗೊಳಿಸಲು ಸೂಚಿಸಲಾಗಿದೆ.
ಈ ಕಾಮಗಾರಿ ಪೂರ್ಣಗೊಂಡ ಬಳಿಕ ಹೆಚ್.ಬಿ.ಆರ್ ಪ್ರದೇಶದ ನೀರು ಗೆದ್ದಲಹಳ್ಳಿ ಮೂಲಕ ಹರಿಯುವ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸಾಯಿ ಲೇಔಟ್ ತಗ್ಗು ಪ್ರದೇಶವಾಗಿರುವುದರಿಂದ ತಾತ್ಕಾಲಿಕ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು.
ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಮಾತನಾಡಿ, ಎಲ್ಲಾ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಸಾಧ್ಯವಾಗದ ಪ್ರದೇಶಗಳಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಂಡು ಸಮಸ್ಯೆಗಳನ್ನು ತಪ್ಪಿಸಬೇಕು ಎಂದು ಸೂಚಿಸಿದರು.
ಹೆಬ್ಬಾಳ ಜಂಕ್ಷನ್‌ನಲ್ಲಿ ಪಾದಚಾರಿಗಳಿಗೆ ಸುರಕ್ಷಿತವಾಗಿ ರಸ್ತೆ ದಾಟಲು ವ್ಯವಸ್ಥೆ ಕಲ್ಪಿಸಬೇಕು. ಮೆಟ್ರೋ ಕಾಮಗಾರಿ ಪೂರ್ಣಗೊಂಡ ಪ್ರದೇಶಗಳಲ್ಲಿ ರಸ್ತೆ ಪುನರ್ ಅಭಿವೃದ್ಧಿ ಮಾಡಿ ವಾಹನ ಸಂಚಾರ ಸುಗಮಗೊಳಿಸಲು ಸೂಚಿಸಿದರು.
ಈ ವೇಳೆ ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಡಿ.ಎಸ್, ಜಂಟಿ ಆಯುಕ್ತ ಮೊಹಮ್ಮದ್ ನಯೀಮ್ ಮೊಮಿನ್, ಮುಖ್ಯ ಅಭಿಯಂತರರು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
