ಸಮಗ್ರ ಸುದ್ದಿ

ಅಂಬೇಡ್ಕರರ ಸಂವಿಧಾನ ವೈವಿಧ್ಯಮಯ ಭಾರತದ ಸಮಾನತೆಯ ಸೂತ್ರ – ಪ್ರೊ. ಪುರುಷೋತ್ತಮ ಬಿಳಿಮಲೆ

Share

ಬೆಂಗಳೂರು: ಭಾಷೆ, ಸಂಸ್ಕೃತಿ ಮತ್ತು ಪ್ರಾದೇಶಿಕತೆಗಳ ವೈವಿಧ್ಯತೆಯಿಂದ ಕೂಡಿದ ಭಾರತವನ್ನು ಅಂಬೇಡ್ಕರರ ಸಂವಿಧಾನಕ್ಕಿಂತ ಮುಂಚೆ ಸಮಾನ ನೆಲೆಗಟ್ಟಿನಲ್ಲಿ ಕಟ್ಟಿಕೊಡಲು ಯಾರಿಗೂ ಸಾಧ್ಯವಾಗಿರಲಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಹಯೋಗದಲ್ಲಿ ʻಸಾಮಾಜಿಕ ನ್ಯಾಯ ಪರಿಕಲ್ಪನೆಗೆ ಇಂದಿನ ಮಾಧ್ಯಮಗಳು ಸಂವೇದನಾಶೀಲವಾಗಿವೆಯೇ?ʼ ಎಂಬ ವಿಷಯದ ಕುರಿತು ವಿಶ್ವವಿದ್ಯಾಲಯದ ಅಕಾಡೆಮಿಕ್ ಬ್ಲಾಕ್ ನ ಡಬ್ಲ್ಯುಬಿಸಿ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಚಾರಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವತಃ ಪತ್ರಕರ್ತರಾಗಿ ಸರಿಗಟ್ಟಲಾರದ ಓದುಗರಾಗಿದ್ದ ಅಂಬೇಡ್ಕರ್, ಭಾರತದ ಸಮಾಜೋ ಆರ್ಥಿಕ ಸ್ವಾತಂತ್ರ್ಯದ ನೆಲೆಗಟ್ಟಿನ ಮೇಲೆ ಜಾತಿ, ಧರ್ಮ, ಲಿಂಗ ತಾರತಮ್ಯಗಳಿಗೆ ಆತೀತವಾದ ಸಂವಿಧಾನವೆಂಬ ಸಮಾನ ಸೂತ್ರವೊಂದನ್ನು ಕಟ್ಟಿಕೊಟ್ಟರು. ಎಲ್ಲರೂ ಸಮಾನರು ಎಂಬುದುನ್ನು ಹೇಳುವ ಸಂವಿಧಾನದ ೧೪ನೇ ವಿಧಿ, ಧರ್ಮ, ಜಾತಿ, ಲಿಂಗ ಮತ್ತು ಸ್ಥಳಗಳನ್ನು ಆಧರಿಸಿ ಬೇಧಭಾವ ಮಾಡಬಾರದೆನ್ನುವ 15ನೇ ವಿಧಿ, ಸಮಾನ ಅವಕಾಶಗಳನ್ನು ಕಲ್ಪಿಸಬೇಕೆಂಬ 16ನೇ ವಿಧಿ, ಅಸ್ಪೃಶ್ಯತೆ ಅಪರಾಧ ಎಂದು ಹೇಳುವ 17ನೇ ವಿಧಿ, ಅಲ್ಪಸಂಖ್ಯಾತರ ರಕ್ಷಣೆಗಾಗಿ ಇರುವ 29ನೇ ವಿಧಿಗಳಲ್ಲಿ ಮೇಲಿನ ಆಶಯವನ್ನು ಸ್ಪಷ್ಟವಾಗಿ ಹೇಳುವ ಮೂಲಕ ಸಮಸಮಾಜದ ಭಾರತವನ್ನು ಕಟ್ಟಲು ಬೇಕಾದದ್ದನ್ನು ಖಾತರಿಪಡಿಸಿದರು ಎಂದ ಅವರು, ಈ ಮೇಲಿನ ಅಂಶಗಳನ್ನು ಪಾಲಿಸುವ ನಿಟ್ಟಿನಲ್ಲಿ ನಮ್ಮ ಸಮಾಜದ ಆಗುಹೋಗುಗಗಳನ್ನು ಮಾಧ್ಯಮ ಯಾವ ಮಟ್ಟದಲ್ಲಿ ಪ್ರಾತಿನಿಧಿಕರಿಸುತ್ತದೆ ಎಂಬುದನ್ನು ನೋಡಿದರೆ ಸತ್ಯಾಂಶ ತಿಳಿಯುತ್ತದೆ ಎಂದರು.

ಭಾರತದಲ್ಲಿನ ಅಸಮಾನತೆಯನ್ನು ವ್ಯಾಖ್ಯಾನಿಸಲು ಶಂಭೂಕ ಮತ್ತು ಕರ್ಣರ ಕಥೆಗಳನ್ನು ರೂಪಕಗಳಾಗಿ ನೋಡಬಹುದು. ಆದರೆ ಇದೇ ಭಾಷೆಯನ್ನು ಪ್ರಭುತ್ವಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಉಪಯೋಗಿಸಿಕೊಳ್ಳಲು ಸದಾ ಹವಣಿಸುತ್ತವೆ. ಹಾಗಾಗಿ, ಭಾಷೆ ಮತ್ತು ಪ್ರಾದೇಶಿಕತೆ ಮೂಲಕ ಅಸಮಾನತೆಯನ್ನು ಸೃಷ್ಟಿಸಲಾಯಿತು. ವಾಸ್ತವವಾಗಿ, ಭಾಷೆಯಲ್ಲಿ ಶ್ರೇಣೀಕರಣ ಇಲ್ಲ. ಅದರ ಮೂಲಕ ಲೋಕವನ್ನು ಕಟ್ಟುತ್ತಿರುತ್ತೇವೆ. ಭಾಷೆಯೊಂದರ ಪದಗಳು ಅನುಭವದಂತೆ ವಿರಚನೆಗೊಳ್ಳುತ್ತವೆ. ಈ ನಿಟ್ಟಿನಲ್ಲಿ ನಮ್ಮ ಕಥೆಗಳಿಗೆ ನಾವೇ ಕಿವಿಯಾಗಬೇಕು ಎಂದರು.

ಪ್ರಧಾನ ಭಾಷಣ ಮಾಡಿದ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅವರು, 1927ರಲ್ಲಿ ಮಹಾಡ ಚಳುವಳಿ ಏಕೆ ನಡೆಯಿತೋ ಅದೇ ಕಾರಣಗಳಿಗಾಗಿ ಇಂದಿಗೂ ಹೋರಾಟ ಮಾಡಬೇಕಾಗಿ ಬಂದಿದೆ. ಅಸಮಾನತೆ ಮತ್ತು ಶ್ರೇಣಿಕರಣಗಳು ಇನ್ನೂ ಇರುವುದರಿಂದ ಮತ್ತು ಅಂಬೇಡ್ಕರ್ ಅವರ ವಿಚಾರಗಳನ್ನು ನಿರ್ಲಕ್ಷಿಸಿರುವ ಎರಡು ಕಾರಣಗಳಿಗಾಗಿ ದೇಶದ ಜನತೆ ಕ್ಷಮೆ ಕೋರಬೇಕಾಗಿದೆ ಎಂದ ಅವರು ಸಾಮಾಜಿಕ ನ್ಯಾಯ ಎಂಬ ಮುಚ್ಚಲಾಗಿರುವ ಕಿಟಕಿಯ ಕುರಿತು ಮಾತನಾಡುವುದು ವ್ಯರ್ಥ. ಈ ನಿಟ್ಟಿನಲ್ಲಿ, ಮಾಧ್ಯಮಗಳು ಯಾವಾಗ ಸಂವೇದನಾಶೀಲವಾಗಿದ್ದವು ಎಂದು ಪ್ರಶ್ನಿಸಿದರು.

ಸಾಮಾಜಿಕ ನ್ಯಾಯದ ಹರಿಕಾರ ಅಂಬೇಡ್ಕರ್ ಮತ್ತು ಅವರ ವಿಚಾರಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಭಾರತೀಯರಿಗೆ ಇನ್ನೂ ಸಾಧ್ಯವಾಗಿಲ್ಲ. ಒಂದು ಜನ್ಮಕ್ಕೆ ಓದಲು ಸಾಧ್ಯವಾಗದಷ್ಟು ಅವರ ಅಪ್ರಕಟಿತ ಸಾವಿರಾರು ಪುಟಗಳ ಬರೆಹ ಇನ್ನೂ ಬಹಳ ಜನರನ್ನು ತಲುಪಬೇಕಾಗಿದ್ದು ಇದಕ್ಕೆ ಭೌದ್ಧಿಕ ದಾರಿದ್ರ್ಯವೂ ಕಾರಣವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿದ್ದ ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಬಿ. ರಮೇಶ್ ಅವರು ಅಂಬೇಡ್ಕರ್ ಅವರ ವಿಚಾರಗಳು ಎಂದೆಂದಿಗೂ ಪ್ರಸ್ತುತ ಎಂದರು. ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯೆಷಾ ಖಾನಂ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಸಹನಾ ಎಂ. ಅವರು ಸ್ವಾಗತಿಸಿದರು.


Share

You cannot copy content of this page