ಸಮಗ್ರ ಸುದ್ದಿ

ರಾಜಕಾಲುವೆಗಳಲ್ಲಿ ಹೂಳೆತ್ತುವ ಮೊದಲು ಮತ್ತು ನಂತರ ಡ್ರೋನ್ ಮೂಲಕ ಸಮೀಕ್ಷೆ ನಡೆಸಿ ವರದಿ ನೀಡಿ : ತುಷಾರ್ ಗಿರಿನಾಥ್

Share

ಬೆಂಗಳೂರು:ಜಿಬಿಎ ವ್ಯಾಪ್ತಿಯಲ್ಲಿ ರಾಜಕಾಲುವೆಗಳಲ್ಲಿ ಹೂಳೆತ್ತುವ ಮೊದಲು & ನಂತರ ಡ್ರೋನ್ ಮೂಲಕ ಸಮೀಕ್ಷೆ ನಡೆಸಿ ವರದಿ ನೀಡಲು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾದ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಬಿಎ ವ್ಯಾಪ್ತಿಯಲ್ಲಿ ಪೂರ್ವ ಮುಂಗಾರು ಮಳೆ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಜಿಬಿಎ ಕೇಂದ್ರ ಕಚೇರಿಯಲ್ಲಿ ಇಂದು ನಡೆದ ಪೂರ್ವ ಸಿದ್ಧತಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿನ ಪ್ರಮುಖ ರಾಜಕಾಲುವೆಗಳಲ್ಲಿ ಆದ್ಯತೆ ಮೇರೆಗೆ ಹೂಳೆತ್ತುವ ಕೆಲಸ ಕೈಗೊಳ್ಳಲು ನಿರ್ದೇಶನ ನೀಡಿದರು.

ಡ್ರೋನ್ ಮೂಲಕ ದೃಶ್ಯಾವಳಿ ಮಾಡುವ ವೇಳೆ ಎಲ್ಲೆಲ್ಲಿ ಚೋಕಿಂಗ್ ಪಾಯಿಂಟ್ಸ್ ಬರುತ್ತದೆ ಎಂಬುದನ್ನು ಗುರುತಿಸಬೇಕು. ಬಳಿಕ ಗುರುತಿಸಿರುವ ಚೋಕಿಂಗ್ ಪಾಯಿಂಟ್ಸ್ ಗಳಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲು ಸೂಚನೆ ನೀಡಿದರು.

ಆಯಾ ನಗರ ಪಾಲಿಕೆಗಳ ಹಿರಿಯ ಅಧಿಕಾರಿಗಳು ಹಾಗೂ ಸಂಚಾರ ಪೊಲೀಸ್ ಅಧಿಕಾರಿಳು ಪ್ರವಾಹ ಪೀಡಿತ ಪ್ರದೇಶಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚಿಸಿದರು. ರಸ್ತೆ ಬದಿಯ ಸೈಡ್ ಡ್ರೇನ್‌ಗಳಲ್ಲಿ ಹೂಳೆತ್ತಿ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ರಸ್ತೆ ಮೇಲೆ ಬೀಳುವ ಮಳೆನೀರು ಸೈಡ್ ಡ್ರೇನ್‌ಗಳಿಗೆ ಸರಾಗವಾಗಿ ಹರಿದು ಹೋಗುವಂತೆ ಶೋಲ್ಡರ್ ಡ್ರೈನ್ ಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ:

ಮಳೆಗಾಲ ಪ್ರಾರಂಭವಾಗುವುದಕ್ಕೂ ಮುನ್ನ ನಗರ ಪಾಲಿಕೆ ನಿಯಂತ್ರಣ ಕೊಠಡಿಗಳಿಗೆ ಪಾಲಿಕೆ, ಬೆಸ್ಕಾಂ ಹಾಗೂ ಜಲಮಂಡಳಿ ಅಧಿಕಾರಿಗಳನ್ನು ನಿಯೋಜಿಸಲು ಕ್ರಮ ಕೈಗೊಳ್ಳಬೇಕು. ಜೊತೆಗೆ ಎಸ್‌ಡಿಆರ್‌ಎಫ್ ಹಾಗೂ ಎನ್‌ಡಿಆರ್‌ಎಫ್ ಅಧಿಕಾರಿಗಳ ಪಟ್ಟಿಯನ್ನು ಸಿದ್ಧಪಡಿಸಲು ಸೂಚಿಸಿದರು. ಉಪವಿಭಾಗ ಮಟ್ಟದಲ್ಲಿನ ನಿಯಂತ್ರಣ ಕೊಠಡಿಗಳನ್ನು ಕಾರ್ಯಗತಗೊಳಿಸಿ, ಮಳೆಗಾಲಕ್ಕೆ ಅಗತ್ಯವಿರುವ ಎಲ್ಲಾ ಉಪಕರಣಗಳನ್ನು ಸಿದ್ಧವಾಗಿಡಲು ಸೂಚಿಸಿದರು.

ಅಗ್ನಿಶಾಮಕ ತಂಡಗಳ ಜೊತೆ ಸಮನ್ವಯ ಮಾಡಿಕೊಳ್ಳಿ:

ಜಿಬಿಎ ವ್ಯಾಪ್ತಿಯಲ್ಲಿ 75 ಹಾಗೂ 150 ಉಪವಿಭಾಗಗಳು ಒಳಗೊಂಡಿದ್ದು, 20 ಅಗ್ನಿಶಾಮಕ ಠಾಣೆಗಳು ಹಾಗೂ ಎಸ್‌ಡಿಆರ್‌ಎಫ್‌ನ ಒಂದು ಕಂಪನಿ ಕಾರ್ಯನಿರ್ವಹಿಸುತ್ತಿದೆ. ಆಯಾ ನಗರ ವ್ಯಾಪ್ತಿಯ ಅಗ್ನಿಶಾಮಕ ಠಾಣೆಗಳನ್ನು ವಿಭಾಗ ಹಾಗೂ ಉಪವಿಭಾಗಗಳೊಂದಿಗೆ ಸಮನ್ವಯ ಸಾಧಿಸಿ ವಾಟ್ಸಪ್ ಗುಂಪುಗಳನ್ನು ರಚಿಸಿಕೊಳ್ಳಬೇಕು. ನಗರ ಪಾಲಿಕೆಗಳ ಆಯುಕ್ತರು ಅಗ್ನಿಶಾಮಕ ತಂಡಗಳೊಂದಿಗೆ ಸಂಪರ್ಕದಲ್ಲಿದ್ದು, ವಿಪತ್ತು ನಿರ್ವಹಣೆಯಲ್ಲಿ ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಲು ಸೂಚಿಸಿದರು.

ಇಲಾಖೆಗಳ ಜೊತೆ ಸಮನ್ವಯ ಮಾಡಿಕೊಳ್ಳಿ:

ಜಲಮಂಡಳಿ, ಮೆಟ್ರೋ, ರೈಲ್ವೆ, ಕೆ-ರೈಡ್ ಸೇರಿದಂತೆ ವಿವಿಧ ಇಲಾಖೆಗಳ ಕಾಮಗಾರಿ ಸ್ಥಳಗಳಲ್ಲಿ ನೀರು ಹರಿವಿಗೆ ಉಂಟಾಗುವ ಅಡಚಣೆಗಳನ್ನು ತಕ್ಷಣ ತೆರವುಗೊಳಿಸಿ, ಸುಗಮವಾಗಿ ನೀರು ಹರಿಯುವಂತೆ ಕ್ರಮ ಕೈಗೊಳ್ಳಲು ಎಲ್ಲಾ ನಗರ ಆಯುಕ್ತರಿಗೆ ಸೂಚಿಸಲಾಯಿತು.

ಮರ ಕತ್ತರಿಸುವ ತಂಡಗಳನ್ನು ಸನ್ನದ್ಧಗೊಳಿಸಿ:

ನಗರದಲ್ಲಿ ಮಳೆಯಿಂದ ಧರೆಗುರುಳುವ ಮರಗಳು ಹಾಗೂ ಕೊಂಬೆಗಳನ್ನು ತಕ್ಷಣ ತೆರವುಗೊಳಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಕತ್ತರಿಸಿದ ರೆಂಬೆ-ಕೊಂಬೆಗಳನ್ನು ಶೇಖರಿಸಲು ಸೂಕ್ತ ಜಾಗವನ್ನು ಗುರುತಿಸಿ, ತಕ್ಷಣವೇ ತೆರವುಗೊಳಿಸಲು ಕ್ರಮವಹಿಸಬೇಕು. ನಾಗರಿಕರಿಂದ ಬರುವ ದೂರುಗಳಿಗೆ ತಕ್ಷಣ ಸ್ಪಂದಿಸಬೇಕು. ಬಿದ್ದಿರುವ ಮರ ಹಾಗೂ ಕೊಂಬೆಗಳನ್ನು ತೆರವುಗೊಳಿಸಲು ಹೆಚ್ಚುವರಿ ತಂಡಗಳನ್ನು ನಿಯೋಜಿಸಿ, ಅವುಗಳನ್ನು ತಾತ್ಕಾಲಿಕವಾಗಿ ಶೇಖರಿಸಲು ಸ್ಥಳಗಳನ್ನು ಗುರುತಿಸಲು ಸೂಚಿಸಲಾಯಿತು.

ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಮಾತನಾಡಿ, ಆರ್ಟೀರಿಯಲ್ ರಸ್ತೆಗಳ ಸೈಡ್ ಡ್ರೇನ್‌ಗಳಲ್ಲಿ ಇರುವ ಚೋಕ್ ಪಾಯಿಂಟ್‌ಗಳನ್ನು ಗುರುತಿಸಿ ತ್ಯಾಜ್ಯ ತೆರವುಗೊಳಿಸಿ, ಸಂಪೂರ್ಣವಾಗಿ ಹೂಳೆತ್ತಿ ಮಳೆಯ ಸಂದರ್ಭದಲ್ಲಿ ನೀರಿನ ಹರಿವಿಗೆ ಯಾವುದೇ ಅಡಚಣೆ ಆಗದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಜೊತೆಗೆ ರಾಜಕಾಲುವೆಗಳ ಬಳಿ ಕ್ಯಾಮೆರಾಗಳನ್ನು ಅಳವಡಿಸಲು ಸೂಚಿಸಿ, ಕೆ.ಎಸ್.ಎನ್.ಡಿ.ಎಂ.ಸಿ ಅವರೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲು ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಬಿಡಿಎ ಆಯುಕ್ತರಾದ ಮಣಿವಣ್ಣನ್, ವಿಶೇಷ ಆಯುಕ್ತರಾದ ಸುಷಮಾ ಗೋಡಬೋಲೆ, ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್, ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಡಿ.ಎಸ್., ರಮೇಶ್ ಕೆ.ಎನ್., ಡಾ. ರಾಜೇಂದ್ರ ಕೆ.ವಿ., ಜಲಮಂಡಳಿ ಅಧ್ಯಕ್ಷರಾದ ರಾಮ್ ಪ್ರಸಾದ್ ಮನೋಹರ್, ಬಿ.ಎಸ್.ಡಬ್ಲ್ಯುಎಂಎಲ್ ಸಿಇಓ ಕರೀಗೌಡ, ಅಪರ ಆಯುಕ್ತರು, ಮುಖ್ಯ ಅಭಿಯಂತರರು ಹಾಗೂ ಜಲಮಂಡಳಿ, ಮೆಟ್ರೋ, ಬೆಸ್ಕಾಂ, ಪೊಲೀಸ್, ಅಗ್ನಿಶಾಮಕ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


Share

You cannot copy content of this page