ಬೆಂಗಳೂರು: ಕಲಬುರಗಿ ನಗರಕ್ಕೆ ಸಮೀಪವಿರುವ ಕಪನೂರು ಗ್ರಾಮದ ಬಳಿ 6.06 ಗುಂಟೆ ಪ್ರದೇಶದಲ್ಲಿ ಶರಣ-ಶರಣೆಯರ ಕುರಿತು ನೂತನ ವಚನಮಂಟಪವನ್ನು ರೂಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಸಂಬಂಧ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು ಉದ್ದೇಶಿತ ವಚನಮಂಟಪವು ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ವಚನಗಳು ಸೇರಿದಂತೆ ವಚನಕ್ರಾಂತಿಯಲ್ಲಿ ಭಾಗಿಗಳಾಗಿರುವ ಕನ್ನಡದ ಎಲ್ಲ ಶರಣ-ಶರಣೆಯರ ಚಿತ್ರಗಳು ಹಾಗೂ ಅವರ ವಚನಗಳನ್ನು ಹೊಂದಿರುತ್ತದೆ. ತೆರೆದ ಸಭಾಂಗಣವನ್ನು ಚರ್ಚೆ, ಉಪನ್ಯಾಸ, ಸಭೆಗಳನ್ನು ನಡೆಸುವಂತೆ ವಿನ್ಯಾಸಗೊಳಿಸಲಾಗುವುದು ಎಂದು ಹೇಳಿದರು.
ಕಲಬುರಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಹತ್ತಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು, ಈಗಾಗಲೆ ಕಾಳಗಿ ಸೂರ್ಯನಾರಾಯಣ ದೇವಾಲಯ ಸಂರಕ್ಷಣ ಕಾಮಗಾರಿ, ಸೇಡಂ ತಾಲ್ಲೂಕಿನಲ್ಲಿನ ಪಾರಂಪರಿಕ ತಾಣವಾದ ಮಳಖೇಡ ಕೋಟೆಯ ಅಭಿವೃದ್ಧಿ ಕಾಮಗಾರಿ, ಚಿತ್ತಾಪುರ ತಾಲ್ಲೂಕಿನ ನಾಗಾವಿ ಪಾರಂಪರಿಕ ಪ್ರದೇಶದಲ್ಲಿರುವ ಪ್ರಾಚ್ಯ ಕುರುಹುಗಳ ಅಭಿವೃದ್ಧಿ, ಸಂರಕ್ಷಣಾ ಕಾಮಗಾರಿಗಳು ಮತ್ತು ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಯೋಜನೆಗಳನ್ನು ರೂಪಿಸಿದ್ದು, ಈ ಕಾಮಗಾರಿಗಳ ಬಗ್ಗೆಯೂ ಸಭೆಯಲ್ಲಿ ಅದಿಕಾರಿಳೊಂದಿಗೆ ಚರ್ಚಿಸಿದರು.
ಇದರೊಂದಿಗೆ ಚಿತ್ತಾಪುರ ತಾಲ್ಲೂಕಿನಲ್ಲಿರುವ ಕನಗನಹಳ್ಳಿಯಲ್ಲಿನ ಐತಿಹಾಸಿಕ ಬೌದ್ಧನೆಲೆ ಮತ್ತು ಪ್ರಾಚ್ಯ ಕುರುಹುಗಳ ಅಭಿವೃದ್ಧಿ ಸಂರಕ್ಷಣಾ ಕಾಮಗಾರಿಯ ಬಗ್ಗೆಯೂ ಸಚಿವರು ಕೆಲವು ನಿರ್ದೇಶನಗಳನ್ನು ನೀಡಿದರು.
ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ.ತ್ರಿಲೋಕಚಂದ್ರ ಕೆ.ವಿ ಹಾಗೂ ಇತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
