ಸಮಗ್ರ ಸುದ್ದಿ

ನಕಲಿ ಮದ್ಯದ ವಿರುದ್ಧ ಕಠಿಣ ಕ್ರಮಕ್ಕೆ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಸೂಚನೆ

Share

ಬೆಂಗಳೂರು, ನ. 29: ರಾಜ್ಯದ ಹಲವು ಜಿಲ್ಲೆಗಳ ತಾಲ್ಲೂಕುಗಳಲ್ಲಿ ನಕಲಿ ಮದ್ಯದ ಮಾರಾಟ ಹೆಚ್ಚುತ್ತಿರುವ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ನಿಟ್ಟಿನಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಅಬಕಾರಿ ಕಾಯ್ದೆ ಮತ್ತು ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು
ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರಾದ ಶರಣಪ್ಪ ಸಲಾದಪುರ ಅವರು ತಿಳಿಸಿದರು.

ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಸರ್ವ ಸದಸ್ಯರ ಸಭೆಯ, ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಯುವಜನರು ದೇಶವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಹೋರಾಡಬೇಕು. ಇದರ ಬದಲು, ನಕಲಿ ಮದ್ಯ, ಕಳಬಟ್ಟಿಯ ವ್ಯಸನಕ್ಕೆ ತುತ್ತಾಗುತ್ತಿದ್ದಾರೆ. ಕಡಿಮೆ ಬೆಲೆಗೆ ಸಿಗುತ್ತಿರುವ ನಕಲಿ ಮದ್ಯ ಹಾಗೂ ಕಲಬಟ್ಟಿಗಳ ಲಭ್ಯತೆ ಸಮಾಜಕ್ಕೆ ದೊಡ್ಡ ಮಾರಕವಾಗಿದೆ. ಈ ಸಮಸ್ಯೆಯನ್ನು ತುರ್ತಾಗಿ ನಿಯಂತ್ರಿಸಲು, ಅಬಕಾರಿ ಇಲಾಖೆ ನಿರ್ದಿಷ್ಟವಾದ ಕ್ರಮವನ್ನು ಜರುಗಿಸಬೇಕು ಎಂದು ತಿಳಿಸಿದರು.

ಇದೇ ವೇಳೆ, ಶರಣಪ್ಪ ಸಲಾದಪುರ ಅವರು ಯಾದಗಿರಿ ಜಿಲ್ಲೆಯ ವಡಿಗೇರಿ, ಗುರಮಿಠಕಲ್ ಹಾಗೂ ಶಹಾಪುರ ಭಾಗಗಳಲ್ಲಿ ಹಾಗೂ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗೊಬ್ಬೂರು ಗ್ರಾಮದಲ್ಲಿ ನಕಲಿ ಮದ್ಯ ಮಾರಾಟವಾಗುತ್ತಿದೆ ಎಂಬ ಮಾಹಿತಿಯನ್ನು ಸಭೆಯ ಗಮನಕ್ಕೆ ತಂದರು ಹಾಗೂ ಸಂಶಯಾಸ್ಪದ ಮದ್ಯದ ಅನೇಕ ಮಾದರಿಗಳನ್ನು ಅಬಕಾರಿ ಇಲಾಖೆಯ ಉಪ ಆಯುಕ್ತರಾದ ಮಹೇಶ್ ಕುಮಾರ್ ಅವರಿಗೆ ಅಧಿಕೃತವಾಗಿ ಹಸ್ತಾಂತರಿಸಿದರು.

ನಕಲಿ ಮದ್ಯ, ರಾಜ್ಯದಲ್ಲಿ ಸಾರ್ವಜನಿಕರ ಆರೋಗ್ಯಕ್ಕೆ ಗಂಭೀರ ಅಪಾಯವನ್ನು ಉಂಟುಮಾಡುತ್ತಿದೆ. ಇದಕ್ಕೆ ತಕ್ಷಣದ ಪರಿಣಾಮಕಾರಿ ಕ್ರಮ ಅವಶ್ಯ ಎಂದು ತಿಳಿಸಿದ ಅವರು, ಈ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ, ಏಳು ದಿನಗಳೊಳಗೆ ಸಮಗ್ರ ವರದಿ ಸಲ್ಲಿಸಬೇಕು ಹಾಗೂ ವರದಿ ಬಂದ ಕೂಡಲೇ, ಅಗತ್ಯವಿರುವ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

ಸಭೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಂಟಿ ನಿರ್ದೇಶಕರಾದ ಸಿ.ಆರ್.ನವೀನ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಾಯಕ ನಿರ್ದೇಶಕ ಜಗದೀಶ್, ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜು, ಮತ್ತು ಮಂಡಳಿಯ ಕಾರ್ಯದರ್ಶಿ ಮಹೇಶ್, ಅಬಕಾರಿ ಇಲಾಖೆ ಅಧಿಕಾರಿ ಜಗದೀಶ್ ಚಂದ್ರ ಹಾಗೂ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ ಡಾ. ಶ್ರೀದೇವಿ ಉಪಸ್ಥಿತರಿದ್ದರು.


Share

You cannot copy content of this page