ಬೆಂಗಳೂರು, ನ. 29: ಪೋಡಿ ದುರಸ್ಥಿ, ಫೌತಿಖಾತೆ, ಭೂ ಸುರಕ್ಷಾ ಅಭಿಯಾನ ಸೇರಿದಂತೆ ಕಳೆದ ಎರಡೂವರೆ ವರ್ಷದಲ್ಲಿ ಕಂದಾಯ ಇಲಾಖೆಯ ಹತ್ತಾರು ಪ್ರಮುಖ ಸೇವೆಗಳನ್ನು ಜನ ಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸಿದ್ದೇವೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ವಿಕಾಸಸೌಧದಲ್ಲಿ ನಡೆದ ಎಲ್ಲಾ ಜಿಲ್ಲಾಧಿಕಾರಿಗಳ ಮಾಸಿಕ ಸಭೆಯ ನಡುವೆಯೇ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರ ಹತ್ತಾರು ವರ್ಷಗಳ ಹಿಂದೆಯೇ ವಿವಿಧ ಯೋಜನೆಗಳ ಅಡಿಯಲ್ಲಿ ಬಡವರು ಹಾಗೂ ರೈತರಿಗೆ ಕೃಷಿ ಜಮೀನು ಮಂಜೂರು ಮಾಡಿದೆ. ಆದರೆ, ಈವರೆಗೆ ಲಕ್ಷಾಂತರ ಜನರಿಗೆ ಪೋಡಿ ಮಾಡಿಕೊಡುವ ಕೆಲಸ ಆಗಿಲ್ಲ. ಆದರೆ, ನಾವು ಕಳೆದ ಎರಡೂವರೆ ವರ್ಷದಲ್ಲಿ ಅರ್ಜಿಯೂ ಇಲ್ಲದೆ ನಾವೇ ರೈತರ ಮನೆ ಮನೆಗೆ ಹೋಗಿ ಅಭಿಯಾನ ಮಾದರಿಯಲ್ಲಿ ಪೋಡಿ ಮಾಡಿಕೊಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಈ ಹಿಂದೆ ಜಮೀನು ಮಂಜೂರು ಮಾಡಿದ್ದ ಸರ್ಕಾರಗಳು ಕೇವಲ ಆರ್ ಟಿಸಿ ಮಾತ್ರ ಮಾಡಿಕೊಟ್ಟು ರೈತರ ಜುಟ್ಟನ್ನು ತಮ್ಮ ಕೈನಲ್ಲೇ ಇಟ್ಟುಕೊಂಡಿದ್ದವು. ಹೀಗಾಗಿ ಪಕ್ಕಾ ದಾಖಲೆ ಇಲ್ಲದೆ ರೈತರ ಬದುಕು ಅತಂತ್ರ ಸ್ಥಿತಿಯಲ್ಲೇ ಇತ್ತು. ನಾನು ಕಂದಾಯ ಇಲಾಖೆ ಜವಾಬ್ದಾರಿ ವಹಿಸಿಕೊಂಡ ಮೇಲೆ ಈ ವಿಚಾರವನ್ನು ಮನಗಂಡು ಬಡವರಿಗೆ ಪಕ್ಕಾ ದಾಖಲೆ ಮಾಡಿಕೊಡಲು ಸಂಕಲ್ಪ ಮಾಡಿದ್ದೆ. ಆ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರು ಈ ಕೆಲಸವನ್ನು ಮಾಡೋಕೆ ಸಾಧ್ಯವೇ ಇಲ್ಲ ಎಂದು ಸವಾಲು ಹಾಕಿದ್ದರು. ಹೀಗಾಗಿ ನಾವೂ ಸಹ ಈ ವಿಚಾರವನ್ನು ಸವಾಲಾಗಿ ಸ್ವೀಕರಿಸಿದ್ದೆವು ಎಂದರು.
ಸರ್ಕಾರಿ ಕಚೇರಿಗೆ ಅಲೆದು ಮಧ್ಯವರ್ತಿಗಳಿಗೆ ಲಕ್ಷಾಂತರ ಹಣ ನೀಡಿದ್ದರೂ ಈ ಹಿಂದೆ ಪೋಡಿ ಕೆಲಸ ಅಷ್ಟು ಸುಲಭದ್ದಾಗಿರಲಿಲ್ಲ. 2018 ರಿಂದ 2023ರ ನಡುವೆ ಕೇವಲ 8,500 ಪ್ರಕರಣಗಳಲ್ಲಿ ಮಾತ್ರ ಪೋಡಿ ಮಾಡಲಾಗಿತ್ತು. ಆದರೆ, ನಾವು ಇದೇ ವರ್ಷದ ಜನವರಿ ತಿಂಗಳಲ್ಲಿ “ನನ್ನ ಭೂಮಿ” ಅಭಿಯಾನ ಆರಂಭಿಸಿ ಕೇವಲ ಒಂದೇ ವರ್ಷದಲ್ಲಿ 1,49,600 ಜಮೀನನ್ನು ದರ್ಖಾಸ್ತು ಪೋಡಿ ಅಳೆತೆಗೆ ತೆಗೆದುಕೊಂಡಿದ್ದೇವೆ. ಹಾಸನ ಜಿಲ್ಲೆಯಲ್ಲೂ 17,000 ಪ್ರಕರಣಗಳನ್ನು ಅಳೆತೆಗೆ ತೆಗೆದುಕೊಂಡಿದ್ದು, ಇದನ್ನು ಸಾಂಕೇತಿಕವಾಗಿ ಜನರಿಗೆ ಸಮರ್ಪಣೆ ಮಾಡುವ ಸಲುವಾಗಿ ಡಿಸೆಂಬರ್ 06 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ “ಸಮರ್ಪಣಾ ದಿನ” ಆಚರಿಸಲು ಕಾರ್ಯಕ್ರಮ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ಸರ್ಕಾರಿ ಜಮೀನು ಮಂಜೂರುದಾರರಿಗೆ ದರ್ಖಾಸ್ತು ಪೋಡಿ ಅಭಿಯಾನದ ಅಡಿಯಲ್ಲಿ ಜಮೀನು ಸರ್ವೇ ಮಾಡಿ ಪೋಡಿ ಮಾಡಿಕೊಡಲಾಗುತ್ತಿದ್ದರೆ, ಖಾಸಗಿ ಜಮೀನು ಮಾಲೀಕರಿಗೂ ಸಹ ನಾವೇ ಸ್ವಯಂ ಪ್ರೇರಿತರಾಗಿ “ಪೋಡಿ ಮುಕ್ತ ಗ್ರಾಮ” ಅಭಿಯಾನದ ಅಡಿ ಪೋಡಿ ಮಾಡಿಕೊಡುತ್ತಿದ್ದೇವೆ. ಈ ಹಿಂದೆ ತಿಂಗಳಿಗೆ ಸರಾಸರಿ 90,000 ಸರ್ವೇ ಮಾಡಲಾಗುತ್ತಿತ್ತು. ಈಗ ಸರಾಸರಿ 1,34,000 ಸರ್ವೇ ಮಾಡಿಕೊಡುತ್ತಿದ್ದೇವೆ. ಇದರಿಂದ ಬಡ ಜನರು ಹಾಗೂ ರೈತರಿಗೆ ಸಾಕಷ್ಟು ಅನುಕೂಲ ಆಗುತ್ತಿದೆ ಎಂದರು.
ತಹಶೀಲ್ದಾರ್ ನ್ಯಾಯಾಲಯ ಪ್ರಗತಿ:
ತಹಶೀಲ್ದಾರ್ ಹಾಗೂ ಎಸಿ ನ್ಯಾಯಾಲಯಗಳಲ್ಲಿ ಪ್ರಕರಣಗಳ ಶೀಘ್ರ ವಿಲೇವಾರಿ ಬಗ್ಗೆಯೂ ಗಮನ ಸೆಳೆದ ಅವರು, “ನಾವು ಕಂದಾಯ ಇಲಾಖೆ ಅಧಿಕಾರ ಸ್ವೀಕಾರ ಮಾಡುವ ಮುನ್ನ ತಹಶೀಲ್ದಾರ್ ನ್ಯಾಯಾಲಯದಲ್ಲಿ 10,774 ಪ್ರಕರಣಗಳು ಅವಧಿ ಮೀರಿಯೂ ನ್ಯಾಯಾ ತೀರ್ಮಾನವಾಗದೆ ಬಾಕಿ ಇದ್ದವು. ಆದರೆ, ಇದೀಗ ಆ ಸಂಖ್ಯೆಯನ್ನು 526ಕ್ಕೆ ಇಳಿಸಲಾಗಿದೆ ಎಂದರು.
ಅದೇ ರೀತಿ ಎಸಿ (ಉಪ ವಿಭಾಗಾಧಿಕಾರಿ) ನ್ಯಾಯಾಲಯದಲ್ಲೂ 6 ತಿಂಗಳಲ್ಲಿ ಪ್ರಕರಣ ಇತ್ಯರ್ಥಗೊಳಿಸಬೇಕು ಎಂಬ ನಿಯಮ ಇದ್ದರೂ 1 ವರ್ಷಕ್ಕಿಂತ ಹೆಚ್ಚು ಅವಧಿ ಮೀರಿದ 59,339 ಪ್ರಕರಣಗಳು ಬಾಕಿ ಇದ್ದವು. ಆದರೆ, ವಿಶೇಷ ಎಸಿ ಗಳನ್ನು ನೇಮಕ ಮಾಡುವ ಮೂಲಕ ಆ ಸಂಖ್ಯೆಯನ್ನೂ ಸಹ ಇದೀಗ 9954 ಕ್ಕೆ ಇಳಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.
ಫೌತಿ ಖಾತೆ ಅಭಿಯಾನ:
ರಾಜ್ಯದಲ್ಲಿ ಸುಮಾರು 40 ಲಕ್ಷ ಜಮೀನುಗಳು ಮೃತರ ಹೆಸರಲ್ಲಿ ಇದ್ದದ್ದನ್ನು ಗುರುತಿಸಿ ಅದನ್ನು ವಾರಸುದಾರರಿಗೆ ಮಾಡಿಕೊಡುವ ಸಲುವಾಗಿ ಫೌತಿ ಖಾತೆ ಅಭಿಯಾನ ಆರಂಭಿಸಿದ್ದೇವೆ. ಆದರೆ, ಕುಟುಂಬ ವ್ಯಾಜ್ಯಗಳ ಕಾರಣದಿಂದಾಗಿ ಈ ಅಭಿಯಾನ ನಿಧಾನಗತಿಯಲ್ಲಿ ಸಾಗುತ್ತಿದೆ. ಈವರೆಗೆ 3,20,000 ಜಮೀನು ಫೌತಿ ಖಾತೆ ಯಶಸ್ವಿಯಾಗಿದ್ದು, ಜನ ಸಾಮಾನ್ಯರು ಸಹಕರಿಸಿದರೆ ಈ ಅಭಿಯಾನವನ್ನು ಮತ್ತಷ್ಟು ವೇಗವಾಗಿ ಮುಗಿಸಬಹುದು. ಇನ್ಮುಂದೆ ಪ್ರತಿಯೊಬ್ಬ ಗ್ರಾಮ ಆಡಳಿತ ಅಧಿಕಾರಿಗಳಿಗೂ (ವಿಎ) ತಿಂಗಳಿಗೆ ಕಡ್ಡಾಯ 100 ಫೌತಿ ಖಾತೆ ಮಾಡಲು ಗುರಿ ನಿಗದಿಪಡಿಸಿದ್ದೇವೆ. ಪ್ರಗತಿ ಸಾಧಿಸುವ ವಿಎಗಳಿಗೆ ಪ್ರೋತ್ಸಾಹ ಧನ ನೀಡಬೇಕು ಎಂದು ಸಹ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.
ಭೂ ಸುರಕ್ಷಾ ಅಭಿಯಾನ:
ಭೂ ಸುರಕ್ಷಾ ಅಭಿಯಾನದ ಅಡಿಯಲ್ಲಿ ಈವರೆಗೆ 53 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. ಇನ್ನೂ 40 ಕೋಟಿ ಪುಟಗಳ ಸ್ಕ್ಯಾನ್ ಮಾಡುವ ಕೆಲಸ ಬಾಕಿ ಇದ್ದು, ಪ್ರತಿ ದಿನ ಸುಮಾರು 17,500 ಲಕ್ಷ ಪುಟ ಸ್ಕ್ಯಾನ್ ಮಾಡಲಾಗುತ್ತಿದೆ. ಫೆಬ್ರವರಿ ಕೊನೆಯ ಒಳಗೆ ಇದನ್ನು ಮುಗಿಸಬೇಕು ಎಂದು ಗಡುವು ನೀಡಲಾಗಿದೆ. ಅದಕ್ಕೆ ಅಗತ್ಯವಾದ ಕಂಪ್ಯೂಟರ್, ಸ್ಕ್ಯಾನರ್ ಹಾಗೂ ಡೇಟಾ ಎಂಟ್ರಿ ಆಪರೇಟರ್ ಗಳನ್ನು ಒದಗಿಸಿದ್ದೇವೆ.
ಕೆಲವರಿಗೆ ದಾಖಲೆ ಕಳೆದುಹೋಗಿದೆ ಎಂದು ಬರೆದುಕೊಡುವ ಚಾಲಿ ಇದೆ. ಅಲ್ಲದೆ, ದಾಖಲೆಗಳನ್ನು ತಿದ್ದುವ ಕೆಲಸಗಳೂ ಈ ಹಿಂದೆ ಎಗ್ಗಿಲ್ಲದೆ ನಡೆದಿದ್ದು ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ಇಂತಹ ಪ್ರವೃತ್ತಿಗೆ ತಡೆಯೊಡ್ಡಬೇಕು, ಮೂಲ ದಾಖಲೆಗಳು ಕಳೆದು ಹೋಗದಂತೆ ಹಾಗೂ ನಶಿಸಿ ಹೋಗದಂತೆ ಸಂರಕ್ಷಿಸಬೇಕು ಎಂಬ ಉದ್ದೇಶದಿಂದ ಈ ಅಭಿಯಾನವನ್ನು ಆರಂಭಿಸಲಾಗಿದ್ದು, ರೈತರು ತಮಗೆ ಯಾವ ದಾಖಲೆ ಬೇಕಿದ್ದರೂ ಆನ್ ಲೈನ್ ನಲ್ಲಿ ಸರ್ಚ್ ಮಾಡಿ ಅವರೇ ವೆರಿಫೈ ದಾಖಲೆ ಪಡೆಯುವಂತಾದರೆ ನಮ್ಮ ಉದ್ದೇಶ ಈಡೇರುತ್ತದೆ ಎಂದರು.
ಆಡಳಿತದಲ್ಲಿ ಪಾರದರ್ಶಕತೆ ತರಬೇಕು, ಸಚಿವರಿಂದ ವಿಎ ವರೆಗೂ ಎಲ್ಲರೂ ಇ-ಆಫೀಸ್ ಮೂಲಕವೇ ಕೆಲಸ ಮಾಡಬೇಕು. ಕಾಗದ ವ್ಯವಹಾರಕ್ಕೆ ಇತಿಶ್ರೀ ಹಾಡಬೇಕು ಎಂಬ ಏಕೈಕ ಕಾರಣಕ್ಕೆ ಕ್ಯಾಬಿನೆಟ್ ಅನುಮತಿಯೊಂದಿಗೆ ಈಗಾಗಲೇ 5000 ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್ಟಾಪ್ ನೀಡಲಾಗಿದೆ.ಮುಂದಿನ ಮೂರು ತಿಂಗಳಲ್ಲಿ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರಿಗೆ (ಆರ್ಐ) ಲ್ಯಾಪ್ಟಾಪ್ ನೀಡುವ ಶೇ.100 ರಷ್ಟು ಇಲಾಖೆಯ ಎಲ್ಲಾ ಕೆಲಸಗಳನ್ನು ಆನ್ಲೈನ್ ಅಡಿಯಲ್ಲಿ ತರಲಾಗುವುದು ಎಂದರು.
ಸರ್ವೇ ಇಲಾಖೆಯಲ್ಲೂ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತಿದೆ. ಸರ್ವೇ ಕಾರ್ಯಕ್ಕೆ ಸಹಕಾರಿಯಾಗಲು ಈಗಾಗಲೇ 600 ರೋವರ್ ಖರೀದಿ ಮಾಡಲಾಗಿದೆ. ಇನ್ನೂ 1000 ರೋವರ್ ಗಳನ್ನು ಖರೀದಿಗೆ ಮುಂದಾಗಲಾಗಿದೆ. ಇಲಾಖೆಯನ್ನು ಸಂಪೂರ್ಣ ಡಿಜಿಟಲೈಶೇಷನ್ ಮಾಡಬೇಕು ಎಂದು ಪಣತೊಡಲಾಗಿದೆ. ಇದಲ್ಲದೆ, ಇಲಾಖೆಯಲ್ಲಿ ಹಿಂದಿನಿಂದಲೂ ಬಾಕಿ ಇದ್ದ ಸಮಸ್ಯೆಗಳನ್ನು ಹುಡುಕಿ ಪರಿಹಾರ ನೀಡಲಾಗುತ್ತಿದೆ. ಬಹುತೇಕ ಅಧಿಕಾರಿಗಳು ನಮ್ಮ ಉದ್ದೇಶಕ್ಕೆ ಪೂರಕವಾಗಿ ಜನಪರ ಕೆಲಸ ಮಾಡುತ್ತಿದ್ದಾರೆ. ನಮಗೆ ಸವಾಲಿನ ಅರಿವಿದೆ ಹಾಗೆ ಎರಡೂವರೆ ವರ್ಷದಲ್ಲಿ ನಾವು ಸಾರ್ಥಕ ಕೆಲಸವನ್ನೂ ಮಾಡಿದ್ದೇವೆ. ಮುಂದೆ ಮಾಡಬೇಕಾದ ಕೆಲಸಗಳೂ ಸಾಕಷ್ಟಿದ್ದು, ಕಂದಾಯ ಇಲಾಖೆಯನ್ನು ಕೈಲಾದಷ್ಟು ಜನಸ್ನೇಹಿಗೊಳಿಸಲು ಶ್ರಮಿಸುತ್ತೇವೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಭರವಸೆ ನೀಡಿದರು.
*ಪತ್ರಿಕಾಗೋಷ್ಠಿಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಮೌನಿಶ್ ಮುದ್ಗಿಲ್, ಕಂದಾಯ ಆಯುಕ್ತರಾದ ಮುಲ್ಲೈ ಮುಗಿಲನ್ ಹಾಗೂ ಭೂ ದಾಖಲೆಗಳು ಮತ್ತು ಸರ್ವೆ ಇಲಾಖೆಯ ಆಯುಕ್ತರಾದ ಮಂಜುನಾಥ್ ಉಪಸ್ಥಿತರಿದ್ದರು.
