ಬೆಂಗಳೂರು:ಸಾಯಿ ಲೇಔಟ್ ಪ್ರದೇಶದಲ್ಲಿ ಮಳೆಗಾಲದ ವೇಳೆ ಪ್ರವಾಹ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಕಸದ ಸಮಸ್ಯೆಗಳ ನಿವಾರಣೆಗೆ ಸಂಬಂಧಿಸಿದಂತೆ ಇಂದು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಸಾಯಿ ಲೇಔಟ್ ಪ್ರದೇಶದಲ್ಲಿ ಜಲಾವೃತವಾಗುವುದನ್ನು ತಪ್ಪಿಸುವ ಉದ್ದೇಶದಿಂದ ರೈಲ್ವೆ ಹಳಿ ಬಳಿಯ ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯಲು ಹೆಚ್ಚುವರಿ ವೆಂಟ್ ಗಳನ್ನು ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಬಾಕ್ಸ್ ಪುಶಿಂಗ್ ಕಾರ್ಯಕ್ಕೆ ರೈಲ್ವೆ ಇಲಾಖೆಯಿಂದ ಅನುಮತಿ ದೊರೆತಿದೆ. ಅದರಂತೆ ಈಗಾಗಲೇ ಒಂದು ಬಾಕ್ಸ್ ಪುಶಿಂಗ್ ಕಾರ್ಯವನ್ನು ಕೈಗೊಳ್ಳಲಾಗುತ್ತಿದ್ದು, ಏಪ್ರಿಲ್ 30ರೊಳಗಾಗಿ ಪೂರ್ಣಗೊಳಿಸಲು ಸೂಚಿಸಿದರು.
ರೈಲು ಸಂಚಾರಕ್ಕೆ ಯಾವುದೇ ಅಡಚಣೆ ಆಗದಂತೆ ಗರ್ಡರ್ಗಳನ್ನು ಅಳವಡಿಸಲಾಗಿದ್ದು, ಒಂದು ಬಾಕ್ಸ್ ಅನ್ನು 12 ಮೀಟರ್ ವರೆಗೆ ಪುಶ್ ಮಾಡಲಾಗಿದೆ. ಪ್ರತಿ ದಿನ ಸುಮಾರು 2 ಮೀಟರ್ಗಳಷ್ಟು ಪುಶಿಂಗ್ ನಡೆಯುತ್ತಿದ್ದು, ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಮತ್ತೊಂದು ಬಾಕ್ಸ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಮೇ 30 ರೊಳಗಾಗಿ ಪೂರ್ಣಗೊಳಿಸಲಾಗುವುದು. ಇದರೊಂದಿಗೆ ಸಮಾನಾಂತರವಾಗಿ ಆರ್ಸಿಸಿ ತಡೆಗೋಡೆ ಕಾಮಗಾರಿಯನ್ನೂ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ತಾತ್ಕಾಲಿಕ ಪಂಪ್ ವ್ಯವಸ್ಥೆ ಕಲ್ಪಿಸಲು ಸೂಚನೆ:
ಸಾಯಿ ಲೇಔಟ್ ಸಮೀಪ ಬಿಡಿಎ ವತಿಯಿಂದ ಮತ್ತೊಂದು ವೆಂಟ್ ನಿರ್ಮಾಣ ಪ್ರಗತಿಯಲ್ಲಿದೆ. ಮಳೆಗಾಲದ ವೇಳೆ ಜಲಾವೃತವಾಗುವುದನ್ನು ತಪ್ಪಿಸಲು ನೀರು ಸಂಗ್ರಹಿಸುವ ವ್ಯವಸ್ಥೆ ಮಾಡಿ, ತಾತ್ಕಾಲಿಕ ಪಂಪ್ ವ್ಯವಸ್ಥೆಯ ಮೂಲಕ ನೀರನ್ನು ಹೊರಹಾಕುವಂತೆ ಪಾಲಿಕೆ ಹಾಗೂ ಬಿಡಿಎ ಅಧಿಕಾರಿಗಳಿಗೆ ಸ್ಥಳ ಪರಿಶೀಲನೆ ನಡೆಸಿ ತಕ್ಷಣ ಕ್ರಮ ಕೈಗೊಳ್ಳಲು ಸೂಚಿಸಿದರು.
ಮಳೆನೀರು ಕಾಲುವೆಗಳ ಸ್ವಚ್ಛತೆಗೆ ಸೂಚನೆ:
ಗೆದ್ದಲಹಳ್ಳಿ ರೈಲ್ವೆ ವೆಂಟ್ ಬಳಿಯ ಹೆಬ್ಬಾಳ ವ್ಯಾಲಿಯಲ್ಲಿ ಸಂಪೂರ್ಣ ಹೂಳೆತ್ತುವ ಕಾರ್ಯ ಕೈಗೊಂಡು, ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಮಾಡಲು ಸೂಚಿಸಿದರು.
ವೈಟ್ ಟಾಪಿಂಗ್ ಕಾಮಗಾರಿ ತ್ವರಿತಗೊಳಿಸಲು ಸೂಚನೆ:
ಹೆಣ್ಣೂರು–ಬಾಗಲೂರು ರಸ್ತೆಯಲ್ಲಿ ಸುಮಾರು 5 ಕಿ.ಮೀ ಉದ್ದದ ರಸ್ತೆಗೆ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಜೂನ್ 15 ರೊಳಗಾಗಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದರು. ಈಗಾಗಲೇ ರಸ್ತೆಯ ಒಂದು ಭಾಗದಲ್ಲಿ 4.2 ಕಿ.ಮೀ ಹಾಗೂ ಇನ್ನೊಂದು ಭಾಗದಲ್ಲಿ 2.2 ಕಿ.ಮೀ ಉದ್ದದ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾಮಗಾರಿಗಳನ್ನು ವೇಗವಾಗಿ ಪೂರ್ಣಗೊಳಿಸಲು ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲು ಸೂಚಿಸಿದರು.
ವೈಟ್ ಕಾಂಕ್ರೀಟ್ ಅಳವಡಿಸುವುದರ ಜೊತೆಗೆ ಸಮಾನಾಂತರವಾಗಿ ಬಫರ್ ಝೋನ್ ಹಾಗೂ ಪಾದಚಾರಿ ಮಾರ್ಗಗಳ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲು ಸೂಚಿಸಿದರು. ಗುತ್ತಿಗೆದಾರರು ವಿಳಂಬ ನೀತಿಯನ್ನು ಅನುಸರಿಸುತ್ತಿದ್ದು, ದಂಡ ವಿಧಿಸಲು ಬಿ-ಸ್ಮೈಲ್ ಅಧಿಕಾರಿಗಳಿಗೆ ಸೂಚಿಸಿದರು.
ಟ್ರೆಂಚ್ ಲೆಸ್ ತಂತ್ರಜ್ಞಾನ ಬಳಕೆ:
ಹೆಣ್ಣೂರು–ಬಾಗಲೂರು ರಸ್ತೆಯ ಗೆದ್ದಲಹಳ್ಳಿ ರೈಲ್ವೆ ಹಳಿ ಕೆಳಭಾಗದಲ್ಲಿ ಮಳೆನೀರು ಚರಂಡಿ ಕಾಮಗಾರಿ ಕೈಗೊಳ್ಳಬೇಕಿದೆ. ಇದೇ ಪ್ರದೇಶದಲ್ಲಿ ಕೆ-ರೈಡ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ, ಕಲ್ವರ್ಟ್ ನಿರ್ಮಾಣ ಹಾಗೂ ಟ್ರೆಂಚ್ ಲೆಸ್ ತಂತ್ರಜ್ಞಾನ ಬಳಸಿ ಚರಂಡಿಯನ್ನು ಹತ್ತಿರವಿರುವ ರಾಜಕಾಲುವೆಗೆ ಸಂಪರ್ಕ ಕಲ್ಪಿಸುವಂತೆ ನಿರ್ದೇಶನ ನೀಡಿದರು.
ದ್ವಿತೀಯ ಹಂತದ ತ್ಯಾಜ್ಯ ಸಂಗ್ರಹಣಾ ಘಟಕ:
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ಥಾಪಿತಗೊಂಡಿರುವ ದ್ವಿತೀಯ ಹಂತದ ತ್ಯಾಜ್ಯ ಸಂಗ್ರಹಣಾ ಘಟಕಕ್ಕೆ ಪ್ರತಿದಿನ 6 ವಾರ್ಡಗಳಿಂದ ಎರಡು ಪಾಳಿಗಳಲ್ಲಿ ಒಟ್ಟು 156 ಆಟೋ ಟಿಪ್ಪರ್ ಗಳ ಮೂಲಕ ಸುಮಾರು 200 ಟನ್ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಮಿಶ್ರ ತ್ಯಾಜ್ಯ ಹೆಚ್ಚಾಗಿ ಬರುತ್ತಿರುವ ವಾರ್ಡ್ಗಳಲ್ಲಿ ಕಿರಿಯ ಆರೋಗ್ಯ ಪರಿವೀಕ್ಷಕರು ಹಾಗೂ ಮಾರ್ಷಲ್ ಗಳನ್ನು ನಿಯೋಜಿಸಿ, ಮೂಲದಲ್ಲಿಯೇ ತ್ಯಾಜ್ಯ ವಿಂಗಡಣೆ ಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಸೂಚಿಸಿದರು.
ಬಾಕಿ ಕಾಮಗಾರಿಗೆ ಅನುದಾನ ಒದಗಿಸಿ:
ಬಾಣಸವಾಡಿ 8ನೇ ಮುಖ್ಯ ರಸ್ತೆಯಲ್ಲಿ ಕ್ಯಾರೇಜ್ ವೇ ಕಾಮಗಾರಿಯು ಪೂರ್ಣಗೊಂಡಿದ್ದು ರಾಜಕಾಲುವೆ ಇಕ್ಕೆಲಗಳಲ್ಲಿ ಪಾದಚಾರಿ ಮಾರ್ಗದ ಕಾಮಗಾರಿಯು ಬಾಕಿಯಿದ್ದು, ಅದಕ್ಕೆ ಸೂಕ್ತ ಅನುದಾನವನ್ನು ಒದಗಿಸುವ ಮೂಲಕ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಉತ್ತರ ನಗರ ಪಾಲಿಕೆಯ ಆಯುಕ್ತರಿಗೆ ದೂರವಾಣಿಯ ಮೂಲಕ ತಿಳಿಸಿದರು.
ಬಳಕೆಯಲ್ಲಿಲ್ಲದ ಸಾರ್ವಜನಿಕ ಶೌಚಾಲಯ ತೆರವು:
ಕೆ. ನಾರಾಯಣಪುರ ರಸ್ತೆಯಲ್ಲಿರುವ ಬಳಕೆಯಲ್ಲಿಲ್ಲದ ಸಾರ್ವಜನಿಕ ಶೌಚಾಲಯವನ್ನು ತಕ್ಷಣ ತೆರವುಗೊಳಿಸಿ, ವಾಹನ ಸಂಚಾರಕ್ಕೆ ಸುಗಮತೆ ಕಲ್ಪಿಸಲು ಸೂಚಿಸಿದರು.
ಈ ವೇಳೆ ಪೂರ್ವ ವಲಯದ ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್, ಬಿಎಸ್ ಡಬ್ಲ್ಯೂಎಂಎಲ್ ಸಿಓಓ ರಮಾಮಣಿ, ಮುಖ್ಯ ಅಭಿಯಂತರರಾದ ಮಾದೇಶ್, ಕೃಷ್ಣಮೂರ್ತಿ ಹಾಗೂ ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
