ಸಮಗ್ರ ಸುದ್ದಿ

ಕುಡಿಯುವ ನೀರು, ಮೇವಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಿ |ಅಗತ್ಯವಿದ್ದಲ್ಲಿ ಬೋರ್‌ವೆಲ್‌ ಕೊರೆಸಿ ; ತಕ್ಷಣವೇ ವಿದ್ಯುತ್‌ ಸಂಪರ್ಕ ಕಲ್ಪಿಸಿ- ಡಿಸಿಎಂ ಡಾ.ಜಿ.ಪರಮೇಶ್ವರ್

Share

ಚಿಕ್ಕಬಳ್ಳಾಪುರ: ಇಂದು ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಚಿಕ್ಕಬಳ್ಳಾಪುರ ಜಿಲ್ಲಾ ಪ್ರವಾಸ ಕೈಗೊಂಡು, ಜಿಲ್ಲೆಯ ʼಬರ ಪರಿಸ್ಥಿತಿ ಹಾಗೂ ಕಂದಾಯ ವಿಷಯʼಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಿದರು.

ಬೆಳೆ ವಿಮೆ ಎಂಬುದು ರೈತರಿಗೆ ವರದಾನ. ಬೆಳೆ ನಷ್ಟ ಆದ ಸಂದರ್ಭದಲ್ಲಿ ವಿಮೆಯಿಂದ ರೈತರಿಗೆ ಒಂದಷ್ಟು ಅನುಕೂಲವಾಗುತ್ತದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 80 ಸಾವಿರ ನೋಂದಣಿಗೆ ಗುರಿ ನೀಡಲಾಗಿದೆ. ಈವರೆಗೆ 24 ಸಾವಿರ ಮಾತ್ರ ನೋಂದಣಿಯಾಗಿದೆ. ಬೆಳೆ ವಿಮೆ ಕಟ್ಟಲು ಪ್ರೋತ್ಸಾಹಿಸದಿದ್ದರೆ ಹೇಗೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ರೈತರಿಗೆ ಸಹಾಯ ಮಾಡಲು ಅವಕಾಶ ಇದೆ. ನಿಮ್ಮ ಸೋಮಾರಿತನದಿಂದ ರೈತರು ಕಷ್ಟ ಅನುಭವಿಸಬೇಕೆ? ನಿಮ್ಮ ಅನಗತ್ಯ ಉತ್ತರಗಳು ನನಗೆ ಬೇಕಿಲ್ಲ. ಬೆಳೆ ವಿಮೆ ಕಟ್ಟಿಸುವ ಗುರಿಯನ್ನು ಪೂರ್ಣಗೊಳಿಸಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.

ಬೆಳೆ ವಿಮೆ ಕಟ್ಟುವಂತೆ ರೈತರನ್ನು ಪ್ರೋತ್ಸಾಹಿಸಿ; ನಿರ್ಲಕ್ಷ್ಯ ತೋರಿದರೆ ಖಂಡಿತ ಸಹಿಸುವುದಿಲ್ಲ:

ಬೆಳೆ ವಿಮೆ ಕಟ್ಟಿಸುವಲ್ಲಿ ಅಧಿಕಾರಿಗಳು ಯಾವುದೇ ರೀತಿಯಲ್ಲೂ ನಿರ್ಲಕ್ಷಿಸುವುದು ಬೇಡ. ನಷ್ಟ ಅನುಭವಿಸಿದ ರೈತರಿಗೆ ವಿಮೆ ಹಣ ಸಿಗುವಂತೆ ನೋಡಿಕೊಳ್ಳಬೇಕು. ಇದರಲ್ಲಿ ಲೋಪ, ನಿರ್ಲಕ್ಷ್ಯ ಕಂಡು ಬಂದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ 1.86 ಲಕ್ಷ ಜಾನುವಾರು, 10 ಲಕ್ಷ ಕುರಿ-ಮೇಕೆಗಳಿವೆ. ‌3 ಲಕ್ಷ ಟನ್ ಮೇವು ಸಂಗ್ರಹವಿದೆ ಎಂದು ಮಾಹಿತಿ ನೀಡಿದ್ದೀರಿ. ಮೇವು ಸಂಗ್ರಹ ಯಾವ ಆಧಾರದ‌ ಮೇಲೆ ಮಾಹಿತಿ ನೀಡಿದ್ದೀರಿ. ರೈತರ ಬಳಿ ಮೇವು ಇರುವುದನ್ನು ಖಾತ್ರಿ‌ ಪಡಿಸಿಕೊಂಡಿದ್ದೀರ? ಎಂದು ಪ್ರಶ್ನಿಸಿದರು.

ಮುಂದಿನ ಬೇಸಿಗೆಗೆ ಯಾವುದೇ ರೀತಿಯಲ್ಲಿ ಮೇವಿನ ಕೊರತೆ ಎದುರಾಗಬಾರದು. ನೀರು ಲಭ್ಯತೆ ಇರುವ ರೈತರಿಗೆ ಬೀಜ ವಿತರಿಸಿ, ಮೇವು ಬೆಳೆಯಲು ಪ್ರೋತ್ಸಾಹಿಸಿ ಎಂದು ನಿರ್ದೇಶಿಸಿದರು.

ಕುಡಿಯುವ ನೀರಿಗಾಗಿ ಕ್ಷೇತ್ರವಾರು 1 ಕೋಟಿ ರೂ. ನೀಡಲಾಗುತ್ತಿದೆ. ಈ ಬಗ್ಗೆ ತಾಲ್ಲೂಕು ಟಾಸ್ಕ್‌ಫೋರ್ಸ್ ತಂಡವೂ ಕ್ರಿಯಾ ಯೋಜನೆ ರೂಪಿಸಬೇಕು. ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಿರಂತರವಾಗಿ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

150 ವರ್ಷದ ಹಿಂದಿನ ಬರದ ಪರಿಸ್ಥಿತಿ ರಾಜ್ಯದಲ್ಲಿ ಎದುರಾಗಿದೆ. ಭಯಾನಕ ಚಿತ್ರಣ ನಮ್ಮ‌ ಮುಂದೆ ಕಾಣಿಸುತ್ತಿದೆ‌. ಕುಡಿಯುವ ನೀರಿಗೆ ಸಂಚಕಾರ ಬರುವ ರೀತಿಯಲ್ಲಿ ಪ್ರಕೃತಿಯ ಬೆಳವಣಿಗೆ ಆಗಿದೆ‌. ಪ್ರತಿವರ್ಷ ಜೂನ್ ನಂತರ ಹೆಚ್ಚು ಮಳೆ ಬರುವುದು ವಾಡಿಕೆ. ವಾಡಿಕೆಯಷ್ಟು ಮಳೆಯಾಗದ ಕಾರಣ ಯಾವುದೇ ಬೆಳೆಗಳನ್ನು ಹಾಕಲು ಸಾಧ್ಯವಾಗಿಲ್ಲ.‌ ರಾಜ್ಯದಾದ್ಯಂತ ಶೇ. 40ಕ್ಕಿಂತ ಕಡಿಮೆ ಬಿತ್ತನೆಯಾಗಿದೆ. ಅದು ಕೂಡ ಒಣಗಿದ್ದು, ಕೃಷಿ ಚಟುವಟಿಕೆಗಳು ಸಂಪೂರ್ಣ ನಷ್ಟವಾಗಿದೆ‌ ಎಂದು ಅಧಿಕಾರಿಗಳಿಗೆ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಡಿಸಿಎಂ ವಿವರಿಸಿದರು.

ಕರಾವಾಳಿ, ಮಲೆನಾಡು ಪ್ರದೇಶದಲ್ಲಿ ಸ್ವಲ್ಪ‌ ಪ್ರಮಾಣದಲ್ಲಿ ಮಳೆಯಾಗುತ್ತಿದೆ‌. ಹೀಗಾಗಿ ಆ ಭಾಗದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗುವುದಿಲ್ಲ‌. ಹೊಸದುರ್ಗದಿಂದ ಅನಂತರಪುರ ಜಿಲ್ಲೆವರೆಗೆ ರೈನ್‌ ಶ್ಯಾಡೋ ಏರಿಯಾ ಎಂದು ಕರೆಯಲಾಗಿದೆ.‌ ಕುಡಿಯುವ ನೀರಿಗೆ ಆದ್ಯತೆಯಾಗಿ ಪರಿಗಣಿಸಲಾಗಿದೆ‌. ಬೋರ್‌ವೆಲ್ ಕೊರೆಸುವ ಅಗತ್ಯತೆ ಇದ್ದರೆ ಅಧಿಕಾರಿಗಳು ಕೂಡಲೇ ಕ್ರಮ ವಹಿಸಬೇಕು. ಮೋಟರ್ ಪಂಪ್‌, ವಿದ್ಯುತ್ ಸಂಪರ್ಕವನ್ನು ತ್ವರಿತವಾಗಿ ಕಲ್ಪಿಸಬೇಕು. ಈ ವಿಚಾರದಲ್ಲಿ ಅಧಿಕಾರಿಗಳು ಯಾವುದೇ ರೀತಿಯ ಸಬೂಬು ಹೇಳುವಂತಿಲ್ಲ ಎಂದು ಸ್ಪಷ್ಟ ಸೂಚನೆ ನೀಡಿದರು.

ಗುಳೆ ಹೋಗುವ ಪರಿಸ್ಥಿತಿ ಇಲ್ಲ. ಪಶುಸಂಗೋಪನೆ ಇಲಾಖೆಯವರು ಮೇವಿನ ಬೀಜ ಕಿಟ್ ವಿತರಿಸಿರುವುದು ಸಮಾಧಾನ ತಂದಿದೆ‌. ಫಸಲ್ ಭೀಮಾ ಯೋಜನೆ‌ ವೈಫಲ್ಯ ಕಾಣಿಸುತ್ತಿದೆ. ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಹೆಚ್ಚು ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡಬೇಕು. ಟ್ರಾನ್ಸ್‌ಫಾರ್ಮರ್ ಅಳವಡಿಸಲು ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಬರ ಘೋಷಣೆ ಮಾಡಲು ಕೇಂದ್ರ ಸರ್ಕಾರ ಹತ್ತು ನಿಯಮಗಳನ್ನು ಮಾಡಿದೆ. ಅದರ ಪ್ರಕಾರ ನಾವು ನಡೆಯಬೇಕು.‌ ಅದನ್ನು ಮೀರಿ ನಡೆಯಲು ಆಗುವುದಿಲ್ಲ. ಪ್ರತಿ ತಾಲ್ಲೂಕಿನ ಮಾಹಿತಿಯನ್ನು ಪ್ರತಿದಿನ ಪಡೆಯುತ್ತಿದ್ದೇವೆ. ಗ್ರೌಂಡ್ ಟ್ರೂಥಿಂಗ್ ಆಗಬೇಕು ಎಂದು ಸೂಚನೆ ನೀಡಲಾಗಿದೆ. ಆಗಸ್ಟ್ 15ರ ನಂತರ ಬರ ಘೋಷಣೆಯ ಬಗ್ಗೆ ಯೋಚಿಸಲಾಗುವುದು ಎಂದು ಈ ವೇಳೆ ತಿಳಿಸಿದರು.

ಬಾಕಿ ಇರುವ ಹಕ್ಕುಪತ್ರಗಳ ವಿತರಣೆಗೆ ಕ್ರಮ ವಹಿಸಿ:

1.9 ಲಕ್ಷ ಕಂದಾಯ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಬೇಕಿದೆ. ಎರಡು ತಿಂಗಳೊಳಗಾಗಿ 35 ಸಾವಿರ ಬಾಕಿ ಪ್ರಕರಣಗಳನ್ನು ಪೂರ್ಣಗೊಳಿಸಬೇಕು. ಜಿಲ್ಲೆಯಲ್ಲಿ ದೊಡ್ಡಮಟ್ಟದ ಕಾರ್ಯಕ್ರಮ ಮಾಡಬೇಕು. ಇದಕ್ಕೆ ಸಿಎಂ ಅವರು ಬರುತ್ತಾರೆ. 700ಕ್ಕೂ ಹೆಚ್ಚು ಭೂಮಾಪಕರ ನೇಮಕಾತಿಗೆ ಸರ್ಕಾರ ಮುಂದಾಗಿದೆ. ಕೆಇಎಗೆ ಜವಾಬ್ದಾರಿ ವಹಿಸಲಾಗಿದೆ ಎಂದರು.

ಕಲುಷಿತ ನೀರು ಸರಬರಾಜು ಆಗುವ ಸಾಧ್ಯತೆ ಇರುತ್ತದೆ. ಇದರಿಂದ ಜನರು ಅನಾರೋಗ್ಯಕ್ಕೆ ತುತ್ತಾಗಬಹುದು. ಇದಕ್ಕೆ ಅವಕಾಶ ಕಲ್ಪಿಸಬಾರದು. ಸಾಂಕ್ರಾಮಿಕ ರೋಗಗಳು ಬರುತ್ತವೆ. ಈ ಬಗ್ಗೆಯೂ ಎಚ್ಚರಿಕೆ ವಹಿಸಬೇಕು ಎಂದ ಅವರು, ವಿಬಿ ಜಿ ರಾಮ್ ಜಿ ಯೋಜನೆ ಸರಿಯಾದ ರೀತಿಯಲ್ಲಿ ನಡೆಯಬೇಕು. ನಿಮಗೆ ನೀಡಿರುವ ಮಾನವ ದಿನಗಳನ್ನು ಪೂರ್ಣಗೊಳಿಸಬೇಕು. ಜನಗಳಿಗೆ ಉಪಯೋಗ ಆಗುವಂತ ಕೆಲಸಗಳನ್ನು ಮಾಡಬೇಕು. ಸರ್ಕಾರ ಹಣ ನೀಡಲಿದೆ ಎಂದು ತಿಳಿಸಿದರು.

ಕಡಿಮೆ ನೀರಿನಿಂದ ಬೆಳೆ ಬೆಳೆಯಲು ಪ್ರೋತ್ಸಾಹಿಸಬೇಕು. 165 ಮಳೆ ಮಾಪನ ಕೇಂದ್ರಗಳಲ್ಲಿ 105 ಮಳೆ ಮಾಪನ ಕೇಂದ್ರಗಳು ಕಾರ್ಯನಿರ್ವಹಣೆಯಲ್ಲಿವೆ. ಸರಿ ಇಲ್ಲದ್ದನ್ನು ಕೂಡಲೇ ದುರಸ್ತಿಗೊಳಿಸಬೇಕು ಎಂದು ಸೂಚಿಸಿದರು.

ಸಾರ್ವಜನಿಕ ಸೇವೆಗಳು ಜನರಿಗೆ ಸುಲಭವಾಗಿ ಸಿಗಬೇಕು. ಪ್ರಜಾಸೇವಾ ಇಲಾಖೆಯನ್ನು ಆರಂಭಿಸಲಾಗುತ್ತಿದೆ. ಜನರನ್ನು ಕಚೇರಿಗಳಿಗೆ ಅಲೆದಾಡಿಸಬಾರದು. ಕಡತಗಳನ್ನು ತಿಂಗಳಾನುಗಟ್ಟಲೇ ಇಟ್ಟುಕೊಳ್ಳಬಾರದು. ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು. ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ ಮತ್ತು ಸಿಇಒ ಅವರಿಗೆ ಸೂಚನೆ ನೀಡಿದರು.

ಜನರಿಗೆ ಬೇಕಾದ ಕೆಲಸ ಮಾಡದಿದ್ದರೆ ಸರ್ಕಾರ ಮತ್ತು ನೀವುಗಳು ಯಾಕೆ ಇರಬೇಕು. ಈ ವರ್ಷ ನಿಮ್ಮ ಶ್ರಮ ಹೆಚ್ಚಿದೆ. ನೀವು ನಿರ್ಲಕ್ಷ್ಯ ವಹಿಸಿದರೆ ತಪ್ಪಿತಸ್ಥರಾಗುತ್ತೀರಿ. ಸ್ವಲ್ಪ ಎಚ್ಚರಿಕೆ ಮತ್ತು ಮುತುವರ್ಜಿಯಿಂದ ಜನರಿಗಾಗಿ ಕೆಲಸ ಮಾಡಿ ಎಂದು ಎಚ್ಚರಿಸಿದರು.

ಗೌರಿಬಿದನೂರಿನಲ್ಲಿ ಸಾಮಾನ್ಯ ಮಳೆಯಾಗಿದೆ ಎಂದು ವರದಿ ಹೇಳುತ್ತದೆ. ಆದರೆ, ಬಿತ್ತನೆ ಪ್ರಮಾಣ ಕಡಿಮೆ ಇದೆ. ಬರ ಪರಿಸ್ಥಿತಿ ಇದೆ ಎಂದು ಗೌರಿಬಿದನೂರು ಶಾಸಕ ಪುಟ್ಟಸ್ವಾಮಿಗೌಡ ಅವರು ಈ ವೇಳೆ ಪ್ರಸ್ತಾಪಿಸಿದರು. ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ಸಮಸ್ಯೆ ಜಾಸ್ತಿಯಾಗುತ್ತದೆ. ಜನರು ಕಷ್ಟಕ್ಕೆ ಸಿಲುಕುತ್ತಾರೆ. ಅಧಿಕಾರಿಗಳು ಗ್ರೌಂಡ್ ಟ್ರೂಥಿಂಗ್ ಮಾಡಿ, ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.


Share

You cannot copy content of this page