ಸಮಗ್ರ ಸುದ್ದಿ

ಇಂದು ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ, ವರನಟ ಡಾ.ರಾಜ್ ಕುಮಾರ್ ಜನ್ಮದಿನ

Share

ಬೆಂಗಳೂರು: ಇಂದು ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ, ವರನಟ ಸರಸ್ವತಿ ಪುತ್ರ ಡಾ. ರಾಜ್‌ಕುಮಾರ್ ಅವರ 97ನೇ ಜನ್ಮದಿನ. ಐದು ದಶಕಗಳ ಕಾಲ ಬೆಳ್ಳಿತೆರೆಯನ್ನು ಆಳಿದ ಆ ಮಹಾನ್ ಚೇತನ ಇಂದು ನಮ್ಮೊಂದಿಗಿಲ್ಲದಿದ್ದರೂ, ಪ್ರತಿಯೊಬ್ಬ ಕನ್ನಡಿಗನ ಉಸಿರಿನಲ್ಲಿ ಅಣ್ಣಾವ್ರು ಅಜರಾಮರ.

ಸಿನಿಮಾ ಎಂಬ ಮಾಯಾಲೋಕಕ್ಕೆ ‘ಬೇಡರ ಕಣ್ಣಪ್ಪ’ನಾಗಿ ಪಾದಾರ್ಪಣೆ ಮಾಡಿದವರು ಮುತ್ತುರಾಜ್. ಮೊದಲ ಚಿತ್ರದಲ್ಲೇ ಕಣ್ಣನ್ನೇ ಕಿತ್ತು ಶಿವನಿಗೆ ಅರ್ಪಿಸುವ ಮೂಲಕ ಭಕ್ತಿಯ ಪರಕಾಷ್ಠೆ ಮೆರೆದ ಈ ನಟ, ಮುಂದೆ ಇಡೀ ಚಿತ್ರರಂಗದ ಕಣ್ಣಾದರು.

ಸತ್ಯ ಹರಿಶ್ಚಂದ್ರ, ಭಕ್ತ ಕುಂಬಾರ, ಭಕ್ತ ಪ್ರಹ್ಲಾದ ಚಿತ್ರಗಳ ಮೂಲಕ ಪೌರಾಣಿಕ ಪಾತ್ರಗಳಿಗೆ ಜೀವ ತುಂಬಿದರು. ಪೌರಾಣಿಕವಷ್ಟೇ ಅಲ್ಲ, ಬಬ್ರುವಾಹನನ ವೀರಾವೇಶ, ಕವಿರತ್ನ ಕಾಳಿದಾಸನ ಸಾಹಿತ್ಯಿಕ ವೈಭವ ಇಂದಿಗೂ ವಿಶ್ವದಾಖಲೆ.

ರಾಜಕುಮಾರ್ ಕೇವಲ ನಟನಾಗಿ ಉಳಿಯಲಿಲ್ಲ, ಅವರು ಸಮಾಜದ ಕನ್ನಡಿಯಾದರು. 70 ರಿಂದ 90ರ ದಶಕದವರೆಗೆ ಅವರ ಚಿತ್ರಗಳು ಜನರ ಜೀವನಾಡಿಯಾದವು. ಬಂಗಾರದ ಮನುಷ್ಯ ಚಿತ್ರದ ರಾಜೀವನ ಪಾತ್ರ ನೋಡಿ ಸಾವಿರಾರು ಯುವಕರು ಹಳ್ಳಿಗಳಿಗೆ ಮರಳಿ ಕೃಷಿ ಆರಂಭಿಸಿದ್ದು ಇತಿಹಾಸ.
ಕಸ್ತೂರಿ ನಿವಾಸದ ದಾನಗುಣ, ಭಾಗ್ಯವಂತರು ಚಿತ್ರದ ಮುಗ್ಧತೆ, ಜೀವನ ಚೈತ್ರದ ಬದುಕಿನ ಸಾರ ಕನ್ನಡಿಗರಿಗೆ ಪಾಠವಾಯಿತು. ಬದುಕಿದ್ದಷ್ಟೂ ದಿನವೂ ಆದರ್ಶದ ನೆಲೆಯಲ್ಲಿಯೇ ಜೀವನ ಸಾಗಿಸಿದ ಇವರು ಸರಳತೆಯ ಸಾಕಾರ ಮೂರ್ತಿ.

ನಾಯಕ ನಟನಾಗಿ ಮಾತ್ರವಲ್ಲದೆ, ಅದ್ಭುತ ಗಾಯಕನಾಗಿಯೂ ರಾಜಕುಮಾರ್ ವಿಶ್ವಮಟ್ಟದಲ್ಲಿ ಹೆಸರು ಮಾಡಿದರು.

ಪಿ.ಬಿ. ಶ್ರೀನಿವಾಸ್ ಅವರ ಧ್ವನಿಯಲ್ಲಿ ಮೊಳಗುತ್ತಿದ್ದ ರಾಜ್ ಕುಮಾರ್‌ ಮುಂದೆ ಸ್ವತಃ ಹಾಡಲು ಶುರು ಮಾಡಿದಾಗ ‘ಗಾನಗಂಧರ್ವ’ನಾಗಿ ಹೊರಹೊಮ್ಮಿದರು.

ಕನ್ನಡ ನೆಲ, ಜಲ ಮತ್ತು ಭಾಷೆಯ ವಿಷಯ ಬಂದಾಗ ರಾಜ್‌ ಕುಮಾರ್‌ ಸಿಂಹದಂತೆ ಗರ್ಜಿಸಿದರು. ಗೋಕಾಕ್ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದು ಕನ್ನಡಿಗರ ಮನಗೆದ್ದರು.

ಅಷ್ಟು ದೊಡ್ಡ ಮಟ್ಟಕ್ಕೆ ಬೆಳೆದರೂ, ನಾನು ಮೇಲೆ ಬಂದಿದ್ದು ನಿಮ್ಮಿಂದ ಎಂದು ಅಭಿಮಾನಿಗಳನ್ನೇ ದೇವರು ಎಂದು ಕರೆದ ಮಹಾ ಮಾನತಾವಾದಿ ಆಗಿದ್ದಾರೆ.

ಶಂಕರ್ ಗುರು ಚಿತ್ರದ ತ್ರಿಪಾತ್ರ ಅಭಿನಯವಿರಲಿ, ಜೇಡರ ಬಲೆಯ ಗೂಢಚಾರನ ಸಾಹಸವಿರಲಿ, ಪ್ರತೀ ಪಾತ್ರಕ್ಕೂ ರಾಜ್ ಅನ್ವರ್ಥ ನಾಮವಾದರು. ಕರ್ನಾಟಕ ರತ್ನ, ನಟಸಾರ್ವಭೌಮ ಹೀಗೆ ಬಿರುದುಗಳ ಪಟ್ಟಿಯೇ ದೊಡ್ಡದಿದೆ.

ರಾಜಕುಮಾರ್ ಅವರ ಜೀವನದಲ್ಲಿ ಎದುರಾದ ಅತ್ಯಂತ ದೊಡ್ಡ ಸವಾಲು ಅಂದರೆ ಅದು ಕಾಡುಗಳ್ಳ ವೀರಪ್ಪನ್‌ನಿಂದಾದ ಅಪಹರಣ. 2000ನೇ ಸಾಲಿನ ಜುಲೈ 30 ರಂದು ಗಾಜನೂರಿನ ಫಾರ್ಮ್‌ಹೌಸ್‌ನಿಂದ ಅಪಹರಿಸಿದಾಗ ಇಡೀ ಕರ್ನಾಟಕವೇ ಸ್ತಬ್ದವಾಗಿತ್ತು.
108 ದಿನಗಳ ಕಾಲ ದಟ್ಟಾರಣ್ಯದಲ್ಲಿ ಬಂಧಿಯಾಗಿದ್ದರೂ, ಎದೆಗುಂದಲಿಲ್ಲ. ಬದಲಿಗೆ, ಅಲ್ಲಿಯೂ ತಮ್ಮ ಸರಳತೆ ಮತ್ತು ವ್ಯಕ್ತಿತ್ವದಿಂದ ಅಪಹರಣಕಾರರನ್ನೇ ಮಂತ್ರಮುಗ್ಧಗೊಳಿಸಿದ್ದರು.

ರಾಜ್‌ಕುಮಾರ್‌ ಕಾಡಿನಲ್ಲಿದ್ದಾಗ ನಾಡಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದು ಅವರು ಕಳಿಸಿದ ಆಡಿಯೋ ಸಂದೇಶಗಳು ಅವರ ಶಾಂತಿಪ್ರಿಯತೆಗೆ ಸಾಕ್ಷಿಯಾಗಿದೆ. ಮರಳಿ ಬಂದಾಗಲೂ ವೀರಪ್ಪನ್ ಬಗ್ಗೆ ದ್ವೇಷ ಕಾರದೆ, ‘ಅವನೂ ಮನುಷ್ಯ’ ಎಂಬಂತೆ ವರ್ತಿಸಿದ ರಾಜ್ ಕುಮಾರ್, ನಿಜ ಅರ್ಥದಲ್ಲಿ ದೇವತಾ ಮನುಷ್ಯ ಎನಿಸಿಕೊಂಡರು.

ಒಟ್ಟಾರೆ ಡಾ. ರಾಜ್‌ಕುಮಾರ್ ಎಂದರೆ ಕೇವಲ ಹೆಸರಲ್ಲ, ಅದೊಂದು ಸಂಸ್ಕೃತಿ. ಕನ್ನಡಿಗರ ಅಸ್ಮಿತೆ. ಅವರು ಭೌತಿಕವಾಗಿ ನಮ್ಮನ್ನು ಅಗಲಿದ್ದರೂ, ಅವರ ಆದರ್ಶಗಳು ಮತ್ತು ಸಿನಿಮಾಗಳು ನಮ್ಮನ್ನು ಸದಾ ಮುನ್ನಡೆಸುತ್ತವೆ. ಅಣ್ಣಾವ್ರು ಮತ್ತೊಮ್ಮೆ ಈ ಪುಣ್ಯಭೂಮಿಯಲ್ಲಿ ಹುಟ್ಟಿ ಬರಲಿ ಎಂಬುದು ಕೋಟ್ಯಂತರ ಕನ್ನಡಿಗರ ಹಾರೈಕೆ.
ವರದಿ: ಪ್ರಭುಸ್ವಾಮಿ


Share

You cannot copy content of this page