ಬೆಂಗಳೂರು:ಕರ್ನಾಟಕ ರಾಜ್ಯದಲ್ಲಿ ಇಂಧನ ಪೂರೈಕೆಯು ಸ್ಥಿರವಾಗಿದ್ದು, ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ನ ಕೊರತೆಯಿಲ್ಲ. ಹಾಗಾಗಿ ಸಾರ್ವಜನಿಕರು ಸುಳ್ಳು ಸುದ್ದಿಗಳಿಂದ ಆತಂಕಕ್ಕೆ ಒಳಗಾಗಬಾರದೆಂದು ಇಂಡಿಯನ್ ಆಯಿಲ್ ಕಾಪೆರ್Çರೇಶನ್ ಲಿಮಿಟೆಡ್ ನ ಕಾರ್ಯನಿರ್ವಾಹಕ ನಿರ್ದೇಶಕರಾದ ಸಿದ್ಧಾರ್ಥ ಅಗರವಾಲ್ ಅವರು ತಿಳಿಸಿದ್ದಾರೆ.
ಇಂದು ಪ್ರೆಸ್ ಇನ್ಫಾರ್ಮೆಶನ್ ಬ್ಯೂರೋ ಅವರು ಪಶ್ಷಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ತೈಲ ಮತ್ತು ಎಲ್ಪಿಜಿ ಗ್ಯಾಸ್ ಬಿಕ್ಕಟ್ಟು ಎದುರಾಗಿದೆ ಎಂದು ಸಾರ್ವಜನಿಕರು ಆತಂಕಗೊಂಡಿರುವ ಹಿನ್ನೆಲೆಯಲ್ಲಿ ಈ ಕುರಿತು ಸ್ಪಷ್ಟ ಮಾಹಿತಿ ನೀಡುವ ಸಲುವಾಗಿ ತೈಲ ಮಾರುಕಟ್ಟೆ ಕಂಪನಿಗಳ ರಾಜ್ಯ ಮಟ್ಟದ ಸಂಯೋಜಕರಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಅವರೊಂದಿಗೆ ಏರ್ಪಡಿಸಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿಯನ್ನು ನೀಡಿದ ಅವರು, ಯಾವುದೇ ಕಾರಣಕ್ಕೂ ಸಾರ್ವಜನಿಕರು ಅಧಿಕ ಬೆಲೆ ಕೊಟ್ಟು ಗ್ಯಾಸ್ ಸಿಲಿಂಡರ್ ಖರೀದಿಸುವ ಅವಶ್ಯಕತೆ ಇಲ್ಲ. ಸುಳ್ಳು ಸುದ್ದಿಗಳಿಂದ ಗ್ಯಾಸ್ ಬುಕಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದ್ದರಿಂದ ಸರಬರಾಜಿನಲ್ಲಿ ವ್ಯತ್ಯಯವಾಗಿತ್ತು. ಈಗ ಬುಕಿಂಗ್ ಮಾಡುವುದು ಇಳಿಕೆಯಾಗಿರುವುದರಿಂದ ಸರಬರಾಜು ಮೊದಲಿನ ಸ್ಥಿತಿಗೆ ಬಂದಿದೆ. ಹಾಗಾಗಿ ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ 7593 ಇಂಧನ ಕೇಂದ್ರಗಳಿದ್ದು, ಇವುಗಳಲ್ಲಿ 2,964 ಇಂಡಿಯನ್ ಆಯಿಲ್ ಕಂಪನಿಯ ಮಳಿಗೆಗಳು, 1.911 ಭಾರತ್ ಪೆಟ್ರೋಲಿಯಂ ಮಳಿಗೆಗಳು ಮತ್ತು 1,722 ಹಿಂದೂಸ್ತಾನ್ ಪೆಟ್ರೋಲಿಯಂ ಮಳಿಗೆಗಳು ಹಾಗೂ ಖಾಸಗಿ ಕಂಪನಿಗಳ ಮಳಿಗೆಗಳಿವೆ. ಹಾಗಾಗಿ ರಾಜ್ಯದ ಯಾವುದೇ ಭಾಗದಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಕೊರತೆಯಿಲ್ಲ. ಆದಾಗ್ಯೂ ಎಲ್ಲಾ ವರ್ಗದ ಜನರಿಗೆ ನಮ್ಮ ಕಂಪನಿಗಳ ಮಳಿಗೆಗಳಲ್ಲಿ 570 ರೂ.ಗಳಿಗೆ 5 ಕೆ.ಜಿಯ ಗ್ಯಾಸ್ ಸಿಲಿಂಡರ್ ಅನ್ನು ವಿತರಿಸಲಾಗುತ್ತಿದೆ. ಸರ್ಕಾರದ ಯಾವುದಾದರು ಗುರುತಿನ ಚೀಟಿ ತೋರಿಸಿ ಸಾರ್ವಜನಿಕರು ಪಡೆದುಕೊಳ್ಳಬಹುದಾಗಿದ್ದು, 5 ದಿನಗಳ ನಂತರ ಖಾಲಿ ಸಿಲಿಂಡರ್ ನೀಡಿ ಮತ್ತೊಂದು ಸಿಲಿಂಡರ್ ಅನ್ನು ಪಡೆಯಬಹುದು ಎಂದು ಸಿದ್ಧಾರ್ಥ ಅಗರವಾಲ್ ಅವರು ತಿಳಿಸಿದರು.
ಕರ್ನಾಟಕ ರಾಜ್ಯವು ಸುಸಂಘಟಿತ ಪೆಟ್ರೋಲಿಯಂ ಮೂಲಸೌಕರ್ಯ ಜಾಲವನ್ನು ಹೊಂದಿದ್ದು, 15 ಮೆಟ್ರಿಕ್ ಟನ್ಸ್ ಪರ್ ಆನಮ್ ಕಚ್ಚಾ ತೈಲ ಸಂಸ್ಕರಣಾ ಸಾಮಥ್ರ್ಯದ ಸಂಸ್ಕರಣಾಗಾರವನ್ನು ಹೊಂದಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 10 ಟರ್ಮಿನಲ್ ಮತ್ತು 10 ಬಲ್ಕ್ ಡಿಪೋಗಳಿದ್ದು, ಪೆಟ್ರೋಲಿಯಂ ಉತ್ಪನ್ನಗಳ ಕೊರತೆಯನ್ನು ನೀಗಿಸುತ್ತಿವೆ.
ಇನ್ನು ಆಟೋ ಎಲ್ ಪಿ ಜಿಗೆ ಸಂಬಂಧಿಸಿದಂತೆ ಉದ್ಭವಿಸಿರುವ ಬಿಕ್ಕಟ್ಟಿಗೆ ಕಾರಣ ಖಾಸಗಿ ಕಂಪನಿಗಳ ಕಾರ್ಯಾಚರಣೆ ಕಡಿಮೆಯಾಗಿರುವುದು. ರಾಜ್ಯದಲ್ಲಿ ನಮ್ಮ ಕಂಪನಿಗಳಿಂದ ನಿರ್ವಹಿಸಲ್ಪಡುತ್ತಿರುವ ಒಟ್ಟು 67 ಪಿ ಎಸ್ ಯು ಆಟೋ ಎಲ್ ಪಿ ಜಿ ಸ್ಟೇಷನ್ಗಳಲ್ಲಿ ಕೊರತೆ ಕಂಡು ಬಂದಿರುವುದಿಲ್ಲ. ಖಾಸಗಿ ಕಂಪನಿಗಳು ನಮ್ಮ ಹಿಡಿತದಲ್ಲಿ ಇರದ ಕಾರಣ ಅವರು ದರವನ್ನು ಹೆಚ್ಚಿಸಿಕೊಂಡಿದ್ದಾರೆ. ಆದರೆ ನಮ್ಮ ಕಂಪನಿಗಳು ಈ ಸಂದರ್ಭದಲ್ಲಿ ತೈಲ ಮತ್ತು ಗ್ಯಾಸ್ ಬೆಲೆಯನ್ನು ಹೆಚ್ಚಿಸಿರುವುದಿಲ್ಲ. ಕರ್ನಾಟಕ ರಾಜ್ಯ ಸರ್ಕಾರವು ಹೊರಡಿಸಿರುವ ಆದೇಶದಂತೆ ನಾವು ಗೃಹ ಬಳಕೆ, ಶಾಲಾ-ಕಾಲೇಜು, ಆಸ್ಪತ್ರೆ, ಸಾರಿಗೆ, ಮುಂತಾದ ಅಗತ್ಯ ವಲಯಗಳಿಗೆ ಮೊದಲ ಆದ್ಯತೆಯನ್ನು ನೀಡಿ ವಾಣಿಜ್ಯ ಎಲ್ ಪಿ ಜಿ ಗಳನ್ನು ಪೂರೈಕೆ ಮಾಡಲಾಗುತ್ತಿದೆ ಎಂದರು.
ಈ ಸಮಯವನ್ನು ದುರ್ಬಳಕೆ ಮಾಡಿಕೊಂಡು ಹೆಚ್ಚಿನ ದರದಲ್ಲಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಸುಮಾರು 3,700 ಕ್ಕೂ ಹೆಚ್ಚು ಮಳಿಗೆಗಳು ಮತ್ತು ಎಲ್ ಪಿ ಜಿ ವಿತರಕರ ಮೇಲೆ ರಾಜ್ಯ ಸರ್ಕಾರ ಮತ್ತು ತೈಲ ಕಂಪನಿಗಳು ದಾಳಿ ಮತ್ತು ತಪಾಸಣೆಯನ್ನು ನಡೆಸಿ, ಎಫ್ ಐ ಆರ್ ಅನ್ನು ದಾಖಲಿಸಲಾಗಿದೆ ಎಂದು ತಿಳಿಸಿದರು.
ಗ್ಯಾಸ್ ಅಥಾರಿಟಿ ಆಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ಸಂಜಯ್ ಕುಮಾರ್ ಸಿಂಗ್ ಅವರು ಮಾತನಾಡಿ ಎಲ್ ಪಿ ಜಿ ಸಿಲಿಂಡರ್ ಬದಲಿಗೆ ಕೊಳವೆ ಮೂಲಕ ಗ್ಯಾಸ್ ಸರಬರಾಜು ಮಾಡಲಾಗುವ ಪಿ ಎನ್ ಜಿ ಗೆ ಬದಲಾವಣೆ ಮಾಡಿಕೊಂಡರೆ, ಸಾರ್ವಜನಿಕರಿಗೆ ಸಿಲಿಂಡರ್ ಸಮಸ್ಯೆ ಬಗೆಹರಿಯಲಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ನಗರಗಳಲ್ಲಿ ಈಗಾಗಲೇ ಪೈಪ್ ಲೈನ್ ವ್ಯವಸ್ಥೆಯನ್ನು ಮಾಡಲಾಗಿದೆ. ಹಾಗಾಗಿ ಸಾರ್ವಜನಿಕರು ಈ ವ್ಯವಸ್ಥೆಯನ್ನು ಪಡೆಯಲು ತೈಲ ಕಂಪನಿಗಳ ವೆಬ್ ಸೈಟ್ ಮೂಲಕ ಆನ್ ಲೈನ್ ಅರ್ಜಿಯನ್ನು ಸಲ್ಲಿಸಬಹುದು, ಅಥವಾ ಕಂಪನಿಯ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಪ್ರೆಸ್ ಇನ್ಫಾರ್ಮೆಶನ್ ಬ್ಯೂರೋದ ಹೆಚ್ಚುವರಿ ಮಹಾ ನಿರ್ದೇಶಕರಾದ ಎಸ್.ಜಿ.ರವೀಂದ್ರ, ಭಾರತ್ ಪೆಟ್ರೋಲಿಯಂ ನ ನೀರಾ ಸಿಂಗ್, ಸೇರಿದಂತೆ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
