ಬೆಂಗಳೂರು:ರಾಜ್ಯದಲ್ಲಿ ಕೃಷಿ ಹಾಗೂ ಕೃಷಿ ತಂತ್ರಜ್ಞಾನ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧವಾಗಿರುವ ಸರ್ಕಾರವು, ಕೃಷಿಕರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಕಾರ್ಯಗತಗೊಳಿಸಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಗ್ರಿ-ಟೆಕ್ ಸಮಿಟ್-2026ರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಕೃಷಿ ಸಚಿವರು,ರಾಜ್ಯ ಆರ್ಥಿಕತೆಯಲ್ಲಿ ಕೃಷಿಯ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಒಟ್ಟು ರಾಜ್ಯದ ಆದಾಯದಲ್ಲಿ ಶೇಕಡಾ 17ರಷ್ಟು ಕೊಡುಗೆ ನೀಡುವುದರೊಂದಿಗೆ, ಶೇಕಡಾ 58ರಷ್ಟು ಜನರಿಗೆ ಉದ್ಯೋಗವನ್ನು ಒದಗಿಸುವ ಪ್ರಮುಖ ಕ್ಷೇತ್ರವಾಗಿದೆ. 2025-26ನೇ ಸಾಲಿನಲ್ಲಿ ದೇಶದ ಆಹಾರ ಉತ್ಪಾದನೆ 355 ದಶಲಕ್ಷ ಟನ್ ತಲುಪುವ ನಿರೀಕ್ಷೆಯಿದ್ದು, ಕರ್ನಾಟಕ ರಾಜ್ಯದಲ್ಲಿಯೂ ಆಹಾರ ಉತ್ಪಾದನೆ 155-160 ದಶಲಕ್ಷ ಟನ್ ಮಟ್ಟದಲ್ಲಿ ಸಾಧನೆಯಾಗಿದೆ ಎಂದು ಸಚಿವರು ತಿಳಿಸಿದರು.
ರಾಜ್ಯ ಸರ್ಕಾರದ ಸೂಕ್ತ ಯೋಜನೆಗಳು, ಕೃಷಿ ವಿಜ್ಞಾನಿಗಳ ಸಂಶೋಧನೆಗಳು ಮತ್ತು ರೈತರ ಪರಿಶ್ರಮದ ಪರಿಣಾಮವಾಗಿ ಕೃಷಿ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಕಂಡುಬಂದಿದೆ. ತೋಟಗಾರಿಕೆ ಉತ್ಪಾದನೆ ಹಾಗೂ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಸಂಸ್ಕರಣೆ, ಪ್ಯಾಕೇಜಿಂಗ್, ಬ್ರಾಂಡಿಂಗ್ ಮತ್ತು ಮಾರುಕಟ್ಟೆ ಸಂಪರ್ಕವನ್ನು ಬಲಪಡಿಸುವ ಕ್ರಮಗಳನ್ನು ಕೈಗೊಳ್ಳಲಾಗಿದೆ.
2026-27ನೇ ಸಾಲಿನ ಬಜೆಟ್‌ನಲ್ಲಿ “ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆ”ಯಡಿ ಮುಂದಿನ ಮೂರು ವರ್ಷಗಳಿಗೆ 100 ಕೋಟಿ ರೂ. ಅನುದಾನ ಘೋಷಿಸಲಾಗಿದೆ. ಈ ಯೋಜನೆ ಗ್ರಾಮೀಣ ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ ಎಂದು ಚಲುವರಾಯಸ್ವಾಮಿಯವರು ಹೇಳಿದರು.
ರಾಜ್ಯವು ವೈವಿಧ್ಯಮಯ ಹವಾಮಾನ ವಲಯಗಳನ್ನು ಹೊಂದಿದ್ದು, 49 ಕೃಷಿ ಉತ್ಪನ್ನಗಳಿಗೆ GI ಟ್ಯಾಗ್ ದೊರೆತಿದೆ. ಇದರಿಂದ ಜಾಗತಿಕ ಮಟ್ಟದಲ್ಲಿ ರಫ್ತು ಅವಕಾಶಗಳು ವೃದ್ಧಿಯಾಗಿವೆ. ಕೃಷಿ ಉತ್ಪನ್ನಗಳ ಅಂತಾರಾಷ್ಟ್ರೀಯ ಮಾರುಕಟ್ಟೆ ಪ್ರವೇಶವನ್ನು ಮತ್ತಷ್ಟು ಬಲಪಡಿಸುವತ್ತ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.
ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ರಾಜ್ಯ ಮುಂಚೂಣಿಯಲ್ಲಿದ್ದು, 2020-2025 ಅವಧಿಯಲ್ಲಿ 6500 ಘಟಕಗಳನ್ನು ಸ್ಥಾಪಿಸಿ ಸುಮಾರು 90 ಸಾವಿರ ಜನರಿಗೆ ಉದ್ಯೋಗ ಒದಗಿಸಲಾಗಿದೆ. ಈ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರವು ನಿರಂತರವಾಗಿ ಹೂಡಿಕೆ ಮಾಡುತ್ತಿದೆ ಎಂದು ಹೇಳಿದರು.
ಸರ್ಕಾರವು ಕೃಷಿಯನ್ನು ಆಧುನೀಕರಣಗೊಳಿಸುವುದರ ಜೊತೆಗೆ, ಪರಿಸರ ಸ್ನೇಹಿ ಮತ್ತು ಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುವತ್ತ ದಿಟ್ಟ ಹೆಜ್ಜೆ ಇಡುತ್ತಿದೆ. ಈ ಎಲ್ಲಾ ಕ್ರಮಗಳು ರಾಜ್ಯದ ಕೃಷಿ ಕ್ಷೇತ್ರವನ್ನು ಆರ್ಥಿಕವಾಗಿ ಬಲಪಡಿಸುವುದರ ಜೊತೆಗೆ, ರೈತರ ಜೀವನಮಟ್ಟವನ್ನು ಸುಧಾರಿಸುವ ದಿಕ್ಕಿನಲ್ಲಿ ಮಹತ್ವದ ಪಾತ್ರವಹಿಸಲಿವೆ ಎಂದು ಸಚಿವರು ಅಭಿಪ್ರಾಯಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಸುರೇಶ್ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.
