ಸಮಗ್ರ ಸುದ್ದಿ

ಜಲಮಂಡಳಿ ಅಧ್ಯಕ್ಷರ ಫೋನ್-ಇನ್ ಕಾರ್ಯಕ್ರಮ: 28 ದೂರುಗಳ ಸ್ವೀಕಾರ | ಕಾವೇರಿ ಸಂಪರ್ಕ ಹಾಗೂ ಮಳೆನೀರು ಕೊಯ್ಲು ಅಭಿಯಾನಕ್ಕೆ ಡಾ. ರಾಮ್ ಪ್ರಸಾತ್ ಮನೋಹರ್ ಸೂಚನೆ

Share

ಬೆಂಗಳೂರು: ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಶೀಘ್ರ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ಅವರು ಇಂದು ಖುದ್ದಾಗಿ ‘ಫೋನ್-ಇನ್’ ಕಾರ್ಯಕ್ರಮವನ್ನು ನಡೆಸಿದರು. ಈ ಕಾರ್ಯಕ್ರಮದಲ್ಲಿ ಒಟ್ಟು 28 ದೂರುಗಳನ್ನು ಸ್ವೀಕರಿಸಲಾಯಿತು.

ಸಾರ್ವಜನಿಕರಿಂದ ಬಂದ ಬಹುತೇಕ ಕರೆಗಳು ನೀರಿನ ಬಿಲ್ ಪರಿಷ್ಕರಣೆ ಹಾಗೂ ಸಣ್ಣಪುಟ್ಟ ದುರಸ್ತಿ ಕಾಮಗಾರಿಗಳಿಗೆ ಸಂಬಂಧಿಸಿದ್ದಾಗಿದ್ದವು. ತಮ್ಮ ಮನೆಗೆ ನೀರು ಸರಿಯಾದ ಪ್ರಮಾಣದಲ್ಲಿ ಬರುತ್ತಿಲ್ಲ, ನೀರು ಸರಬರಾಜಿನ ಅವಧಿ ಹೆಚ್ಚಿಸಿ ಎನ್ನುವ 14 ದೂರುಗಳು ಬಂದವು. ಈ ದೂರುಗಳ ಬಗ್ಗೆ ತಕ್ಷಣವೇ ಸಮಸ್ಯೆ ಬಗೆಹರಿಸಿ ಸಮರ್ಪಕ ನೀರು ಪೂರೈಸುವಂತೆ ಅಧ್ಯಕ್ಷರು ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು.

ಹೊಸ ಪ್ರದೇಶಗಳಿಗೆ ಕಾವೇರಿ ಸಂಪರ್ಕ ಅಭಿಯಾನ:

ಇದೇ ವೇಳೆ, ಜಲಮಂಡಳಿಯ ನೀರು ಸರಬರಾಜು ವ್ಯಾಪ್ತಿಗೆ ಇನ್ನೂ ಸೇರ್ಪಡೆಯಾಗದ ಕೆಲವು ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಇರುವುದನ್ನು ಸಾರ್ವಜನಿಕರು ಅಧ್ಯಕ್ಷರ ಗಮನಕ್ಕೆ ತಂದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಡಾ. ರಾಮ್ ಪ್ರಸಾತ್ ಮನೋಹರ್ ಅವರು, ಆ ಪ್ರದೇಶಗಳಲ್ಲಿರುವ ಮನೆಗಳಿಗೆ ಕುಡಿಯುವ ನೀರು ಒದಗಿಸಲು ಶೀಘ್ರವೇ ‘ಕಾವೇರಿ ಸಂಪರ್ಕ ಅಭಿಯಾನ’ವನ್ನು ಪ್ರಾರಂಭಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮಳೆನೀರು ಕೊಯ್ಲು ಜಾಗೃತಿ:

ನಗರದಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಹಾಗೂ ನೀರಿನ ಸದ್ಬಳಕೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ, ನಗರದಾದ್ಯಂತ ‘ಮಳೆನೀರು ಕೊಯ್ಲು’ ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬೃಹತ್ ಅಭಿಯಾನವೊಂದನ್ನು ಹಮ್ಮಿಕೊಳ್ಳುವಂತೆಯೂ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.


Share

You cannot copy content of this page