ಬೆಂಗಳೂರು: ರೈಲ್ವೆ ರಕ್ಷಣಾ ದಳದ ಮಹಾನಿರ್ದೇಶಕರಾದ ಸೋನಾಲಿ ಮಿಶ್ರಾ ಅವರು ಇಂದು ಬೆಂಗಳೂರು ವಿಭಾಗದ ಪ್ರಮುಖ ನಿಲ್ದಾಣಗಳಲ್ಲಿ ಭದ್ರತೆ ಮತ್ತು ಪರಿಚಾಲನೆಗೆ ಸಂಬಂಧಿಸಿದ ಅಂಶಗಳ ಬಗ್ಗೆ ಪರಿಶೀಲನೆಯನ್ನು ನಡೆಸಿದರು.
ಬೇಸಿಗೆಯ ದಟ್ಟಣೆಯನ್ನು ನಿರ್ವಹಿಸಲು ಪ್ರಯಾಣಿಕರ ಹೋಲ್ಡಿಂಗ್ ಏರಿಯಾದ ಪರಿಶೀಲನೆ, ಭದ್ರತಾ ವ್ಯವಸ್ಥೆಯ ಆಧುನೀಕರಣ ಮತ್ತು ಆರ್.ಪಿ.ಎಫ್. ಸಿಬ್ಬಂದಿಗಳ ಯೋಗಕ್ಷೇಮಕ್ಕಾಗಿ ಕೈಗೊಂಡ ಕ್ರಮಗಳ ಬಗ್ಗೆ ಈ ಭೇಟಿಯ ವೇಳೆ ಪರಿಶೀಲಿಸಲಾಯಿತು.
ಮೊದಲಿಗೆ ಬೆಂಗಳೂರು ಕಂಟೋನ್ಮೆಂಟ್ ನಲ್ಲಿ ಮಹಾನಿರ್ದೇಶಕರಿಗೆ ಆರ್.ಪಿ.ಎಫ್. ನಿಂದ ವಿಧ್ಯುಕ್ತ ಗೌರವ ವಂದನೆ ಸಲ್ಲಿಸಲಾಯಿತು.
ರೈಲ್ವೆ ರಕ್ಷಣಾ ದಳದ ಮಹಾನಿರ್ದೇಶಕರು ಕೆ.ಎಸ್.ಆರ್. ಬೆಂಗಳೂರು, ಕೃಷ್ಣರಾಜಪುರಂ ಮತ್ತು ಎಸ್.ಎಂ.ವಿ.ಟಿ. ಬೆಂಗಳೂರು ರೈಲು ನಿಲ್ದಾಣಗಳಲ್ಲಿ ಬೇಸಿಗೆಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಮಾಡಲಾದ ಸಿದ್ಧತೆ, ಪ್ರಯಾಣಿಕರ ಹೋಲ್ಡಿಂಗ್ ಏರಿಯಾವನ್ನು ಪರಿಶೀಲಿಸಿದರು. ಈ ಬಗ್ಗೆ ಬೆಂಗಳೂರು ವಿಭಾಗವು ಕೈಗೊಂಡ ಕ್ರಮಗಳ ಬಗ್ಗೆ ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಆಶುತೋಷ್ ಕುಮಾರ್ ಸಿಂಗ್ ರವರು ಡೈರೆಕ್ಟರ್ ಜನರಲ್ ರವರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸರ್ವಪ್ರಿಯ ಮಯಾಂಕ್, ಹೆಚ್ಚುವರಿ ಮಹಾನಿರ್ದೇಶಕರು, ಸುಮಿತಿ ಶಾಂಡಿಲ್ಯ, ಇನ್ಸ್ಪೆಕ್ಟರ್ ಜನರಲ್ (ಆರ್.ಪಿ.ಎಸ್.ಎಫ್.), ಆರ್.ಎಸ್.ಪಿ. ಸಿಂಗ್, ಇನ್ಸ್ಪೆಕ್ಟರ್ ಜನರಲ್ (ಆರ್.ಪಿ.ಎಫ್.), ನೈರುತ್ಯ ರೈಲ್ವೆ; ಪರೀಕ್ಷಿತ್ ಮೋಹನ್ಪೂರಿಯಾ, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ; ಶ್ರೀಮತಿ ಜೆ.ಕೆ. ರಶ್ಮಿ, ಡಿಐಜಿ, ರೈಲ್ವೆ; ಶ್ರೀಮತಿ ಸರಾ ಫಾತಿಮಾ, ಎಸ್.ಪಿ., ರೈಲ್ವೆ; ಡಾ. ಶ್ರೇಯಾನ್ಸ್ ಚಿಂಚವಾಡೆ, ಹಿರಿಯ ವಿಭಾಗೀಯ ಭದ್ರತಾ ಆಯುಕ್ತ, ಆರ್.ಪಿ.ಎಫ್. ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ರೈಲ್ವೆ ರಕ್ಷಣಾ ದಳದ ಮಹಾನಿರ್ದೇಶಕರು ಸಿಸಿಟಿವಿ ಕಣ್ಗಾವಲು ವ್ಯವಸ್ಥೆ, ಬ್ಯಾಗೇಜ್ ಸ್ಕ್ಯಾನರ್ಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದರು. ಬಳಿಕ ಅವರು ಬೆಂಗಳೂರು ರೈಲು ನಿಲ್ದಾಣದ ಏಕೀಕೃತ ಸಿಸಿಟಿವಿ ಕಮ್ಯಾಂಡ್ ಸೆಂಟರ್ ಗೆ ಭೇಟಿ ನೀಡಿ ಅಳವಡಿಸಲಾದ ಕ್ಯಾಮೆರಾಗಳ ರಿಸೊಲ್ಯುಷನ್ ಮತ್ತು ಕಾರ್ಯದಕ್ಷತೆಯನ್ನು ಪರಿಶೀಲಿಸಿದರು. ನೇರ ದೃಶ್ಯದ ಗುಣಮಟ್ಟ, ವ್ಯಾಪ್ತಿ ಪ್ರದೇಶ ಮತ್ತು ಕಣ್ಗಾವಲು ವ್ಯವಸ್ಥೆಯ ತಾಂತ್ರಿಕ ಸಾಮರ್ಥ್ಯಗಳನ್ನು ಅವರು ಪರಿಶೀಲಿಸಿ ಭದ್ರತಾ ನಿಗಾ ಮೂಲಸೌಕರ್ಯಗಳನ್ನು ಮತ್ತಷ್ಟು ಬಲಪಡಿಸುವ ಕ್ರಮಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಕ್ಕೆ ಭೇಟಿ ನೀಡಿ ಜನದಟ್ಟಣೆಯ ನಿರ್ವಹಣಾ ಕ್ರಮಗಳು, ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಆರ್.ಪಿ.ಎಫ್. ಸಿಬ್ಬಂದಿಗಳ ನಿಯೋಜನೆಯ ಬಗ್ಗೆ ಪರಿಶೀಲಿಸಿದರು. ಕೃಷ್ಣರಾಜಪುರಂ ರೈಲು ನಿಲ್ದಾಣವನ್ನು ಸಹ ಅವರು ಪರಿಶೀಲಿಸಿದರು.
ʼಸೈನಿಕ ಸಮ್ಮೇಳನʼದಲ್ಲಿ ಆರ್.ಪಿ.ಎಫ್. ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ರೈಲ್ವೆ ಜಾಲದಲ್ಲಿ ಸಂಘಟಿತ ಅಪರಾಧ ಮತ್ತು ಮಾನವ ಕಳ್ಳಸಾಗಣೆಯನ್ನು ತಡೆಗಟ್ಟಲು ಅತ್ಯಾಧುನಿಕ ತಂತ್ರಜ್ಞಾನದ ಬಳಕೆ ಮತ್ತು ದತ್ತಾಂಶಗಳ ವಿಶ್ಲೇಷಣೆಯ ಮಹತ್ವಗಳ ಬಗ್ಗೆ ಅವರು ತಿಳಿಸಿದರು. ಆರ್.ಪಿ.ಎಫ್. ಸಿಬ್ಬಂದಿಗಳ ಕುಂದುಕೊರತೆಗಳ ನಿವಾರಣೆ ಮತ್ತು ಅವಶ್ಯಕತೆಗಳ ಬಗ್ಗೆ ತಿಳಿದುಕೊಳ್ಳಲು ಆರ್.ಪಿ.ಎಫ್. ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿದರು.
ಬೆಂಗಳೂರು ವಿಭಾಗದ ಭದ್ರತಾ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಪ್ರಯಾಣಿಕರಿಗೆ ಸುರಕ್ಷತೆ ಮತ್ತು ಸುಭದ್ರತೆಯನ್ನು ಖಾತ್ರಿಪಡಿಸಲು ಅತ್ಯಂತ ಹೆಚ್ಚಿನ ಸಾಮರ್ಥ್ಯ ಮತ್ತು ನಾಗರಿಕ ಕೇಂದ್ರಿತ ದೃಷ್ಟಿಕೋನದಿಂದ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ನಿರ್ದೇಶನ ನೀಡಿದರು.
