ನವದೆಹಲಿ: ನೀತಿ ಆಯೋಗವನ್ನು ಸರ್ಕಾರ, ಪುನರ್ ರಚಿಸಿದ್ದು, ಆರ್ಥಿಕ ತಜ್ಞ ಅಶೋಕ್ ಕುಮಾರ್ ಲಾಹಿರಿ ಅವರನ್ನು ಆಯೋಗದ ಉಪಾಧ್ಯಕ್ಷರಾಗಿ ನೇಮಿಸಲಾಗಿದೆ.
ಈಗಿರುವ ಸುಮನ್ ಕೆ ಬೆರಿ ಅವರ ಸ್ಥಾನಕ್ಕೆ ಅಶೋಕ್ ಲಾಹಿರಿ ನೇಮಕಗೊಂಡಿದ್ದು, ಇವರೊಂದಿಗೆ ರಾಜೀವ್ ಗೌಬ, ಪ್ರೊಫೆಸರ್ ಕೆ.ವಿ. ರಾಜು, ಪ್ರೊಫೆಸರ್ ಗೋಬರ್ಧನ್ ದಾಸ್, ಡಾ. ಎಂ. ಶ್ರೀನಿವಾಸ್ ಮತ್ತು ಪ್ರೊಫೆಸರ್ ಅಭಯ್ ಕರಂಡಿಕರ್ ಅವರನ್ನು ನೀತಿ ಆಯೋಗದ ಪೂರ್ಣಾವಧಿ ಸದಸ್ಯರಾಗಿ ನೇಮಿಸಲಾಗಿದೆ.
ನೂತನವಾಗಿ ನೇಮಕಗೊಂಡಿರುವ ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ಭಾರತದ ನೀತಿ- ನಿರೂಪಣೆ, ಒಕ್ಕೂಟ ವ್ಯವಸ್ಥೆಗೆ ಉತ್ತೇಜನ, ಸುಧಾರಣೆಗಳ ಜಾರಿ ಹಾಗೂ ಸುಗಮ ಜೀವನ ಸ್ಥಾಪಿಸುವತ್ತ ನೀತಿ ಆಯೋಗ ಪ್ರಮುಖ ಆಧಾರ ಸ್ತಂಭವಾಗಿ ಹೊರಹೊಮ್ಮಿದೆ ಎಂದು ಪ್ರಧಾನಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಆವಿಷ್ಕಾರ ಮತ್ತು ದೀರ್ಘಾವಧಿ ಕಾರ್ಯತಂತ್ರ ಅಲೋಚನೆಗೆ ನೀತಿ ಆಯೋಗ ಉತ್ತಮ ವೇದಿಕೆಯಾಗಿ ಸೇವೆ ಸಲ್ಲಿಸುತ್ತಿದೆ. ಅಶೋಕ್ ಲಾಹಿರಿ ಅವರು ಅರ್ಥಶಾಸ್ತ್ರ ಮತ್ತು ಸಾರ್ವಜನಿಕ ನೀತಿಯಲ್ಲಿ ಅಪಾರ ಅನುಭವ ಹೊಂದಿದ್ದು, ಇದು ಭಾರತದ ಸುಧಾರಣಾ ಪಯಣ ಮತ್ತು ವಿಕಸಿತ ಭಾರತದತ್ತ ಪಯಣವನ್ನು ಬಲಪಡಿಸಲಿದೆ. ಲಾಹಿರಿ ಅವರ ಕಾರ್ಯಗಳು ದೇಶದಲ್ಲಿ ನೀತಿ ರಚನೆಗೆ ಶಕ್ತಿ ತುಂಬಲಿದೆ ಎಂದು ಪ್ರಧಾನಿ ಆಶಿಸಿದ್ದಾರೆ.
ನೀತಿ ಆಯೋಗಕ್ಕೆ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಅಶೋಕ್ ಲಾಹರಿ ಅವರು ದೆಹಲಿಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಆರ್ಥಿಕ ತಜ್ಞರಾದ ಅಶೋಕ್ ಕುಮಾರ್ ಲಾಹಿರಿ ಅವರು, ಪಶ್ಚಿಮ ಬಂಗಾಳದ ಶಾಸಕರಾಗಿದ್ದು, ಸದ್ಯದ ಚುನಾವಣೆಗೆ ಅಧಿಕಾರಾವಧಿ ಮುಗಿಯಲಿದೆ. ಈಗ ನಡೆಯುತ್ತಿರುವ ಚುನಾವಣೆಗೆ ಅವರು ಸ್ಪರ್ಧಿಸಿಲ್ಲ. ಅಶೋಕ್ ಲಾಹಿರಿ ಅವರು ಭಾರತ ಸರ್ಕಾರದ 12ನೇ ಮುಖ್ಯ ಆರ್ಥಿಕ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.
