ಬೆಂಗಳೂರು: ಭೂಮಿಯನ್ನು ಮುಂದಿನ ಪೀಳಿಗೆಯವರಿಗೆ ಸಂರಕ್ಷಿಸಿ, ಬೆಳೆಸಿ, ಅಭಿವೃದ್ಧಿಪಡಿಸುವುದು ನಮ್ಮೆಲ್ಲರ ಜವಾಬ್ಧಾರಿಯಾಗಿದೆ. ನಾವು ಭೂಮಿಯನ್ನು ಸರಿಯಾಗಿ ಸಂರಕ್ಷಿಸದಿದ್ದರೆ ನಮ್ಮ ಮುಂದಿನ ಪೀಳಿಗೆಯವರಿಗೆ ಗುಣಮಟ್ಟದ ಆಹಾರ, ನೀರು, ಗಾಳಿ ಸಿಗುವುದಿಲ್ಲ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಅವರು ಆತಂಕ ವ್ಯಕ್ತಪಡಿಸಿದರು.
ಇಂದು ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದವರು ದೂರ ಸಂವೇದಿ ಭವನದಲ್ಲಿ ಕೆ-ಜಿಐಎಸ್ 2.0 ರಾಜ್ಯ ಮಟ್ಟದ ಪ್ರದರ್ಶನ ಮತ್ತು “ಭೂಮಿಯನ್ನು ನಿರ್ವಹಿಸುವ ತಂತ್ರಜ್ಞಾನಗಳು” ಎಂಬ ವಿಷಯದ ಬಗ್ಗೆ ವಿದ್ಯಾರ್ಥಿಗಳ ನಾವೀನ್ಯ ಮಾದರಿ ಕುರಿತು ಏರ್ಪಡಿಸಿದ್ದ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಭೂಮಿಯನ್ನು ನಾವು ನಮ್ಮ ಪೂರ್ವಜರಿಂದ ಬಳುವಳಿ ಪಡೆದಿರುವುದಲ್ಲ. ಮುಂದಿನ ಪೀಳಿಗೆಯವರಿಂದ ಎರವಲು ಪಡೆದಿದ್ದೇವೆ. ಹಾಗಾಗಿ ಅದನ್ನು ಕಾಪಾಡಿಕೊಳ್ಳುವುದು ನಮ್ಮ ಸಾಮಾಜಿಕ ಬದ್ಧತೆಯಾಗಿದೆ ಎಂದರು.
ನಾವು ಈಗ ಎಲ್ಲಾ ವಲಯಗಳಲ್ಲೂ ಏಐ ಸೇರಿದಂತೆ ದೊಡ್ಡಮಟ್ಟದ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತಿದ್ದೇವೆ. ಆದರೆ ನಾವು ಆರೋಗ್ಯವಂತರಾಗಿ ಬದುಕಲು ಅವಶ್ಯಕತೆ ಇರುವಂತಹ ಅವಶ್ಯಕ ಸರಳ ತಂತ್ರಜ್ಞಾನಗಳ ಸಂಶೋಧನೆ ಕಡೆಗೆ ಹೆಚ್ಚಿನ ಗಮನ ನೀಡುತ್ತಿಲ್ಲ ಎಂದು ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ ಆಡಳಿತ ಮಂಡಳಿಯ ಅಧ್ಯಕ್ಷರೂ ಕೂಡ ಆಗಿರುವ ಶಾಲಿನಿ ರಜನೀಶ್ ಅವರು ಅಭಿಪ್ರಾಯಪಟ್ಟರು.
ನಮ್ಮ ಭೂಮಿಯನ್ನು ಸಂರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಹೆಚ್ಚು ಉಪಯೋಗವಾಗುವಂತಹ ಸರಳ ತಂತ್ರಜ್ಞಾನಗಳನ್ನು ಆವಿಷ್ಕಾರ ಮಾಡಿರುವುದಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ ಅವರು, ನೀವು ತಯಾರಿಸಿರುವ ಎಲ್ಲಾ ತಂತ್ರಜ್ಞಾನಗಳ ಬಗ್ಗೆ ಖುದ್ದು ನಾನೇ ಪರಿಶೀಲನೆ ನಡೆಸಿ, ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳಲ್ಲಿ ಖಂಡಿತವಾಗಿ ಅಳವಡಿಸಿಕೊಳ್ಳಲಾಗುವುದೆಂದು ತಿಳಿಸಿದರು.
ನೀವು ಆವಿಷ್ಕಾರ ಮಾಡಿರುವ ತಂತ್ರಜ್ಞಾನಗಳು ಮುಂದಿನ ನೂರು ವರ್ಷಗಳ ತನಕ ಬಳಕೆಯಾಗಲಿವೆ. ಯುವ ಜನರಿಗೆ ಸ್ಟಾರ್ಟ್ ಅಪ್ ಆರಂಭಿಸಲು ಅನುಕೂಲ ಮಾಡಿಕೊಡುವ ಸಲುವಾಗಿ ನಮ್ಮ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಬಳಸಿಕೊಂಡು ತಮ್ಮದೇ ಆದ ಸ್ಟಾರ್ಟ್ ಅಪ್ ಗಳನ್ನು ಹೊಂದುವಂತೆ ಅವರು ವಿಧ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕರ್ನಾಟಕದಾದ್ಯಂತ ಎಂಜಿನಿಯರಿಂಗ್ ಸಂಸ್ಥೆಗಳ ವಿದ್ಯಾರ್ಥಿಗಳು ತಯಾರಿಸಿದ್ದ ನಾವೀನ್ಯ ಮಾದರಿಗಳ ಪ್ರದರ್ಶನವನ್ನು ಡಾ. ಶಾಲಿನಿ ರಜನೀಶ್ ಅವರು ಉದ್ಘಾಟಿಸಿದರು. ಈ ಸ್ಪರ್ಧೆಯಲ್ಲಿ ತಜ್ಞ ತೀರ್ಪುಗಾರರಿಂದ ಆಯ್ಕೆಯಾಗಿದ್ದ 46 ಭರವಸೆಯ ಪರಿಕಲ್ಪನೆಗಳ ತಂತ್ರಜ್ಞಾನಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.
ವಿದ್ಯಾರ್ಥಿಗಳು ಪ್ರಮುಖವಾಗಿ ನೈಜ ಪ್ರಪಂಚದ ಪರಿಸರ ಮತ್ತು ಸಾಮಾಜಿಕ ಸವಾಲುಗಳಿಗೆ ಪರಿಹಾರಗಳನ್ನು ಅಭಿವೃದ್ಧಿಪಡಿಸುವಂತಹ ತಂತ್ರಜ್ಞಾನಗಳನ್ನು ಪ್ರದರ್ಶಿಸಿದ್ದರು.
ನಾವೀನ್ಯತೆ ಮಾದರಿ ಸ್ಪರ್ಧೆಯು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ತಾಂತ್ರಿಕ ಕೌಶಲ್ಯಗಳು ಮತ್ತು ಸಮಸ್ಯೆ ಪರಿಹರಿಸುವ ಸಾಮಥ್ರ್ಯಗಳನ್ನು ಬೆಳೆಸುವ ಉದ್ದೇಶವನ್ನು ಹೊಂದಿರುವ ಜೊತೆಗೆ, ವೈಶಿಷ್ಟ್ಯಪೂರ್ಣ ಸವಾಲುಗಳಂತೆ ಹವಾಮಾನ ಬದಲಾವಣೆ, ಜಲ ಸಂಪನ್ಮೂಲ ನಿರ್ವಹಣೆ, ಸ್ಮಾರ್ಟ್ ಸಿಟಿ ಅಭಿವೃದ್ಧಿ, ಕೃಷಿ, ವಿಪತ್ತು ಸ್ಥಿತಿಸ್ಥಾಪಕತ್ವ ಮತ್ತು ಸುಸ್ಥಿರತೆಯಂತಹ ನೈಜ ಜಗತ್ತಿನ ಸವಾಲುಗಳನ್ನು ಎದುರಿಸುವ ನವೀನ, ಪ್ರಾಯೋಗಿಕ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಪ್ರೇರಣಾದಾಯಕವಾಗಲಿದೆ.
ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ ನಿರ್ದೇಶಕರಾದ ಡಾ. ರಾಜೇಶ್.ಎನ್.ಎಲ್ ಹಾಗೂ ಪ್ರೊ. ಹೊನ್ನೇಗೌಡ ಉಪಸ್ಥಿತರಿದ್ದರು.
