ಬೆಂಗಳೂರು: ಮಳೆ ಅನಾಹುತದಿಂದ ಬೆಂಗಳೂರಿನ ಬೋರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಎಂಟು ಮಂದಿ ಮೃತಪಟ್ಟಿರುವ ದುರದೃಷ್ಟಕರ ಘಟನೆ ನನಗೆ ಅತ್ಯಂತ ನೋವು ತಂದಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಮಾಜಿ ಪ್ರಧಾನಿಗಳು; ಈ ಘಟನೆ ನನಗೆ ಬಹಳ ದುಃಖ ತಂದಿದೆ. ದಯವಿಟ್ಟು ಮಳೆಯ ಸಂದರ್ಭದಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಭಗವಂತ ಮೃತರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಕುಟುಂಬ ವರ್ಗದವರಿಗೆ ನೋವುನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿರುವ ದೇವೇಗೌಡರು; ಸಾರ್ವಜನಿಕರು ದಯವಿಟ್ಟು ಗಾಳಿ, ಮಳೆ, ಗುಡುಗು, ಸಿಡಿಲಿನಂತಹ ಸಂದರ್ಭಗಳಲ್ಲಿ ಎಚ್ಚರದಿಂದ ಇರಬೇಕು. ರಕ್ಷಣೆಗಾಗಿ ಮರಗಳು, ಶೆಡ್, ಕಾಂಪೌಂಡ್ ಸೇರಿದಂತೆ ಹಳೆಯದಾದ ಕಟ್ಟಡಗಳ ಬಳಿ ನಿಲ್ಲಬೇಡಿ. ಪ್ರತಿಯೊಂದು ಜೀವವೂ ಅಮೂಲ್ಯ. ನಿಮ್ಮ ಪ್ರೀತಿ ಪಾತ್ರರೂ ನಿಮಗಾಗಿ ಕಾದಿರುತ್ತಾರೆ ಎಂಬುದನ್ನು ಮರೆಯಬೇಡಿ ಎಂದು ಕಿವಿಮಾತು ಹೇಳಿದ್ದಾರೆ.
ಇನ್ನು ಕೆಲವು ದಿನಗಳಲ್ಲಿ ಮಳೆಗಾಲ ಶುರುವಾಗಲಿದೆ. ರಾಜ್ಯ ಸರ್ಕಾರವು ಸಹ ಮಳೆ ಅನಾಹುತಗಳನ್ನು ತಡೆಯಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡುತ್ತೇನೆ.
ಮೃತರ ಕುಟುಂಬಕ್ಕೆ ಮಾನವೀಯ ನೆಲೆಗಟ್ಟಿನಲ್ಲಿ ಮುಖ್ಯಮಂತ್ರಿಗಳು ಸೂಕ್ತ ಪರಿಹಾರವನ್ನು ಕೊಡಬೇಕೆಂದು ವಿನಂತಿ ಮಾಡುತ್ತೇನೆ ಎಂದು ಮಾಜಿ ಪ್ರಧಾನಿಗಳು ಮನವಿ ಮಾಡಿದ್ದಾರೆ.
