ಕೋಲಾರ: ಬುದ್ಧನ ಬದುಕೇ ಲೌಕಿಕ ಜಗತ್ತಿಗೆ ಅಗತ್ಯವಾಗಿ ಬೇಕಿರುವ ಕಾವ್ಯಾಔಷಧವಾಗಿದ್ದು, ಸಿದ್ಧಾರ್ಥ-ಬುದ್ಧನಾಗುವ ಮಾರ್ಗದಲ್ಲಿ ಪದ ಪಾಂಡಿತ್ಯ, ಶಬ್ದ ಚಮತ್ಕಾರಕ್ಕಿಂತ ಸತ್ಯ ಮತ್ತು ಸರಳತೆ ಬುದ್ಧನ ಆಯ್ಕೆಯಾಗಿತ್ತು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಬಣ್ಣಿಸಿದರು.
ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ ಬುದ್ಧ ಪೂರ್ಣಿಮಾ ಅಂಗವಾಗಿ ಆಯೋಜಿಸಿದ್ದ “ಕಾವ್ಯ ಬಳದಿಂಗಳು” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬುದ್ಧ, ಕಾವ್ಯ ಮತ್ತು ಬೆಳದಿಂಗಳು—ಈ ಮೂರರ ನಡುವೆ ಒಂದು ಅವಿನಾಭಾವ ಸಂಬಂಧವಿದೆ. ಬುದ್ಧನ ಶಾಂತತೆ, ಕಾವ್ಯದ ಸೌಂದರ್ಯ ಮತ್ತು ಬೆಳದಿಂಗಳ ತಂಪು ಇವೆಲ್ಲವೂ ಸಮಾಜಕ್ಕೆ ಮತ್ತು ಮನುಷ್ಯನ ಮನಸ್ಸಿಗೆ ನೆಮ್ಮದಿಯನ್ನು ನೀಡುವ ಅಂಶಗಳು. ಅಪ್ಪ ದೀಪೋ ಭವ” (ನಿನ್ನ ದೀಪ ನೀನೇ ಆಗು) ಎನ್ನುವ ಮಾತು ಬುದ್ದ ಮನುಕುಲಕ್ಕೆ ಕೊಟ್ಟ ದೀವಿಗೆಯಾಗಿದೆ ಎಂದರು.
ಸಿದ್ಧಾರ್ಥನಿಂದ ಬುದ್ಧನಾದ ಆ ಮಹಾಚೇತನದ ಪಯಣವೇ ಒಂದು ಅದ್ಭುತ ಕಾವ್ಯವಾಗಿದೆ. ಅಧಿಕಾರದ ಅರಮನೆಯ ಸುಖವನ್ನು ತೊರೆದು, ಸುಳ್ಳು ಮತ್ತು ನಕಲಿತನದ ಕ್ಷಣಿಕತೆಯ ಹೊದಿಕೆಯನ್ನು ಕಿತ್ತೆಸೆದು ಸತ್ಯವನ್ನು ಅರಸಿ ಹೊರಟ ಸಿದ್ದಾರ್ಥ ಇಟ್ಟ ಆ ಹೆಜ್ಜೆಗಳು ಇಂದಿಗೂ ಮನುಕುಲಕ್ಕೆ ದಾರಿದೀಪ ಮಾತ್ರವಲ್ಲ, ಈ ಮಹಾಚೇತನದ ಪಯಣವೇ ಒಂದು ಅದ್ಭುತ ಕಾವ್ಯ ಎಂದು ಬಣ್ಣಿಸಿದರು.
ಬದುಕು ಒಡ್ಡುವ ಎಲ್ಲ ಬಗೆಯ ತಲ್ಲಣಗಳಿಗೆ ಕಾವ್ಯದಲ್ಲಿ ಮದ್ದು ಅಡಗಿದೆ. ಲಂಡನ್ ನಲ್ಲಿ “ಪೊಯಿಟ್ರಿ ಥೆರಪಿ” (ಕಾವ್ಯ ಚಿಕಿತ್ಸೆ) ಯನ್ನು ವೈದ್ಯರು ನಿರ್ದಿಷ್ಟ ರೋಗಕ್ಕೆ ಸೂಚಿಸುವ ಪದ್ಧತಿ ಇದೆ. ಆದರೆ ಬುದ್ದನ ಬದುಕಿನ ಪ್ರತಿ ಹೆಜ್ಜೆಗಳೂ ಮೌನ ಮತ್ತು ಅರಿವಿನ ಕುಲುಮೆಯಲ್ಲಿ ಕುದ್ದು ರೂಪುಗೊಂಡ ಕಾವ್ಯಗಳಾಗಿವೆ.
ಬೆಳದಿಂಗಳು ಬಾಹ್ಯ ಪ್ರಪಂಚವನ್ನು ಸುಂದರಗೊಳಿಸಿದರೆ, ಬುದ್ಧನ ಚಿಂತನೆಗಳ ‘ಕಾವ್ಯ’ವು ಮನುಷ್ಯನ ಅಂತರಂಗವನ್ನು ಶುದ್ಧಗೊಳಿಸುತ್ತದೆ ಎಂದು ವಿವರಿಸಿದರು.
ಬುದ್ಧ ಬರುವವರೆಗೂ ಕ್ಷತ್ರಿಯ ಧರ್ಮವೆಂದರೆ ಇನ್ನೊಬ್ಬರ ವಿರುದ್ಧದ ಶಸ್ತ್ರಸಜ್ಜಿತ ಹೋರಾಟವಾಗಿತ್ತು. ಆದರೆ ಶಾಕ್ಯ ಕುಲದಲ್ಲಿ ಜನಿಸಿದ ಯುವರಾಜ ಸಿದ್ಧಾರ್ಥ ಜಗತ್ತಿಗೆ ನಿರೂಪಿಸಿದ ಕ್ಷತ್ರಿಯ ಧರ್ಮ ಬೌದ್ಧ ಧರ್ಮವಾಗಿ ಜಗತ್ತನ್ನು ಸದಾ ಬೆಳಗುತ್ತಿದೆ.
ಅಧಿಕಾರದ ರಾಜಕುಲದಲ್ಲಿ ಹುಟ್ಟಿದ ಕಾರಣಕ್ಕೆ ಕ್ರೌರ್ಯ ಮೆರೆಯಬೇಕಾಗಿಲ್ಲ. ಅಂತಃಕರಣ, ಕರುಣೆ, ಪ್ರೀತಿ, ಮಾನವೀಯತೆಗಳನ್ನೇ ಅಸ್ತ್ರವಾಗಿಸಿಕೊಂಡು ಅಂಗುಲಿಮಾಲನಂಥವರನ್ನು ಅನುಯಾಯಿಯಾಗಿ ಮಾರ್ಪಾಡಿಸಿಕೊಂಡ ಮಹಾತ್ಮ ಬುದ್ಧನ ಬದುಕು ಮತ್ತು ಆಲೋಚನೆಗಳಿಗೆ ಚುಂಬಕ ಶಕ್ತಿ ಇದೆ. ಅದನ್ನು ಆಳವಾಗಿ ಅರಿಯುವವನ ಎದೆಯಲ್ಲಿ ಕಾವ್ಯ ಗೂಡು ಕಟ್ಟುತ್ತದೆ ಎಂದರು.
ಕಾವ್ಯದ ಸೆಳೆತ ಅಮ್ಮ, ಅಜ್ಜಿಯ ಲಾಲಿ ಹಾಡಿನಿಂದ ಆರಂಭಗೊಳ್ಳುತ್ತದೆ. ಬುದ್ಧನ ಸರಳ ತತ್ವಗಳನ್ನು ಅನುಸರಿಸುತ್ತಾ ಹೋದರೆ ಬದುಕು ನಿಶ್ಚಿತವಾದ ಕಾಣಿಕೆಯಾಗುತ್ತದೆ. ಇಂದಿರುವ ಅಧಿಕಾರ ನಾಳೆ ಇರದು. ಯಾವುದರ ಮೇಲೂ ಅಧಿಕಾರ ಸಾಧಿಸಬೇಡ ಎಂಬುದನ್ನು ಒಬ್ಬ ಯುವರಾಜ ಲೋಕಕ್ಕೆ ಕಾಣ್ಕೆಯಾಗಿ ನೀಡಿರುವುದರ ಹಿಂದೆ ತಾತ್ವಿಕತೆಯ ಜತೆ ದೂರದೃಷ್ಟಿಯಿದೆ.
ಸಿದ್ಧಾರ್ಥ-ಬುದ್ಧನಾಗುವ ಮಾರ್ಗದಲ್ಲಿ ಪದ ಪಾಂಡಿತ್ಯ, ಶಬ್ದ ಚಮತ್ಕಾರದ ಕುಣಿಕೆಗೆ ಜೋತು ಬೀಳಲಿಲ್ಲ. ಸತ್ಯ ಮತ್ತು ಸರಳತೆ ಬುದ್ಧನ ದೃಷ್ಟಿಯಾಗಿತ್ತು ಎಂದು ವಿವರಿಸಿದರು.
ಈ ದೂರದೃಷ್ಟಿಯೇ ಜಗತ್ತು ಇಂದು ಎದುರಿಸುತ್ತಿರುವ ಯುದ್ಧ ದಾಹ ಮತ್ತು ಅಧಿಕಾರದ ಹಪಾಹಪಿತನಕ್ಕೆ ಮದ್ದಾಗಬಲ್ಲದು.
ಇಲ್ಲಿ ಒಂದು ಸಂಗತಿಯನ್ನು ನಾನು ನಿಮ್ಮ ಜೊತೆ ಹಂಚಿಕೊಳ್ಳಲು ಬಯಸುತ್ತೇನೆ. ಈಚೆಗೆ 18 ಮಂದಿ ಬೌದ್ಧ ಬಿಕ್ಕುಗಳು ನಡೆಸಿದ 3200 km ಪಾದಯಾತ್ರೆ ಇಡೀ ಜಗತ್ತಿನ ನೋವಿಗೆ ಸಾಂತ್ವನ ಹೇಳುವಂತಿತ್ತು. ಇಡೀ ಪಾದಯಾತ್ರೆಯಲ್ಲಿ ಜಗತ್ತಿನ ಕೋಟ್ಯಾಂತರ ಜನರ ಹೃದಯಗಳನ್ನು ತಟ್ಟಿದ ರೀತಿಯಲ್ಲೇ ನನ್ನ ಹೃದಯಕ್ಕೂ ಇಳಿದಿದ್ದು ಆ ಬೀದಿ ನಾಯಿ.
ಬೌದ್ದ ಭಿಕ್ಕುಗಳ ಪಾದಯಾತ್ರೆ ವೇಳೆ ಆಕಸ್ಮಿಕವಾಗಿ ಅಡ್ಡ ಬಂದ ಒಂದು ಬೀದಿ ನಾಯಿ ಬಳಿಕ ಭಿಕ್ಕುಗಳ ಪಾದಯಾತ್ರೆಯುದ್ಧಕ್ಕೂ ವಿಶ್ವದ ಗಮನ ಸೆಳೆಯಿತು. ಕೋಟ್ಯಾಂತರ ಮಂದಿಯ ಮೊಬೈಲ್ DP, ಸ್ಟೇಟಸ್ ಆಯಿತು. ವಿಶ್ವದಲ್ಲಿ ಈ ಶತಮಾನದಲ್ಲಿ ಅತಿ ಹೆಚ್ಚು ಪ್ರಚಾರ ಪಡೆದ ಸೆಲೆಬ್ರಿಟಿಯಾಗಿದ್ದು ಈ ಅಲೋಕ ಎನ್ನುವ ಬೀದಿ ನಾಯಿ. ಅಲೋಕ ಎಂದರೆ ಸಂಸ್ಕೃತದಲ್ಲಿ ” ಬೆಳಕು”, “ಜಾಗೃತಿ” ಎಂದು ಅರ್ಥ. ಸತ್ಯ, ಸರಳತೆ ಮಾರ್ಗದಲ್ಲಿ ನಡೆದ ಅಲೋಕನಿಗೂ ಧ್ಯಾನ, ಬುದ್ಧತ್ವ ಪ್ರಾಪ್ತಿ ಆಗಿದ್ದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಭಿಕ್ಕುಗಳ ಪಾದಯಾತ್ರೆಯ ಅಂತರಂಗವನ್ನು ತೆರೆದಿಟ್ಟರು.
ಬಿಕ್ಕುಗಳ ಜೊತೆಗೇ 3200 km ನಡೆದ ಆ ನಾಯಿ “ಅಲೋಕ” ಹೆಸರಿನಲ್ಲಿ ಚರಿತ್ರೆಯಲ್ಲಿ ದಾಖಲಾಗಿದೆ.
ಈ 3200 ಕಿಲೋ ಮೀಟರ್ ಬರಿಗಾಲಲ್ಲಿ ನಡೆದ ಭಿಕ್ಕುಗಳು ಮಾರ್ಗದುದ್ದಕ್ಕೂ ಮೌನ ಧರಿಸಿದ್ದರು. ಪದ ಪಾಂಡಿತ್ಯ, ಶಬ್ದ ಚಮತ್ಕಾರದ ಟೊಳ್ಳುತನಕ್ಕೆ ಇಳಿಯಲಿಲ್ಲ.
ಶಾಂತಿ, ಸಹಬಾಳ್ವೆಯ ಮಾನವೀಯ ಕಳಕಳಿ ಬರಿಗಾಲಿನ ಮತ್ತು ಮೌನದ ನಡಿಗೆಯಲ್ಲಿ ಜಗತ್ತಿನ ಹೃದಯಗಳನ್ನು ತೇವಗೊಳಿಸಿದ್ದನ್ನು ಬಿಡಿ ಬಿಡಿಯಾಗಿ ವಿವರಿಸಿದರು.
ಪಾದಯಾತ್ರೆಯ ಹಾದಿಯುದ್ದಕ್ಕೂ ಸಾವಿರಾರು ಮಂದಿ ಹಾಡು ಕಟ್ಟಿದರು, ಕಾವ್ಯ ರಚಿಸಿದರು. ಶಾಂತಿಯ ಕನವರಿಕೆಗಳೇ ಪ್ರಾರ್ಥನೆಗಳಾದವು.
ಇಂಥ ಬುದ್ಧನ ಮಾರ್ಗವನ್ನು ನಮ್ಮದು ಎನ್ನುವ ಹೆಮ್ಮೆಯನ್ನು ಸದಾ ಎದೆಯಲ್ಲಿ ಇಟ್ಟುಕೊಂಡು ಬೀಗೋಣ. ಅವನ ತತ್ವಗಳನ್ನು ಪಾಲಿಸುತ್ತಾ ಬಾಗೋಣ ಎಂದು ಆಶಿಸಿದರು.
ಇಡೀ ಜಗತ್ತನ್ನು ಯುದ್ಧದ ಭೀಕರತೆ ಆವರಿಸುತ್ತಿರುವ ಇವತ್ತಿನ ವಿಷಮ ಗಳಿಗೆಯಲ್ಲಿ, ಅಧಿಕಾರ ಹಿಡಿಯಲು ಏನು ಬೇಕಾದರೂ ಮಾಡುವವರು, ಸಂಚು ಹೂಡುವವರ ನಡುವೆ ನಗುವ ಹೂವಾಗುವುದು ಸಣ್ಣ ಮಾತಲ್ಲ.
ಕ್ಷತ್ರಿಯನಾಗಿ ಯುದ್ಧ ಮಾಡು ಎಂದು ಕೆಣಕಿದವರನ್ನು, ಸಂಚು ಹೂಡಿದವರನ್ನು, ಅಸೂಯೆ ಪಟ್ಟವರನ್ನು , ಸುಖಾಸುಮ್ಮನೆ ಅವಮಾನಿಸಿ, ಆರೋಪ ಮಾಡಿದವರನ್ನು ತನ್ನ ನಡೆಯಿಂದ, ಆಲೋಚನೆಗಳಿಂದ ತಿದ್ದಿದ್ದು ಕೇವಲ ಇತಿಹಾಸವಲ್ಲ. ಸಣ್ಣ ಸಣ್ಣ ವಿಚಾರಗಳಿಗೂ ಕುಣಿಕೆಗೆ ಕೊರಳೊಡ್ಡುವ ಜೆನ್ ಜಿಗಳು ಕಲಿಯಲೇಬೇಕಾದ ಬುದ್ಧ ಪ್ರಭೆಯ ಮನೋಧರ್ಮಗಳಿವು ಎಂದರು.
“ಬುದ್ಧ ಎಂದರೆ ಕೇವಲ ವ್ಯಕ್ತಿಯಲ್ಲ, ಅದೊಂದು ಸ್ಥಿತಿ. ಆಸೆಗಳನ್ನು ಗೆದ್ದು, ಅಹಿಂಸೆಯನ್ನು ಉಸಿರಾಡಿ, ಮಮತೆಯ ಮಳೆಯಾಗುವ ‘ಕರುಣೆಯ ಕಡಲು’ ಈ ಬುದ್ಧ.
ಇಂದಿನ ಈ ಕಾವ್ಯ ಬೆಳದಿಂಗಳು ಕಾರ್ಯಕ್ರಮ ಬಹಳ ಅರ್ಥಪೂರ್ಣವಾದುದು. ಕಾವ್ಯ ಮತ್ತು ಬೆಳದಿಂಗಳು ಎರಡೂ ನಮ್ಮ ಮನಸ್ಸನ್ನು ತಂಪು ಮಾಡುತ್ತವೆ.
*ಯುದ್ಧದ ಅಬ್ಬರದ ನಡುವೆ ಬುದ್ಧನ ಶಾಂತಿಯ ಮಂತ್ರ ನಮಗೆ ಇಂದು ಅನಿವಾರ್ಯವಾಗಿದೆ. ಕವಿಗಳ ಲೇಖನಿಯಿಂದ ಹೊರಬರುವ ಪ್ರತಿಯೊಂದು ಸಾಲೂ, ಬುದ್ಧನ ‘ಧಮ್ಮ’ದಂತೆ ಲೋಕಕ್ಕೆ ಪ್ರೀತಿಯನ್ನು ಹಂಚಲಿ ಎಂದು ನಾನು ಹಾರೈಸಿದರು.
ಬುದ್ಧನ ಈ ಸಂದೇಶದಂತೆ, ನಮ್ಮೊಳಗಿನ ಅರಿವಿನ ದೀಪವನ್ನು ಹಚ್ಚೋಣ. ಈ ಬೆಳದಿಂಗಳ ರಾತ್ರಿಯಲ್ಲಿ ಕಾವ್ಯದ ಮೂಲಕ ಬುದ್ಧನನ್ನು ಧ್ಯಾನಿಸೋಣ. ದ್ವೇಷದ ಜಾಗದಲ್ಲಿ ಪ್ರೀತಿ ಇರಲಿ, ಹಿಂಸೆಯ ಜಾಗದಲ್ಲಿ ಕರುಣೆ ಇರಲಿ ಎಂದು ಹಾರೈಸಿದ ಕೆ.ವಿ.ಪ್ರಭಾಕರ್ ಅವರು, ಬೆಳದಿಂಗಳಲಿ ಮಿಂದು ಬರಲಿ ಹೊಸ ಚೈತನ್ಯ…ಬುದ್ಧನ ದಾರಿಯಲಿ ಸಾಗಲಿ ನಮ್ಮೀ ಪಯಣ…ಕಾವ್ಯದ ಕಂಪು ಹರಡಲಿ ಜಗವನ್ನಿಂದು…
ಶಾಂತಿಯ ಮಂತ್ರ ಮೊಳಗಲಿ ಎಂದೆಂದೂ… ಎನ್ನುವ ಕಾವ್ಯ ವಾಚನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ವೆಂಕಟೇಶಯ್ಯ, ವಿಶ್ವವಿದ್ಯಾಲಯದ ಕುಲಪತಿಗಳಾದ ಬಿ ಕೆ ರವಿ, ಹಿರಿಯ ಪತ್ರಕರ್ತರೂ ಲೇಖಕರೂ ಆದ ಜಿ.ಎನ್.ಮೋಹನ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.
