ಸಮಗ್ರ ಸುದ್ದಿ

ಕಾರ್ಮಿಕರದ್ದು ಬೆವರು, ಶ್ರಮದ ಶ್ರೇಷ್ಠ ಜಾತಿ: ಡಿಸಿಎಂ ಡಿ.ಕೆ. ಶಿವಕುಮಾರ್ | ಕಾರ್ಮಿಕರ ಬೆವರು ಈ ದೇಶದ ಅಡಿಪಾಯ

Share

ಬೆಂಗಳೂರು:”ನಾವು ನೀರಿನಲ್ಲಿ ಸ್ನಾನ ಮಾಡಿದರೆ, ಕಾರ್ಮಿಕರು ತಮ್ಮ ಬೆವರಿನಲ್ಲಿ ಸ್ನಾನ ಮಾಡಿ ಇತಿಹಾಸ ಬರೆಯುತ್ತಿದ್ದಾರೆ. ಇದು ಅವರ ಶಕ್ತಿ, ಸಂಕಲ್ಪ. ಕಾರ್ಮಿಕ ವರ್ಗದಲ್ಲಿ ಜಾತಿ, ಧರ್ಮದ ತಾರತಮ್ಯವಿಲ್ಲ. ಕಾರ್ಮಿಕರದ್ದು, ಬೆವರು, ಶ್ರಮದ ಒಂದು ಜಾತಿ. ಎಲ್ಲಾ ಜಾತಿಗಳಿಗಿಂತ ಶ್ರೇಷ್ಠವಾದ ಜಾತಿ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಶ್ಲಾಘಿಸಿದರು.

ಕೆಪಿಸಿಸಿ ಕಚೇರಿ ಭಾರತ ಜೋಡೋ ಭವನದಲ್ಲಿ ಶುಕ್ರವಾರ ನಡೆದ ಕಾರ್ಮಿಕ ದಿನ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು.

“ಸಮಾಜದಲ್ಲಿ ಕೃಷಿಕ, ಕಾರ್ಮಿಕ, ಸೈನಿಕ ಹಾಗೂ ಶಿಕ್ಷಕ ಪ್ರಮುಖ ನಾಲ್ಕು ಆಧಾರಸ್ಥಂಬಗಳು. ಈ ನಾಲ್ವರಿಂದ ದೇಶವನ್ನು ಬಲಿಷ್ಠವಾಗಿ ಕಟ್ಟಬಹುದು. ನಾವು ಇಂದು ಕಾರ್ಮಿಕ ದಿನ ಆಚರಿಸುತ್ತಿದ್ದೇವೆ. ಆ ಮೂಲಕ ಕಾರ್ಮಿಕರಿಗೆ ಗೌರವ ಸಲ್ಲಿಸಲಾಗುತ್ತಿದೆ” ಎಂದರು.

ಕಾರ್ಮಿಕರ ಬೆವರು ಈ ದೇಶದ ಅಡಿಪಾಯ

“ಕಾರ್ಮಿಕರ ಬೆವರು ಈ ದೇಶಕ್ಕೆ ನಿಜವಾದ ಅಡಿಪಾಯ. ಕಾರ್ಮಿಕರಿಗೆ ನ್ಯಾಯ ಸಿಕ್ಕಾಗ ಮಾತ್ರ ದೇಶ ಪ್ರಗತಿ ಸಾಧ್ಯ. ಬೇರೆ ಪಕ್ಷಗಳು ಈ ಕಾರ್ಮಿಕರ ಬಗ್ಗೆ ಕಾಳಜಿ ತೋರುತ್ತಿಲ್ಲ. ಕಳೆದ 12 ವರ್ಷಗಳಲ್ಲಿ ಕೇಂದ್ರ ಎನ್ಡಿಎ ಸರ್ಕಾರ ಕಾರ್ಮಿಕರ ಬದುಕಿನಲ್ಲಿ ಸಣ್ಣ ಬದಲಾವಣೆ ತರಲು ಸಾಧ್ಯವಾಗಿಲ್ಲ. ಈ ದೇಶವನ್ನು ಕಟ್ಟಿದವರಿಗೆ ಗೌರವ ನೀಡುತ್ತಿಲ್ಲ. ದೇಶದ ಎಲ್ಲಾ ಸಂಪತ್ತು ಕಾರ್ಮಿಕರ ಪರಿಶ್ರಮದ ಕೊಡುಗೆಯಾಗಿದೆ. ಮನೆ, ಕಟ್ಟಡ, ರಸ್ತೆ ಸೇರಿದಂತೆ ಎಲ್ಲಾ ಪ್ರಗತಿ ಕಾರ್ಮಿಕರಿಂದ ಸಾಧ್ಯವಾಗಿದೆ. ದೇಶದ ಭವಿಷ್ಯದ ಕಾರ್ಮಿಕರ ಮೇಲೆ ನಿಂತಿದೆ. ಕಾರ್ಮಿಕರ ರಕ್ಷಣೆಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲ ಇದೆ” ಎಂದು ಹೇಳಿದರು.

“ರಾಹುಲ್ ಗಾಂಧಿ ಅವರ ಮಾರ್ಗದರ್ಶನದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಗಿಗ್ ಕಾರ್ಮಿಕರ ಭವಿಷ್ಯ ರಕ್ಷಣೆ ನೀಡುವ ಕಾಯ್ದೆ ತರಲಾಗಿದೆ. ಪುಟ್ಟಸ್ವಾಮಿ ಗೌಡರು ಕೆಪಿಸಿಸಿ ಕಾರ್ಮಿಕ ವಿಭಾಗದ ಅಧ್ಯಕ್ಷರಾಗಿ ಉತ್ತಮವಾಗಿ ಸಂಘಟನೆ ಮಾಡಿಕೊಂಡು ಬಂದಿದ್ದಾರೆ. ಈ ಘಟಕ ದೊಡ್ಡ ಅಧಿಕಾರದ ಹಿಂದೆ ಹೋದವರಲ್ಲ” ಎಂದರು.

ಕಾರ್ಮಿಕರ ಬದುಕಿಗೆ ಗ್ಯಾರಂಟಿ ಆಸರೆ

“ಬದುಕಲು ಬೇಕಾದ ಕೂಲಿ ನೀಡದಿದ್ದರೆ ಅದೇ ದೊಡ್ಡ ಶೋಷಣೆ ಎಂದು ಮಹಾತ್ಮ ಗಾಂಧಿ ಅವರು ಹೇಳಿದ್ದಾರೆ. ಕಾರ್ಮಿಕರ ಮನೆಗಳಲ್ಲಿ ಬೆಳಕು ತರಲು ನಮ್ಮ ಸರ್ಕಾರ ಪಂಚ ಗ್ಯಾರಂಟಿ ಯೋಜನೆ ತಂದಿದೆ. ಗ್ಯಾರಂಟಿ ಯೋಜನೆಗಳಿಂದ ಜನರ ಬದುಕು ಯಾವ ರೀತಿ ಬದಲಾವಣೆಯಾಗಿದೆ ಎಂದು ಸಮೀಕ್ಷೆ ನಡೆಸಿದ್ದೇವೆ. ಪ್ರತಿ ಕುಟುಂಬಕ್ಕೆ ಮಾಸಿಕ ಸರಾಸರಿ 5 ಸಾವಿರ ರೂ. ಉಳಿತಾಯವಾಗುತ್ತಿದೆ” ಎಂದು ತಿಳಿಸಿದರು.

“ನಮ್ಮ ಗ್ಯಾರಂಟಿ ಯೋಜನೆಗಳ ವಿರುದ್ಧ ಜನ ಕೆಟ್ಟದಾಗಿ ಮಾತನಾಡುತ್ತಿಲ್ಲ. ಗ್ಯಾರಂಟಿ ಯೋಜನೆ ಟೀಕೆ ಮಾಡುವ ಬಿಜೆಪಿ ಹಾಗೂ ದಳದ ನಾಯಕರು ತಮ್ಮ ಕಾರ್ಯಕರ್ತರು ಈ ಯೋಜನೆ ಬಿಟ್ಟುಕೊಡುವಂತೆ ಕರೆ ನೀಡಲಿ. ನಮ್ಮ ಒಬ್ಬ ಶಾಸಕರು ಇಲ್ಲದ ಜಿಲ್ಲೆಗಳಲ್ಲಿ ಅತಿ ಹೆಚ್ಚು ಗ್ಯಾರಂಟಿ ಫಲಾನುಭವಿಗಳು ಇದ್ದಾರೆ. ಮುಂದಿನ ಚುನಾವಣೆಯಲ್ಲಿ ಕರಾವಳಿಯ 2 ಜಿಲ್ಲೆಗಳಲ್ಲಿ ಕನಿಷ್ಠ 10 ಕ್ಷೇತ್ರ ಗೆಲ್ಲುವ ವಿಶ್ವಾಸವಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೂತ್ ಗಳಲ್ಲಿ ಕಾರ್ಮಿಕರನ್ನು ಸಂಘಟಿಸಿ

“ಕಾರ್ಮಿಕ ಘಟಕದವರು ನಿಮ್ಮ ಬೂತ್ ಆಯ್ಕೆ ಮಾಡಿಕೊಂಡು ಸಂಘಟನೆ ಮಾಡಿ. ಗ್ಯಾರಂಟಿ ಫಲಾನುಭವಿಗಳ ಸಂಘಟನೆ ಮಾಡಿ. ಆಗ ನಿಮಗೆ ದೊಡ್ಡ ಶಕ್ತಿ ಸಿಗುತ್ತದೆ. ನಮ್ಮ ಸರ್ಕಾರ 12,500 ಪೌರ ಕಾರ್ಮಿಕರನ್ನು ಖಾಯಂ ಮಾಡಿ, ಅವರಿಗೆ ಉತ್ತಮ ವೇತನ ಸಿಗುವಂತೆ ಮಾಡಿದ್ದೇವೆ.

ಈ ಸಂದರ್ಭದಲ್ಲಿ ದೇಶದ ಕಾರ್ಮಿಕ ಇಲಾಖೆಗೆ ತಿರುವು ಕೊಟ್ಟ ಆಸ್ಕರ್ ಫರ್ನಾಂಡೀಸ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸ್ಮರಿಸಬೇಕು. ಕಾರ್ಮಿಕರಿಗೆ ಇಎಸ್ಐ ಆಸ್ಪತ್ರೆ ಮಾಡಿ, ಅವುಗಳನ್ನು ಮೆಡಿಕಲ್ ಕಾಲೇಜು ಮಾಡಿ ಕಾರ್ಮಿಕರ ಮಕ್ಕಳಿಗೆ ಮೆಡಿಕಲ್ ಸೀಟ್ ಸಿಗುವಂತೆ ಮಾಡಲಾಗಿದೆ. ಕಲಬುರ್ಗಿಯಲ್ಲಿ ವಿಧಾನಸೌಧಕ್ಕಿಂತ ದೊಡ್ಡದಾಗಿ ಇಎಸ್ಐ ಆಸ್ಪತ್ರೆ ಕಟ್ಟಲಾಗಿದೆ.

ಕಾರ್ಮಿಕರ ಬದುಕು, ಜೀವನದಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲವಾಗಿ ನಿಂತಿದೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದವರು ಅಧಿಕಾರಕ್ಕೆ ಬಂದಂತೆ. ಅಂದರೆ ರೈತ, ಕಾರ್ಮಿಕ, ಸೈನಿಕ, ಶಿಕ್ಷಕ, ವರ್ತಕ ಸೇರಿದಂತೆ ಎಲ್ಲರನ್ನು ಸಮಾನವಾಗಿ ನೋಡಲಾಗುವುದು.

ನೆಹರೂ ಅವರ ಕಾಲದಲ್ಲಿ ಕಾರ್ಮಿಕರಿಗೆ ಕೂಲಿ ಕಾಯ್ದೆ, ನರಸಿಂಹರಾವ್ ಅವರ ಕಾಲದಲ್ಲಿ ಕಟ್ಟಡ ಕಾರ್ಮಿಕರಿಗೆ ನ್ಯಾಯ ಒದಗಿಸುವ ಕಾಯ್ದೆ ತಂದರು. ನಾವು ನಿಮ್ಮ ಜತೆ ಇದ್ದೇವೆ. ನೀವು ನಮ್ಮ ಜತೆ ಇರಬೇಕು.

ವಿವಿಧ ರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆ ಕೇಂದ್ರ ಸರ್ಕಾರ ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ ಮಾಡಿದೆ. ಕೇಂದ್ರ ಬಿಜೆಪಿ ಸರ್ಕಾರ ನೆರೆ ರಾಷ್ಟ್ರ ನೇಪಾಳ, ಚೀನಾ, ಬಾಂಗ್ಲಾದೇಶ, ಶ್ರೀಲಂಕಾ, ಬರ್ಮಾ ಸೇರಿದಂತೆ ಯಾವ ರಾಷ್ಟ್ರಗಳ ಜೊತೆ ಉತ್ತಮ ಸಂಬಂಧ ಹೊಂದಿಲ್ಲ. ಇರಾನ್ ಜತೆಗಿದ್ದ ಉತ್ತಮ ಸಂಬಂಧ ಹಾಳಾಗಿದೆ.

ನಾವು ಗ್ಯಾರಂಟಿ ಯೋಜನೆಗಳಿಗೆ ಪ್ರತಿ ವರ್ಷ 56 ಸಾವಿರ ಕೋಟಿ ನೀಡುತ್ತಿದ್ದೇವೆ. ಈ ಬೆಲೆ ಏರಿಕೆ ಪರಿಸ್ಥಿತಿಯಲ್ಲಿ ಈ ಯೋಜನೆಗಳು ಇಲ್ಲವಾಗಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ನೀವೇ ಆಲೋಚಿಸಿ. ಇದನ್ನು ಮತದಾರರಿಗೆ ಮನವರಿಕೆ ಮಾಡುವ ಕೆಲಸ ಮಾಡಬೇಕು.


Share

You cannot copy content of this page